Categories
ಕರಾವಳಿ

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್ 

• ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಮತ್ತೊಂದು ತಿರುವು

• ಬಂಟ್ವಾಳ: ದನಗಳ್ಳರು ಪೊಲೀಸರ ವಶಕ್ಕೆ

• ಕುಂದಾಪುರ: ಅಕ್ರಮ ಮದ್ಯ ಮಾರಾಟ; ಆರೋಪಿ ಸೆರೆ

• ಮೂಡಬಿದರೆ: ಕಟ್ಟಡವೊಂದರಲ್ಲಿ ವೇಶ್ಯಾವಾಟಿಕೆ ದಂಧೆ

• ಉಡುಪಿ: ಅಕ್ರಮ ಮರಳು ಸಾಗಾಟ ವಾಹನ ವಶಕ್ಕೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

• ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣದಲ್ಲಿ ಹೊಸ ತಿರುವು

ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ತನ್ನ ಮಗಳು ಅನನ್ಯ ಭಟ್ ಕಾಣೆಯಾಗಿದ್ದಾಳೆ ಎಂದು ಹೇಳಿಕೆ ನೀಡಿದ ಸುಜಾತ ಭಟ್, ಇದೀಗ ಎಸ್ಐಟಿ ಅಧಿಕಾರಿಗಳ ವಿಚಾರಣೆಗೆ ಕಕ್ಕಾಬಿಕ್ಕಿಯಾಗಿದ್ದಾರೆ. ಉಡುಪಿಯಲ್ಲಿರುವ ಆಸ್ತಿಯಲ್ಲಿನ ಪಾಲು ಪಡೆಯಲು, ಸುಜಾತ ಭಟ್ ನನ್ನ ಮಗಳು ಕಾಣೆಯಾಗಿದ್ದಾಳೆ ಎಂದು ಸುಳ್ಳು ಹೇಳಿಕೆ ನೀಡಿರಬಹುದು ಎಂಬ ಅನುಮಾನ ಎಲ್ಲೆಡೆ ವ್ಯಕ್ತವಾಗಿದೆ. ಅಲ್ಲದೆ ಸುಜಾತ ಭಟ್ ನೀಡಿರುವ ಹೇಳಿಕೆಗಳು ಇದಕ್ಕೆ ಪೂರಕವಾಗುವಂತಿದೆ. ಸುಜಾತಾ ಭಟ್ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿರುವ ಎಸ್ಐಟಿ ತನಿಖಾಧಿಕಾರಿಗಳು ಆಕೆಯನ್ನು ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ. ಇದರಿಂದ ಗಾಬರಿಗೊಂಡ ಸುಜಾತ ನನ್ನನ್ನು ಬಿಟ್ಟುಬಿಡಿ ಎಂದು ಕಣ್ಣೀರು ಹಾಕಲು ಪ್ರಾರಂಭಿಸಿದ್ದಾರೆ. ಯಾವುದೇ ನೋಟಿಸ್ ಬಾರದಿದ್ದರೂ, ಆಗಸ್ಟ್ 26ರ ಬೆಳಿಗ್ಗೆ ಬೆಳ್ತಂಗಡಿಗೆ ಆಗಮಿಸಿ, ನನ್ನನ್ನು ವಿಚಾರಣೆಗೆ ಒಳಪಡಿಸಿ ಎಂದು ಸ್ವತಃ ಸುಜಾತ ಭಟ್ ಎಸ್ಐಟಿ ಅಧಿಕಾರಿಗಳ ಬಳಿ ಬಂದು ಕೇಳಿಕೊಂಡಿದ್ದಾರೆ ಎನ್ನಲಾಗಿದೆ.‌ ಅದರಂತೆ ಸತತ ಎರಡು ದಿನಗಳ ಕಾಲ ಎಸ್ಐಟಿ ಅಧಿಕಾರಿಗಳು ಸುಜಾತ ಭಟ್ ಳನ್ನು ತೀವ್ರತರವಾಗಿ ವಿಚಾರಣೆಗೆ ಒಳಪಡಿಸಿದ್ದಾರೆ. ಈ ಸಂದರ್ಭದಲ್ಲಿ ಗಾಬರಿಗೆ ಒಳಗಾದ ಸುಜಾತ, ನನ್ನನ್ನು ಬಿಟ್ಟುಬಿಡಿ ನನ್ನಿಂದ ತಪ್ಪಾಗಿದೆ ಎಂದು ಹೇಳಿಕೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಅಲ್ಲದೆ ಎಸ್ಐಟಿ ಅಧಿಕಾರಿಗಳಿಗೆ ತಾನು ನೀಡಿರುವ ದೂರನ್ನು ಹಿಂಪಡೆಯುವುದಾಗಿ ತಿಳಿಸಿದ್ದಾರೆ ಎನ್ನಲಾಗಿದೆ. ದೂರು ಹಿಂಪಡೆಯಲು ಎಸ್ಐಟಿ ಅಧಿಕಾರಿಗಳು ಅನುಮತಿ ನೀಡಿದ್ದು, ಸುಜಾತ ಭಟ್ ತಾನು ಈ ರೀತಿ ಹೇಳಲು ಕಾರಣವೇನು, ಇದರ ಹಿಂದಿರುವವರು ಯಾರು? ಎಂಬುದನ್ನು ಅಧಿಕಾರಿಗಳಲ್ಲಿ ಹೇಳಿಕೊಂಡಿದ್ದಾರೆ ಎಂಬ ಮಾಹಿತಿಯನ್ನು ಎಸ್ಐಟಿ ಅಧಿಕಾರಿಗಳು ನೀಡಿದ್ದಾರೆ. ಈ ಕಥೆಯನ್ನು ಹೆಣೆದಿರುವವರು ಯಾರು? ಅವರ ಉದ್ದೇಶವೇನು? ಎಂಬ ವಿಚಾರಗಳು ಸಾರ್ವಜನಿಕರಲ್ಲಿ ಮತ್ತಷ್ಟು ಕುತೂಹಲವನ್ನು ಕೆರಳಿಸಿದೆ.

• ಬಂಟ್ವಾಳ: ದನಗಳ್ಳರು ಪೊಲೀಸರ ವಶಕ್ಕೆ

ಬಂಟ್ವಾಳ: ಕಳೆದ ಕೆಲವು ತಿಂಗಳ ಹಿಂದೆ, ಸುಮಾರು 12000 ಬೆಲೆ ಬಾಳುವ ಹಸುವನ್ನು ಕಳ್ಳತನ ಮಾಡಿರುವ ಪ್ರಕರಣ ದಾಖಲಾಗಿದ್ದ ಆರೋಪಿಯನ್ನು ಬಂಟ್ವಾಳದ ಪೊಲೀಸರು ಸೆರೆಹಿಡಿದಿದ್ದಾರೆ. ಆರೋಪಿಯನ್ನು ಮಂಗಳೂರಿನ ಇರ್ಷಾದ್ ಎಂದು ಗುರುತಿಸಲಾಗಿದ್ದು, ಈತನು ದಕ್ಷಿಣ ಕನ್ನಡ ಜಿಲ್ಲೆ ಸೇರಿದಂತೆ ಇತರ ಜಿಲ್ಲೆಗಳಲ್ಲಿ ದನಗಳ್ಳತನ ಮತ್ತು ಅಕ್ರಮ ಮಾರಾಟ ವಿಚಾರಕ್ಕೆ ಸಂಬಂಧಿಸಿದಂತೆ, ಸುಮಾರು 15 ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ ಎನ್ನುವ ಸಂಗತಿ ತಿಳಿದುಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಎಸ್ ಪಿ ಡಾ. ಅರುಣ್, ಹೆಚ್ಚುವರಿ ಎಸ್‌ಪಿಯಾದ ಅನಿಲ್ ಕುಮಾರ್, ಬಂಟ್ವಾಳದ ಡಿವೈಎಸ್ ಪಿ ಆದ ವಿಜಯಪ್ರಸಾದ್ ಅವರ ಮಾರ್ಗದರ್ಶನದಲ್ಲಿ ಹಾಗೂ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಆದ ಶಿವಕುಮಾರ್ ಅವರ ತಂಡದ ನೇತೃತ್ವದಲ್ಲಿ ಕಾರ್ಯಾಚರಣೆಯನ್ನು ನಡೆಸಲಾಯಿತು. ಪಿಎಸ್ಐಗಳಾದ ಮಂಜುನಾಥ, ಕೃಷ್ಣ ಕಾಂತ್ ಪಾಟೀಲ್, ಹೆಡ್ ಕಾನ್ಸ್ಟೇಬಲ್ ಗಳಾದ ಪ್ರಶಾಂತ್, ಲೋಕೇಶ್, ಕೃಷ್ಣ ನಾಯಕ್, ಪಿ ಸಿ ಗಳಾದ ಮಾರುತಿ ಮತ್ತು ಹಾಲೇಶಪ್ಪ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಆರೋಪಿಯನ್ನು ಬಂಟ್ವಾಳದ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎನ್ನಲಾಗಿದೆ.

• ಕುಂದಾಪುರ: ಅಕ್ರಮ ಮದ್ಯ ಮಾರಾಟ; ಆರೋಪಿ ಸೆರೆ

ಕುಂದಾಪುರ: ಗಣೇಶ ಚತುರ್ಥಿಯ ಪ್ರಯುಕ್ತ ಮದ್ಯ ಮಾರಾಟವನ್ನು ನಿಷೇಧಿಸಿದ್ದರೂ ಕೂಡ, ಅಧಿಕಾರಿಗಳ ಆದೇಶವನ್ನು ಕಡೆಗಣಿಸಿ, ಪರವಾನಿಗೆರಹಿತ ಅಕ್ರಮ ಮದ್ಯ ಮಾರಾಟ ಮಾಡಿರುವ ಹಿನ್ನೆಲೆಯಲ್ಲಿ, ವ್ಯಕ್ತಿಯನ್ನು ದಸ್ತಗಿರಿ ಮಾಡಿರುವ ಘಟನೆ ನಡೆದಿದೆ. ಆರೋಪಿಯನ್ನು ಕೋರ್ಗಿ ಗ್ರಾಮದ ನಿವಾಸಿ ಶೇಷಾದ್ರಿ ಎಂದು ಗುರುತಿಸಲಾಗಿದೆ.‌ ಈತ ಕುಂದಾಪುರ ತಾಲ್ಲೂಕಿನ ಕೋಳಿ ಫಾರ್ಮ್ ಬಳಿ ಅಕ್ರಮ ಮದ್ಯ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಶೇಷಾದ್ರಿಯನ್ನು ಬಂಧಿಸಿದ್ದು, ಆತನ ಬಳಿ ಇದ್ದ ಸುಮಾರು 13 650 ರೂಪಾಯಿ ಮೌಲ್ಯದ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ವಿರುದ್ಧ 56/2025 ಅಡಿಯಲ್ಲಿ ಪ್ರಕರಣ ದಾಖಲಾಗಿದೆ.‌

• ಮೂಡಬಿದರೆ: ಕಟ್ಟಡವೊಂದರಲ್ಲಿ ವೇಶ್ಯಾವಾಟಿಕೆ ದಂಧೆ

ಮೂಡಬಿದರೆ: ಸ್ವರಾಜ್ಯ ಮೈದಾನದ ನಿವಾಸಿ ರಾಜೇಶ್ ಬೋವಿ ಮತ್ತು ಬೆಳ್ತಂಗಡಿ ಮೂಲದ ನಾರಾವಿ ಭರತ್ ಜೈನ್ ಎನ್ನುವ ಇಬ್ಬರು ವ್ಯಕ್ತಿಗಳು, ಮಾರ್ಪಾಡಿ ಗ್ರಾಮದ ಆಳ್ವಾಸ್ ಆಸ್ಪತ್ರೆಯ ಕಡೆಗೆ ತೆರಳುವ ರಸ್ತೆಯಲ್ಲಿರುವ ಕಟ್ಟಡವೊಂದರ ಕೊನೆಯೊಂದರಲ್ಲಿ ವೇಶ್ಯಾವಾಟಿಕೆ ದಂಧೆ ನಡೆಸುತ್ತಿದ್ದರು.‌ ಮಾಹಿತಿ ದೊರೆತ ಕೂಡಲೇ ಮೂಡಬಿದರೆ ಪೊಲೀಸರು, ಪೊಲೀಸ್ ಇನ್ಸ್ಪೆಕ್ಟರ್ ಆದ ಸಂದೇಶ್ ಅವರ ನೇತೃತ್ವದಲ್ಲಿ ಕಟ್ಟಡದ ಮೇಲೆ ದಾಳಿ ನಡೆಸಿದರು. ಈ ಸಂದರ್ಭದಲ್ಲಿ ಓರ್ವ ಮಹಿಳೆಯನ್ನು ಈ ಅಕ್ರಮ ಚಟುವಟಿಕೆಯಿಂದ ರಕ್ಷಿಸಿರುವ ಸಂಗತಿ ತಿಳಿದುಬಂದಿದೆ.

• ಉಡುಪಿ: ಅಕ್ರಮ ಮರಳು ಸಾಗಾಟ; ವಾಹನ ವಶಕ್ಕೆ

ಉಡುಪಿ: ಕೊಡವೂರು ಸಿಟಿಜನ್ ವೃತ್ತದ ಬಳಿ 407ವಾಹನವನ್ನು ತಡೆದು ನಿಲ್ಲಿಸಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭದಲ್ಲಿ ವಾಹನದಲ್ಲಿ ಅಕ್ರಮ ಮರಳು ಸಾಗಾಟ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಸುಮಾರು 5,000 ಮೌಲ್ಯದ ಮರಳು ಪತ್ತೆಯಾಗಿದೆ. ಚಾಲಕ ಹಂಝಾ ಬಳಿ ಇದಕ್ಕೆ ಸಂಬಂಧಿಸಿದಂತೆ ವಿಚಾರಿಸಿದಾಗ, ಪರವಾನಿಗೆ ಕೂಡ ಇಲ್ಲದಿರುವುದು ತಿಳಿದು ಬಂದಿದೆ. ಪೊಲೀಸರು ವಾಹನವನ್ನು ವಶಕ್ಕೆ ತೆಗೆದುಕೊಂಡು, ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.‌

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.