ಬಿಸಿಲು ದಿನದಿಂದ ದಿನಕ್ಕೆ ಹೆಚ್ಚಳ: ತಂಪು ಪಾನೀಯಕ್ಕೆ ಡಿಮ್ಯಾಂಡ್!
– ತಂಪು ಪಾನೀಯ, ಹಣ್ಣುಗಳ ಮೊರೆ ಹೋದ ಜನ
– ಬಿಸಿಲಿನ ತಾಪಕ್ಕೆ ಜನರು ಅಗತ್ಯ ಕಾಳಜಿ ವಹಿಸುವುದು ಉತ್ತಮ
NAMMUR EXPRESS NEWS
ಬೇಸಿಗೆಯ ಸುಡುಬಿಸಿಲಿನ ತಾಪಕ್ಕೆ ಜನರು ಮಾತ್ರವಲ್ಲ ಜಾನುವಾರುಗಳು, ಪ್ರಾಣಿ ಪಕ್ಷಿಗಳ ಜೊತೆಗೆ ಹೂ ಬಳ್ಳಿ, ಗಿಡಗಳು ಕೂಡ ತತ್ತರಿಸಿ ಬಾಡುವುದುಂಟು. ಮುಂಜಾನೆ ಮನೆಯಿಂದ ಹೊರಗೆ ಬಂದ ಸ್ವಲ್ಪ ಹೊತ್ತಲ್ಲೇ ಜನರ ನೆತ್ತಿ ಸುಡುವಷ್ಟರ ಮಟ್ಟಿಗೆ ಬಿಸಿಲಿನ ತಾಪ ಆರಂಭವಾಗುತ್ತದೆ. ಬಿಸಿಲ ಧಗೆಗೆ ಬೆವರು ಇಳಿದು ಗಂಟಲು ಒಣಗುತ್ತದೆ. ದೇಹ ಸುಸ್ತುಗೊಳ್ಳುತ್ತದೆ. ಪ್ರತಿ ದಿನ ಇಂತಹ ಸ್ಥಿತಿ ಎದುರಿಸಬೇಕಾದ ಅನಿವಾರ್ಯತೆ ಇದೆ.
ಬಸ್, ಲಾರಿ, ಟೆಂಪೋ, ಟ್ರ್ಯಾಕ್ಟರ್, ತ್ರಿಚಕ್ರ ವಾಹನದಲ್ಲಿ ಸಂಚರಿಸುವವರ ಪಾಡು ಅಷ್ಟಿಷ್ಟಲ್ಲ. ದ್ವಿಚಕ್ರ ವಾಹನಗಳಲ್ಲಿ ಹೆಲೈಟ್ ಧರಿಸಿಕೊಂಡು ಸಂಚರಿಸುವಾಗ ಆಗುವ ಕಿರಿಕಿರಿ ಹೇಳತೀರದು.
ಒಣಗಿದ ಗಂಟಲು ತಣಿಸಲು ನೀರು, ಮಜ್ಜಿಗೆ, ಪಾನಕ, ಕೂಲ್ ಡ್ರಿಂಕ್ಸ್, ಕಬ್ಬಿನ ರಸದ ಹಣ್ಣುಗಳ ಜ್ಯೂಸ್ ಸೆಂಟರ್‌ಗಳತ್ತ ಮುಖ ಮಾಡುವುದು ಸಾಮಾನ್ಯವಾಗಿದೆ. ಈ ಹಂತದಲ್ಲಿ ಬಹುತೇಕರು ಹಣ್ಣಿನ, ಕಬ್ಬಿನ ಜ್ಯೂಸ್‌ಗೆ ಮೊರೆ ಹೋಗುತ್ತಾರೆ. ಆದರೆ ಹಣ್ಣುಗಳ ಮತ್ತು ಜ್ಯೂಸಿನ ಬೆಲೆಯು ದುಬಾರಿಯಾಗಿದೆ. ನೂರು ರೂಪಾಯಿಗೆ ಮೂರು ಕೆಜಿ ಕರ್ಬೂಜದ ಹಣ್ಣು, ನೂರು ಐವತ್ತರಿಂದ ಅರವತ್ತು ರೂಪಾಯಿ ಮೂಸಂಬಿ ಹಣ್ಣು, ಐವತ್ತು ರೂಪಾಯಿಗೊಂದು ಎಳನೀರು, ಮೂವತ್ತು ರೂಪಾಯಿಗೊಂದು ಲೋಟ ಕಬ್ಬಿನ ಜ್ಯೂಸ್, 15ರಿಂದ 20 ರೂ.ಗೆ ಕೆಜಿ ಕಲ್ಲಂಗಡಿ ಹಣ್ಣು, ಬೆಲ್ಲದ ಹಣ್ಣಿನ ಬೆಲೆ ಹೇಳುವಂಗಿಲ್ಲ. ಇವೆಲ್ಲವೂ ಮನುಷ್ಯರ ದೇಹ ತಣಿಸಿಕೊಳ್ಳಲಿರುವ ಪಾನೀಯಗಳಾದರೆ ಬಡಪಾಯಿಗಳು ತಮ್ಮ ದಾಹ ನೀಗಿಸಲು ಬರೀ ನೀರು, ಮಜ್ಜಿಗೆಗೆ ಮೊರೆ ಹೋಗುತ್ತಾರೆ. ಇವೆಲ್ಲದರ ಮಧ್ಯೆ ಪ್ರಾಣಿ ಪಕ್ಷಿ ಸಂಕುಲದತ್ತಲೂ ಚಿತ್ತವಿರಿಸಿ ಅವುಗಳ ದಾಹಕ್ಕೊಂದಿಷ್ಟು ಮನೆಯ ಬಳಿ, ಮನೆ ಟಾರಸಿ ಮೇಲೆ ನೀರಿಟ್ಟರೆ ಪುಣ್ಯದ ಕೆಲಸವಾದೀತು.
ವೈದ್ಯರ ಸಲಹೆ : ಬೆಳಗ್ಗೆ ಮಧ್ಯಾಹ್ನ ಬಿಸಿಲಿನ ತಾಪಕ್ಕೆ ನೇರವಾಗಿ ಮುಖವೊಡ್ಡದೆ ಅಗತ್ಯ ಕಾಳಜಿ ವಹಿಸಬೇಕು. ಇದರಿಂದ ಚರ್ಮಕಾಂತಿ ಕಾಪಾಡಿಕೊಳ್ಳಬಹುದು ಮತ್ತು ರೋಗರುಜಿನುಗಳಿಗೆ ಕಡಿವಾಣ ಹಾಕಬಹುದಾಗಿದೆ.