ಕರಾವಳಿ ಟಾಪ್ ನ್ಯೂಸ್
•ಉಡುಪಿ: ಹೊಟೇಲ್ ಮಾಲೀಕನ ಹತ್ಯೆ
•ಕುಂದಾಪುರ: ಕರ್ತವ್ಯಕ್ಕೆ ಅಡ್ಡಿ ; ಗ್ರಾಮಸ್ಥರ ದೂರು
•ಬೈಂದೂರು: ಬೈಕ್ ಸವಾರನ ಮೇಲೆ ಹಲ್ಲೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
•ಕಾರ್ಕಳ: ಹೊಟೇಲ್ ಮಾಲಿಕನ ಹತ್ಯೆ
ಕಾರ್ಕಳ: ಎಣ್ಣೆ ಹೊಳೆ ಕುಮೇರುಮನೆ ನಿವಾಸಿ, ಹೊಟೇಲ್ ಉದ್ಯಮಿಯಾದ ಸಂತೋಷ್ ಶೆಟ್ಟಿ ಅವರನ್ನು ಹತ್ಯೆ ಮಾಡಿರುವ ಘಟನೆ ಪೂನಾದಲ್ಲಿ ನಡೆದಿದೆ. ಉತ್ತರ ಪ್ರದೇಶ ಮೂಲದ ವೆಯರ್ ಹೊಟೇಲ್ ನಲ್ಲಿ ಕೆಲಸದ ಸಮಯದಲ್ಲಿ, ಮದ್ಯಪಾನ ಮಾಡಿರುವುದಕ್ಕಾಗಿ ಸಿಬ್ಬಂದಿಯನ್ನು ಗದರಿಸಿ, ಬುದ್ಧಿ ಹೇಳಿದ್ದರಿಂದ, ಆ ಸಿಬ್ಬಂದಿ ಉದ್ರೇಕಕ್ಕೆ ಒಳಗಾಗಿ ತನ್ನ ಮಾಲೀಕನನ್ನೇ ಕತ್ತಿಯಿಂದ ಕಡಿದು ಕೊಂದಿದ್ದಾನೆ. ಇದರಿಂದ ಪುನಾದ ಹೊಟೇಲ್ ಉದ್ಯಮಿಗಳು ಬೆಚ್ಚಿಬಿದ್ದಿದ್ದಾರೆ. ಘಟನಾ ಸ್ಥಳಕ್ಕೆ ಸಾವಿರಾರು ಜನ ಆಗಮಿಸಿದ್ದರು ಎನ್ನಲಾಗಿದೆ. ಸಂತೋಷ್ ಅವರ ಪಾರ್ಥಿವ ಶರೀರವನ್ನು ಕಾರ್ಕಳದ ಎಣ್ಣೆ ಹೊಳಗೆ ತರಲಾಗಿದೆ ಎಂಬ ಮಾಹಿತಿ ತಿಳಿದುಬಂದಿದೆ.
• ಕುಂದಾಪುರ: ಕರ್ತವ್ಯಕ್ಕೆ ಅಡ್ಡಿ; ಪಿಡಿಒ ಸಿಬ್ಬಂದಿ ದೂರು
ಕುಂದಾಪುರ: ಕನ್ಯಾನ ಗ್ರಾಮದ ಗಾಣಿಗರ ಕೇರಿಯಲ್ಲಿ ರಸ್ತೆಗೆ ತಡೆಯನ್ನುಂಟು ಮಾಡುವುದನ್ನು ತೆರವುಗೊಳಿಸುವಾಗ, ಹಟ್ಟಿಯಂಗಡಿಯ ಪಂಚಾಯತ್ ಪಿಡಿಓ ಮಂಜುನಾಥ್ ಅವರ ಕರ್ತವ್ಯಕ್ಕೆ ಸಿಂಗಾರಿ ಗಾಣಿಗ ಎನ್ನುವವರ ಕಡೆಯವರು ಅಡ್ಡಿಪಡಿಸಿರುವ ಹಿನ್ನೆಲೆಯಲ್ಲಿ ಗ್ರಾಮಸ್ಥರು ದೂರು ನೀಡಿದ್ದಾರೆ. ಈ ಹಿಂದೆ ರಸ್ತೆ ತಕರಾರಿನ ವಿಚಾರದಲ್ಲಿ ಸಿಂಗಾರಿ ಗಾಣಿಗ ಕಡೆಯವರು ಕರ್ನಾಟಕ ಉಚ್ಚ ನ್ಯಾಯಾಲಯದಲ್ಲಿ ದಾವೆಯನ್ನು ಹೂಡಿದ್ದರು ಎನ್ನುವ ಸಂಗತಿ ತಿಳಿದುಬಂದಿದೆ. ಈ ದಾವೆಯನ್ನು ನ್ಯಾಯಾಲಯವು ವಜಾಗೊಳಿಸಿತ್ತು. ಅಲ್ಲದೆ ಇಪ್ಪತ್ತೊಂದು ದಿನಗಳವರೆಗೆ ಇದೇ ರೀತಿಯ ಪರಿಸ್ಥಿತಿಯನ್ನು ಕಾಪಾಡುವಂತೆ, ನ್ಯಾಯಾಲಯದಿಂದ ತಡೆಯಾಜ್ಞೆ ತರದೇ ಇದ್ದಲ್ಲಿ ಗ್ರಾಮಸ್ಥರ ದೂರಿನಂತೆ ರಸ್ತೆಗೆ ಅಡ್ಡಿಪಡಿಸಿರುವುದನ್ನು ಗಂಭೀರವಾಗಿ ಪರಿಗಣಿಸಲಾಗುವುದು ಎಂದು ನ್ಯಾಯಾಲಯವು ಆದೇಶವನ್ನು ಹೊರಡಿಸಿತ್ತು. ಈ ಹಿನ್ನೆಲೆಯಲ್ಲಿ ಪೊಲೀಸ್ ರಕ್ಷಣೆಯನ್ನು ಕೋರಿ ಪಿಡಿಒ ಗ್ರಾಮ ಪಂಚಾಯತ್ ನಲ್ಲಿ ತೆರವು ಕಾರ್ಯ ಕಾಮಗಾರಿಯನ್ನು ನಡೆಸಲು ನಿರ್ಧರಿಸಿತ್ತು. ಈ ಸಂದರ್ಭದಲ್ಲಿ ಸಿಂಗಾರಿ ಗಾಣಿಗ, ಸುರೇಶ್ ಗಾಣಿಗ, ಸುಮಿತ್ರ, ಗೌತಮಿ, ರಾಘವೇಂದ್ರ ಮತ್ತು ಚೈತ್ರ ಅವರು ಅಡ್ಡಿಪಡಿಸಿದ್ದಾರೆ ಎನ್ನಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
• ಬೈಂದೂರು: ಬೈಕ್ ಸವಾರನ ಮೇಲೆ ಹಲ್ಲೆ
ಬೈಂದೂರು: ಧನಂಜಯ ಎನ್ನುವರು ಹೆಮ್ಮಾಡಿ ಕಡೆಯಿಂದ ಚಿತ್ತೂರಿಗೆ ಬೈಕ್ ನಲ್ಲಿ ಹೋಗುತ್ತಿದ್ದಾಗ, ವಂಡ್ಸೆ ಕಡೆಯಿಂದ ಬರುತ್ತಿದ್ದ ಕಾರೊಂದು ಧನಂಜಯ ಅವರಿಗೆ ಅಡ್ಡಿಪಡಿಸಿದೆ. ನಂತರ ಆಟೋ ಚಾಲಕರ ಬಳಿಯೂ ಇದೇ ರೀತಿ ವರ್ತಿಸಿದ್ದಾರೆ. ಅವರ ವರ್ತನೆಯನ್ನು ಕುರಿತು ಆಟೋ ಚಾಲಕ ಪ್ರಶ್ನಿಸಿದಾಗ ಕಾರಿನಲ್ಲಿದ್ದ ಸುಶಾಂತ್, ರಂಜಿತ್, ಪುನೀತ್ ಹಾಗೂ ಸುಕೇಶ್ ಜಗಳಕ್ಕೆ ಇಳಿದರು. ಇದನ್ನು ಕಂಡ ಧನಂಜಯ ಅವರು, ಕಾರಿನವರ ವರ್ತನೆಯನ್ನು ಆಕ್ಷೇಪಿಸಿದಾಗ ಧನಂಜಯ ಅವರಿಗೆ ಅವಾಚ್ಯ ಶಬ್ದಗಳಿಂದ ಬೈದು, ಹೊಡೆದುದಷ್ಟೇ ಅಲ್ಲದೆ ಪೊಲೀಸರಿಗೆ ದೂರು ನೀಡಿದರೆ ಕೊಂದು ಹಾಕುತ್ತೇವೆ ಎಂದು ಬೆದರಿಕೆ ಒಡ್ಡಿದ್ದಾರೆ. ಗಾಯಗೊಂಡ ಧನಂಜಯ ಅವರನ್ನು ಕುಂದಾಪುರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಧನಂಜಯ ಅವರು ಕೊಲ್ಲೂರು ಪೊಲೀಸರಿಗೆ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.