ಕೊಪ್ಪದಲ್ಲಿ ಸಾರ್ವಜನಿಕ ಹಿತರಕ್ಷಣಾ ಸಮಿತಿಯಿಂದ ನ್ಯಾಯಕ್ಕಾಗಿ ಪ್ರತಿಭಟನೆ
* ಶಮಿತಾ ಕುಟುಂಬದೊಂದಿಗೆ ಶಮಿತಾ ಮನೆಯಿಂದ ಕೊಪ್ಪ ಚಲೋ
* ಪ್ರಕರಣ ಮುಚ್ಚಿಹಾಕದಿರಿ,ಸೂಕ್ತ ತನಿಖೆಗಾಗಿ ಒಕ್ಕೊರಲ ಆಗ್ರಹ
NAMMMUR EXPRESS NEWS
ಕೊಪ್ಪ: ಮೊರಾರ್ಜಿ ವಸತಿ ಶಾಲೆಯಲ್ಲಿನ ಶಮಿತಾ ಅನುಮಾನಾಸ್ಪದ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸೂಕ್ತ ತನಿಖೆಗೆ ಆಗ್ರಹಿಸಿ,ಮೃತ ಶಮಿತಾ ಹಾಗೂ ಅಮೂಲ್ಯ ಕುಟುಂಬಕ್ಕೆ ನ್ಯಾಯ ಒದಗಿಸಬೇಕು,ಪ್ರಕರಣವನ್ನು ನಿವೃತ್ತ ನ್ಯಾಯಾಧೀಶರಿಂದ ತನಿಖೆ ಮಾಡಿಸದೇ ಹಾಲಿ ಇರುವ ನ್ಯಾಯಾಧೀಶರಿಂದ ತನಿಖೆ ಮಾಡುವಂತೆ ಒತ್ತಾಯಿಸಿ ಕೊಪ್ಪದಲ್ಲಿಂದು ಸಾರ್ವಜನಿಕ ಹಿತರಕ್ಷಣಾ ಸಮಿತಿ ಕೊಪ್ಪ ಇದರ ನೇತೃತ್ವದಲ್ಲಿ ಹಲವು ಸಂಘಟನೆಗಳ ಸಹಕಾರದೊಂದಿಗೆ ನಡೆದ ಬೃಹತ್ ಪ್ರತಿಭಟನೆ ನಡೆಯಿತು. ಸಮಿತಿಯ ಪ್ರಮುಖರು ಶಮಿತಾ ಮನೆಗೆ ತೆರಳಿ ಅಲ್ಲಿ ಶಮಿತಾ ಕುಟುಂಬಕ್ಕೆ ಸಾಂತ್ವನ ಹೇಳಿ ಬಳಿಕ ಅಲ್ಲಿಂದ ಶಮಿತಾ ಕುಟುಂಬದೊಂದಿಗೆ ಕೊಪ್ಪ ಚಲೋ ಮೂಲಕ ನಗರದ ಟೌನ್ ಹಾಲ್ಗೆ ಬಂದು ಅಲ್ಲಿ ನೆರೆದಿದ್ದ ನೂರಾರು ಜನರೊಂದಿಗೆ ನಗರದ ಮುಖ್ಯ ಬಸ್ ನಿಲ್ದಾಣದವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆಯಲ್ಲಿ ಸಾಗಿ ನಂತರ ಪ್ರತಿಭಟನಾ ಸಭೆ ನಡೆಸಲಾಯಿತು.
ಸಭೆಯಲ್ಲಿ ಮಾಜಿ ಶಾಸಕ ಡಿ.ಎನ್ ಜೀವರಾಜ್ ಹಾಗೂ ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಸೇರಿದಂತೆ ಹಲವು ರಾಜಕೀಯ ನಾಯಕರೂ ಸೇರಿದಂತೆ ನೂರಾರು ಜನ ಪಾಲ್ಗೊಂಡಿದ್ದರು.
ಸಭೆಯಲ್ಲಿ ಮಾತನಾಡಿದ ಮೃತ ಶಮಿತಾ ತಂದೆ ಇದನ್ನ ಇಲ್ಲಿಗೆ ನಿಲ್ಲಿಸುವುದಿಲ್ಲ ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇನೆ,ನಾಳೆ ಇಂತಹ ಪರಿಸ್ಥಿತಿ ಬೇರೆ ಯಾರ ಮಕ್ಕಳಿಗೂ ಬರಬಾರದು,ಮಕ್ಕಳು ತಂದೆ-ತಾಯಿಗಳ ಅಂತಿಮ ಕಾರ್ಯ ಮಾಡಬೇಕೇ ಹೊರತು ತಂದೆ- ತಾಯಿಗಳು ಮಕ್ಕಳ ಅಂತಿಮ ಕಾರ್ಯ ಮಾಡುವಂತಾಗಬಾರದು, ಒಂದು ಕೊಲೆಯನ್ನು ಆತ್ಮಹತ್ಯೆ ಎಂದು ಮಾತನಾಡಬೇಡಿ, ಈಗ ಎಲ್ಲರಿಗೂ ತಿಳಿದಿದೆ ವಸತಿ ಶಾಲೆಯ ಅವ್ಯವಸ್ಥೆ ಹೇಗಿದೆಯೆಂದು ಇರುವ ಮಕ್ಕಳಿಗೆ ಸರಿಯಾದ ವಸತಿ ಸೌಕರ್ಯವಿಲ್ಲ, ನಮ್ಮೂರಲ್ಲಿ ಸರಿಯಾದ ರಸ್ತೆ ವ್ಯವಸ್ಥೆಯಿಲ್ಲ ಸರಿಯಾಗಿ ಶಾಲೆಗೆ ಬರಲಾಗುವುದಿಲ್ಲ ಎಂದು ವಸತಿ ಶಾಲೆಗೆ ದಾಖಲಿಸಿದೆವು ಹಾಸ್ಟೆಲ್ನಲ್ಲಿ ಬಿಟ್ಟೆವು,ಕಷ್ಟಗಳಿದ್ದರಿಂದಲೇ ಹಾಸ್ಟೆಲ್ನಲ್ಲಿ ಬಿಟ್ಟೆವು ಆದರೂ ನನ್ನ ಮಗಳ ಪರಿಸ್ಥಿತಿ ಹೀಗಾಯಿತು ಕಂಡಿತ ಇದನ್ನು ಇಲ್ಲಿಗೆ ಬಿಡು ಉದಿಲ್ಲ ನನ್ನ ಮಗಳ ಸಾವಿಗೆ ನ್ಯಾಯ ಸಿಗುವವರೆಗೂ ಹೋರಾಡುತ್ತೇನೆ,ಅಪಪ್ರಚಾರ ಮಾಡಿದವರಿಗೂ ಉತ್ತರಿಸುತ್ತೇನೆ ಯಾರೇ ಇದ್ದರೂ ಇಲ್ಲದಿದ್ದರೂ ನಾನು ಹೋರಾಟ ಮಾಡೇ ಮಾಡ್ತೀನಿ ಎಂದು ಕಣ್ಣೀರಿಟ್ಟರು.
ಶಾಸಕರ ವಿರುದ್ಧ ಡಿ.ಎನ್ ಜೀವರಾಜ್ ಆಕ್ರೋಶ
ಶಮಿತಾ ಪ್ರಕರಣವನ್ನು ಶಾಸಕರು ಆತ್ಮಹತ್ಯೆ ಎಂದು ಬಿಂಬಿಸಲು ಮುಂದಾಗಿದ್ದಾರೆ ಯಾಕೆ ಇಂತಹ ಆತುರ? ಶಾಸಕರದಾವರು ಇಂತಹ ಘಟನೆ ನಡೆದಾಗ ಅವತ್ತೆ ಅಲ್ಲದಿದ್ದರೂ ಮರುದಿನವಾದರೂ ಬರಬೇಕಿತ್ತು ಆದರೆ ನೀವು ಘಟನೆ ನಡೆದು ಸಾಮಾಜಿಕ ಜಾಲತಾಣಗಳಲ್ಲಿ ಶಾಸಕರು ಬರಲಿಲ್ಲವೆಂದು ಚರ್ಚೆಗಳಾದಾಗ 5 ದಿನಗಳ ನಂತರ ಶಮಿತಾ ಮನೆಗೆ ಹೋಗುತ್ತೀರಿ, ಮೃತ ಶಮಿತಾಳ ಮರಣೋತ್ತರ ಪರೀಕ್ಷೆಗೆಂದು ಶಿವಮೊಗ್ಗಕ್ಕೆ ಮೃತ ದೇಹ ಕೊಂಡೊಯ್ಯಲಾಗಿತ್ತು ಆ ಸಮಯದಲ್ಲಿ ಶಮಿತಾ ತಂದೆ ಕೈಯಲ್ಲಿ ಪರಿಹಾರದ ಚೆಕ್ ಶಾಲೆಯ ಅಧಿಕಾರಿ ತಂದುಕೊಡ್ತಾನೆ. ಅಲ್ಲಿಂದ ಪ್ರಕರಣದ ಮೇಲೆ ಅನುಮಾನ ಶುರುವಾಗಿದೆ, ಈ ಹಿಂದೆ ವಿದ್ಯಾರ್ಥಿನಿ ಅಮೂಲ್ಯ ಸಾವಾದಾಗ ಪ್ರಿನ್ಸಿಪಲ್ನ್ನು ಸಸ್ಪೆಂಡ್ ಮಾಡಿದ್ದು ಮತ್ತೆ ಅದೇ ಪ್ರಿನ್ಸಿಪಲ್ನ್ನು ಅಲ್ಲಿಗೆ ಹಾಕಿದ್ರಿ, ಮತ್ತದೇ ಘಟನೆ ನಡೆದಾಗ ಅವರನ್ನು ಬಂಧಿಸಿ ತನಿಖೆ ಮಾಡೋ ಬದಲು ಅವರ ಹೆಸರೇ ಹೇಳದೆ ಕೇವಲ ಇದು ಆತ್ಮಹತ್ಯೆ ಎಂದು ಬಿಂಬಿಸಲು ಪ್ರಯತ್ನಗಳಾಗುತ್ತಿವೆ ಎಂದು ಡಿ.ಎನ್ ಜೀವರಾಜ್ ಆರೋಪಿಸಿದರು.
