ಕಾಫಿನಾಡಲ್ಲಿ ರೈತರ ಬೃಹತ್ ಸಮಾವೇಶ
* ಪಕ್ಷಾತೀತವಾದ ಹೋರಾಟ ಹಲವು ರಾಜಕೀಯ ನಾಯಕರು ಭಾಗಿ
* ರೈತ ಮತ್ತು ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಿ, ಮಲೆನಾಡಿನ ಜನಜೀವನ ಉಳಿಸಿಲು ಆಗ್ರಹ
NAMMMUR EXPRESS NEWS
ಚಿಕ್ಕಮಗಳೂರು: ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ, ಕರ್ನಾಟಕ ಬೆಳೆಗಾರರ ಒಕ್ಕೂಟ, ಮಲೆನಾಡು ನಾಗರಿಕ ರೈತ ಹಿತರಕ್ಷಣಾ ಸಮಿತಿ ಶೃಂಗೇರಿ ಕ್ಷೇತ್ರ ಹಾಗೂ ಜಿಲ್ಲೆಯ ಎಲ್ಲ ರಾಜಕೀಯ ಪಕ್ಷಗಳು, ಸಂಘಸಂಸ್ಥೆಗಳು, ಕನ್ನಡ ಪರ ಸಂಘಟನೆಗಳು, ದಲಿತ, ರೈತ ಪರ ಸಂಘಟನೆಗಳ ಸಹಯೋಗದಲ್ಲಿ ಚಿಕ್ಕಮಗಳೂರಿನಲ್ಲಿ ನಡೆದ ಬೃಹತ್ ರೈತ ಸಮಾವೇಶದಲ್ಲಿ ಸಾವಿರಾರು ರೈತರು,ಎಲ್ಲಾ ರಾಜಕೀಯ ಪಕ್ಷದ ನಾಯಕರು,ಹಲವು ಸಂಘ ಸಂಸ್ಥೆ,ರೈತ ಸಂಘಟನೆಗಳು,ಕನ್ನಡ ಪರ ಸಂಘಟನೆಗಳು ಭಾಗವಹಿಸಿ ನಗರದ ತಾಲೂಕು ಪಂಚಾಯ್ತಿಯಿಂದ ಆಜಾದ್ ಪಾರ್ಕ್ವರೆಗೆ ಬೃಹತ್ ಮೆರವಣಿಗೆ ನಡೆಸಿದರು.
ಆಜಾದ್ ಪಾರ್ಕ್ನಲ್ಲಿ ನಡೆದ ಸಭೆಯಲ್ಲಿ ರೈತ ಮತ್ತು ಅರಣ್ಯ ಇಲಾಖೆ ಸಂಘರ್ಷ ತಪ್ಪಿಸಿ, ಮಲೆನಾಡಿನ ಜನಜೀವನ ಉಳಿಸುವಂತೆ ಒತ್ತಾಯಿಸಲಾಯಿತು.
ಸಭೆಯಲ್ಲಿ ಮಾತನಾಡಿದ ಸಂಸದ ಕೋಟಾ ಶ್ರೀನಿವಾಸ ಪೂಜಾರಿ ಜಿಲ್ಲೆಯ ಜ್ವಲಂತ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಮೂಲಕ ಜನರನ್ನು ತೊಂದರೆಯಿಂದ ಮುಕ್ತಿಗೊಳಿಸಿ, ಜನಜೀವನ ರಕ್ಷಣೆಗೆ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಆಗಬೇಕಾಗಿರುವ ಕೆಲಸಗಳನ್ನು ಪ್ರಾಮಾಣಿಕ ನಿರ್ವಹಿಸುತ್ತೇನೆ. ಜನರ ನೆಮ್ಮದಿ ಬದುಕಿಗಾಗಿ ಜನಪ್ರತಿನಿಧಿಗಳು ರಾಜಕಾರಣ ಬದಿಗೊತ್ತಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ ಎಂದು ಹೇಳಿದರು.
ಜನರಿಂದ ಆಯ್ಕೆಯಾಗಿರುವ ಜನಪ್ರತಿನಿಧಿಗಳಾದ ನಾವು ರಾಜಕಾರಣವನ್ನು ಬದಿಗೊತ್ತಿ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕಿದೆ. ಈ ನಿಟ್ಟಿನಲ್ಲಿ ರಾಜ್ಯ ಸರಕಾರದಿಂದ ಆಗಬೇಕಾದ ಕೆಲಸವನ್ನು ಜಿಲ್ಲೆಯ
ಐದು ಮಂದಿ ಶಾಸಕರೊಂದಿಗೆ ಸಮನ್ವಯತೆ ಸಾಧಿಸಿ ಜಿಲ್ಲೆಯ ಸಮಸ್ಯೆ ನಿವಾರಣೆಗೆ ಸಂಬಂಧಿಸಿದ ಕೇಂದ್ರ ಸಚಿವರನ್ನು ಭೇಟಿ ಮಾಡಿಸುತ್ತೇನೆ, ಸಾಧ್ಯವಾದರೆ ನಿಯೋಗವನ್ನು ಕರೆದೊಯ್ಯುವುದಾಗಿ ತಿಳಿಸಿದರು.
ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಡೀಮ್ಡ್ ಅರಣ್ಯ ಎನ್ನುವುದು ಅರಣ್ಯವಲ್ಲ, ಹೈಕೋರ್ಟ್ನ ವಿಭಾಗೀಯ ಪೀಠ ಇದನ್ನು ಹೇಳಿದೆ, ಅರಣ್ಯ ಸಂರಕ್ಷಣಾ ಕಾಯ್ದೆಯಲ್ಲಿ ಪರಿಭಾವಿತ ಅರಣ್ಯ ಪ್ರಸ್ತಾಪವಿಲ್ಲ, ಇದು ಅಧಿಕಾರಿಗಳು ಸೃಷ್ಟಿಸಿದ ಪದವಾಗಿದೆ. ಡೀಮ್ಡ್ ಅರಣ್ಯ ವ್ಯಾಪ್ತಿಯಲ್ಲಿರುವ ನಿವೇಶನ, ಜಮೀನುಗಳ ಮಂಜೂರಾತಿಗೆ ಸರಕಾರದ ಮಧ್ಯ ಪ್ರವೇಶವೂ ಬೇಡ, ಜಿಲ್ಲಾಧಿಕಾರಿಗಳೇ ಈ ಸಮಸ್ಯೆಯನ್ನು ಬಗೆಹರಿಸಬಹುದು ಎಂದರು.
ಶಾಸಕ ಟಿ.ಡಿ.ರಾಜೇಗೌಡ ಮಾತನಾಡಿ, ಯಾವುದೇ ಮಾನದಂಡ ಪಾಲಿಸದೆ ಅರಣ್ಯ ಇಲಾಖೆ ಕೆಲವು ಅಧಿಕಾರಿಗಳು ನೋಟಿಫಿಕೇಶನ್ ಹೊರಡಿಸುತ್ತಿದ್ದಾರೆ. ಅರಣ್ಯ ಸಂರಕ್ಷಣಾ ಕಾಯ್ದೆ ಹೆಸರಿನಲ್ಲಿ ರೈತರು,ಬಡವರ ಮೇಲೆ ಮರಣ ಶಾಸನ ಬರೆಯಲಾಗುತ್ತಿದೆ. ಅರಣ್ಯ ಕಾಯ್ದೆಗೂ ಏಕೆ ತಿದ್ದುಪಡಿ ತರಬಾರದು ಎಂದು ಪ್ರಶ್ನಿಸಿದರು. ಜಂಟಿ ಸರ್ವೇಯ ಮೂಲಕ ಕಂದಾಯ ಮತ್ತು ಅರಣ್ಯ ಪ್ರತ್ಯೇಕಿಸಬೇಕು. ಸಮಸ್ಯೆ ಇತ್ಯರ್ಥವಾಗುವವರೆಗೆ ಒತ್ತುವರಿಯನ್ನು ತೆರವುಗೊಳಿಸಬಾರದು. ಡೀಮ್ಡ್ ಅರಣ್ಯವನ್ನು ಕಂದಾಯ ಇಲಾಖೆಗೆ ವಾಪಸ್ ಪಡೆಯುವ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ನಾಗರಿಕ ಮತ್ತು ರೈತ ಹೋರಾಟ ಸಮಿತಿ ಅಧ್ಯಕ್ಷ ಎಸ್.ವಿಜಯಕುಮಾರ್ ಅರಣ್ಯ ಇಲಾಖೆಯಿಂದ ಜನರಿಗೆ ಆಗುತ್ತಿರುವ ತೊಂದರೆಯನ್ನು ಜನಪ್ರತಿನಿಧಿಗಳಿಗೆ ಮನವರಿಕೆ ಮಾಡಿಕೊಟ್ಟರು.
