ಕರಾವಳಿ ಟಾಪ್ ನ್ಯೂಸ್.. ಎಲ್ಲೆಲ್ಲಿ ಏನೇನಾಯ್ತು?
* ಪುತ್ತೂರು: ರಾಜಹಂಸ ಬಸ್ ಚಾಲಕನ ಮೇಲೆ ಹಲ್ಲೆ
* ಕುಂದಾಪುರ: ಕೇಬಲ್ ಆಪರೇಟರ್ ಹಣ ಮಾಯ..!
* ಬಂಟ್ವಾಳ: ರೈಲಿನಡಿ ಬಿದ್ದು ಯುವಕ ಆತ್ಮಹತ್ಯೆ
* ಉಡುಪಿ: ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕಿ ಪೊಲೀಸರ ವಶಕ್ಕೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಬೆಂಗಳೂರಿನಿಂದ ಮಂಗಳೂರಿನತ್ತ ಹೋಗುತ್ತಿದ್ದ ರಾಜಹಂಸ ಬಸ್ ನ ಚಾಲಕ ರಿಯಾಜ್ ಅಹಮದ್ ಎನ್ನುವವರು ಬಸ್ ಗೆ ಬೈಕ್ ಗಳು ಅಡ್ಡ ಬಂದ ಹಿನ್ನೆಲೆಯಲ್ಲಿ ಹಾರ್ನ್ ಮಾಡಿದ್ದಾರೆ. ಇದರಿಂದ ಕೆರಳಿದ ಬೈಕ್ ಸವಾರರು, ರಸ್ತೆ ನಡುವೆ ಬೈಕ್ ನಿಲ್ಲಿಸಿ, ಬಸ್ ಚಾಲಕನ ಮೇಲೆ ಹಲ್ಲೆ ನಡೆಸಿದ ಘಟನೆ ಉಪ್ಪಿನಂಗಡಿಯಲ್ಲಿ ನಡೆದಿದೆ. ಅನ್ಯಾಯದ ಕುರಿತು ಬಸ್ ಪ್ರಯಾಣಿಕ ಅವಿನಾಶ್ ಪ್ರಶ್ನಿಸಿದಾಗ, ಬೈಕ್ ಸವಾರರು ತಮ್ಮ ಕೈಯಲ್ಲಿದ್ದ ಹೆಲ್ಮೆಟ್ ನಿಂದ ಅವಿನಾಶ್ ತಲೆಗೆ ಹೊಡೆದು ಗಂಭೀರವಾಗಿ ಗಾಯಗೊಳಿಸಿದ್ದಾರೆ ಎನ್ನಲಾಗಿದೆ. ಬಸ್ ಚಾಲಕರಾದ ರಿಯಾಜ್ ಅಹಮದ್ ಅವರು ನೀಡಿದ ದೂರಿನ ಆಧಾರದ ಮೇಲೆ, ಉಪ್ಪಿನಂಗಡಿ ಠಾಣೆಯ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಗುರುನಾಥ್ ಹಾದಿಮನಿ ಅವರು ಮಿಂಚಿನ ವೇಗದಲ್ಲಿ ಕಾರ್ಯಾಚರಣೆ ನಡೆಸಿ, ಗಂಟೆಯೊಳಗಾಗಿ ಆರೋಪಿಗಳನ್ನು ಪತ್ತೆ ಹಚ್ಚಿ, ಬಂಧಿಸಿದ್ದಾರೆ. ಆರೋಪಿಗಳನ್ನು ಜುನೈದ್ ಮತ್ತು ಹಿಷಾಮ್ ಎಂದು ಗುರುತಿಸಲಾಗಿದ್ದು, ಸರ್ಕಾರಿ ಕರ್ತವ್ಯಕ್ಕೆ ಅಡ್ಡಿ ಹಾಗೂ ಸಾರ್ವಜನಿಕ ಶಾಂತಿ, ಭಂಗ ಆರೋಪದಡಿಯಲ್ಲಿ ಪ್ರಕರಣವನ್ನು ದಾಖಲಿಸಿ, ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.
ಕುಂದಾಪುರ: ಕೇಬಲ್ ಆಪರೇಟರ್ ಹಣ ಮಾಯ..!
ಕುಂದಾಪುರ: ಮೊಬೈಲ್ ಗೆ ಬಂದ ಮೆಸೇಜ್ ಅನ್ನು ನಂಬಿ, ಕೇಬಲ್ ಆಪರೇಟರ್ ತಮ್ಮ ಹಣವನ್ನು ಕಳೆದುಕೊಂಡ ಘಟನೆ ಕಸಬಾ ಗ್ರಾಮದಲ್ಲಿ ನಡೆದಿದೆ. ಟ್ರಾಫಿಕ್ ಚಲನ್ ಎಂದು ಒಂದು ಸಂಖ್ಯೆಯಿಂದ, ಆರ್ ಟಿ ಓ ಟ್ರಾಫಿಕ್ ಚಲನ್ ಎಂದು ಮತ್ತೊಂದು ಮೊಬೈಲ್ ಸಂಖ್ಯೆಯಿಂದ ಮೆಸೇಜ್ ಬಂದಿದೆ. ಆರ್ ಟಿ ಓ ಮೆಸೇಜ್ ಬಂದಿದೆ ಎಂದು ಲಿಂಕ್ ಒತ್ತಿದಾಗ, ತಮ್ಮ ಬ್ಯಾಂಕ್ ಖಾತೆಯಿಂದ ಹಣ ಹೋದ ವಿಚಾರ ತಿಳಿದುಬಂದಿದೆ. ಎಚ್ ಡಿ ಎಫ್ ಸಿ ಬ್ಯಾಂಕ್ ಗೆ ತೆರಳಿ, ಅಕೌಂಟ್ ಅನ್ನು ಪರಿಶೀಲಿಸಿದಾಗ ಒಟ್ಟು 1.87.044 ರಷ್ಟು ಹಣವನ್ನು ಸೈಬರ್ ಅಪರಾಧಿಗಳು ವಂಚಿಸಿದ್ದಾರೆ ಎಂಬ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ.
ಬಂಟ್ವಾಳ: ಸುಮಾರು ಮೂವತ್ತು ಮೂವತ್ತೈದು ವರ್ಷದ ಯುವಕನೊಬ್ಬ ಚಲಿಸುತ್ತಿದ್ದ ರೈಲಿನ ಅಡಿಯಲ್ಲಿ ಬಿದ್ದು, ಆತ್ಮಹತ್ಯೆ ಮಾಡಿಕೊಂಡ ಘಟನೆ ಬಿ.ಸಿ. ರಸ್ತೆಯ ರೈಲ್ವೆ ನಿಲ್ದಾಣದ ಬಳಿ ಗುರುವಾರ ಬೆಳಿಗ್ಗೆ ನಡೆದಿದೆ. ಯುವಕನ ದೇಹವು ಸಂಪೂರ್ಣವಾಗಿ ಜಜ್ಜಿಹೋಗಿದ್ದು, ಮುಖದ ಮೇಲೆ ಯಾವುದೇ ರೀತಿಯ ಗಾಯದ ಗುರುತುಗಳು ಆಗಿಲ್ಲ. ಯುವಕನ ಹೆಸರು, ಇನ್ನಿತರ ಹಿನ್ನೆಲೆ ಮತ್ತು ಆತ್ಮಹತ್ಯೆಗೆ ಕಾರಣ ಕುರಿತು ಮಾಹಿತಿ ತಿಳಿದುಬಂದಿಲ್ಲ.
• ಉಡುಪಿ: ಲೆಕ್ಕ ಪರಿಶೋಧನಾ ಇಲಾಖೆಯ ಉಪ ನಿರ್ದೇಶಕಿ ಪೊಲೀಸರ ವಶಕ್ಕೆ
ಉಡುಪಿ: ಸೌಹಾರ್ದ ಸಹಕಾರ ಸಂಘದ ಆಡಳಿತ ಮಂಡಳಿಯ ಚುನಾವಣೆಯನ್ನು ನಡೆಸಿ ಕೊಡುವ ಸಲುವಾಗಿ, ಐದರಿಂದ ಹತ್ತು ಸಾವಿರ ರೂಪಾಯಿವರೆಗೆ ಲಂಚದ ಬೇಡಿಕೆಯನ್ನು ಇಟ್ಟ ದೂರಿನ ಹಿನ್ನೆಲೆಯಲ್ಲಿ, ಉಡುಪಿ ಜಿಲ್ಲಾ ಸಹಕಾರಿ ಸಂಘದ ಲೆಕ್ಕ ಪರಿಶೋಧನಾ ಇಲಾಖೆಯ ಉಪನಿರ್ದೇಶಕಿಯಾದ ರೇಣುಕಾ ಮತ್ತು ಪ್ರಥಮ ದರ್ಜೆ ಸಹಾಯಕರನ್ನು ಲಂಚವನ್ನು ಪಡೆಯುತ್ತಿದ್ದ ಸಮಯದಲ್ಲಿಯೇ, ಸಾಕ್ಷಿ ಸಮೇತ ಉಡುಪಿ ಲೋಕಾಯುಕ್ತ ಪೊಲೀಸರು ಬಂಧಿಸಿದ್ದಾರೆ. ಹತ್ತು ಸಾವಿರ ರೂಪಾಯಿ ಲಂಚವನ್ನು ನೀಡಲು ನಿರಾಕರಿಸಿದ, ಶಾಂತಿನಿಕೇತನ ಸೌಹಾರ್ದ ಸಹಕಾರಿ ಸಂಘದ ಮುಖ್ಯ ಕಾರ್ಯನಿರ್ವಾಹಕರಾದ ನರೇಂದ್ರ ಅವರು ಉಡುಪಿ ಲೋಕಾಯುಕ್ತ ಪೊಲೀಸರಿಗೆ ಆರೋಪಿಗಳ ವಿರುದ್ಧ ದೂರು ನೀಡಿದ್ದರು ಎನ್ನಲಾಗಿದೆ.