Categories
ಕರಾವಳಿ

ಬೆಳ್ತಂಗಡಿ: ಬಸ್ ಸ್ಟಾಂಡ್ ಬಳಿ ನುಗ್ಗಿದ ಕಾಡು ಆನೆ: ಮಕ್ಕಳು ಅಪಾಯದಿಂದ ಪಾರು!

ಟಾಪ್ ನ್ಯೂಸ್ ಕರಾವಳಿ

ಬೆಳ್ತಂಗಡಿ: ಬಸ್ ಸ್ಟಾಂಡ್ ಬಳಿ ನುಗ್ಗಿದ ಕಾಡು ಆನೆ: ಮಕ್ಕಳು ಅಪಾಯದಿಂದ ಪಾರು!

* ಕಾಪು: ಮಂಗಳೂರು ಗೋವಾ ರೈಲು ನಿಲುಗಡೆ ಆರಂಭ
* ಮಂಗಳೂರು: ಬಾವಿಗೆ ಬಿದ್ದು ಚಿರತೆ ಸಾವು
* ಬೈಂದೂರು: ಮಳೆಯಿಂದಾಗಿ ಮನೆಗಳಿಗೆ ಹಾನಿ
* ಪುತ್ತೂರು: ಬೆಂಗಳೂರು ಮತ್ತು ಪುತ್ತೂರು ಅಂಬಾರಿ ಉತ್ಸವ್ ಬಸ್

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಮಕ್ಕಳು ಬಸ್ಸಿಗಾಗಿ ಕಾಯುತ್ತಿದ್ದ ವೇಳೆ ಕಾಡು ಆನೆ ಬಂದಿದ್ದು ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ.
ಬೊಳಿಯಾರ್ ಸಮೀಪ ಬಸ್ ನಿಲ್ದಾಣದಲ್ಲಿ ಮಕ್ಕಳು ಬಸ್ ಗಾಗಿ ಕಾಯುತ್ತಿದ್ದ ಸಂದರ್ಭದಲ್ಲಿ, ಕಾಡಾನೆಯೊಂದು ನಿಲ್ದಾಣದ ಕಡೆಗೆ ಓಡಿ ಬಂದಿದೆ. ಮಕ್ಕಳು ಹತ್ತಿರ ಬರುತ್ತಿರುವ ಕಾಡಾನೆಯನ್ನು ಕಂಡು ಭಯಭೀತರಾಗಿ ಬಸ್ ನಿಲ್ದಾಣದ ಬಳಿಯಿದ್ದ ಅಂಗಡಿಗಳಿಗೆ ನುಗ್ಗಿ ರಕ್ಷಣೆ ಪಡೆದುಕೊಂಡಿದ್ದಾರೆ.‌ ಬಳಿಕ ಆನೆಯು ಕಾಡಿನತ್ತ ಧಾವಿಸಿದ್ದು, ಸುತ್ತಮುತ್ತಲ ಜನರು ಕೂದಲೆಳೆ ಅಂತರದಿಂದ ಪಾರಾಗಿದ್ದಾರೆ.‌ ಬೆಳ್ತಂಗಡಿಯಲ್ಲಿ ಅಧಿಕ ಮಳೆಯಾಗಿ ನಷ್ಟ ಅನುಭವಿಸುತ್ತಿರುವ ನಡುವೆಯೇ ಕಾಡಾನೆಯ ಸಮಸ್ಯೆಯು ತಲೆದೋರಿರುವುದು ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ಶಾಲಾ ಮಕ್ಕಳು ಮತ್ತು ಹೈನುಗಾರಿಕೆ ನಡೆಸುವವರು ಭೀತಿಯಿಂದಲೇ ತಮ್ಮ ತಮ್ಮ ಸ್ಥಳಗಳಿಗೆ ಓಡಾಡುವಂತಾಗಿದೆ.‌ ಈ ಸಮಸ್ಯೆಯನ್ನು ಅರಣ್ಯ ಇಲಾಖೆಯವರು ಆದಷ್ಟು ಬೇಗ ಪರಿಹರಿಸಬೇಕೆಂದು ಸಾರ್ವಜನಿಕರು ಮನವಿ ಮಾಡಿಕೊಂಡಿದ್ದಾರೆ.

ಕಾಪು: ಮಂಗಳೂರು ಗೋವಾ ರೈಲು ನಿಲುಗಡೆ ಆರಂಭ

ಕಾಪು: ಮಂಗಳೂರು ಗೋವಾ ನಡುವಿನ ಎಕ್ಸ್ ಪ್ರೆಸ್ ರೈಲು ಪಡುಬಿದ್ರೆ ರೈಲ್ವೆ ನಿಲ್ದಾಣದಲ್ಲಿ ನಿಲುಗಡೆಗೊಳ್ಳುವುದು ಸೋಮವಾರದಿಂದ ಪ್ರಾರಂಭಗೊಂಡಿದೆ. ಬೆಳಪು ಗ್ರಾಮ ಪಂಚಾಯಿತಿಯ ಅಧ್ಯಕ್ಷರು ಮತ್ತು ರೈಲು ನಿಲುಗಡೆ ಹೋರಾಟ ಸಮಿತಿಯ ಅಧ್ಯಕ್ಷರೂ ಆಗಿರುವ ದೇವಿಪ್ರಸಾದ ಶೆಟ್ಟಿ ಅವರ ನೇತೃತ್ವದಲ್ಲಿ ರೈಲನ್ನು ಅದ್ಧೂರಿಯಾಗಿ ಸ್ವಾಗತಿಸಲಾಯಿತು.. ಈ ಸುಸಂದರ್ಭದಲ್ಲಿ ಮಾತನಾಡಿದ ದೇವಿಪ್ರಸಾದ್ ಶೆಟ್ಟಿ ಅವರು “ಬಹಳ ವರ್ಷಗಳಿಂದ ನಿಲುಗಡೆಗೆ ಮತ್ತು ಅಭಿವೃದ್ಧಿಗೆ ಬೇಡಿಕೆಯನ್ನು ಇಡುತ್ತಲೇ ಬಂದಿದ್ದೆವು. ಇದಕ್ಕಾಗಿ ಹಲವಾರು ಹೋರಾಟಗಳನ್ನು ಸಹ ನಡೆಸಿದೆವು. ನಮ್ಮ ಹೋರಾಟಕ್ಕೆ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಮತ್ತು ಸಂಸದರಾದ ಕೋಟ ಶ್ರೀನಿವಾಸ ಪೂಜಾರಿ ಅವರು ಬೆಂಬಲವನ್ನು ವ್ಯಕ್ತಪಡಿಸಿದ್ದು, ಕೇಂದ್ರ ರೈಲ್ವೆ ರಾಜ್ಯ ಖಾತೆಯ ಸಚಿವರಾದ ವಿ ಸೋಮಣ್ಣ ಅವರ ಮೂಲಕ ಇಂದು ನಮ್ಮ ಬಹು ವರ್ಷಗಳ ಪ್ರಯತ್ನಕ್ಕೆ ಫಲ ನೀಡಿದ್ದಾರೆ. ಆ ಮೂಲಕ ಬೇಡಿಕೆಯನ್ನು ಈಡೇರಿಸಿದ್ದಾರೆ” ಎಂದು ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಹೋರಾಟ ಸಮಿತಿಯ ರಾಕೇಶ್, ಗ್ರಾಮಸ್ಥರು, ರೈಲ್ವೆ ಸ್ಟೇಷನ್ ಮಾಸ್ಟರ್ ಆದ ಶಂಕರನ್ ಮತ್ತು ಸಿಬ್ಬಂದಿಗಳು, ಆಟೋ ಚಾಲಕರು ದೇವಿಪ್ರಸಾದ್ ಶೆಟ್ಟಿ ಅವರೊಂದಿಗೆ ಜೊತೆಗೂಡಿದರು.

ಮಂಗಳೂರು: ಬಾವಿಗೆ ಬಿದ್ದು ಚಿರತೆ ಸಾವು

ಮಂಗಳೂರು: ಕಿನ್ನಿಗೋಳಿಯ ರಾಬರ್ಟ್ ಎನ್ನುವವರ ಮನೆಯ ಬಾವಿಯೊಳಗೆ ಚಿರತೆಯೊಂದು ಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ರಾಬರ್ಟ್ ಅವರು ನೀರನ್ನು ತುಂಬಿಸಲು ಪಂಪ್ ಹಾಕಿದಾಗ ನೀರು ಬರಲಿಲ್ಲ. ಇದಕ್ಕೆ ಕಾರಣ ಏನು ಎಂದು ಪರಿಶೀಲಿಸಲು ಬಾವಿಯ ಬಳಿ ಹೋದಾಗ, ಅದರೊಳಗೆ ಚಿರತೆಯೊಂದು ಬಿದ್ದು ಸಾವನ್ನಪ್ಪಿರುವುದು ಕಂಡು ಬಂದಿದೆ. ಕೂಡಲೇ ಪಂಪ್ ಸ್ವಿಚ್ ಅನ್ನು ಆಫ್ ಮಾಡಿ, ಸತ್ತ ಚಿರತೆಯನ್ನು ನೈಲಾನ್ ಹಗ್ಗದ ಮೂಲಕ ಮೇಲೆ ತರಲು ಪ್ರಯತ್ನ ನಡೆಸಲಾಯಿತು. ಚಿರತೆ ಬಿದ್ದ ರಭಸಕ್ಕೆ ಹಗ್ಗ ಮತ್ತು ಪೈಪ್ ತುಂಡಾಗಿದ್ದು, ಪಂಪ್ ಗೆ ಅಳವಡಿಸಲಾಗಿದ್ದ ವಿದ್ಯುತ್ ವಯರ್ ಅನ್ನು ಕಚ್ಚಿ, ಚಿರತೆ ಮೃತಪಟ್ಟಿರಬಹುದು ಎಂಬ ಅನುಮಾನ ವ್ಯಕ್ತವಾಗಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿದರು.

ಬೈಂದೂರು: ಮಳೆಯಿಂದಾಗಿ ಮನೆಗಳಿಗೆ ಹಾನಿ

ಬೈಂದೂರು: ಸತತವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯಾದ್ಯಂತ ಸುಮಾರು ಅರವತ್ತಕ್ಕೂ ಹೆಚ್ಚು ಮನೆಗಳು, ಕೊಟ್ಟಿಗೆಗಳು, ಕೃಷಿ ತೋಟ, ವಿದ್ಯುತ್ ಕಂಬಗಳಿಗೆ ಹಾನಿಯುಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಬೈಂದೂರಿನಲ್ಲಿ ಸುಮಾರು ಎಂಟು ಮನೆಗಳಿಗೆ ಹಾನಿ ಸಂಭವಿಸಿದ್ದು, ಇದರಿಂದಾಗಿ 5.60 ಲಕ್ಷದಷ್ಟು ರೂಪಾಯಿ ನಷ್ಟ ಉಂಟಾಗಿದೆ. ಇದಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ನಿರೀಕ್ಷೆಗೂ ಮೀರಿದ ಮಳೆಯಿಂದಾಗಿ ಅಸ್ತವ್ಯಸ್ತವಾಗಿದೆ ಜನರ ಜೀವನ.

ಪುತ್ತೂರು: ಬೆಂಗಳೂರು ಮತ್ತು ಪುತ್ತೂರು ಅಂಬಾರಿ ಉತ್ಸವ್ ಬಸ್

ಪುತ್ತೂರು: ಪುತ್ತೂರಿನ ಪ್ರಯಾಣಿಕರ ಬಹು ದಿನಗಳ ಬಯಕೆ ಭಾನುವಾರದಂದು ಈಡೇರಿದಂತಾಗಿದೆ. ಪುತ್ತೂರಿನಿಂದ ಬೆಂಗಳೂರಿಗೆ ಪ್ರಯಾಣಿಸುವವರಿಗೆ ಕರ್ನಾಟಕ ಸರ್ಕಾರದ ಸಾರಿಗೆ ಇಲಾಖೆಯು ಅಂಬಾರಿ ಉತ್ಸವ್ ಬಸ್ ಎಂಬ ನೂತನ ಬಸ್ ಅನ್ನು ಹೊರಡಿಸಿದ್ದು, ಇದರಿಂದ ಪ್ರಯಾಣಿಕರಿಗೆ ಅನುಕೂಲವಾದಂತಾಗಿದೆ.‌ ಪ್ರತಿದಿನ ರಾತ್ರಿ 10:30ಕ್ಕೆ ಮಂಗಳೂರಿನಿಂದ ಹೊರಡುವ ಈ ಸ್ಲೀಪರ್ ಕೋಚ್ ಬಸ್ ಪುತ್ತೂರು, ಸುಳ್ಯ, ಮಡಿಕೇರಿ, ಮೈಸೂರು ಮಾರ್ಗವಾಗಿ ಹಾದು ಬೆಂಗಳೂರನ್ನು ತಲುಪಲಿದೆ. ಸಾರ್ವಜನಿಕರು ಈ ಹಿಂದೆ ಬಸ್ ಗಾಗಿ ಶಾಸಕ ಅಶೋಕ್ ರೈ ಅವರಿಗೆ ಮನವಿ ಸಲ್ಲಿಸಿದ್ದರು ಎನ್ನಲಾಗಿದೆ. ಮನವಿ ಬಂದ ಹಿನ್ನೆಲೆಯಲ್ಲಿ, ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ಅಧಿಕಾರಿಗಳ ಜೊತೆಗೆ ಚರ್ಚಿಸಿ, ಬಸ್ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದ್ದಾರೆ. ಜೊತೆಗೆ ಪ್ರಯಾಣಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ವಿನಂತಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.