ಜಿಲ್ಲಾಡಳಿತದ ಅನುಮತಿ ನೀಡದೆಯೂ ಕಾಫಿನಾಡು ಬಂದ್‌ಗೆ ವ್ಯಾಪಕ ಬೆಂಬಲ
* ಪಹಲ್ಗಾಮ್ ಉಗ್ರ ದಾಳಿ ಹಾಗೂ ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ಬಂದ್
* ಬಂದ್‌ಗೆ ಜಿಲ್ಲಾಡಳಿತ ಅನುಮತಿ ಇಲ್ಲ,ನೂರಾರು ಹಿಂದೂ ಸಂಘಟನೆ ಕಾರ್ಯಕರ್ತರ ಬಂಧನ
NAMMMUR EXPRESS NEWS
ಚಿಕ್ಕಮಗಳೂರು: ಪಹಲ್ಗಾಮ್ ಉಗ್ರದಾಳಿ ಹಾಗೂ ಮಂಗಳೂರು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿ ಹತ್ಯೆ ಖಂಡಿಸಿ ವಿಶ್ವ ಹಿಂದೂ ಪರಿಷದ್ ಬಜರಂಗದಳ ಇಂದು ಚಿಕ್ಕಮಗಳೂರು ಜಿಲ್ಲಾ ಬಂದ್‌ಗೆ ಕರೆ ನೀಡಿದ್ದು, ಜಿಲ್ಲೆಯ ಎಲ್ಲಾ ತಾಲೂಕುಗಳಲ್ಲಿ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದ್ದು, ಎಲ್ಲಾ ಅಂಗಡಿಮುಂಗಟ್ಟುಗಳು ಸ್ವಯಂ ಪ್ರೇರಿತವಾಗಿ ಬಂದ್ ಆಗಿವೆ. ಎಲ್ಲಾ ಪ್ರಮುಖ ಸ್ಥಳಗಳಲ್ಲಿ ಪ್ರತಿಭಟನಾ ಮೆರವಣಿಗೆ ಹಾಗೂ ಸಭೆ ನಡೆಯಲಿದ್ದು ಪೋಲಿಸ್ ಇಲಾಖೆ ಮುಂಜಾಗ್ರತೆ ವಹಿಸಿದೆ.
ಬಂದ್ ಹಿನ್ನೆಲೆ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯ ವರೆಗೆ ಎಲ್ಲಾ ವ್ಯಾಪಾರ ವಹಿವಾಟು ಸ್ಥಗಿತಗೊಳ್ಳಲಿದೆ. ಆಸ್ಪತ್ರೆ,ಮೆಡಿಕಲ್,ಬ್ಯಾಂಕ್,ಪೆಟ್ರೋಲ್ ಬಂಕ್‌ಗಳಿಗೆ ಬಂದ್‌ನಿಂದ ವಿನಾಯಿತಿ ಕೊಡಲಾಗಿದೆ,ಸರ್ಕಾರಿ ಬಸ್‌ಗಳ ಓಡಾಟ ಎಂದಿನಂತಿದೆ. ಶೃಂಗೇರಿಯಲ್ಲಿ ಸೇರಿದಂತೆ ಜಿಲ್ಲೆಯ 8 ಕಡೆಗಳಲ್ಲಿ ನಡೆಯಬೇಕಿದ್ದ ವಾರದ ಸಂತೆ ಕೂಡ ರದ್ದಾಗಿದೆ.
ಪ್ರತಿಭಟನಾ ಸಭೆಯಲ್ಲಿ ಬಂದ್ ಹಾಗೂ ಪ್ರತಿಭಟನೆಗೆ ಅವಕಾಶ ನೀಡದ ಜಿಲ್ಲಾಡಳಿತ ಹಾಗೂ ಪೊಲೀಸ್ ವರಿಷ್ಠಾಧಿಕಾರಗಳ ನಡೆನೆ ವ್ಯಾಪಕ ಖಂಡನೆ ವ್ಯಕ್ತವಾಯಿತು. ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲಾದ ಉಗ್ರರ ದಾಳಿಯನ್ನು ಕಂಡಿಸಿ ಜಿಹಾದಿ ಮನಸ್ಥಿತಿ ಹಾಗೂ ಭಾರತದ ನೆಲದಲ್ಲಿದ್ದು ಅಂತವರಿಗೆ ಸಹಕರಿಸುವ ದೇಶ ದ್ರೋಹಿಗಳಿಗೆ ಧಿಕ್ಕಾರ ಕೂಗಿದರು, ಮಂಗಳೂರು ಸುಹಾಸ್ ಶೆಟ್ಟಿ ಹತ್ಯೆಯನ್ನು ಖಂಡಿಸಿ ಶೀಘ್ರವೇ ರಾಜ್ಯ ಸರ್ಕಾರ ಈ ಪ್ರಕರಣವನ್ನ ಎನ್‌ಐಎ ತನಿಖೆಗೆ ನೀಡಬೇಕು,ಸುಹಾಸ್ ಶೆಟ್ಟಿ ಕುಟುಂಬಕ್ಕೆ ಸೂಕ್ತ ನ್ಯಾಯ ಒದಗಿಸಬೇಕು,ಮುಂದೆ ಇಂತಹ ಘಟನೆಗಳಾಗದಂತೆ ಕ್ರಮ ಕೈಗೊಳ್ಳಲು ಆಗ್ರಹಿಸಲಾಯಿತು. ಈ ಸಂದರ್ಭದಲ್ಲಿ ಚಿಕ್ಕಮಗಳೂರು ನಗರದಲ್ಲಿ ಪ್ರತಿಭಟನೆಗೆ ಮುಂದಾದ ನೂರಾರು ಹಿಂದೂ ಕಾರ್ಯಕರ್ತರು,ಮುಖಂಡರನ್ನು ಬಂಧಿಸಲಾಯಿತು.
* ಬಂದ್‌ಗೆ ಜಿಲ್ಲಾಡಳಿತದ ಅನುಮತಿ ಇಲ್ಲ – ಜಿಲ್ಲಾಧಿಕಾರಿ
ವಿಶ್ವ ಹಿಂದೂ ಪರಿಷತ್ ಹಾಗೂ ಬಜರಂಗದಳ ಸಂಘಟನೆಗಳು ಇಂದು ಕರೆ ನೀಡಿದ್ದ ಜಿಲ್ಲಾ ಬಂದ್‌ಗೆ ಯಾವುದೇ ಅನುಮತಿ ನೀಡಿಲ್ಲ. ಈ ವಿಚಾರದಲ್ಲಿ ಕಾನೂನು ಉಲ್ಲಂಘಿಸುವವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ತಿಳಿಸಿದ್ದಾರೆ.
ಸಂಘಪರಿವಾರದವರು ಜಿಲ್ಲಾಡಳಿತ ಅಥವಾ ಪೊಲೀಸ್ ಇಲಾಖೆಗೆ ಮುಂಚಿತವಾಗಿ ಮಾಹಿತಿ ನೀಡದೆ, ಅನುಮತಿಯನ್ನೂ ಪಡೆಯದೆ ಸಾಮಾಜಿಕ ಜಾಲತಾಣಗಳಲ್ಲಿ ಬಂದ್‌ಗೆ ಕರೆ ನೀಡಿರುವ ಮಾಹಿತಿ ಲಭ್ಯವಾಗಿದೆ. ಈ ಬಂದ್ ಕರೆಗೆ ಅನುಮತಿ ನಿರಾಕರಿಸಲಾಗಿದೆ ಎಂದರು.
“ಚಿಕ್ಕಮಗಳೂರು ಜಿಲ್ಲೆಯಲ್ಲಿ ಸೋಮವಾರ ಪಿಯುಸಿ ಪೂರಕ ಪರೀಕ್ಷೆಗಳು ಹಾಗೂ 8 ಕಡೆಗಳಲ್ಲಿ ವಾರದ ಸಂತೆ ನಡೆಯಲಿದೆ. ದಿಢೀರ್ ಬಂದ್‌ಗೆ ಕರೆ ಕೊಟ್ಟರೆ ದೈನಂದಿನ ಚಟುವಟಿಕೆಗೆ ಸಮಸ್ಯೆ ಆಗುತ್ತದೆ” – ಜಿಲ್ಲಾಧಿಕಾರಿ ಮೀನಾ ನಾಗರಾಜ್
