ಕೆಡಿಪಿ ಸಭೆಯಲ್ಲಿ ಪತ್ರಕರ್ತರಿಗೆ ಅವಮಾನಿಸಿದ ಸಚಿವ ಕೆ.ಜೆ ಜಾರ್ಜ್
* ಸಚಿವರ ಅವಹೇಳನಕಾರಿ ಹೇಳಿಕೆಗೆ ಪತ್ರಕರ್ತರ ಆಕ್ರೋಶ, ಸಭಾತ್ಯಾಗ
* ಸಚಿವರ ಸಮಜಾಯಿಷಿಯನ್ನು ತಿರಸ್ಕರಿಸಿದ ಪತ್ರಕರ್ತ ಸಮುದಾಯ
NAMMMUR EXPRESS NEWS
ಚಿಕ್ಕಮಗಳೂರು: ಜಿಲ್ಲಾ ಪಂಚಾಯ್ತಿಯ ಕೆಡಿಪಿ ಸಭೆಯಲ್ಲಿ ಸಚಿವ ಜಾರ್ಜ್ರವರ ವಿವಾದಾತ್ಮಕ ಹೇಳಿಕೆ ಪತ್ರಕರ್ತರ ಆಕ್ರೋಶಕ್ಕೆ ಕಾರಣವಾಗಿದೆ. ”ಸಭೆಯಲ್ಲಿ ಪತ್ರಕರ್ತರನ್ನು ನಿಗದಿತ ಸ್ಥಳದಲ್ಲಿ ಕೂರಿಸಲಾಗಿದ್ದು, ಅವರನ್ನು ‘ನಾವು ಕುರ್ಚಿ ಕೊಟ್ಟಿದ್ದೀವಿ ಅದೇ ಜಾಗದಲ್ಲೇ ನೀವು ಕೂರಬೇಕು, ಫೋಟೋ ತೆಗೆದುಕೊಂಡು ಹೋಗಬೇಕು. ಇಲ್ಲಂದ್ರೆ ಹೊರಗೆ ಕಳಿಸ್ತೀವಿ” ಎಂದು ಸಚಿವ ಜಾರ್ಜ್ ಪತ್ರಕರ್ತರ ಬಗ್ಗೆ ತೀರ ಹಗುರವಾಗಿ ಮಾತಾಡಿದ್ದಾರೆ.
ನೀವು ಎಲ್ಲವನ್ನೂ ಫೋಟೋ, ವಿಡಿಯೋ ತೆಗೆದರೆ ಹೇಗೆ? ಎನ್ನುತ್ತಾ ಮೀಟಿಂಗ್ನಿಂದ ಪತ್ರಕರ್ತರನ್ನು ಹೊರಗಿಡುವಂತೆ ಸೂಚಿಸಿದ್ದಾರೆ. ಘಟನೆಯ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ. ಸಚಿವರ ಹೇಳಿಕೆಯಿಂದ ಕೆರಳಿದ ಪತ್ರಕರ್ತರು, ‘ಸರಿ ನಾವು ಹೊರಗಡೆ ಹೋಗ್ತೇವೆ. ಮುಂದೆ ನಿಮ್ಮ ಯಾವ ಕಾರ್ಯಕ್ರಮಕ್ಕೂ ಆಹ್ವಾನಿಸಬೇಡಿ. ಪತ್ರಕರ್ತರಿಲ್ಲದೇ ಕಾರ್ಯಕ್ರಮ ನಡೆಸಿ’ ಎಂದು ತೀವ್ರ ಆಕ್ಷೇಪ ವ್ಯಕ್ತಪಡಿಸಿ ಪತ್ರಕರ್ತರು ಸಭೆಯಿಂದ ಎದ್ದು ಹೊರನಡೆದರು.
ಪತ್ರಕರ್ತರು ಸಭೆಯಿಂದ ಹೊರನಡೆಯಲು ಮುಂದಾದ ಹಿನ್ನೆಲೆ ಸಚಿವ ಜಾರ್ಜ್ ಪತ್ರಕರ್ತರನ್ನ ಸಮಾಧಾನಪಡಿಸಿ “ನಾನು ಹೇಳಿದ್ದು ಅಪಾರ್ಥವಾಗಿದೆ, ತಪ್ಪಾಗಿ ಅರ್ಥೈಸಿಕೊಂಡಿದ್ದೀರಿ” ಎಂದು ಸಮಜಾಯಿಷಿ ನೀಡಲು ಯತ್ನಿಸಿದ್ದಾರೆ. ಆದರೆ, ಪತ್ರಕರ್ತರು ಈ ಸಮಜಾಯಿಷಿಗೆ ಒಪ್ಪದೇ ಸಭೆಯಿಂದ ಹೊರಗೆ ತೆರಳಿದ್ದಾರೆ.
ಚಿಕ್ಕಮಗಳೂರು ಕೆಡಿಪಿ ಸಭೆಯಲ್ಲಿ ಸಚಿವ ಜಾರ್ಜ್ ಪತ್ರಕರ್ತರ ಕುರಿತು ಅನುಚಿತವಾಗಿ ಮಾತನಾಡಿ, ನಿಗದಿತ ಜಾಗದಲ್ಲಿ ಕೂರಿ, ಫೋಟೋ ತೆಗೆದುಕೊಂಡು ಹೋಗಿ ಎಂದು ಲೂಸ್ ಟಾಕ್ ಮಾಡಿರುವುದು ಮತ್ತೊಮ್ಮೆ ಸಚಿವರ ಜವಾಬ್ದಾರಿಯಿಲ್ಲದ ವರ್ತನೆಯನ್ನು ಎತ್ತಿ ತೋರಿಸಿದೆ, ಸಚಿವರ ಇಂಥ ವರ್ತನೆಯನ್ನ ಪತ್ರಕರ್ತ ಸಮುದಾಯ ತೀವ್ರವಾಗಿ ಖಂಡಿಸಿದೆ.
