ಟಾಪ್ ನ್ಯೂಸ್ ಚಿಕ್ಕಮಗಳೂರು
-ಕಾಫಿ ನಾಡಲ್ಲಿ ಮಳೆ ಅನಾಹುತ..!
– ಚಿಕ್ಕಮಗಳೂರು : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು
– ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್
– ಚಾರ್ಮಾಡಿಯಲ್ಲಿ ಮತ್ತೆ ಆತಂಕ ಮೂಡಿಸಿದ ರಸ್ತೆ ಬಿರುಕು
– ಉಕ್ಕಿ ಹರಿದ ತುಂಗಾಭದ್ರಾ ನದಿ, ಅಂಗಡಿಗಳು ಮುಳುಗಡೆ
– ದಕ್ಷಿಣ ಕನ್ನಡ: ಮಳೆ ನಿಂತರೂ ಮತ್ತೆ ಭೂ ಕುಸಿತದ ಆತಂಕ
NAMMUR EXPRESS NEWS
ಚಿಕ್ಕಮಗಳೂರಿನಲ್ಲಿ ಗಾಳಿ-ಮಳೆ ಅಬ್ಬರಕ್ಕೆ ಬೃಹತ್ ಮರವೊಂದು ರಸ್ತೆಗುರುಳಿದೆ. ಪರಿಣಾಮ ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್ ಆಗಿದೆ. ಎನ್ಆರ್ ಪುರ ತಾಲೂಕಿನಿಂದ ಕಳಸ ತಾಲೂಕಿಗೆ ಈ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಮರ ಬಿದ್ದ ಪರಿಣಾಮ ಶನಿವಾರ ಬೆಳ್ಳಂಬೆಳಗ್ಗೆಯೇ ಬಾಳೆಹೊನ್ನೂರು-ಕಳಸ ರಸ್ತೆ, ಹೊರನಾಡಿಗೆ ಹೋಗಿ-ಬರುವ ಮಾರ್ಗವೂ ಬಂದ್ ಆಗಿತ್ತು. ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್ ಉಂಟಾಗಿದ್ದರಿಂದ ಸ್ಥಳೀಯರೇ ಮರ ತೆರವು ಮಾಡಿದರು.
– ಚಾರ್ಮಾಡಿಯಲ್ಲಿ ಮತ್ತೆ ಆತಂಕ ಮೂಡಿಸಿದ ರಸ್ತೆ ಬಿರುಕು
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಹೆದ್ದಾರಿಯಲ್ಲಿ ಮತ್ತೆ ರಸ್ತೆ ಬಿರುಕು ಬಿಡುವ ಆತಂಕ ಹೆಚ್ಚಿದೆ. ರಸ್ತೆ ಬಿರುಕು ಕಾಣಿಸಿಕೊಳ್ಳದಂತೆ ಮರೆಮಾಚಲು ಅಧಿಕಾರಿಗಳ ಯತ್ನಿಸುತ್ತಿದ್ದಾರೆ. ಹೆದ್ದಾರಿಯ ಹಲವು ತಿರುವುಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಾಂಕ್ರೀಟ್ ಮೂಲಕ ತೇಪೆ ಹಚ್ಚುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಡೆದಿರುವ ಕೋಟಿ ವೆಚ್ಚದ ಕಾಮಗಾರಿಯು, ಮಳೆಯಿಂದ ಹಾನಿಯಾಗಿದೆ.
– ಉಕ್ಕಿ ಹರಿದ ತುಂಗಾಭದ್ರಾ ನದಿ, ಅಂಗಡಿಗಳು ಮುಳುಗಡೆ
ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾಭದ್ರಾ ನದಿ ಪಾತ್ರದಲ್ಲಿ ನೀರಿನ ಮಟ್ಟ ಹೆಚ್ಚಿದೆ. ದಾವಣಗೆರೆ ಜಿಲ್ಲೆಯ ಉಕ್ಕಡಗಾತ್ರಿ ಸಮೀಪ ತುಂಗಾಭದ್ರಾ ನದಿ ಉಕ್ಕಿ ಹರಿದಿದೆ. ಉಕ್ಕಡಗಾತ್ರಿ ಸಮೀಪದ ಸ್ನಾನಘಟ್ಟದವರೆಗು ನೀರು ನುಗ್ಗಿದ್ದು, ಹತ್ತಾರು ಪೂಜಾಸಾಮಾಗ್ರಿ ಅಂಗಡಿಗಳು ಮುಳುಗಡೆಯಾಗಿವೆ. ಉಕ್ಕಡಗಾತ್ರಿ ಆಗಮಿಸುವ ಭಕ್ತರಿಗೆ ದೇವಸ್ಥಾನದ ಟ್ರಸ್ಟ್‌ನಿಂದ ತುಂಗಾಭದ್ರಾ ನದಿ ಪಾತ್ರಕ್ಕೆ ಸ್ನಾನ ಸೇರಿದಂತೆ ಇತರೇ ಕಾರಣಗಳಿಗೆ ನೀರಿಗೆ ಇಳಿಯದಂತೆ ಸೂಚನೆ ನೀಡಿದೆ.
– ದಕ್ಷಿಣ ಕನ್ನಡ: ಮಳೆ ನಿಂತರೂ ಮತ್ತೆ ಭೂ ಕುಸಿತದ ಆತಂಕ!
ಮಳೆ ನಿಂತರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂ ಕುಸಿತದ ಆತಂಕ ಕಡಿಮೆ ಆಗಿಲ್ಲ. ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಸಮೀಪದಲ್ಲೇ ಭಾರೀ ಗುಡ್ಡ ಕುಸಿತ ಉಂಟಾಗಿದೆ. ಮಂಗಳೂರಿನ ವಾಮಂಜೂರು ಕೆತ್ತಿಕಲ್ ಬಳಿ ಭೂ ಕುಸಿತದ ಭೀತಿ ಎದುರಾಗಿದೆ. ಚತುಷ್ಪಥ ಹೆದ್ದಾರಿ ಕಾಮಗಾರಿಗಾಗಿ ಗುಡ್ಡ ಕೊರೆದ ಪರಿಣಾಮ ಹೆದ್ದಾರಿಗೆ ತಾಗಿಕೊಂಡೇ ಇರೋ ಗುಡ್ಡದಲ್ಲಿ ಆಗಾಗ್ಗೆ ಮಣ್ಣು ಕುಸಿಯುತ್ತಿದೆ. ಗುಡ್ಡದ ತುದಿ ಭಾಗದಲ್ಲಿ ಭಾರೀ ಗಾತ್ರದ ಬಂಡೆಗಳು ಉರುಳಿ ಬೀಳುವ ಆತಂಕ ಇದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರು ಸಮೀಪ ಗಾಳಿ ಸಹಿತ ಮಳೆಯಾಗಿದೆ. ಏಕಾಎಕಿ ಬಂದ ಗಾಳಿಗೆ ಅಂಗಡಿಯ ಶಿಟ್‌ಗಳು ಹಾರಿ ಹೋಗಿದ್ದವು.