ದೇಶದ ಗಡಿಯಲ್ಲಿ ಉಗ್ರರ ಅಟ್ಟಹಾಸ!
– ಶಿವಮೊಗ್ಗ ಉದ್ಯಮಿ ಸೇರಿ 27 ಮಂದಿ ಹತ್ಯೆ ಮಾಡಿದ ಉಗ್ರರು
– ಪ್ಯಾಕೇಜ್ ಪ್ರವಾಸದಲ್ಲಿ ಹೋಗಿದ್ದವರು ಗುಂಡಿಗೆ ಬಲಿಯಾದರು
NAMMUR EXPRESS NEWS
ಜಮ್ಮು ಕಾಶ್ಮೀರದ ಪಹಲ್ಲಾಮ್ ಪ್ರಾಂತ್ಯದಲ್ಲಿ ಪ್ರವಾಸಿಗರ ಮೇಲೆ ನಡೆದ ಭೀಕರ ಉಗ್ರರ ದಾಳಿಯಲ್ಲಿ 27 ಜನ ಮೃತಪಟ್ಟು, 20ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ನಡೆದಿದ್ದು ಇಡೀ ದೇಶವೇ ಬೆಚ್ಚಿ ಬಿದ್ದಿದೆ.
ಶಿವಮೊಗ್ಗದ ಉದ್ಯಮಿ ಮಂಜುನಾಥ್ ಸೇರಿ 27 ಜನ ಮೃತಪಟ್ಟಿದ್ದು, 20 ಕ್ಕೂ ಅಧಿಕ ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಜಮ್ಮು ಕಾಶ್ಮೀರದ ಪಹಲ್ಲಾಮ್ ಪ್ರಾಂತ್ಯದಲ್ಲಿ ಈ ಭೀಕರ ದಾಳಿ ನಡೆದಿದ್ದು, ಹಿಂದೂಗಳನ್ನೇ ಹುಡುಕಿ ಹುಡುಕಿ ಹತ್ಯೆ ನಡೆಸಿದ್ದು ಪ್ರವಾಸಿಗರ ಮೇಲೆ ಮನಬಂದಂತೆ ಗುಂಡುಹಾರಿಸಲಾಗಿದೆ.
ಉಗ್ರರ ಈ ಪೈಶಾಚಿಕ ಕೃತ್ಯವನ್ನು ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ತೀವ್ರವಾಗಿ ಖಂಡಿಸಿದ್ದಾರೆ. ಕೇಂದ್ರ ಗೃಹ ಸಚಿವ ಅಮಿತ್ ಶಾ ಶ್ರೀನಗರಕ್ಕೆ ತೆರಳಲಿದ್ದು ಪರಿಸ್ಥಿಯ ಅವಲೋಕನ ನಡೆಸಲಿದ್ದಾರೆ.
ದಾಳಿಕೋರರರು ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ. ದಾಳಿಕೋರರನ್ನು ಸುಮ್ಮನೆ ಬಿಡುದಿಲ್ಲ ಅಮಿತ್ ಶಾ ಎಚ್ಚರಿಕೆ ನೀಡಿದ್ದಾರೆ.
ಉಗ್ರರ ದಾಳಿಗೆ ಶಿವಮೊಗ್ಗದ ರಿಯಲ್ ಎಸ್ಟೇಟ್ ಉದ್ಯಮಿ ಬಲಿ
ಅನಂತನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಸಂಭವಿಸಿದ ಉಗ್ರರ ದಾಳಿಗೆ ಶಿವಮೊಗ್ಗದ ವಿಜಯನಗರದ ರಿಯಲ್ ಎಸ್ಟೇಟ್ ಉದ್ಯಮಿ ಮಂಜುನಾಥ್ ಮೃತಪಟ್ಟಿದ್ದಾರೆ. ಪತ್ನಿ ಮತ್ತು ಪುತ್ರನೊಂದಿಗೆ ಮಂಜುನಾಥ್ ಏ.19ರಂದು ಕಾಶ್ಮೀರಕ್ಕೆ ಪ್ರವಾಸಕ್ಕೆ ತೆರಳಿದ್ದರು.
ಪಹಲ್ಗಾಮ್‌ನ ಬೈಸರನ್ ಕಣಿವೆ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಗುಂಡಿನ ಸದ್ದು ಕೇಳಿದ ತಕ್ಷಣ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿವೆ. ಘಟನೆ ನಡೆದ ಸ್ಥಳಕ್ಕೆ ಕಾಲ್ನಡಿಗೆ ಅಥವಾ ಕುದುರೆಯ ಮೂಲಕ ಮಾತ್ರ ಹೋಗಲು ಸಾಧ್ಯ. ಹೀಗಾಗಿ ರಕ್ಷಣಾ ಕಾರ್ಯಾಚರಣೆ ನಿಧಾನವಾಗಿ ನಡೆಯಿತು.
ಮೋದಿಗೆ ಹೋಗಿ ಹೇಳು ಎಂದು ಉದ್ಯಮಿ ಪತ್ನಿಗೆ ಹೇಳಿದ ಉಗ್ರ
‘ದಾಳಿಯಲ್ಲಿ ಮೃತಪಟ್ಟ ಮಂಜುನಾಥ್ ಪತ್ನಿ ಪಲ್ಲವಿ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, ‘ನಾವು ಏಪ್ರಿಲ್ 19 ರಂದು ಕಾಶ್ಮೀರಕ್ಕೆ ಪ್ರವಾಸಕ್ಕೆ ಹೋಗಿದ್ದೆವು. ಇದು ಗುಡ್ಡಗಾಡು ಪ್ರದೇಶವಾದ್ದರಿಂದ, ಪ್ರವಾಸಿಗರು ಕಣಿವೆಯ ಮೂಲಕ ಹಾದುಹೋಗಲು ಕುದುರೆಗಳನ್ನು ಬಾಡಿಗೆಗೆ ಪಡೆಯಬೇಕಾಯಿತು. ಕೆಲವು ದಿನಗಳವರೆಗೆ ಎಲ್ಲವೂ ಸಾಮಾನ್ಯವಾಗಿತ್ತು. ಆದರೆ ಇಂದು, ದುರಂತ ಘಟನೆ ಸಂಭವಿಸಿದೆ. ನನ್ನ ಮಗನಿಗೆ ತಿಂಡಿ ತಿನ್ನಲು ಆಸೆ ಇತ್ತು. ಆದ್ದರಿಂದ, ನನ್ನ ಪತಿ ಅದನ್ನು ಖರೀದಿಸಲು ಯಾವುದೋ ಅಂಗಡಿಗೆ ಹೋದರು.’
‘ಆರಂಭದಲ್ಲಿ ನಮಗೆ ಗುಂಡಿನ ಶಬ್ದ ಕೇಳಿಸಿತು. ಕಣಿವೆಯಲ್ಲಿ ಪೊಲೀಸರು ಕೆಲವು ಪರೀಕ್ಷೆಗಳನ್ನು ಮಾಡುತ್ತಿದ್ದಾರೆ ಎಂದು ನಾವು ಭಾವಿಸಿದ್ದೆವು. ಆದರೆ ನಾನು ನನ್ನ ಪತಿಯನ್ನು ನೋಡಿದಾಗ, ಅವರು ರಕ್ತದ ಮಡುವಿನಲ್ಲಿ ಬಿದ್ದಿದ್ದರು. ಆಗ ಉಳಿದ ಪ್ರವಾಸಿಗರು ‘ಭಾಗೋ ಭಾಗೋ’ ಎಂದು ಕೂಗಲು ಪ್ರಾರಂಭಿಸಿದರು. ಸದ್ಯ ನಾನೀಗ ನಾನು ಫಲ್ಟಾಮ್‌ನಲ್ಲಿರುವ ಜನರಲ್ ಆಸ್ಪತ್ರೆಯಲ್ಲಿ ಇದ್ದೇನೆ.ʼ
“ನಮ್ಮಿಬ್ಬರ ಮೇಲೂ ಗುಂಡು ಹಾರಿಸಲು ನಾನು ಉಗ್ರಗಾಮಿಗಳಿಗೆ ಕೇಳಿದೆ. ಅವರು ಮೋದಿ ಜಿ ಕೋ ಬತಾವೋ (ಮೋದಿಗೆ ಹಾಗೆ ಮಾಡಲು ಹೇಳು) ಎಂದು ಹೇಳಿದರು. ನಾನು ಇನ್ನೂ ಆಘಾತದಲ್ಲಿದ್ದೇನೆ”ʼ ಎಂದು ತಿಳಿಸಿದ್ದಾರೆ.
ಕಾಶ್ಮೀರಕ್ಕೆ ಪ್ಯಾಕೇಜ್ ಪ್ರವಾಸ ಹೋಗಿದ್ದ ಕುಟುಂಬ
ಮೂಲತಃ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಣಿಮಕ್ಕಿ ಗ್ರಾಮದ ಮಂಜುನಾಥ್ ರಾವ್, ಶಿವಮೊಗ್ಗದಲ್ಲಿ ರಿಯಲ್ ಎಸ್ಟೇಟ್ ವ್ಯವಹಾರ ಮಾಡಿಕೊಂಡಿದ್ದರು. ಪತ್ನಿ ಕಡೂರು ತಾಲೂಕಿನ ಬೀರೂರು ಮ್ಯಾಮ್ ಕೋಸ್‌ನಲ್ಲಿ ಮ್ಯಾನೇಜರ್ ಆಗಿದ್ದರು. ಮಗನ ಪಿಯುಸಿ ಪರೀಕ್ಷೆ ಮುಗಿದ ಬಳಿಕ 6 ದಿನಗಳ ಪ್ಯಾಕೇಜ್ ಪ್ರವಾಸದಲ್ಲಿ ಏ.19ರಂದು ಮಗನ ಜೊತೆ ದಂಪತಿಗಳು ಕಾಶ್ಮೀರ ಪ್ರವಾಸ ಕೈಗೊಂಡಿದ್ದರು. ಎರಡು ದಿನಗಳ ಹಿಂದೆ ಸಂಬಂಧಿ ಅಶೋಕ್ ಕರೆ ಮಾಡಿದ್ದ ಮಂಜುನಾಥ್ ರಾವ್, ಏ.24ರಂದು ಹಿಂತಿರುಗುತ್ತೇವೆ ಎಂದಿದ್ದರು.
ಮಾಹಿತಿ ಪಡೆದ ಪ್ರಧಾನಿ ಮೋದಿ!
ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಗೃಹ ಸಚಿವ ಅಮಿತ್ ಶಾ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿದ್ದಾರೆ. ಪಹಲ್ಗಾಮ್ ಭಯೋತ್ಪಾದಕ ದಾಳಿಯ ಬಗ್ಗೆ ಮಾಹಿತಿ ಪಡೆದಿದ್ದಾರೆ. ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೂಚಿಸಿದ್ದಾರೆ. ಅಲ್ಲದೆ, ಸ್ಥಳಕ್ಕೆ ಭೇಟಿ ನೀಡುವಂತೆ ತಿಳಿಸಿದ್ದಾರೆ.
ಘಟನೆ ನಡೆದ ಪಹಲ್ಗಾಮ್ ಪ್ರದೇಶವನ್ನು ‘ಮಿನಿ ಸ್ವಿಟ್ಜರ್ಲೆಂಡ್ʼ ಎಂದೂ ಕರೆಯುತ್ತಾರೆ. ದಾಳಿಯ ನಂತರ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ. ಗಾಯಗೊಂಡ ಪ್ರವಾಸಿಗರ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ, ಗಾಯದ ಪ್ರಮಾಣ ಇನ್ನೂ ತಿಳಿದಿಲ್ಲ.