ಕರಾವಳಿ ಟಾಪ್ ನ್ಯೂಸ್
• ಮೂಲ್ಕಿ: ಗಾಂಜಾ ಮಾರಲು ಯತ್ನಿಸುತ್ತಿದ್ದಾಗ ಆರೋಪಿಯ ಬಂಧನ
• ಸುಳ್ಯ: ರಸ್ತೆ ಅಪಘಾತ; ಅಪಾಯದಿಂದ ಪಾರು
• ಉಡುಪಿ: ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ
• ಮಂಗಳೂರು: ಜುಗಾರಿ ಅಡ್ಡೆ ಮೇಲೆ ದಾಳಿ
• ಪುತ್ತೂರು: ಪತ್ನಿಯ ಸಾವಿನಿಂದ ಮನನೊಂದು ಆತ್ಮಹತ್ಯೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಮೂಲ್ಕಿ: ಗಾಂಜಾ ಮಾರಲು ಯತ್ನಿಸುತ್ತಿದ್ದಾಗ ಆರೋಪಿಯ ಬಂಧನ
ಮೂಲ್ಕಿ: ಕೋಡಿಕಲ್ ನಡಿಗುತ್ತು ಮೂಲದ ದಿನೇಶ್ ಎನ್ನುವ ವ್ಯಕ್ತಿಯು, ಗಾಂಜಾವನ್ನು ಮಾರಾಟ ಮಾಡಲು ಯತ್ನಿಸುತ್ತಿದ್ದ ಸಂದರ್ಭದಲ್ಲಿ ಮೂಲ್ಕಿ ಇನ್ಸ್ಪೆಕ್ಟರ್ ಆದ ಮಂಜುನಾಥ್ ಅವರು ತಮ್ಮ ಸಿಬ್ಬಂದಿಗಳೊಂದಿಗೆ ದಾಳಿ ನಡೆಸಿ, ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರೋಪಿಯಾದ ದಿನೇಶ್ ನಿಂದ 35.೦೦೦ರೂಪಾಯಿಯಷ್ಟು ಬೆಲೆಬಾಳುವ ಗಾಂಜಾ, ನಗದು ಹಣ ಮತ್ತು ಇತರ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
• ಸುಳ್ಯ: ರಸ್ತೆ ಅಪಘಾತ; ಅಪಾಯದಿಂದ ಪಾರು
ಸುಳ್ಯ: ಲಾರಿಯೊಂದು ಸುಳ್ಯ ಕಡೆಯಿಂದ ಪುತ್ತೂರು ಕಡೆಗೆ ತೆರಳುತ್ತಿದ್ದಾಗ, ವಿದ್ಯುತ್ ಕಂಬಕ್ಕೆ ಢಿಕ್ಕಿ ಹೊಡೆದು ಕೊಂಚ ಹಾನಿಯಾದ ಘಟನೆ, ಜಾಲೂರು ಗ್ರಾಮದ ಬೈತಡ್ಕ ತಿರುವಿನಲ್ಲಿ ನಡೆದಿದೆ. ಮಾಣಿ ಮೈಸೂರು ಹೆದ್ದಾರಿಯಲ್ಲಿ ಇದು ಸಂಭವಿಸಿದ್ದು, ಯಾವುದೇ ರೀತಿಯ ಅಪಾಯ ಉಂಟಾಗಲಿಲ್ಲ ಎನ್ನುವುದು ತಿಳಿದುಬಂದಿದೆ.
• ಉಡುಪಿ: ತಲೆಮರೆಸಿಕೊಂಡಿದ್ದ ವಾರೆಂಟ್ ಆರೋಪಿ ಬಂಧನ
ಉಡುಪಿ: ಗದಗ ಮೂಲದ ಸಂಜು ಬಡಿಗೇರ ಎನ್ನುವ ವ್ಯಕ್ತಿಯು ವಾರೆಂಟ್ ಆರೋಪಿಯಾಗಿದ್ದು, ಕಳೆದ ಹನ್ನೊಂದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎನ್ನಲಾಗಿದೆ. ಈತನನ್ನು ಉಡುಪಿ ನಗರ ಠಾಣೆಯ ಸಿಬ್ಬಂದಿಗಳಾದ ರಾಘವೇಂದ್ರ ಮತ್ತು ಆನಂದಯ್ಯ ಎನ್ನುವ ಪೊಲೀಸರು ಬೆಳಗಾವಿಯ ಅಂಬೇಡ್ಕರ್ ಗಲ್ಲಿ ಎನ್ನುವಲ್ಲಿ ಸೆರೆ ಹಿಡಿದಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.
• ಮಂಗಳೂರು: ಜುಗಾರಿ ಅಡ್ಡೆ ಮೇಲೆ ದಾಳಿ
ಮಂಗಳೂರು: ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತರಾದ ಶ್ರೀಕಾಂತ್. ಕೆ ಅವರ ಮಾರ್ಗದರ್ಶನದಲ್ಲಿ, ಕಾವೂರು ಪೊಲೀಸ್ ಠಾಣೆಯ ಪಿಎಸ್ಐ ಮಲ್ಲಿಕಾರ್ಜುನ್ ಬಿರಾದರ್ ಅವರ ನೇತೃತ್ವದಲ್ಲಿ, ಅಕ್ರಮವಾಗಿ ನಡೆಯುತ್ತಿದ್ದ ಜುಗಾರಿ ಅಡ್ಡೆಯ ಮೇಲೆ ದಾಳಿ ನಡೆಸಿದ ಘಟನೆ, ಬೊಲ್ಪುಗುಡ್ಡೆ ಎಂಬ ಗ್ರಾಮದಲ್ಲಿ ನಡೆದಿದೆ. ಈ ಸಂದರ್ಭದಲ್ಲಿ ದೀಕ್ಷಿತ್, ದಯಾನಂದ, ರಾಘವೇಂದ್ರ, ವೈಶಾಖ್ ಶೆಟ್ಟಿ, ಪ್ರವೀಣ್ ಕುಮಾರ್, ಶಾಹುಲ್ ಹಮೀದ್, ತಿಲಕ್ ರಾಜ್, ಜಯಾನಂದ್, ಉಮೇಶ್, ಗೌತಮ್, ಲಾರೆನ್ಸ್ ಡಿಸೋಜಾ, ಮೊಹಮ್ಮದ್ ಅಶ್ರಫ್, ಮೊಹಮ್ಮದ್ ಫಯಾಜ್, ಮುಸ್ತಾಫಾ, ಸುನಿಲ್ ಡಿಸೋಜಾ, ಕಣ್ಣನ್ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳ ಬಳಿಯಿದ್ದ ಸುಮಾರು 1,92,000 ರೂಪಾಯಿ ಹಣ, ಹದಿನೆಂಟು ಮೊಬೈಲ್ ಗಳನ್ನು ವಶಪಡಿಸಿಕೊಳ್ಳಲಾಗಿದೆ. ನಗದು ಹಣ ಮತ್ತು ಮೊಬೈಲ್ ಸೇರಿ ಒಟ್ಟು ನಾಲ್ಕು ಲಕ್ಷ ಆಗಿರಬಹುದು ಎಂದು ಅಂದಾಜಿಸಲಾಗಿದೆ. ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ದಾಳಿಯ ಸಮಯದಲ್ಲಿ ಸಹಾಯಕ ಪೊಲೀಸ್ ಆಯುಕ್ತರ ಕಛೇರಿಯ ಸಿಬ್ಬಂದಿಗಳಾದ ಚಂದ್ರು, ರೇಜಿ, ದಾಮೋದರ, ಹಾಲೇಶ್ ಮತ್ತು ಕಾವೂರು ಠಾಣೆಯ ಸಿಬ್ಬಂದಿಗಳಾದ ಎಎಸ್ಐ ಜಯರಾಮ್, ಮಂಜುನಾಥ, ನಾಗರಾಜ ಸೇರಿದಂತೆ ಅನೇಕ ಪೊಲೀಸರು ಪಾಲ್ಗೊಂಡಿದ್ದರು ಎನ್ನಲಾಗಿದೆ.
• ಪುತ್ತೂರು: ಪತ್ನಿಯ ಸಾವಿನಿಂದ ಮನನೊಂದು ಆತ್ಮಹತ್ಯೆ
ಪುತ್ತೂರು: ಆರ್ಯಾಪು ಗ್ರಾಮದ ನಿವಾಸಿ ಗಣೇಶ ಸಪಲ್ಯ ಎನ್ನುವವರು ತಮ್ಮ ಪತ್ನಿ ನಿಧನರಾದ ಕಾರಣ, ಮಾನಸಿಕ ಖಿನ್ನತೆಗೆ ಒಳಗಾದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಚ್ಚಿಮಲೆಯಲ್ಲಿ ನಡೆದಿದೆ. ಕಳೆದ ಕೆಲವು ದಿನಗಳ ಹಿಂದೆ ಗಣೇಶ್ ಸಪಲ್ಯ ಅವರ ಪತ್ನಿ ಭಾಗೀರಥಿ ಅವರು ನಿಧನರಾಗಿದ್ದು, ಆಗಸ್ಟ್ 28ರಂದು ಅವರ ಉತ್ತರ ಕ್ರಿಯೆಯನ್ನು ಕುಟುಂಬದ ಸದಸ್ಯರು ನಿಗದಿಪಡಿಸಿದ್ದರು. ಆದರೆ ಗಣೇಶ್ ಸಪಲ್ಯ ಅವರು ಈ ಸಂದರ್ಭದಲ್ಲಿ ನಾಪತ್ತೆಯಾಗಿದ್ದರು. ಸುತ್ತಮುತ್ತಲ ಪ್ರದೇಶಗಳಲ್ಲಿ ಹುಡುಕಾಡಿದಾಗ, ಜಾನಕಿ ಎನ್ನುವವರ ಮನೆಯಂಗಳದ ಬಾವಿಯಲ್ಲಿ ಗಣೇಶ್ ಅವರ ಮೃತದೇಹ ಪತ್ತೆಯಾಗಿದೆ. ಗಣೇಶ್ ಅವರ ಪುತ್ರಿ ಭಾರತಿ ಅವರು ಹೇಳಿದ ತಾಯಿಯ ಸಾವಿನಿಂದಾಗಿ ಮನನೊಂದು, ತಂದೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಹೇಳಿಕೆಯಂತೆ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.