ಚಿಕ್ಕಮಗಳೂರು ಟಾಪ್ ನ್ಯೂಸ್ !!
* ಪ್ರವಾಸಿಗನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಉರುಳಿದ ಕಾರು
* ಅಂತರ್ ಧರ್ಮೀಯ ವಿವಾಹ ಪ್ರಕರಣ ವ್ಯಕ್ತಿಗೆ ಜೀವಬೆದರಿಕೆ
* ವರದಕ್ಷಿಣೆ ಕಿರುಕುಳ ಮಹಿಳೆ ಆತ್ಮಹತ್ಯೆಗೆ ಶರಣು
NAMMUR EXPRESS NEWS
* ಪ್ರವಾಸಿಗನ ನಿಯಂತ್ರಣ ತಪ್ಪಿ 100 ಅಡಿ ಕಂದಕಕ್ಕೆ ಉರುಳಿದ ಕಾರು
ಮೂಡಿಗೆರೆ: ಚಾಲಕನ ನಿಯಂತ್ರಣ ತಪ್ಪಿ ಪ್ರವಾಸಿಗರ ಕಾರೊಂದು ಸುಮಾರು 100 ಅಡಿ ಆಳದ ಕಂದಕಕ್ಕೆ ಬಿದ್ದಿರುವ ಘಟನೆ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯಲ್ಲಿ ನಡೆದಿದೆ.
ಕಾರು 100 ಆಳದ ಪ್ರಪಾತಕ್ಕೆ ಬಿದ್ದರೂ ಕಾರಿನಲ್ಲಿದ್ದ ಐವರು ಪವಾಡ ಸದೃಶ್ಯ ಪಾರಾಗಿದ್ದಾರೆ. ಆರು ಜನರ ಕುಟುಂಬ ಶಿವಮೊಗ್ಗದಿಂದ ಧರ್ಮಸ್ಥಳಕ್ಕೆ ಧಾರ್ಮಿಕ ಪ್ರವಾಸ ಹೊರಟಿದ್ದರು. ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟಿಯ ಆರಂಭದಲ್ಲೇ ಮಲಯ ಮಾರುತ ಬಳಿ ಕಾರು, ಚಾಲಕನ ನಿಯಂತ್ರಣ ತಪ್ಪಿ ಪ್ರಪಾತಕ್ಕೆ ಉರುಳಿದೆ. ಕಾರಿನಲ್ಲಿದ್ದ ಶಂಕರ್, ಸೀತಮ್ಮ, ಭಾನುಪ್ರಿಯಾ, ಆರಾಧ್ಯ, ಹರೀಶ್, ಶ್ರೇಯಸ್ ಸೇರಿ ಎಲ್ಲರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಕಾರಿನಲ್ಲಿದ್ದ 2 ವರ್ಷದ ಮಗುವಿಗೆ ಗಂಭೀರ ಗಾಯವಾಗಿದ್ದು ಚಿಕಿತ್ಸೆಗಾಗಿ ಮಗುವನ್ನು ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿದೆ.
* ಅಂತರ್ ಧರ್ಮೀಯ ವಿವಾಹ ಪ್ರಕರಣ ವ್ಯಕ್ತಿಗೆ ಜೀವಬೆದರಿಕೆ
ಚಿಕ್ಕಮಗಳೂರು: ಅಂತರ್ ಧರ್ಮೀಯ ವಿವಾಹವನ್ನು ಬೆಂಬಲಿಸಿದ ವ್ಯಕ್ತಿಗೆ ಬೆದರಿಕೆ ಹಾಕಿದ ಆರೋಪದ ಮೇಲೆ ಪೊಲೀಸರು ಬಜರಂಗ ದಳದ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಬಸವನಹಳ್ಳಿ ಪೊಲೀಸರು ಬಜರಂಗ ದಳ ಜಿಲ್ಲಾ ಮಟ್ಟದ ನಾಯಕರಾದ ಶ್ಯಾಮ್ ಮತ್ತು ಸಾಗರ್ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (ಬಿಎನ್‌ಎಸ್) ಸೆಕ್ಷನ್ 353(1)(ಸಿ) ಮತ್ತು 353(2) ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಗೋಬಿ ಚಾಟ್ ಅಂಗಡಿಯ ಮಾಲೀಕ ಮಹೇಶ್ ಸಲ್ಲಿಸಿದ ದೂರಿನ ಮೇರೆಗೆ ಈ ಕ್ರಮ ಕೈಗೊಳ್ಳಲಾಗಿದೆ.
ಪೋಲೀಸರ ಪ್ರಕಾರ ಮಹೇಶ್ ಚಿಕ್ಕಮಗಳೂರು ನಗರದಲ್ಲಿ ಗೋಬಿ ಮಂಚೂರಿ ಅಂಗಡಿಯನ್ನು ಇಟ್ಟುಕೊಂಡಿದ್ದಾರೆ. ಮುಸ್ಲಿಂ ಸಮುದಾಯಕ್ಕೆ ಸೇರಿದ ಅವರ ಕೆಲಸಗಾರನೊಬ್ಬ ಹಿಂದೂ ಯುವತಿಯನ್ನು ಪ್ರೀತಿಸುತ್ತಿದ್ದ. ಈ ಬಗ್ಗೆ ತಿಳಿದ ಮಹೇಶ್, ನಾಲ್ಕು ದಿನಗಳ ಹಿಂದಷ್ಟೇ ಚಿಕ್ಕಮಗಳೂರು ನಗರದ ಸಬ್-ರಿಜಿಸ್ಟ್ರಾರ್ ಕಚೇರಿಯಲ್ಲಿ ಅವರ ವಿವಾಹಕ್ಕೆ ಸಹಾಯ ಮಾಡಿ,ಅವರ ಮದುವೆಗೆ ಸಾಕ್ಷಿಯಾಗಿ ಸಹಿ ಹಾಕಿದ್ದರು.
ಈ ಘಟನೆ ಬೆಳಕಿಗೆ ಬಂದ ನಂತರ, ಹಿಂದೂ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿ ಮಹೇಶ್ ಅವರು ‘ಲವ್ ಜಿಹಾದ್’ ಅನ್ನು ಬೆಂಬಲಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಮಹೇಶ್ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನವನ್ನು ಆರಂಭಿಸಿ, ಅವರನ್ನು ದೇಶದ್ರೋಹಿ ಎಂದು ಕರೆದಿದ್ದಾರೆ ಎನ್ನಲಾಗಿದೆ.
* ವರದಕ್ಷಿಣೆ ಕಿರುಕುಳ ಮಹಿಳೆ ಆತ್ಮಹತ್ಯೆಗೆ ಶರಣು
ಬಾಳೆಹೊನ್ನೂರು: ಗಂಡನ ಮನೆಯವರ ವರದಕ್ಷಿಣೆ
ಕಿರುಕುಳಕ್ಕೆ ಗೃಹಿಣಿಯೊಬ್ಬರು ಬಲಿಯಾಗಿರುವ ಘಟನೆ ಎನ್.ಆರ್.ಪುರ ತಾಲೂಕಿನ ಬಾಳೆಹೊನ್ನೂರಿನಲ್ಲಿ ನಡೆದಿದೆ.
ಮಮತಾ ಮೃತ ದುರ್ದೈವಿ. 4 ವರ್ಷದ ಹಿಂದೆ ಮದುವೆಯಾದ್ದ ಮಮತಾಗೆ ಮದುವೆ ವೇಳೆ 110 ಗ್ರಾಂ ಚಿನ್ನ ನೀಡಿ ಪೋಷಕರು ಮದುವೆ ಮಾಡಿಸಿ ಕೊಟ್ಟಿದ್ದರು. ಮದುವೆಯ ಬಳಿಕ ಹೆಚ್ಚಿನ ಹಣ ಕೊಡುವಂತೆ ಗಂಡನ ಮನೆಯವರು ಮಮತಾಳಿಗೆ ಮಾನಸಿಕ-ದೈಹಿಕ ಕಿರುಕುಳ ನೀಡ್ತಿದಾರೆ ಎನ್ನಲಾಗಿದೆ, ಹಿಂಸೆ ತಾಳಲಾರದೆ ಮಮತಾ ಗಂಡನ ಮನೆ ಬಿಟ್ಟು ತವರು ಮನೆಗೆ ಬಂದಿದ್ದರು ಎನ್ನಲಾಗಿದೆ ಈ ನಡುವೆ ಕುಟುಂಬದ ಹಿರಿಯರ ಸಮ್ಮುಖದಲ್ಲಿ ರಾಜಿ ಪಂಚಾಯತಿ ಮೂಲಕ ಮತ್ತೆ ಗಂಡನ ಮನೆ ಸೇರಿದ್ದರು.
ಕಳೆದ ವರ್ಷ ತೋಟದ ನಿರ್ವಹಣೆಗೆಂದು ಮಮತಾ ಪತಿ ಅವಿನಾಶ್ ಮಮತಾ ಪೋಷಕರಿಂದ 50 ಸಾವಿರ ಪಡೆದುಕೊಂಡಿದ್ದ ಇದಾದ ಬಳಿಕ ಜನವರಿ 25ರಂದು ಮಮತಾಗೆ ಪಿಡ್ಸ್ ಬಂದಿದೆ ಎಂದು ಗಂಡ ಅವಿನಾಶ್ ಆಸ್ಪತ್ರೆಗೆ ಸೇರಿಸಿದ್ದ ಆದರೆ ಅವಿನಾಶ್ ಚಿಕ್ಕಪ್ಪ ಮಮತಾ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾಳೆಂದು ಮಮತಾ ಪೋಷಕರಲ್ಲಿ ಹೇಳಿಕೆ ನೀಡಿದ್ದಾರೆ. ಎರಡು ತಿಂಗಳಿಂದ ಫಾದರ್ ಮುಲ್ಲರ್, ಶಿವಮೊಗ್ಗದ ಮ್ಯಾಕ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದ ಗಂಡನ ಮನೆಯವರು ಆಕೆ ಹುಷಾರಾಗುವ ಮುನ್ನವೇ ಮನೆಗೆ ಕರೆದುಕೊಂಡು ಬಂದಿದ್ದು ಇದಾದ ಕೆಲ ದಿನದಲ್ಲೇ ಮಮತಾ ಕೊನೆಯುಸಿರು ಎಳೆದಿದ್ದಾರೆ.