Categories
ಕರಾವಳಿ ಕಾರ್ಕಳ ಮಂಗಳೂರು

ಕರಾವಳಿ ಟಾಪ್ ನ್ಯೂಸ್

ಕರಾವಳಿ ಟಾಪ್ ನ್ಯೂಸ್

* ಮಂಗಳೂರು: ಮಿತಿಮೀರಿದ ಮಳೆ; ಸಂಕಷ್ಟದಲ್ಲಿ ಕೃಷಿಕರು

* ಕಾಪು: ಕಡಲ್ಕೊರೆತ ಸ್ಥಳಕ್ಕೆ ಶಾಸಕರ ಭೇಟಿ

* ಕಾರ್ಕಳ: ಪ್ರಾಣಿ ಮತ್ತು ಪಕ್ಷಿಗಳ ಉಪಟಳದಿಂದ ಹೈರಾಣಾದ ರೈತರು

* ಕುಮಟಾ: ಸೇತುವೆಯ ಮೇಲೆ ಬಸ್ ಗಳ ಓಡಾಟಕ್ಕೆ ನಿರ್ಬಂಧ.‌

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್

* ಮಂಗಳೂರು: ಮಿತಿಮೀರಿದ ಮಳೆ! ಸಂಕಷ್ಟದಲ್ಲಿ ಕೃಷಿಕರು

ಮಂಗಳೂರು: ಈ ವರ್ಷ ಮೇ ತಿಂಗಳ ಮಧ್ಯಭಾಗದಿಂದಲೇ ಮಳೆ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ, ಕೃಷಿ ಚಟುವಟಿಕೆಗಳು ಕೂಡ ಕೊಂಚ ಬೇಗನೆ ಆರಂಭಗೊಂಡವು. ಆದರೆ ದೀಪಾವಳಿ ಮುಗಿದರೂ, ಮಳೆಗಾಲ ಮುಗಿಯದ ಕಾರಣ ಕೃಷಿಕರು ತಮ್ಮ ಫಸಲನ್ನು ಗದ್ದೆಯಿಂದ ಕಟಾವು ಮಾಡಿ ತರಲು ಸಾಧ್ಯವಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಭತ್ತದ ಬೆಳೆಗಳನ್ನು ಕಟಾವು ಮಾಡಲು ಯಂತ್ರಗಳನ್ನು ಈಗಾಗಲೇ ತಂದಿರಿಸಿದ್ದು, ಅದನ್ನು ಗದ್ದೆಗೆ ಇಳಿಸಲು, ಮಳೆಯ ತೀವ್ರತೆಯಿಂದಾಗಿ ಸಾಧ್ಯವಾಗುತ್ತಿಲ್ಲ. ಗದ್ದೆಯ ತುಂಬ ನೀರು ಆವರಿಸಿಕೊಂಡಿದೆ.‌ ಇದರ ಪರಿಣಾಮವಾಗಿ ಕೆಲವು ಭತ್ತದ ತೆನೆಗಳು ನೀರಿನಲ್ಲಿ ಮುಳುಗಿ ಹೋಗಿವೆ. ಉತ್ತಮವಾಗಿ ಬಂದಿರುವ ಫಸಲನ್ನು ಕಾಪಾಡಿಕೊಳ್ಳಲು ಸಾಧ್ಯವಾಗುವುದಿಲ್ಲವೇ ಎನ್ನುವ ಪರಿಸ್ಥಿತಿ ಕೃಷಿಕರಿಗೆ ಎದುರಾಗಿದೆ. ಇದೇ ರೀತಿ ಮಳೆ ಇನ್ನೂ ಮುಂದುವರಿದರೆ, ಭತ್ತದ ಬೆಳೆಗಳು ಸಂಪೂರ್ಣವಾಗಿ ಮಣ್ಣುಪಾಲಾಗಿ, ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಎನ್ನುವಂತಾಗುತ್ತದೆ ಎನ್ನುವುದು ಕಟಾವು ಮಾಡಲು, ಮಳೆ ನಿಲ್ಲುವುದನ್ನೇ ಕಾಯುತ್ತಿರುವ ಕೃಷಿಕರ ಅಳಲಾಗಿದೆ. ಈಗಾಗಲೇ ಭತ್ತದ ಹುಲ್ಲು ಕೊಳೆತ ಸ್ಥಿತಿಯಲ್ಲಿದ್ದು, ದನಗಳಿಗೆ ಮೇವು ಇಲ್ಲದಂತಾಗಿದೆ. ಕಟಾವು ಮಾಡುವಾಗ ಪೈರುಗಳು ಉದುರಿ ಬೀಳುವಂತಾಗಿದೆ. ಉಳಿದಿರುವ ಫಸಲನ್ನಾದರೂ ನಿಧಾನವಾಗಿ ಯಂತ್ರಗಳ ಸಹಾಯದಿಂದ ಕಟಾವು ಮಾಡಬೇಕಿದೆ. ಇಲ್ಲದಿದ್ದರೆ ಅದೂ ಕೂಡ ದಕ್ಕುವುದಿಲ್ಲ ಎನ್ನುವಂತಹ ಸನ್ನಿವೇಶ ನಿರ್ಮಾಣವಾಗಿದೆ.

* ಕಾಪು: ಕಡಲ್ಕೊರೆತ ಸ್ಥಳಕ್ಕೆ ಶಾಸಕರ ಭೇಟಿ

ಕಾಪು: ಕಳೆದ ಕೆಲವು ದಿನಗಳಿಂದ ಬರುತ್ತಿರುವ ಮಳೆಯಿಂದಾಗಿ, ಮಟ್ಟು ಸಮುದ್ರ ಬಿರುಸುಗೊಂಡ ಪರಿಣಾಮ, ದಡದತ್ತ ಮುನ್ನುಗ್ಗಿ ಬರುತ್ತಿರುವ ಅಲೆಗಳ ರಭಸಕ್ಕೆ ಕಡಲ್ಕೊರೆತ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಕ್ಷೇತ್ರದ ಶಾಸಕರಾದ ಗುರ್ಮೆ ಸುರೇಶ್ ಶೆಟ್ಟಿ ಅವರು ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದರು. ಬಳಿಕ ಬಂದರು ಮತ್ತು ಮೀನುಗಾರಿಕಾ ಇಲಾಖಾಧಿಕಾರಿಗಳಿಗೆ ಕರೆ ಮಾಡಿ, ತುರ್ತು ಕಾಮಗಾರಿ ಕೈಗೊಳ್ಳುವಂತೆ ಆದೇಶವನ್ನು ಹೊರಡಿಸಿದ್ದಾರೆ. ಹಾಗೂ ಇದಕ್ಕೆ ಸಂಬಂಧಿಸಿದಂತೆ ಸಚಿವರ ಜೊತೆಗೆ ಚರ್ಚೆ ನಡೆಸಿ, ಶಾಶ್ವತ ಪರಿಹಾರಕ್ಕೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಶಾಸಕರ ಭೇಟಿಯ ಸಂದರ್ಭದಲ್ಲಿ ಕೋಟೆ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರಾದ ಯೋಗಿಶ್, ಸದಸ್ಯರಾದ ರತ್ನಾಕರ ಕೋಟ್ಯಾನ್, ನಾಗರಾಜ್ ಮೆಂಡನ್, ರಮೇಶ್ ಪೂಜಾರಿ, ಶಕ್ತಿ ಕೇಂದ್ರದ ಹರ್ಷಿತ್ ಪೂಜಾರಿ, ನ್ಯಾಯವಾದಿಗಳಾದ ಗಣೇಶ್ ಕುಮಾರ್ ಮಟ್ಟು, ಗೋಪಾಲಕೃಷ್ಣರಾವ್, ಸಂತೋಷ್ ಸೇರಿದಂತೆ ಇತರ ಸ್ಥಳೀಯರು ಹಾಜರಿದ್ದರು.

* ಕಾರ್ಕಳ: ಪ್ರಾಣಿ ಮತ್ತು ಪಕ್ಷಿಗಳ ಉಪಟಳದಿಂದ ಹೈರಾಣಾದ ರೈತರು

ಕಾರ್ಕಳ: ಕರಾವಳಿ ಭಾಗದಲ್ಲಿ ಕೃಷಿಗೆ ಸಂಬಂಧಿಸಿದಂತೆ ಹಲವಾರು ರೀತಿಯ ಸಮಸ್ಯೆಗಳು ತಲೆದೋರಿವೆ.‌ ಒಂದೆಡೆ ಮಳೆಯ ತೀವ್ರತೆಯಿಂದಾಗಿ ಬೆಳೆಗಳು ಕುಸಿಯುತ್ತಿದ್ದರೆ, ಮತ್ತೊಂದೆಡೆ ‌ ಪ್ರಾಣಿ-ಪಕ್ಷಿಗಳಿಂದ ಉಳಿದ ಅಲ್ಪಸ್ವಲ್ಪ ಬೆಳೆಗಳನ್ನು ಜೊತೆಗೆ ಮನೆಯಲ್ಲಿ ಸಾಕಿರುವ ಕೋಳಿ, ಹಸುಗಳ ರಕ್ಷಣೆ ಮಾಡುವ ಸವಾಲು ಎದುರಾಗಿದೆ. ಕಾರ್ಕಳದಿಂದ ಪಡುಬಿದ್ರಿ ಭಾಗದವರೆಗೆ ಮಂಗ, ನವಿಲು, ಕಾಡೆಮ್ಮೆ, ಕಾಡು ಹಂದಿ ಮತ್ತು ಚಿರತೆಯ ಕಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಇಲಾಖೆಯು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರಾದ ಹರೀಶ್ ಶೆಟ್ಟಿಗಾರ್ ಅವರು ಮನವಿ ಮಾಡಿಕೊಂಡಿದ್ದಾರೆ. ಈ ಕುರಿತು ಮಾತನಾಡಿದ ಕಾರ್ಕಳದ ಭಾರತೀಯ ಕಿಸಾನ್ ಸಂಘದ ಅಧ್ಯಕ್ಷರಾದ ನವೀನ್ ಚಂದ್ರ ಜೈನ್ ಅವರು “ಕಾರ್ಕಳ ಭಾಗದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕೃಷಿಕರೇ ಇದ್ದು, ಭತ್ತ ,ಅಡಿಕೆ, ತೆಂಗು ಮೊದಲಾದವು ಪ್ರಮುಖ ಬೆಳೆಗಳಾಗಿವೆ. ಈ ಭಾಗದಲ್ಲಿ ವರ್ಷದಿಂದ ವರ್ಷಕ್ಕೆ ಕಾಡುಪ್ರಾಣಿಗಳ ಉಪಟಳ ಹೆಚ್ಚಾಗುತ್ತಿದೆ. ಅದರಲ್ಲೂ ಮಂಗ, ನವಿಲು, ಕಾಡುಕೋಣ ಮತ್ತು ಕಾಡುಹಂದಿಯಿಂದ ಉಂಟಾಗುವ ತೊಂದರೆ ಮಿತಿಮೀರಿದೆ. ಇದರಿಂದಾಗಿ ಬೆಳೆಗಾರರು ಸಾಕಷ್ಟು ಆರ್ಥಿಕ ಸಂಕಷ್ಟವನ್ನು ಎದುರಿಸುವಂತಾಗಿದೆ. ಅರಣ್ಯ ಇಲಾಖೆಯು ಶಾಶ್ವತ ಪರಿಹಾರವನ್ನು ಕಲ್ಪಿಸುವ ನಿಟ್ಟಿನಲ್ಲಿ, ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ತಿಳಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಕುಂದಾಪುರ ಅರಣ್ಯ ಇಲಾಖೆಯ ಉಪವಿಭಾಗದ ಡಿಎಫ್ಓ ಗಣಪತಿ ಮತ್ತು ಕಾರ್ಕಳದ ಡಿಎಫ್ಓ ಶಿವರಾಮ ಬಾಬು ಅವರು ” ಕಾಡುಪ್ರಾಣಿಗಳು ಮತ್ತು ಮನುಷ್ಯರ ನಡುವೆ ಸಂಭವಿಸುತ್ತಿರುವ ಸಂಘರ್ಷವನ್ನು ತಡೆಗಟ್ಟಲು, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಕಾಡು ಪ್ರಾಣಿಗಳಿಂದಾಗಿ ಹಾನಿಗೊಳಪಟ್ಟ ಬೆಳೆಗಳಿಗೆ ಪರ್ಯಾಯವಾಗಿ ಕೃಷಿಕರಿಗೆ ಪರಿಹಾರ ಹಣವನ್ನು ನೀಡಲಾಗುತ್ತಿದೆ.‌ ಮತ್ತು ಕಾಡಿನಿಂದ ಜನವಸತಿ ಪ್ರದೇಶಕ್ಕೆ ಪ್ರಾಣಿಗಳು ಆಗಮಿಸಿದಂತೆ ಸೋಲಾರ್ ಫೆನ್ಸಿಂಗ್ ಅನ್ನು ಅಳವಡಿಸಲಾಗುತ್ತಿದೆ. ರೈತರಿಗೂ ಸಮಸ್ಯೆಯಾಗದಂತೆ ಹಾಗೆಯೇ ಪ್ರಾಣಿಗಳಿಗೂ ತೊಂದರೆಯುಂಟಾಗದಂತೆ ಇಲಾಖೆಯ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ನಿಗಾವಹಿಸಿ ಕರ್ತವ್ಯನಿರತರಾಗಿದ್ದಾರೆ” ಎಂದು ತಿಳಿಸಿದರು.

* ಕುಮಟಾ: ಸೇತುವೆಯ ಮೇಲೆ ಬಸ್ ಗಳ ಓಡಾಟಕ್ಕೆ ನಿರ್ಬಂಧ

ಕುಮಟಾ: ಕಳೆದ ಕೆಲವು ವರ್ಷಗಳಿಂದ ಕುಂಟುತ್ತಾ ಸಾಗಿದ, ಗಂಗಾವಳಿ ಮತ್ತು ಮಂಜುಗುಣಿ ನಡುವೆ ಸಂಪರ್ಕ ಕಲ್ಪಿಸುವ, ಗಂಗಾವಳಿ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆಯ ಕಾಮಗಾರಿ ಕೊನೆಗೂ ಪೂರ್ಣಗೊಂಡಿದೆ. ಆದರೆ ಇದೀಗ ಸಾರಿಗೆ ಬಸ್ ಸಂಚಾರಕ್ಕೆ ಸರ್ಕಾರವು ನಿರ್ಬಂಧ ಹೇರಿರುವುದು ಮತ್ತೊಂದು ಸಮಸ್ಯೆಯಾಗಿ ಪರಿಣಮಿಸಿದೆ. ಸರ್ಕಾರಕ್ಕೆ ಸಂಬಂಧಿಸಿದ ಎಲ್ಲಾ ಇಲಾಖೆಯ ವಾಹನಗಳು ಈ ಮಾರ್ಗದಲ್ಲಿ ಚಲಿಸುತ್ತಿದ್ದು, ಬಸ್ ಗಳಿಗೆ ಮಾತ್ರ ಈ ರೀತಿಯ ನಿರ್ಬಂಧ ಹೊರಡಿಸಿದೆ. ಇಷ್ಟು ದಿನ ಸಂಚಾರ ಮಾಡುತ್ತಿದ್ದ ಒಂದು ಬಸ್ ಕೂಡ ಇದೀಗ ಸಂಚಾರ ನಿಲ್ಲಿಸಿದೆ. ಇದರ ಪರಿಣಾಮವಾಗಿ ಗೋಕರ್ಣದಿಂದ ಅಂಕೋಲಾಕ್ಕೆ ಪ್ರತಿದಿನ ಸಂಚರಿಸುವ ಬಸ್, ಸುತ್ತಿ ಬಳಸಿ ಸಂಚರಿಸುತ್ತಿದ್ದು, ರಸ್ತೆಯಲ್ಲಿರುವ ಸಮಸ್ಯೆಗಳಿಂದಾಗಿ ಕೆಟ್ಟು ನಿಲ್ಲುತ್ತಿದೆ. ಮತ್ತು ಕೇವಲ 25 ಕಿಲೋಮೀಟರ್ ಕ್ರಮಿಸಲು ಒಂದು ಗಂಟೆಗಿಂತ ಹೆಚ್ಚು ಸಮಯವನ್ನು ತೆಗೆದುಕೊಳ್ಳುತ್ತಿದೆ. ಇದರಿಂದಾಗಿ ಶಾಲಾ ಕಾಲೇಜುಗಳಿಗೆ, ಕೆಲಸಕ್ಕೆ ತೆರಳುವವರಿಗೆ ಸಮಸ್ಯೆ ಉಂಟಾಗುತ್ತಿದೆ.‌ ಅದೇ ಗಂಗಾವಳಿ ಮಾರ್ಗದಲ್ಲಿ ಚಲಿಸಿದರೆ ಅರ್ಧ ಗಂಟೆಯೊಳಗೆ ತಲುಪಬಹುದಾಗಿದೆ. ದಿನವೂ ಸಾವಿರಾರು ಪ್ರವಾಸಿ ವಾಹನಗಳು, ಸರಕು ವಾಹನಗಳು, ಸರ್ಕಾರಿ ವಾಹನಗಳು ಕೂಡ ಸಂಚರಿಸುತ್ತಿದ್ದರೂ, ಸರ್ಕಾರಿ ಬಸ್ ಗಳನ್ನು ಏಕೆ ಈ ಮಾರ್ಗದಲ್ಲಿ ಸಂಚರಿಸಲು ತಡೆಹಿಡಿಯಲಾಗಿದೆ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಹೋರಾಟಗಾರರಾದ ಗಣಪತಿಯವರು ಪ್ರತಿನಿತ್ಯ ವಯೋವೃದ್ಧರು ಮತ್ತು ವಿದ್ಯಾರ್ಥಿಗಳು ಸೇತುವೆಯ ಒಂದು ಕಡೆಯಿಂದ ಮತ್ತೊಂದು ಕಡೆಗೆ ತೆರಳಲು ತೊಂದರೆ ಅನುಭವಿಸುವಂತಾಗಿದೆ. ಎಲ್ಲಾ ಬಗೆಯ ವಾಹನಗಳು ಸಂಚರಿಸುತ್ತಿದ್ದು, ಸರ್ಕಾರಿ ಬಸ್ ಗಳಿಗೆ ಮಾತ್ರ ಅನುಮತಿ ನೀಡದಿರುವುದು ಬೇಸರದ ಸಂಗತಿಯಾಗಿದೆ. ಜನರಿಗೆ ನೆರವಾಗುವ ನಿಟ್ಟಿನಲ್ಲಿ ಜಿಲ್ಲಾಡಳಿತವು ಸೂಕ್ತ ಕ್ರಮ ಕೈಗೊಳ್ಳಬೇಕೆಂದು, ಇದಕ್ಕೆ ಜನಪ್ರತಿನಿಧಿಗಳು ಸಹಕಾರ ನೀಡಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.