ಕರಾವಳಿ ಟಾಪ್ ನ್ಯೂಸ್
ಬ್ರಹ್ಮಾವರ: ಮೆಸ್ಕಾಂ ಕಚೇರಿಯಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ
* ಕಾಸರಗೋಡು: ಕಾರೊಂದು ಕಂಟ್ರೋಲ್ ತಪ್ಪಿ ಮಗುಚಿ ಬಿದ್ದು ಮಗು ಮೃತ್ಯು!
* ಕಾಪು: ಡಿವೈಡರ್ ಮೇಲೇರಿ ಬಂದ ಕಾರು ಸಂಪೂರ್ಣ ನಜ್ಜುಗುಜ್ಜು!
NAMMUR EXPRESS NEWS
ಬ್ರಹ್ಮಾವರದ ಮೆಸ್ಕಾಂ ಕಚೇರಿ ಮೇಲೆ ಜೂ. 6ರಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ದಾಳಿ ನಡೆದಿದೆ. ದಾಳಿಯಲ್ಲಿ ಬ್ರಹ್ಮಾವರ ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಪೂಜಾರಿ ಲಂಚ ಸ್ವೀಕರಿಸುತ್ತಿರುವಾಗಲೇ ಸಿಕ್ಕಿಬಿದ್ದಿದ್ದಾರೆ.
ಸಾರ್ವಜನಿಕರ ದೂರಿನ ಮೇರೆಗೆ ದಾಳಿ ನಡೆಸಿ, ಇಪ್ಪತ್ತು ಸಾವಿರ ಲಂಚ ಸ್ವೀಕರಿಸುತ್ತಿದ್ದಾಗ, ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಅಶೋಕ್ ಪೂಜಾರಿ ಅವರನ್ನು ವಶಕ್ಕೆ ಪಡೆಯಲಾಗಿದೆ.
ಈ ಹಿಂದೆ ಕುಂದಾಪುರದ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿದ್ದ ಅಶೋಕ್ ಪೂಜಾರಿ, ಕಳೆದ 3-4 ವರ್ಷಗಳಿಂದ ಬ್ರಹ್ಮಾವರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ದೂರುದಾರರ ದೂರಿನ ಮೇಲೆ ವಸತಿಗೆ ವಿದ್ಯುತ್ ಸಂಪರ್ಕ ಕೊಡಲು 20000 ರೂ ಲಂಚಕ್ಕೆ ಬೇಡಿಕೆ ಇಟ್ಟ ಬ್ರಹ್ಮಾವರ ಮೆಸ್ಕಾಂನ ಸಹಾಯಕ ಕಾರ್ಯ ನಿರ್ವಾಹಕ ಎಂಜಿನಿಯರ್ ಅಶೋಕ ಪೂಜಾರಿ ಅವರನ್ನು ಹಣ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಉಡುಪಿ ಲೋಕಾಯುಕ್ತ ಪೊಲೀಸ್ ರು ಬಂಧಿಸಿರುತ್ತಾರೆ.
* ಕಾಸರಗೋಡು: ಕಾರೊಂದು ಕಂಟ್ರೋಲ್ ತಪ್ಪಿ ಮಗುಚಿ ಬಿದ್ದು ಮಗು ಮೃತ್ಯು!
ಕಾಸರಗೋಡು: ಕಾರೊಂದು ಸ್ಟಾರ್ಟ್ ಆಗದ ಹಿನ್ನೆಲೆ ಮುಂದಕ್ಕೆ ತಳ್ಳುತ್ತಿದ್ದ ವೇಳೆ ಕಂಟ್ರೋಲ್ ತಪ್ಪಿ ಮಗುಚಿ ಬಿದ್ದ ಕಾರಣ ಆ ಕಾರಿನಡಿಗೆ ಸಿಲುಕಿ ಮಗು ಮೃತಪಟ್ಟಿರುವ ಹೃದಯವಿದ್ರಾವಕ ಘಟನೆ ಕಾಸರಗೋಡಿನ ಮುಳ್ಳೇರಿಯದ ಕಾರ್ಲೇ ಎಂಬಲ್ಲಿ ನಡೆದಿದೆ.
ಎಂ.ಹರಿದಾಸ್ ಮತ್ತು ಶ್ರೀವಿದ್ಯಾ ದಂಪತಿಯ ಎರಡು ವರ್ಷದ ಹೃದ್ಯಾನಂದ ಮೃತಪಟ್ಟಿರುವ ಮಗು. ಏಕಾಏಕಿ ಕಾರು ಚಲಿಸದ ಕಾರಣ ಮಗು ಕಾರಿನಡಿಗೆ ಸಿಲುಕಿ ಮೃತಪಟ್ಟಿದೆ.
ಕಾರಿನ ಎಂಜಿನ್ ಆಫ್ ಆಗಿದ್ದು ಈ ದುರಂತ ಸಂಭವಿಸಿದೆ. ಹಿರಿಯ ಮಗಳು ದೇವಾನಂದ ಕಾರಿನೊಳಗಿದ್ದು ಅದೃಷ್ಟವಶಾತ್ ಬಚಾವಾಗಿದ್ದಾಳೆ. ಸ್ಥಳೀಯರ ನೆರವಿನಿಂದ ತಾಯಿ ಹಾಗೂ ಮಗಳನ್ನು ರಕ್ಷಿಸಿದ್ದು ಕಿರಿಯ ಮಗುವಿನ ಪ್ರಾಣ ಉಳಿಸಿಕೊಳ್ಳಲಾಗಲಿಲ್ಲ. ಆದೂರು ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
* ಕಾಪು: ಡಿವೈಡರ್ ಮೇಲೇರಿ ಬಂದ ಕಾರು ಸಂಪೂರ್ಣ ನಜ್ಜುಗುಜ್ಜು!
ಕಾಪು: ಡ್ರೈವರ್ ನ ಕಂಟ್ರೋಲ್ ತಪ್ಪಿ ಕಾರೊಂದು ಡಿವೈಡರ್ ಮೇಲೇರಿದ ಘಟನೆ ಜೂ. 06ರಂದು ಮುಂಜಾನೆ ರಾಷ್ಟ್ರೀಯ ಹೆದ್ದಾರಿಯ ಉದ್ಯಾವರದ ಕಿಯಾ ಶೋರೂಂ ಸಮೀಪ ನಡೆದಿದೆ.
ಮಂಗಳೂರಿನಿಂದ ಉಡುಪಿಯತ್ತ ಬರುತ್ತಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದೆ. ಕ್ರಾಶ್ ಗಾರ್ಡ್ ಸಹಿತ ಕಾರು ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದ ಮೂವರು ಪ್ರಯಾಣಿಕರು ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಅವರಿಗೆ ಸಣ್ಣಪುಟ್ಟ ಗಾಯಗಳಾಗಿವೆ.