ಕರಾವಳಿ ಟಾಪ್ ನ್ಯೂಸ್
ಆರ್ ಸಿಬಿ ದುರಂತದಲ್ಲಿ ಹೆಬ್ರಿ ಮೂಲದ ಯುವತಿ ಸಾವು!
* ಉಡುಪಿ: ಭಯ ಮೂಡಿಸಿದ ಕಾಡಾನೆ, ಶಾಲೆಗಳಿಗೆ ರಜೆ, ಸಂತೆ ರದ್ದು
* ಉಡುಪಿ: ಅಕ್ರಮ ಕ್ರಿಕೆಟ್ ಬೆಟ್ಟಿಂಗ್, ವ್ಯ. ಸೇ. ಸ. ಸಂಘದ ಸಿಬ್ಬಂದಿ ಸೇರಿ ಇಬ್ಬರು ಅರೆಸ್ಟ್!
NAMMUR EXPRESS NEWS
ಹೆಬ್ರಿ: ಆರ್ ಸಿಬಿ ಫೈನಲ್ ನಲ್ಲಿ ಗೆದ್ದು ಐಪಿಎಲ್ ಚಾಂಪಿಯನ್ ಪಟ್ಟವೇರಿದ ಹಿನ್ನೆಲೆ ಜೂ. 4ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಂಭ್ರಮಾಚರಣೆಯನ್ನು ಆಯೋಜಿಸಲಾಗಿತ್ತು. ಈ ಸಂದರ್ಭ ನಡೆದ ದುರಂತದಲ್ಲಿ ಹೆಬ್ರಿ ಮೂಲದ ಯುವತಿಯೋರ್ವಳು ಸಾವನ್ನಪ್ಪಿದ್ದಾಳೆ.
ಬೆಂಗಳೂರು ತಿಪ್ಪಸಂದ್ರ ನಿವಾಸಿಗಳಾದ ಹೆಬ್ರಿ ಮೂಲದ ಕರುಣಾಕರ ಶೆಟ್ಟಿ ಮತ್ತು ಉಪ್ಪಿನಂಗಡಿ ಪೂಜಾ ಶೆಟ್ಟಿ ಯವರ ಪುತ್ರಿ ಕು. ಚಿನ್ಮಯಿ ಶೆಟ್ಟಿ (19) ಮೃತ ದುರ್ದೈವಿ.
ಕು. ಚಿನ್ಮಯಿ ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಜ್ಯೋತಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿಇ ವ್ಯಾಸಂಗ ಮಾಡುತ್ತಿದ್ದರು. ಆರ್‌ಸಿಬಿ ತಂಡದ ವಿಜಯ ಸಂಭ್ರಮಾಚರಣೆ ಸಂದರ್ಭದಲ್ಲಿ ಸಂಭವಿಸಿದ ಅವಘಡದಲ್ಲಿ ಆಕೆ ತಮ್ಮ ಅಮೂಲ್ಯ ಪ್ರಾಣ ಕಳೆದುಕೊಂಡಿದ್ದಾರೆ. ಮನೆಯಲ್ಲಿ ಸೂತಕದ ವಾತಾವರಣ ಏರ್ಪಟ್ಟಿದೆ. ಹೆತ್ತವರ ಆಕ್ರಂದನ ಮುಗಿಲುಮುಟ್ಟಿದೆ.
* ಉಡುಪಿ: ಭಯ ಮೂಡಿಸಿದ ಕಾಡಾನೆ, ಶಾಲೆಗಳಿಗೆ ರಜೆ, ಸಂತೆ ರದ್ದು
ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ, ಹೊಸಂಗಡಿ ಭಾಗದಲ್ಲಿ ಕಾಡಾನೆಯೊಂದು ಕಳೆದ ಎರಡು ದಿನಗಳಿಂದ ಸಂಚರಿಸುತ್ತಿರುವ ಹಿನ್ನೆಲೆಯಲ್ಲಿ ಜೂ. 05ರಂದು ಇಂದು ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಸಿದ್ದಾಪುರ ಹೊಸಂಗಡಿ ಮತ್ತು ಕಮಲಶಿಲೆ ಗ್ರಾಮಗಳ ವ್ಯಾಪ್ತಿಯ ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರೌಢಶಾಲೆಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಸಾರ್ವಜನಿಕರು ಭಯಭೀತರಾಗದೆ ಜಾಗರೂಕತೆಯಿಂದ ಓಡಾಡಬೇಕು ಎಂದು ಕುಂದಾಪುರ ತಹಶೀಲ್ದಾರ್ ತಿಳಿಸಿದ್ದಾರೆ.ಇಂದು ನಡೆಯಲಿರುವ ಸಂತೆಯನ್ನೂ ಮುಂಜಾಗ್ರತಾ ಕ್ರಮವಾಗಿ ರದ್ದು ಮಾಡಲಾಗಿದೆ. ಬುಧವಾರ ಒಂಟಿಸಲಗದ ಚಲನವಲನದ ಬಗ್ಗೆ ವನ್ಯಜೀವಿ ಅಧಿಕಾರಿಗಳು ಮತ್ತು ಅರಣ್ಯ ಇಲಾಖೆ ಅಧಿಕಾರಿಗಳು ಕಣ್ಣಾವಲು ಇರಿಸಿದ್ದರು. ಆದರೆ ಸಂಜೆವರೆಗೂ ಚಲನವಲನ ಕಂಡು ಬಂದಿರಲಿಲ್ಲ. ಇಂದು ಕಾರ್ಯಾಚರಣೆ ಮುಂದುವರೆಯಲಿದೆ ಎಂದು ತಿಳಿದುಬಂದಿದೆ.
* ಉಡುಪಿ: ಅಕ್ರಮ ಕ್ರಿಕೆಟ್ ಬೆಟ್ಟಿಂಗ್, ವ್ಯ. ಸೇವಾ ಸಹಕಾರಿ ಸಂಘದ ಸಿಬ್ಬಂದಿ ಸೇರಿ ಇಬ್ಬರು ಅರೆಸ್ಟ್!
ಉಡುಪಿ: ಅಕ್ರಮ ಕ್ರಿಕೆಟ್ ಬೆಟ್ಟಿಂಗ್‌ಗೆ ಸಂಬಂಧಿಸಿ ಇಬ್ಬರು ಆರೋಪಿಗಳನ್ನು ಕೋಟ ಪೊಲೀಸರು ಜೂ.3ರಂದು ರಾತ್ರಿ 10ಗಂಟೆಗೆ ಸಾಯ್ಬರಕಟ್ಟೆ ರಿಕ್ಷಾ ನಿಲ್ದಾಣದ ಬಳಿ ವಶಕ್ಕೆ ಪಡೆದಿದ್ದಾರೆ.
ಬಂಧಿತ ಆರೋಪಿಗಳನ್ನು ಹಾರ್ದಳ್ಳಿ-ಮಂಡಳ್ಳಿ ಗ್ರಾಮದ ಶಿವರಾಜ್ (32) ಹಾಗೂ ಶಿರಿಯಾರ ವ್ಯವಸಾಯ ಸೇವಾ ಸಹಕಾರಿ ಸಂಘದ ಸಿಬ್ಬಂದಿ, ಶಿರಿಯಾರ ನಿವಾಸಿ ಪ್ರದೀಪ(37) ಎಂದು ಗುರುತಿಸಲಾಗಿದೆ.
ಇವರು ಮೊಬೈಲ್ ಫೋನ್ ಹಿಡಿದುಕೊಂಡು ಕ್ರಿಕೆಟ್ ಬೆಟ್ಟಿಂಗ್ ವೆಬ್‌ಸೈಟ್ ಮೂಲಕ ಚಂದ್ರ ಜನ್ನಾಡಿ ಜೊತೆ ಸಂಘಟಿತವಾಗಿ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್ ಆಟ ನಡೆಸುತ್ತಿದ್ದರು.
ಈ ಬಗ್ಗೆ ಖಚಿತ ಮಾಹಿತಿಯಂತೆ ದಾಳಿ ನಡೆಸಿದ ಪೊಲೀಸರು ಇಬ್ಬರು ಆರೋಪಿಗಳು ವಶಕ್ಕೆ ಪಡೆದು ಕ್ರಿಕೆಟ್ ಬೆಟ್ಟಿಂಗ್‌ಗೆ ಬಳಸಿದ 3 ಮೊಬೈಲ್ ಫೋನ್ ವಶಪಡಿಸಿಕೊಂಡಿದ್ದಾರೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.