ಕರಾವಳಿ ಟಾಪ್ ನ್ಯೂಸ್
* ಕರಾವಳಿ: ಮುಂದುವರಿದ ವರುಣನ ಆರ್ಭಟ..!
– ಹಲವು ಕಡೆಗಳಲ್ಲಿ ಎಲ್ಲೊ ಆರೆಂಜ್ ಅಲರ್ಟ್ ಘೋಷಣೆ
– ಮಂಗಳೂರು: ಬ್ಯೂಟಿ ಸಲೂನ್ ನಲ್ಲಿ ಅಕ್ರಮ ಚಟುವಟಿಕೆ
* ಉಡುಪಿ ಜಿಲ್ಲೆಯ ಬ್ರಹ್ಮಗಿರಿ ನಿವಾಸಿಯ ಒಡೆತನದ ಬ್ಯೂಟಿ ಸಲೂನ್
• ಮಂಗಳೂರು: ವಿದೇಶಿ ಮಾರುಕಟ್ಟೆ ಹೆಸರಿನಲ್ಲಿ 9.88ಲಕ್ಷ ವಂಚನೆ
– ಲಿಂಕ್ ಒತ್ತಿ, ಹೂಡಿಕೆ ಮಾಡಿ ಹಣ ಕಳೆದುಕೊಂಡ ವ್ಯಕ್ತಿ
* ಉಳ್ಳಾಲ: ಸೇತುವೆ ಮೇಲೆ ಸರಣಿ ಅಪಘಾತ
– ಮಳೆಯ ಪರಿಣಾಮವಾಗಿ ಪರಸ್ಪರ ಡಿಕ್ಕಿ ಹೊಡೆದುಕೊಂಡ ವಾಹನಗಳು
* ಕಾಪು : ಮಾನಸಿಕವಾಗಿ ನೊಂದಿದ್ದ ಶಾಲಾ ವಾಹನ ಚಾಲಕ ಸಾವು
– ಹದಿನೈದು ದಿನಗಳಿಂದ ಕೆಲಸವಿಲ್ಲದೆ ಬೇಸತ್ತು ನೇಣಿಗೆ ಶರಣು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕರಾವಳಿಯಲ್ಲಿ ಕೆಲವು ದಿನಗಳಿಂದ ಬಿಡುವು ನೀಡಿದ್ದ ಮಳೆ ಪುನಃ ಆರಂಭಗೊಂಡಿದೆ. ಈ ಹಿನ್ನೆಲೆಯಲ್ಲಿ ಹಲವು ಕಡೆಗಳಲ್ಲಿ ಎಲ್ಲೊ ಮತ್ತು ಆರೆಂಜ್ ಅಲರ್ಟ್ ಘೋಷಿಸಲಾಗಿದೆ. ಜೂನ್ 29ರ ವರೆಗೆ ಎಲ್ಲೊ ಅಲರ್ಟ್ ಅನ್ನು ಮತ್ತು ಕರಾವಳಿ ಭಾಗದಲ್ಲಿ ಆರೆಂಜ್ ಅಲರ್ಟ್ ಅನ್ನು ಘೋಷಿಸಲಾಗಿದೆ. ಮಳೆ ಅಧಿಕಗೊಂಡಿರುವ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತೆಯ ದೃಷ್ಟಿಯಿಂದ ಮಕ್ಕಳಿಗೆ ಜಾಗೃತಿ ವಹಿಸಲು ಕೋರಲಾಗಿದೆ.
ಮಂಗಳೂರು: ಉಡುಪಿ ಮೂಲದವರ ಒಡೆತನದ ಬ್ಯೂಟಿ ಸಲೂನ್ ನಲ್ಲಿ ಅಕ್ರಮ ಚಟುವಟಿಕೆ ನಡೆಯುತ್ತಿದೆ ಎಂಬ ಮಾಹಿತಿ ಬಂದ ಹಿನ್ನಲೆಯಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಕಾರ್ಯಾಚರಣೆ ಬಳಿಕ ಊರ್ವಾ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 55/2025ರ ಅನ್ವಯ ಪ್ರಕರಣ ದಾಖಲಾಗಿದೆ. ಇದರೊಂದಿಗೆ ಅನೈತಿಕ ಚಟುವಟಿಕೆ ತಡೆಗಟ್ಟುವ ಕಾಯ್ದೆ ಸೆಕ್ಷನ್ 3(1),4,5,6 ರ ಅನ್ವಯ ಕೂಡ ಪ್ರಕರಣ ದಾಖಲಿಸಿ ತನಿಖೆ ನಡೆಸಲಾಗುತ್ತಿದೆ. ಬ್ಯೂಟಿ ಸಲೂನ್ ನ ಪರವಾನಗಿಯನ್ನು ರದ್ದುಗೊಳಿಸುವಂತೆ ಮಂಗಳೂರು ಮಹಾನಗರ ಪಾಲಿಕೆಗೆ ಶಿಫಾರಸು ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಕಾರ್ಯನಿರತರಾದ ಪಾಲಿಕೆಯ ಆಯುಕ್ತರು ಪರವಾನಗಿಯನ್ನು ಅಧಿಕೃತವಾಗಿ ರದ್ದುಗೊಳಿಸಿದ್ದಾರೆ. ಈ ಪ್ರಕರಣ ಬೆಳಕಿಗೆ ಬಂದ ಬೆನ್ನಲ್ಲೇ ಬೇರೆ ಬೇರೆ ಹೆಸರುಗಳಲ್ಲಿ ಮತ್ತು ಸಂಸ್ಥೆಗಳ ಮೂಲಕ ಅನೈತಿಕ ಚಟುವಟಿಕೆ ನಡೆಸುತ್ತಿರುವ ವ್ಯಕ್ತಿಗಳ ವಿರುದ್ಧ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪೊಲೀಸ್ ಇಲಾಖೆ ಕಾರ್ಯಪ್ರವೃತ್ತವಾಗಿದೆ.
ಮಂಗಳೂರು: ವ್ಯಕ್ತಿಯೋಬ್ಬರು ಮೇ 22ರಂದು ಇಶಿಕಾ ಜೋಶಿ ಎಂಬ ಹೆಸರಿನಲ್ಲಿ ಬಂದ ವಾಟ್ಸಪ್ ಲಿಂಕ್ ಅನ್ನು ಕ್ಲಿಕ್ ಮಾಡಿ ಸಿನಿಮಾಗಳಿಗೆ ಐದು ಸ್ಟಾರ್ ಅನ್ನು ನೀಡಿದಾಗ ಅವರ ಖಾತೆಗೆ 150 ರೂಪಾಯಿ ಜಮೆ ಆಗಿದೆ. ಬಳಿಕ 5.000 ರೂಪಾಯಿ ಟಾಸ್ಕ್ ಶುಲ್ಕವನ್ನು ಪಡೆದು, ಟೆಲಿಗ್ರಾಂ ಗ್ರೂಪ್ ಗೆ ಆ ವ್ಯಕ್ತಿಯನ್ನು ಸೇರಿಸಿದ್ದು, ಪುನಃ ಅದರಲ್ಲಿ ಯುಎಸ್ ಕಾಪರ್ ಫಾರಿನ್ ಷೇರು ಮಾರುಕಟ್ಟೆಯಲ್ಲಿ 53.000 ರೂಪಾಯಿ ಹೂಡಿಕೆ ಮಾಡಿದರೆ ಹೆಚ್ಚು ಹಣ ಲಭಿಸುತ್ತದೆ ಎಂದು ಆಮಿಷ ಒಡ್ಡಿದ್ದಾರೆ. ಇದನ್ನು ನಂಬಿ ವ್ಯಕ್ತಿಯು ಹಂತಹಂತವಾಗಿ ಹಣವನ್ನು ವರ್ಗಾಯಿಸುತ್ತಾ ಹೋದರು. ಅದರಲ್ಲಿ ಹಣ ಬಾರದಿದ್ದುದಕ್ಕೆ ವ್ಯಕ್ತಿ ಪ್ರಶ್ನಿಸಿದಾಗ ಯುಎಸ್ ಕಾಪರ್ ಬದಲು, ಯುಕೆ ಕಾಪರ್ ಮಾಡಬೇಕು ಮತ್ತು ಟಾಸ್ಕ್ ಪೂರ್ಣಗೊಂಡ ಬಳಿಕ ಹಣ ದೊರೆಯುತ್ತದೆ ಎಂದು ಅಪರಿಚಿತ ವ್ಯಕ್ತಿ ಹೂಡಿಕೆ ಮಾಡಿದ ವ್ಯಕ್ತಿಗೆ ತಿಳಿಸಿದ್ದಾರೆ. ಹೀಗೆ ವ್ಯಕ್ತಿಯು ಆನ್ ಲೈನ್ ಮೂಲಕ 9.88 ಲಕ್ಷ ಹಣವನ್ನು ಪಾವತಿಸಿ, ತಿಂಗಳ ಬಳಿಕ ಹಣ ಬಂದಿರಬಹುದು ಎಂದು ತಮ್ಮ ಖಾತೆ ಇರುವ ಬ್ಯಾಂಕ್ ನಲ್ಲಿ ವಿಚಾರಿಸಿದಾಗ ತಾವು ಮೋಸಹೋದ ಮತ್ತು ಹಣವನ್ನು ಕಳೆದುಕೊಂಡ ಸಂಗತಿ ತಿಳಿದುಬಂದಿದೆ.
ಉಳ್ಳಾಲ: ಸೇತುವೆ ಮೇಲೆ ಮಳೆಯ ರಭಸದಿಂದ ಲಾರಿಯೊಂದಿಗೆ ಹಿಂದಿನಿಂದ ಸಾಲಾಗಿ ಬಂದ ವಾಹನಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡ ಘಟನೆ ಉಳ್ಳಾಲದಲ್ಲಿ ನಡೆದಿದೆ. ಲಾರಿಯ ಹಿಂದೆ ಮೂರರಿಂದ ನಾಲ್ಕು ಕಾರುಗಳು, ಒಂದು ಟಿಪ್ಪರ್ ಗಾಡಿ ಮತ್ತು ಒಂದು ಬಸ್ ಡಿಕ್ಕಿ ಹೊಡೆದುಕೊಂಡಿದ್ದು, ಎಲ್ಲಾ ವಾಹನಗಳ ಮುಂಭಾಗದಲ್ಲಿ ಜಕಂ ಗೊಂಡಿದೆ. ಆದರೆ, ವಾಹನದಲ್ಲಿದ್ದ ಮಂದಿಗೆ ಯಾವುದೇ ರೀತಿಯ ಅಪಘಾತ ಸಂಭವಿಸದೇ ಅಪಾಯದಿಂದ ಪಾರಾಗಿದ್ದಾರೆ.
ಉಡುಪಿ: ಕಾಪುವಿನ ಬಳಿಯ ಮಣಿಪುರ ದೆಂದೂರು ಕಟ್ಟೆಯಲ್ಲಿ ರವಿ ಪ್ರಕಾಶ್ ಎನ್ನುವ ವಾಹನ ಚಾಲಕ ಮಾನಸಿಕವಾಗಿ ನೊಂದು ನೇಣಿಗೆ ಶರಣಾದ ಘಟನೆ ನಡೆದಿದೆ. ರವಿ ಪ್ರಕಾಶ್ ಪಲಿಮಾರು ಮಠದ ಗುರುಕುಲ ಶಾಲೆಯ ವಾಹನ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಕಳೆದ ಹದಿನೈದು ದಿನಗಳಿಂದ ಯಾವುದೇ ಕೆಲಸವಿಲ್ಲದೆ, ಮನೆಯಲ್ಲೇ ಇದ್ದು ಮಾನಸಿಕ ಖಿನ್ನತೆಗೆ ಒಳಗಾಗಿದ್ದರು. ರವಿ ಪ್ರಕಾಶ್ ಅವರು ಬಟ್ಟೆ ಒಣಹಾಕುವ ಜಾಗದಲ್ಲಿ ಬಿದ್ದಿರುವುದನ್ನು ಗಮನಿಸಿದ ಅವರ ಪತ್ನಿ ಎಬ್ಬಿಸಲು ಹೋದಾಗ ಕುತ್ತಿಗೆಯ ಬಳಿ ಬೈರಾಸ್ ಇರುವುದು ಕಂಡುಬಂದಿದೆ. ನೆರೆಮನೆಯವರ ಸಹಾಯದಿಂದ ಉಡುಪಿ ಆಸ್ಪತ್ರೆಗೆ ಸೇರಿಸಲು ಹೋದಾಗ ರವಿ ಪ್ರಕಾಶ್ ಆಗಲೇ ಮೃತಪಟ್ಟ ಸಂಗತಿ ತಿಳಿದುಬಂದಿದೆ. ಮಗ ಕಿರಣ್ ಕುಮಾರ್ ತಂದೆಯ ಅಸಹಜ ಸಾವಿನ ಹಿನ್ನೆಲೆಯಲ್ಲಿ ಕಾಪು ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.