ಕಾಡು ಪ್ರಾಣಿಗಳ ಹಾವಳಿಯಿಂದ ರೈತರಿಗೆ ಸಂಕಷ್ಟ..!!
– ಮಲೆನಾಡು ನಾಗರೀಕ ಹಿತರಕ್ಷಣಾ ಸಮಿತಿಯಿಂದ ಅರಣ್ಯಾಧಿಕಾರಿ ಮತ್ತು ಪೋಲೀಸ್ ಠಾಣೆಗೆ ಮನವಿ
– ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ
NAMMUR EXPRESS NEWS
ಶೃಂಗೇರಿ: ಕಾಡು ಪ್ರಾಣಿಗಳ ಹಾವಳಿಯಿಂದ ರೈತರು ಮತ್ತು ಜನಸಾಮಾನ್ಯರಿಗಾಗುತ್ತಿರುವ ಸಮಸ್ಯೆಗಳ ಕುರಿತು ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ, ಶೃಂಗೇರಿ ವತಿಯಿಂದ ಸಮಿತಿ ಅಧ್ಯಕ್ಷರಾದ ಅಂಬ್ಲೂರು ರಾಮಕೃಷ್ಣ ನೇತೃತ್ವದಲ್ಲಿ ಸರ್ಕಾರ,ವಲಯ ಅರಣ್ಯಾಧಿಕಾರಿಗಳಿಗೆ ಹಾಗೂ ಪೋಲೀಸ್ ಇಲಾಖೆಗೆ ಮನವಿ ಸಲ್ಲಿಸಲಾಯಿತು. ಕೊಪ್ಪ ತಾಲ್ಲೂಕು ಸೀತೂರಿನಲ್ಲಿ ನಡೆದ ಘಟನೆಯಿಂದ ಮಲೆನಾಡ ಜನತೆ ಭಯಗೊಂಡಿದೆ. ವಿಶೇಷವಾಗಿ ರೈತಾಪಿ ವರ್ಗ ತಮ್ಮ ಬದಕು ಆತಂಕದಲ್ಲಿ ಕಳೆಯುವಂತಾಗಿದೆ. ದಿನದಿಂದ ದಿನಕ್ಕೆ ಕಾಡು ಪ್ರಾಣಿಗಳ ಹಾವಳಿ ಜಾಸ್ತಿಯಾಗುತ್ತಿದ್ದು, ಇದರ ಪರಿಣಾಮ ಕೃಷಿ ಚಟುವಟಿಕೆ ಹಾಗೂ ಇನ್ನಿತರೆ ಚಟುವಟಿಕೆಗಳ ಮೇಲೆ ಗಂಭೀರ ಪರಿಣಾಮ ಬೀರಿದೆ.ಕಾಡು ಪ್ರಾಣಿಗಳಾದ ಆನೆ, ಕಾಡುಕೋಣ ಇನ್ನಿತರ ಪ್ರಾಣಿಗಳಿಂದ ರೈತರು ಬೆಳೆದ ಬೆಳೆ ಮೇಲೆ ದಾಳಿ ಮಾಡಿ ನಾಶ ಮಾಡುತ್ತಿದ್ದು ರೈತರು ಬೆಳೆದ ಉಳಿಸಿಕೊಳ್ಳಲಾಗದೇ, ಸಂಕಷ್ಟದಲ್ಲಿ ಸಿಲುಕಿಕೊಂಡಿದ್ದಾರೆ. ಕಾಡುಪ್ರಾಣಿಗಳ ಹಾವಳಿಗಳಿಂದಾಗಿ ಕೂಲಿ ಕೆಲಸಗಾರರನ್ನು ತೋಟದಲ್ಲಿ ಕೃಷಿ ಚಟುವಟಿಕೆಗಳಿಗೆ ಬರಲು ಭಯದ ವಾತಾವರಣ ನಿರ್ಮಾಣವಾಗಿದೆ. ಮುಂದಿನ ದಿನಗಳಲ್ಲಿ ಇದು ಹೀಗೆ ಮುಂದುವರಿದರೆ ಮಲೆನಾಡು ಭಾಗದ ಜನ ಬದುಕು ಕಳೆದುಕೊಂಡು ಊರನ್ನೇ ಬಿಡುವ ಪರಿಸ್ಥಿತಿ ನಿರ್ಮಾಣವಾಗಬಹುದಾಗಿದೆ. ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿಯ,ಶೃಂಗೇರಿಯ ಬೇಡಿಕೆಗಳು ಏನು..??!!
1. ಕೊಪ್ಪ ತಾಲ್ಲೂಕಿನ ಸೀತೂರಿನಲ್ಲಿ ಆನೆ ಹಾವಳಿಯಿಂದಾದ ಘಟನೆ ಮರುಕಳಿಸದಂತೆ ಮುಂಜಾಗ್ರತೆ ವಹಿಸುವುದು.
2. ಕಾಡು ಪ್ರಾಣಿಗಳು ರೈತರ ಜಮೀನುಗಳಿಗೆ, ಜನ ವಾಸಿಸುವ ಸ್ಥಳಗಳಿಗೆ ಬರದಂತೆ ಅವುಗಳನ್ನು ಕಾಡಿನಲ್ಲಿಯೇ ಜನವಸತಿ ಪ್ರದೇಶದಿಂದ ದೂರದಲ್ಲಿಯೇ ಇರುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವುದು.
3. ಕಾಡು ಪ್ರಾಣಿಗಳ ಹಾವಳಿಯಿಂದ ತಮ್ಮ ಆತ್ಮ ರಕಕ್ಷಣೆಗಾಗಿ ಬಂದೂಕು ಪರವಾನಿಗೆಗೆ ಅರ್ಜಿ ಸಲ್ಲಿಸಿದರೇ ಯಾವುದೇ ಕಾರಣ ಹೇಳದೆ ಪರವಾನಿಗೆ ನೀಡಲು ಕ್ರಮವಹಿಸುವುದು.
4. ಒಂದು ವೇಳೆ ಆನೆಗಳು ಊರಿಗೆ ಬಂದ ಸಂದರ್ಭದಲ್ಲಿ ಕೂಡಲೇ ಜನರಿಗೆ ಮಾಹಿತಿ ನೀಡಿ ಅವರನ್ನು ಸುರಕ್ಷಿತವಾಗಿರಲು ತಿಳಿಸುವುದು, ಅಲ್ಲದೇ ಕೂಡಲೇ ಅವುಗಳನ್ನು ಕೂಂಬಿಂಗ್ ಮುಖಾಂತರ ಕಾಡಿಗೆ ಕಳಿಸುವ ವ್ಯವಸ್ಥೆ ಮಾಡುವುದು.
5. ಕಾಡು ಪ್ರಾಣಿಗಳ ಹಾವಾಳಿಯಿಂದಾಗಿ ಬೆಳೆ ನಷ್ಟ ಅನುಭವಿಸಿದ ರೈತರಿಗೆ ಕೂಡಲೇ ಸೂಕ್ತ ಪರಿಹಾರ ನೀಡುಬೇಕು.
ಈ ಎಲ್ಲಾ ಬೇಡಿಕೆಗಳನ್ನು ಆದ್ಯತೆಯ ಮೇರೆಗೆ ಈಡೇರಿಸುವಂತೆ ಮಲೆನಾಡು ನಾಗರೀಕ ಹಕ್ಕುಗಳ ಹೋರಾಟ ಸಮಿತಿ,ಶೃಂಗೇರಿ ವಲಯ ಅರಣ್ಯಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಈ ಸಂದರ್ಭದಲ್ಲಿ ಸಮಿತಿ ಅಧ್ಯಕ್ಷ ಅಂಬ್ಲೂರು ರಾಮಕೃಷ್ಣ,ಗೌರವಾಧ್ಯಕ್ಷ ಕೆ.ಎಂ ಶ್ರೀನಿವಾಸ್ ಸೇರಿದಂತೆ ಸಮಿತಿಯ ಎಲ್ಲಾ ಪದಾಧಿಕಾರಿಗಳು,ರೈತರು,ಕಾರ್ಯಕರ್ತರು ಉಷಸ್ಥಿತರಿದ್ದರು.
