Categories
ಚಿಕ್ಕಮಗಳೂರು

ಗೌರಿಗಣೇಶ ಸಂದರ್ಭದಲ್ಲೇ ಮಲೆನಾಡಲ್ಲಿ ಅರಳುವ ವಿಶಿಷ್ಟವಾದ ‘ಗೌರಿ ಹೂವು’

ಗೌರಿಗಣೇಶ ಸಂದರ್ಭದಲ್ಲೇ ಮಲೆನಾಡಲ್ಲಿ ಅರಳುವ ವಿಶಿಷ್ಟವಾದ ‘ಗೌರಿ ಹೂವು’

* ಗೌರಿ ಹೂವಿನ ವಿಶೇಷತೆಯೇನು,ಎಲ್ಲೆಲ್ಲಿ ಇದು ಬೆಳೆಯುತ್ತೆ
* ಇದರ ಬೆಳವಣಿಗೆ ಹೇಗಿರತ್ತೆ,ಇದಕ್ಕಿರುವ ಇತರೆ ಹೆಸರುಗಳೇನು ಇಲ್ಲಿದೆ ಮಾಹಿತಿ

ವಿಶೇಷ ವರದಿ: ಸಚಿನ್, ಶೃಂಗೇರಿ

NAMMMUR EXPRESS NEWS
ಮಲೆನಾಡು ಭಾಗದಲ್ಲಿ ವಿಶೇಷವಾದ ಹೂವೊಂದಿದೆ. ಅದು ವರ್ಷಕ್ಕೆ ಒಂದು ಬಾರಿ ಮಾತ್ರ ಕಾಣ ಸಿಗುತ್ತದೆ. ಆ ಹೂವೇ ಗೌರಿ.
ಮಲೆನಾಡಿನಲ್ಲಿ ವಿವಿಧ ಬಗೆಯ ಹೂಗಳಿವೆ. ಈ ಪೈಕಿ ಹಲವು ಹೂವುಗಳು ಔಷಧೀಯ ಗುಣಗಳನ್ನು ಹೊಂದಿದ್ದರೆ, ಇನ್ನೂ ಕೆಲವು ದೈವಿಕ ಗುಣಗಳನ್ನೂ ಹೊಂದಿರುತ್ತವೆ,ಅಂಥ ಸಾಲಿಗೆ ಪಶ್ಚಿಮ ಘಟ್ಟದ ಗೌರಿ ಹೂವು ಸೇರುತ್ತದೆ.
ಕಾಡು, ಹೊಲ-ತೋಟಗಳಲ್ಲಿ ಸಿಗುವ ಮಲೆನಾಡಿನ ಗೌರಿ ಹೂವಿಗೆ ವಿಶೇಷವಾದ ಬೇಡಿಕೆ ಇದೆ. ಯಾವುದೇ ಪೂಜೆ ಇರಲಿ, ದೇವರಿಗೆ ಪುಷ್ಪಾರ್ಚನೆ ಮಾಡದೇ ಪೂಜೆ ಸಮಾಪ್ತಿಯಾಗದು. ಈ ಹಿನ್ನೆಲೆಯಲ್ಲಿ ಹಬ್ಬ-ಹರಿದಿನಗಳಲ್ಲಿ ಗೌರಿ ಹೂವುಗಳಿಗೆ ಎಲ್ಲಿಲ್ಲದ ಬೇಡಿಕೆ ಇರುತ್ತದೆ.
ಬ್ರಹ್ಮಕಮಲ, ಕೃಷ್ಣಕಮಲ, ಕುರಿಂಜಿ ಸೇರಿದಂತೆ ಹಲವು ಹೂವುಗಳ ಹೆಸರಿನೊಂದಿಗೆ ದೇವತೆಗಳಿಗೆ ನಂಟಿದೆ. ಅಂತಹ ಹೂಗಳ ಸಾಲಿನಲ್ಲಿ ಗೌರಿ ಹೂವು ಕೂಡಾ ಒಂದು. ಗೌರಿ ದೇವತೆಯ ಹೆಸರಿನಲ್ಲಿರುವ ವಿಶಿಷ್ಟವಾದ ಹೂವು ಈಗ ಎಲ್ಲೆಡೆ ಅರಳಿ ಹಬ್ಬದ ಸಡಗರವನ್ನು ಇಮ್ಮಡಿಗೊಳಿಸಿದೆ.

* ಗೌರಿ ಹೂವಿಗಿರುವ ವಿವಿಧ ಹೆಸರುಗಳೇನು,ಇದರ ಬೆಳವಣಿಗೆ ಹೇಗೆ ?
ಗೌರಿ ಹೂವಿನ ವೈಜ್ಞಾನಿಕ ಹೆಸರು ಗ್ಲೊರಿಯೊಸಾ ಸುಪರ್ಬಾ. ಇಂಗ್ಲಿಷ್‌ನಲ್ಲಿ ಗ್ಲೋರಿ ಲಿಲ್ಲಿ, ಫ್ಲೆಮ್​ ಲಿಲ್ಲಿ ಎನ್ನುತ್ತಾರೆ. ದೇಶದ ವಿವಿಧ ಪ್ರದೇಶಗಳಲ್ಲಿ ಬೇರೆಬೇರೆ ಹೆಸರುಗಳಿವೆ. ಅರಳಿ ನಿಂತ ಹೂಗಳು ಬೆಂಕಿಯ ಜ್ವಾಲೆಯಂತೆ ಕಾಣುವುದರಿಂದ ‘ಅಗ್ನಿಶಿಖೆ’ ಎಂದು, ಕೋಳಿ ಜುಟ್ಟಿನಂತೆ ಕಾಣುವುದರಿಂದ ಕೋಳಿಜುಟ್ಟಿನ ಹೂವೆಂದೂ, ಕೋಳಿ ಕುಟುಮ ಎಂದೆಲ್ಲ ಜನರು ಕರೆಯುತ್ತಾರೆ.
ಇದೊಂದು ಸತ್ವಯುತ ಮೃದು ಕಾಂಡಗಳನ್ನು ಹೊಂದಿರುವ ಬಳ್ಳಿ. ಪಶ್ಚಿಮ ಘಟ್ಟಗಳಲ್ಲಿ ಹೆಚ್ಚಾಗಿ ನೋಡಬಹುದು. ಹೂವಿನ ಮೊಗ್ಗು ಹಸಿರು ಬಣ್ಣ, ಅರಳುವಾಗ ಹಸಿರು, ಹಳದಿ ಮಿಶ್ರಿತ ಬಣ್ಣದಿಂದ ಕೂಡಿರುತ್ತದೆ. ಎರಡನೇ ಹಂತದ ಬೆಳವಣಿಗೆಯಲ್ಲಿ ಹೂವಿನ ದಳಗಳ ಮೇಲ್ಭಾಗ ಕೆಂಪಾಗಿ ಕೆಳಭಾಗ ಹಳದಿಯಾಗುತ್ತದೆ. ಅಂತಿಮ ಹಂತದಲ್ಲಿ ರಕ್ತ ವರ್ಣ ಪಡೆದುಕೊಂಡು ಕಾಯಿಯಾಗಿ ಉದುರುತ್ತವೆ.
ಗೌರಿ-ಗಣೇಶ ಹಬ್ಬ ಹಿಂದೂಗಳಿಗೆ ತುಂಬಾ ಸಂಭ್ರಮ ಸಡಗರದ ಹಬ್ಬ. ಗೌರಿ ಹಬ್ಬದ ಸಂದರ್ಭದಲ್ಲಿ ವಿಶೇಷವಾದ ಹೂವೊಂದು ಮಲೆನಾಡಿನಲ್ಲಿ ಅರಳುತ್ತದೆ. ಅದರ ಹೆಸರೇ ಗೌರಿ ಹೂವು. ಇದನ್ನು ಬೇರೆ ಬೇರೆ ಹೆಸರುಗಳಿಂದಲೂ ಕರೆಯುತ್ತಾರೆ. ಇದರಲ್ಲಿ ಔಷಧೀಯ ಅಂಶಗಳು ಹೆಚ್ಚಿವೆ. ಹೂವಿನ ಮೇಲ್ಭಾಗ ಕೆಂಪು, ಕೆಳಭಾಗ ಹಳದಿ ಬಣ್ಣದಿಂದ ಕೂಡಿರುತ್ತದೆ. ಮಲೆನಾಡು ಭಾಗದ ಈ ಹೂವನ್ನು ಹೆಚ್ಚು ಬಳಸುತ್ತಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.