ಮುಳ್ಳಯ್ಯನಗಿರಿಗೆ 3 ದಿನ ಪ್ರವಾಸಿಗರಿಗೆ ಪ್ರವೇಶ ನಿರ್ಬಂಧ
– ಮಾ.15 ರಿಂದ 17 ರವರೆಗೆ ನಿರ್ಬಂಧ ಮಾಡಲಾಗಿದೆ
– ಈಗಾಗಲೇ ಹೋಂಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಬುಕ್ಕಿಂಗ್ ಮಾಡಿಕೊಂಡವರಿಗೆ ಅವಕಾಶ
NAMMUR EXPRESS NEWS
ಚಿಕ್ಕಮಗಳೂರು: ಮಾ.15 ರಿಂದ 17 ರವರೆಗೆ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಬಾಬಾಬುಡನ್ ಗಿರಿ, ಗಾಳಿಕೆರೆ, ಮಾಣಿಕ್ಯಧಾರಾ ತಾಣಗಳಿಗೆ ಪ್ರವಾಸ ಕೈಗೊಳ್ಳುವುದನ್ನು ನಿರ್ಬಂಧಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ. ತಾಲೂಕಿನ ಐ.ಡಿ. ಪೀಠ, ಶ್ರೀ ಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಯಲ್ಲಿ ಮಾ.15 ರಿಂದ 17 ರವರೆಗೆ ಉರುಸ್ ಕಾಠ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಸಾವಿರಾರು ಭಕ್ತಾದಿಗಳು ವಾಹನಗಳ ಮುಖಾಂತರ ಆಗಮಿಸುತ್ತಾರೆ. ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆಗೆ ತೆರಳುವ ರಸ್ತೆ ತುಂಬಾ ಕಿರಿದಾಗಿದ್ದು, ಕಳೆದ ವರ್ಷ ಭಾರಿ ಮಳೆಗೆ ಹಾಳಾಗಿದೆ. ಆದ ಕಾರಣ ಹೆಚ್ಚಿನ ಜನಸಂದಣಿಯಾಗಿ ಅನಾನುಕೂಲವಾಗುವುದನ್ನು ತಪ್ಪಿಸಲು ಪ್ರವಾಸ ನಿರ್ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಭಾಗವಹಿಸಲಿದ್ದು, ವಾಹನ ದಟ್ಟಣೆ ಉಂಟಾಗುವ ಸಾಧ್ಯತೆ ಇದೆ. ಆದ್ದರಿಂದ ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ, ಶ್ರೀಗುರು ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾ ಸಂಸ್ಥೆ, ಗಾಳಿಕೆರೆ, ಮಾಣಿಕ್ಯಧಾರಾ ಜಲಪಾತ ತಾಣಗಳಿಗೆ ಭಕ್ತರು ಮತ್ತು ಸ್ಥಳೀಯರನ್ನು ಹೊರತುಪಡಿಸಿ ಪ್ರವಾಸಿಗರನ್ನು ನಿರ್ಬಂಧಿಸಲಾಗಿದೆ. ಈಗಾಗಲೇ ಹೋಂಸ್ಟೇ ಮತ್ತು ರೆಸಾರ್ಟ್‌ಗಳಲ್ಲಿ ಬುಕ್ಕಿಂಗ್ ಮಾಡಿಕೊಂಡವರಿಗೆ ಅವಕಾಶ ಇದೆ ಎಂದು ವಿವರಿಸಿದ್ದಾರೆ.
