ಕರಾವಳಿ ಟಾಪ್ ನ್ಯೂಸ್
* ಬ್ರಹ್ಮಾವರ: ಕಾಯಿಲೆಗೆ ಚಿಕಿತ್ಸೆ ಕೊಡಿಸುವ ನೆಪದಲ್ಲಿ ಹಣ ವಸೂಲಿ!
* ಬೈಂದೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ; 20 ವರ್ಷ ಶಿಕ್ಷೆ
* ಉಡುಪಿ: ಸರಣಿ ಅಪಘಾತ; ಅಪಾಯದಿಂದ ಪಾರು!
* ಸುಳ್ಯ: ಅಡಿಕೆ ಕಳ್ಳತನ ಮಾಡಿದ ಆರೋಪಿ ಬಂಧನ
* ಬಂಟ್ವಾಳ: ಪಿಎಸ್ಐ ಆತ್ಮಹತ್ಯೆ ಕುರಿತು ಅಪಪ್ರಚಾರ: ದೂರು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬ್ರಹ್ಮಾವರ: ಚೆರ್ಕಾಡಿ ಗ್ರಾಮದ ಉಷಾ ಎನ್ನುವವರ ಒಂದು ತಿಂಗಳ ಮಗು ಹೃದಯ ಕಾಯಿಲೆಯಿಂದ ಬಳಲುತ್ತಿದ್ದು, ಶಸ್ತ್ರಚಿಕಿತ್ಸೆಗೆ ಸುಮಾರು ಹತ್ತು ಲಕ್ಷ ಖರ್ಚಾಗುವ ಹಿನ್ನೆಲೆಯಲ್ಲಿ, ಅವರು ಸಾರ್ವಜನಿಕರ ಬಳಿ ಧನಸಹಾಯವನ್ನು ಕೋರಿ ವಾಟ್ಸಪ್ ಸಂದೇಶವನ್ನು ಕಳುಹಿಸಿದ್ದರು. ಈ ವಿಚಾರವನ್ನು ದುರುಪಯೋಗಪಡಿಸಿಕೊಂಡ ವ್ಯಕ್ತಿಯೊಬ್ಬ ಉಷಾ ಅವರಿಗೆ ಕರೆ ಮಾಡಿ, ಮೂರು ಲಕ್ಷ ರೂಪಾಯಿ ಹಾಕಲು ನಿರ್ಧರಿಸಿದ್ದು, ಅದರ ಜಿಎಸ್ಟಿ ಮೊತ್ತ ಮೂವತ್ತು ಸಾವಿರ ರೂಪಾಯಿಯನ್ನು ನೀವು ಮೊದಲೇ ಪಾವತಿಸಬೇಕು ಎಂದು ತಿಳಿಸಿದ್ದಾನೆ. ಮಗುವಿನ ಶಸ್ತ್ರಚಿಕಿತ್ಸೆಗೆ ದೊಡ್ಡ ಮೊತ್ತವನ್ನು ನೀಡಲು ಮುಂದಾಗಿದ್ದಾರಲ್ಲ ಎಂದು ಸಂತೋಷಗೊಂಡು, ಉಷಾ ಅವರು ದುಷ್ಕರ್ಮಿಗಳು ತಿಳಿಸಿದ ಖಾತೆಯ ಸಂಖ್ಯೆಗೆ ಗೂಗಲ್ ಪೇ ಮೂಲಕ ಹಣವನ್ನು ಕಳುಹಿಸಿದ್ದಾರೆ. ಬಳಿಕ ತಾವು ಮೋಸ ಹೋಗಿರುವ ಸಂಗತಿ ತಿಳಿದು, ಬ್ರಹ್ಮಾವರ ಪೊಲೀಸ್ ಠಾಣೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣ ದಾಖಲಾಗಿದೆ.
•ಬೈಂದೂರು: ಅಪ್ರಾಪ್ತೆ ಮೇಲೆ ಅತ್ಯಾಚಾರ; ಇಪ್ಪತ್ತು ವರ್ಷ ಕಠಿಣ ಶಿಕ್ಷೆ.
ಬೈಂದೂರು: ಹದಿನೈದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರವೆಸಗಿ, ಆಕೆ ಗರ್ಭಿಣಿಯಾಗುವಂತೆ ಮಾಡಿದ್ದು, ದುಷ್ಕರ್ಮಿಯು ಬಾಲಕಿಯ ಸಂಬಂಧಿಯೇ ಆಗಿದ್ದು, ಆಕೆಯ ಮನೆಯ ಸಮೀಪದ ಹಾಡಿಗೆ ಕರೆದೊಯ್ದು ಇಂತಹ ಕೃತ್ಯವನ್ನು ಎಸಗಿದ್ದ. ಈ ವಿಚಾರವನ್ನು ತಂದೆ ತಾಯಿಯ ಬಳಿ ಬಾಯಿಬಿಟ್ಟರೆ, ಸಾಯಿಸುವುದಾಗಿ ಬೆದರಿಕೆಯೊಡ್ಡಿದ್ದ ಎನ್ನಲಾಗಿದೆ. ಬಳಿಕ ಬಾಲಕಿಯ ಆರೋಗ್ಯದಲ್ಲಿ ಏರುಪೇರು ಉಂಟಾಗಿ, ವೈದ್ಯರ ಬಳಿ ತೋರಿಸಲು ಹೋದಾಗ ಆಕೆ ಗರ್ಭಿಣಿ ಎನ್ನುವುದು ದೃಢಪಟ್ಟಿದೆ. ಡಿಎನ್ಎ ವರದಿಯ ಆಧಾರದ ಮೇಲೆ ರಾಘವೇಂದ್ರ ತಪ್ಪಿತಸ್ಥ ಎಂದು ಸಾಬೀತುಗೊಂಡ ಹಿನ್ನೆಲೆಯಲ್ಲಿ ಅವನನ್ನು ಬಂಧಿಸಿದ್ದು, ಉಡುಪಿಯ ಹೆಚ್ಚುವರಿ ನ್ಯಾಯಾಲಯವು ಫೋಕ್ಸೋ ಕಾಯಿದೆ ಅಡಿಯಲ್ಲಿ ಇಪ್ಪತ್ತೈದು ಸಾವಿರ ದಂಡ ವಿಧಿಸುವುದರ ಜೊತೆಗೆ, ಇಪ್ಪತ್ತು ವರ್ಷಗಳ ಕಠಿಣ ಶಿಕ್ಷೆಯನ್ನು ನೀಡಿದೆ. ಸರ್ಕಾರದ ಪರವಾಗಿ ಅನ್ಯಾಯಕ್ಕೆ ಒಳಗಾದ ಬಾಲಕಿಗೆ ಮೂರು ಲಕ್ಷ ರೂಪಾಯಿ ಪರಿಹಾರ ನೀಡುವಂತೆ ಆದೇಶವನ್ನು ಸಹ ಹೊರಡಿಸಿದೆ.
* ಉಡುಪಿ: ಸರಣಿ ಅಪಘಾತ; ಅಪಾಯದಿಂದ ಪಾರು
ಉಡುಪಿ: ಸಂತೆಕಟ್ಟೆಯ ಯು ಟರ್ನ್ ಜಂಕ್ಷನ್ ಅಪಾಯಕಾರಿ ಸ್ಥಳವಾಗಿ ಮಾರ್ಪಟ್ಟಿದ್ದು, ಗುರುವಾರದಂದು ಸಂತೆಕಟ್ಟೆಯಿಂದ ಕುಂದಾಪುರದ ಕಡೆಗೆ ಹೋಗುತ್ತಿದ್ದ ಲಾರಿಯೊಂದು ರಸ್ತೆಯ ಮಧ್ಯಭಾಗದಲ್ಲಿ ತಿರುಗಿಸಲು ಸಿದ್ಧವಾಗಿದ್ದ ಕಾರಿಗೆ ಡಿಕ್ಕಿ ಹೊಡೆದಿದೆ. ಲಾರಿ ಡಿಕ್ಕಿ ಹೊಡೆದ ಪರಿಣಾಮವಾಗಿ, ಕಾರು ಅದೇ ರೀತಿ ತಿರುಗಿಸಿಕೊಂಡು ಹೋಗಲು ಸಿದ್ಧವಾಗಿದ್ದ ಬೈಕ್ ಗೆ ಹೋಗಿ ಗುದ್ದಿದೆ. ಆದರೆ ಯಾರಿಗೂ ಅಪಾಯ ಸಂಭವಿಸಿಲ್ಲ ಎನ್ನುವುದು ಸಮಾಧಾನಕರ ಸಂಗತಿಯಾಗಿದೆ. ಒಂದೇ ಕಿರಿದಾದ ರಸ್ತೆಯಲ್ಲಿ ಹಲವಾರು ವಾಹನಗಳು ಸಂಚರಿಸುವುದರಿಂದ, ಅಲ್ಲದೆ ಸಂತೆಕಟ್ಟೆ ಮತ್ತು ಕುಂದಾಪುರ ಎರಡು ಕಡೆಯಿಂದ ಬರುವ ವಾಹನಗಳು ಇಲ್ಲಿ ಸಂಧಿಸುವುದರಿಂದ ಅಡಚಣೆ ಉಂಟಾಗುತ್ತಿದೆ. ಅದರಿಂದಾಗಿ ಅಪಘಾತಗಳು ಹೆಚ್ಚಾಗಿವೆ ಎನ್ನುವುದು ಸ್ಥಳೀಯರ ಅಭಿಪ್ರಾಯ.
* ಸುಳ್ಯ: ಕಳೆದ ಕೆಲವು ದಿನಗಳ ಹಿಂದೆ ಪುಂಜೂರು ಗ್ರಾಮದಲ್ಲಿ ನಡೆದ ಅಡಿಕೆ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಬಂಧಿಸಲಾಗಿದೆ. ನಲವತ್ತೈದು ಪ್ಲಾಸ್ಟಿಕ್ ಚೀಲದಲ್ಲಿದ್ದ ಸುಮಾರು 2.20 ಲಕ್ಷ ಮೌಲ್ಯದ ಅಡಿಕೆಯನ್ನು ಅಪಹರಿಸಲಾಗಿತ್ತು. ಇದೀಗ ಪೊಲೀಸರು ಸ್ವತ್ತುಗಳ ಸಹಿತ ಆರೋಪಿಯನ್ನು ಹಿಡಿದಿದ್ದು, ಆತ ಸುಳ್ಯ ತಾಲ್ಲೂಕಿನ ಪೈಚಾರು ನಿವಾಸಿ ಸತೀಶ್ ಎಂದು ಗುರುತಿಸಲಾಗಿದೆ. ಆರೋಪಿಯು ಎಪ್ಪತ್ತನಾಲ್ಕು ಸಾವಿರ ಮೌಲ್ಯದ ಹದಿನೈದು ಚೀಲ ಒಣ ಅಡಿಕೆ, ಕಳ್ಳತನ ಮಾಡಿದ ಅಡಿಕೆಯನ್ನು ಮಾರಾಟ ಮಾಡಿದಾಗ ಬಂದ ಹಣ ಎಪ್ಪತ್ತು ಸಾವಿರ ರೂಪಾಯಿ, ಕಳ್ಳತನಕ್ಕೆ ಬಳಸಿದ ಎಂಭತ್ತು ಸಾವಿರ ರೂಪಾಯಿ ಬೆಲೆಬಾಳುವ ಗೂಡ್ಸ್ ವಾಹನವನ್ನು ಸೇರಿ ಒಟ್ಟು 2.24 ಲಕ್ಷ ರೂಪಾಯಿ ಮೌಲ್ಯದ ಸ್ವತ್ತುಗಳನ್ನು ಸಹ ಪೊಲೀಸರು ವಶಕ್ಕೆ ಪಡೆದಿದ್ದಾರೆ.
•ಬಂಟ್ವಾಳ: ಪಿಎಸ್ಐ ಆತ್ಮಹತ್ಯೆ ಕುರಿತು ಅಪಪ್ರಚಾರ; ಪುತ್ರಿಯಿಂದ ದೂರು
ಬಂಟ್ವಾಳ: ಕೆಲವು ದಿನಗಳ ಹಿಂದೆ ಬಂಟ್ವಾಳ ಪೊಲೀಸ್ ಠಾಣೆಯಲ್ಲಿ ತನಿಖಾ ಪಿಎಸ್ಐ ಆಗಿ ಕಾರ್ಯನಿರ್ವಹಿಸುತ್ತಿದ್ದ, ಖೀರಪ್ಪ ಘಟಕಾಂಬಳೆ ಅವರು ಆತ್ಮಹತ್ಯೆ ಮಾಡಿಕೊಂಡಿದ್ದು, ಸಮವಸ್ತ್ರದಲ್ಲಿದ್ದ ಅವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತು. ಆತ್ಮಹತ್ಯೆಗೆ ಸಂಬಂಧಿಸಿದಂತೆ ಅನೇಕ ಊಹಾಪೋಹಗಳು ಹುಟ್ಟಿಕೊಂಡಿರುವ ಹಿನ್ನೆಲೆಯಲ್ಲಿ, ಅವರ ಮಗಳಾದ ಕ್ಷಮಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. “ನನ್ನ ತಂದೆ ವೈಯಕ್ತಿಕ ಕಾರಣದಿಂದ ಆತ್ಮಹತ್ಯೆ ಮಾಡಿಕೊಂಡರು, ಸಮವಸ್ತ್ರದಲ್ಲಿದ್ದ ಅವರ ಭಾವಚಿತ್ರ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವುದರಿಂದ, ಸಾವಿಗೆ ಸಂಬಂಧಿಸಿದಂತೆ ಅಪಪ್ರಚಾರ ನಡೆಯುತ್ತಿದೆ. ತಂದೆಯ ಆತ್ಮಹತ್ಯೆಗೂ ಧರ್ಮಸ್ಥಳ ಪ್ರಕರಣಕ್ಕೂ ತಳಕು ಹಾಕಿ ತಮ್ಮದೇ ಆದ ಕಲ್ಪನೆಯಲ್ಲಿ ಸಾರ್ವಜನಿಕರು ಆಲೋಚಿಸುತ್ತಿದ್ದಾರೆ, ಇನ್ನೂ ಕೆಲವರು ಇದೇ ರೀತಿ ಸಾಮಾಜಿಕ ಜಾಲತಾಣಗಳ ಖಾತೆಯಲ್ಲಿ ತಮ್ಮ ಅಭಿಪ್ರಾಯಗಳನ್ನು ಮಂಡಿಸುತ್ತಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ದೂರಿನಲ್ಲಿ ತಿಳಿಸಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಶಿರಸಿಯ ನ್ಯೂ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕಾಲಂ 352, 353(1) (2), ಬಿಎನ್ಎಸ್ ಪ್ರಕರಣ ದಾಖಲಾಗಿದೆ.