ಕರಾವಳಿ ಟಾಪ್ ನ್ಯೂಸ್
* ಬೆಳ್ತಂಗಡಿ: 5 ತಲೆಬುರುಡೆ, 113 ಮೂಳೆಗಳು ಪತ್ತೆ!
* ಮಂಗಳೂರು: ರಸ್ತೆ ಅಪಘಾತದಲ್ಲಿ ಇಂಜಿನಿಯರ್ ಸಾವು
* ಕುಂದಾಪುರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ
* ಉಡುಪಿ: ರಂಗಭೂಮಿ ಕಲಾವಿದ ಗೋಪಾಲಣ್ಣ ಇನ್ನಿಲ್ಲ
* ಬಂಟ್ವಾಳ: ದುಬಾರಿ ಬೆಲೆಯ ನಾಯಿ ಕೊಂದ ನೆರೆಮನೆಯವರು!
* ಭಟ್ಕಳ: ಅರಣ್ಯದಲ್ಲಿ ಜಾನುವಾರುಗಳ ಮೂಳೆ ಪತ್ತೆ
* ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ನೇತ್ರಾವತಿ ನದಿ ತೀರದಲ್ಲಿರುವ ಬಂಗ್ಲೆಗುಡ್ಡಕ್ಕೆ ಎಸ್ಐಟಿ ತಂಡವು ಪ್ರವೇಶಿಸಿದ್ದು, ತನಿಖಾಧಿಕಾರಿಗಳಾದ ಜಿತೇಂದ್ರ ದಯಾಮ ಅವರ ನೇತೃತ್ವದಲ್ಲಿ ಅರಣ್ಯ ಇಲಾಖೆ, ಲೋಕೋಪಯೋಗಿ ಇಲಾಖೆ, ಸೋಕೋ ತಂಡ, ಕಂದಾಯ ಇಲಾಖೆ ಮತ್ತು ಪಂಚಾಯತ್ ಸಿಬ್ಬಂದಿಗಳು ಗುರುವಾರದಂದು ಸುಮಾರು ಏಳು ಗಂಟೆಗಳ ಕಾಲ ಹದಿಮೂರು ಎಕರೆ ವಿಸ್ತೀರ್ಣದ ಬಂಗ್ಲೆಗುಡ್ಡದ ಐದು ಕಡೆ ಮಹಜರು ನಡೆಸಿದರು ಎನ್ನಲಾಗಿದೆ. ಈ ಸಂದರ್ಭದಲ್ಲಿ ಐದು ತಲೆಬುರುಡೆ, 113 ಮೂಳೆಗಳು ಲಭಿಸಿದ್ದು, ಸೌಜನ್ಯಳ ಮಾವ ವಿಠ್ಠಲ ಗೌಡ ಅವರು ನೀಡಿದ ಹೇಳಿಕೆ ನಿಜವಿರಬಹುದೆಂಬ ಅನುಮಾನಗಳು ವ್ಯಕ್ತವಾಗಿವೆ. ಅಲ್ಲದೆ ಪಾಯಿಂಟ್ 11ರ ಸುತ್ತಮುತ್ತ ನೆಲದ ಮೇಲೆ ಮಾನವನ ಮೂಳೆಯೊಂದಿಗೆ ಬಟ್ಟೆಗಳು ಸಹ ಕಂಡುಬಂದಿದೆ. ಇದೀಗ ಲಭ್ಯವಾಗಿರುವ ಮೂಳೆಗಳನ್ನು ಪೈಪ್ ಗಳಲ್ಲಿ ಸಂಗ್ರಹಿಸಿ, ಪರೀಕ್ಷೆಗೆ ಒಳಪಡಿಸಲು ಮಣ್ಣಿನ ಮಾದರಿಯನ್ನು ತೆಗೆದುಕೊಳ್ಳಲಾಗಿದೆ ಎನ್ನುವ ಸಂಗತಿ ತಿಳಿದುಬಂದಿದೆ.
* ಮಂಗಳೂರು: ರಸ್ತೆ ಅಪಘಾತದಲ್ಲಿ ಇಂಜಿನಿಯರ್ ಸಾವು
ಮಂಗಳೂರು: ಬಾರೆಬೈಲು ನಿವಾಸಿ ರಾಮಚಂದ್ರ ಎನ್ನುವವರ ಪುತ್ರ ಕೌಶಿಕ್ ಎನ್ನುವ ಇಂಜಿನಿಯರ್ ಯುವಕನು ಬುಧವಾರ ಮಧ್ಯಾಹ್ನ ಬುಲೆಟ್ ಬೈಕ್ ನಲ್ಲಿ ಹೋಗುತ್ತಿದ್ದಾಗ, ಆಟೊವೊಂದು ಢಿಕ್ಕಿ ಹೊಡೆದುದರ ಪರಿಣಾಮವಾಗಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ, ವಿಮಾನ ನಿಲ್ದಾಣ ರಸ್ತೆಯ ಯೆಯ್ಯಾಡಿ ಜಂಕ್ಷನ್ ನಲ್ಲಿ ನಡೆದಿದೆ.ಢಿಕ್ಕಿ ಹೊಡೆದ ತೀವ್ರತೆಗೆ ಕೌಶಿಕ್ ಬೈಕ್ ನಿಂದ ರಸ್ತೆಗೆ ಎಸೆಯಲ್ಪಟ್ಟಿದ್ದರಿಂದ, ತಲೆಗೆ ಗಂಭೀರವಾದ ಗಾಯಗಳಾಗಿ ಮೃತಪಟ್ಟ ಎನ್ನಲಾಗಿದೆ. ರಾಮಚಂದ್ರ ಅವರು ವಿಜಯವಾಣಿ ಪತ್ರಿಕೆಯ ಏಜೆಂಟ್ ಆಗಿದ್ದು, ಕೌಶಿಕ್ ಕೂಡ ಇಂಜಿನಿಯರ್ ವೃತ್ತಿಯ ಜೊತೆಗೆ, ಮನೆಗಳಿಗೆ ಹಾಲು ಮತ್ತು ಪತ್ರಿಕೆ ಹಾಕುವ ಕಾರ್ಯವನ್ನು ನಿರ್ವಹಿಸುತ್ತಿದ್ದರು ಎನ್ನಲಾಗಿದೆ. ಅಪಘಾತಕ್ಕೆ ಸಂಬಂಧಿಸಿದಂತೆ ಕದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಕುಂದಾಪುರ: ಇಸ್ಪೀಟ್ ಅಡ್ಡೆ ಮೇಲೆ ದಾಳಿ
ಕುಂದಾಪುರ: ಅಕ್ರಮವಾಗಿ ಇಸ್ಪೀಟ್ ಆಟ ನಡೆಸುತ್ತಿದ್ದ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಗ್ರಾಮಾಂತರ ಪೊಲೀಸ್ ಠಾಣೆಯ ಉಪನಿರೀಕ್ಷಕಿಯಾದ ಚಂದ್ರಕಲಾ ಪತ್ತಾರ್ ಮತ್ತು ಪೊಲೀಸರು ದಾಳಿ ನಡೆಸಿದ ಘಟನೆ, ಗುಲ್ವಾಡಿ ಗ್ರಾಮದ ಅರೆಕಲ್ಲು ಹುಣಸೆ ಮನೆಯಲ್ಲಿ ನಡೆದಿದೆ. ಕಾರ್ಕಳದ ಸಮರ್ಥ್, ತಗ್ಗರ್ಸೆಯ ಪ್ರವೀಣ್, ಮಂಗಳೂರಿನ ಪ್ರದೀಪ್ ಮತ್ತು ಗುಲ್ವಾಡಿಯ ನಿಸಾರ್ ಶೇಖ್ ಅವರನ್ನು ಬಂಧಿಸಿದ್ದು, ಉಳಿದ ಆರೋಪಿಗಳು ಪರಾರಿಯಾಗಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಈ ಸಂದರ್ಭದಲ್ಲಿ ಬಂಧಿತ ಆರೋಪಿಗಳ ಬಳಿ ಇದ್ದ 11.620 ನಗದು ಹಣ, ನಾಲ್ಕು ಮೊಬೈಲ್ ಮತ್ತು ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ.
* ಉಡುಪಿ: ರಂಗಭೂಮಿ ಕಲಾವಿದ ಗೋಪಾಲಣ್ಣ ಇನ್ನಿಲ್ಲ
ಉಡುಪಿ: ಭಾರತೀಯ ಜೀವವಿಮಾ ನಿಗಮದ ಉದ್ಯೋಗಿಯಾಗಿದ್ದ, ರಂಗಭೂಮಿ ಕಲಾವಿದರಾಗಿ ತಮ್ಮನ್ನು ತೊಡಗಿಸಿಕೊಂಡ ಗೋಪಾಲಣ್ಣ ಅವರು ಗುರುವಾರ ಬೆಳಿಗ್ಗೆ ಅನಾರೋಗ್ಯದಿಂದ ನಿಧನರಾದರು. 1990ರಲ್ಲಿ ರಂಗಭೂಮಿ ಸಂಸ್ಥೆಯ ಸದಸ್ಯರಾಗಿ, 1995 ರಿಂದ 2000ದ ವರೆಗೆ ಆಡಳಿತ ಮಂಡಳಿಯ ಸದಸ್ಯರಾಗಿ, ಬಳಿಕ ಇತ್ತೀಚಿನವರೆಗೂ ಆಡಳಿತ ಮಂಡಳಿಯ ಗೌರವ ಸಲಹಾ ಸಮಿತಿಯ ಸದಸ್ಯರಾಗಿ ಸೇವೆಯನ್ನು ಸಲ್ಲಿಸಿದ್ದರು. ಅಲ್ಲದೆ ತುಳುಕೂಟ, ಯಕ್ಷಗಾನ ಕಲಾರಂಗ ಹಾಗೂ ಇತರೆ ಸಂಸ್ಕೃತಿಕ ಸಂಸ್ಥೆಗಳ ಅವಿಭಾಜ್ಯ ಅಂಗವಾಗಿದ್ದರು. ಮೃತರ ಅಂತಿಮ ವಿಧಿ ವಿಧಾನಗಳು ಬ್ರಹ್ಮಗಿರಿಯ ಬಾಲ ಭವನದ ರಾಮಣ್ಣ ಶೆಟ್ಟಿ ಕಾಂಪೌಂಡ್ ನಲ್ಲಿರುವ ಅವರ ಸ್ವಗೃಹದಲ್ಲಿ ನೆರವೇರಿತು ಎನ್ನುವ ಮಾಹಿತಿ ಮೂಲಗಳಿಂದ ತಿಳಿದುಬಂದಿದೆ.
* ಬಂಟ್ವಾಳ: ದುಬಾರಿ ಬೆಲೆಯ ನಾಯಿಯನ್ನು ಕೊಂದ ನೆರೆಮನೆಯವರು.
ಬಂಟ್ವಾಳ: ಡೋಲ್ಫಿ ಡಿಸೋಜ ಎನ್ನುವವರಿಗೆ ಸೇರಿದ್ದ, ಸಾಕು ನಾಯಿಯೊಂದನ್ನು ಕೊಂದ ಘಟನೆ ಕಳ್ಳಿಗೆ ಗ್ರಾಮದ ನೆತ್ತರಕೆರೆ ಎನ್ನುವಲ್ಲಿ ಗುರುವಾರ ನಡೆದಿದೆ. ಬುಧವಾರದಿಂದ ಕಾಣೆಯಾಗಿದ್ದ ನಾಯಿಯನ್ನು ಡಿಸೋಜಾ ಅವರು ಹುಡುಕುತ್ತಿದ್ದರು, ಆದರೆ ಗುರುವಾರ ಬೆಳಿಗ್ಗೆ ನೋಡಿದಾಗ ಅದನ್ನು ಕೊಂದು, ಹೂತು ಹಾಕಿರುವುದು ಬೆಳಕಿಗೆ ಬಂದಿದೆ. ಪರಿಶೀಲನೆ ನಡೆಸಿದಾಗ ನೆರೆಮನೆಯವರು ದೊಣ್ಣೆಯಿಂದ ಹೊಡೆದು, ಹಲ್ಲೆ ಮಾಡಿ ಕೊಂದು, ಹೂತು ಹಾಕಿರುವ ವಿಚಾರ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಡೋಲ್ಫಿ ಡಿಸೋಜಾ ಅವರು ನೆರೆಮನೆಯವರಾದ ಯತಿನ್ ಪೂಜಾರಿ ಮತ್ತು ಯತೀಶ್ ಪೂಜಾರಿ ವಿರುದ್ಧ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
* ಭಟ್ಕಳ: ಕಳೆದ ಕೆಲವು ದಿನಗಳ ಹಿಂದೆ ಉಪವಲಯದ ಅರಣ್ಯಾಧಿಕಾರಿಗಳಾದ ಮಾರುತಿ ಸೊರಗಾಂವಿ ಅವರು ಮುಗ್ಗುಂ ಕಾಲೋನಿಯ ಗುಡ್ಡದ ಅರಣ್ಯ ಪ್ರದೇಶವೊಂದರಲ್ಲಿ ಜಾನುವಾರುಗಳನ್ನು ಅಕ್ರಮವಾಗಿ ಕಟಾವು ಮಾಡಿ, ಚರ್ಮ ಮತ್ತು ಎಲುಬುಗಳು ಸೇರಿದಂತೆ ಮೂಳೆಗಳನ್ನು ಸಹ ಅರಣ್ಯ ಪ್ರದೇಶದಲ್ಲಿ ರಾಶಿ ಹಾಕಿದ್ದಾರೆ ಎಂದು ದೂರು ನೀಡಿದ್ದರು. ಈ ಹಿನ್ನೆಲೆಯಲ್ಲಿ ಕರ್ನಾಟಕ ಗೋ ಹತ್ಯೆ ತಡೆ ಮತ್ತು ಜಾನುವಾರು ಸಂರಕ್ಷಣಾ ಕಾಯಿದೆ 2020ರ ಕಾಲಂ 4, 12 ಸೇರಿದಂತೆ ಹಲವು ವಿಧಿಗಳ ಅಡಿಯಲ್ಲಿ ಕಾನೂನು ಕ್ರಮ ಕೈಗೊಳ್ಳಲಾಯಿತು. ಇದಕ್ಕೆ ಸಂಬಂಧಿಸಿದಂತೆ ಬುಧವಾರದಂದು ಡಿವೈಎಸ್ ಪಿ ಮಹೇಶ್ ಅವರ ಮಾರ್ಗದರ್ಶನದಲ್ಲಿ, ಪಿಐ ದಿವಾಕರ್ ನೇತೃತ್ವದಲ್ಲಿ ಪಿಎಸ್ಐ ನವೀನ್ ನಾಯ್ಕ, ಪಿಎಸ್ಐ ತಿಮ್ಮಪ್ಪ, ಠಾಣೆಯ ಸಿಬ್ಬಂದಿಗಳು ಹಾಗೂ ಜಿಲ್ಲಾ ಪೊಲೀಸ್ ಕಛೇರಿಯ ತಾಂತ್ರಿಕ ವಿಭಾಗದ ಸಿಬ್ಬಂದಿಗಳು, ಅಕ್ರಮ ಚಟುವಟಿಕೆಗಳ ಆರೋಪಿಗಳಾದ ಮೊಹಮ್ಮದ್ ಸಮಾನ್, ಮೊಹಮ್ಮದ್ ರಾಹೀನ್ ಅವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಸಂದರ್ಭದಲ್ಲಿ ಆರೋಪಿಗಳು ಕೃತ್ಯಕ್ಕೆ ಬಳಸಿದ ವಾಹನಗಳು ಮತ್ತು ಸಲಕರಣೆಗಳನ್ನು ವಶಪಡಿಸಿಕೊಂಡಿದ್ದಾರೆ.
•ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ಅಪಘಾತ
ಅಂಕೋಲಾ: ಬಸ್ ಮತ್ತು ಟ್ಯಾಂಕರ್ ನಡುವೆ ಭೀಕರ ರೀತಿಯ ಅಪಘಾತ ಸಂಭವಿಸಿದ ಘಟನೆ, ರಾಷ್ಟ್ರೀಯ ಹೆದ್ದಾರಿ 66ರ ಬಳಿ ನಡೆದಿದೆ. ಇದರ ಪರಿಣಾಮವಾಗಿ ವಿಜಯಪುರ ಮೂಲದ ಮುದ್ದೇಬಿಹಾಳ ಗ್ರಾಮದ ಟ್ಯಾಂಕರ್ ಚಾಲಕ ಶರಣಪ್ಪ ಸಂಗಪ್ಪ ಕೋಳೂರು ಮತ್ತು ಬಸ್ ಪ್ರಯಾಣಿಕ ಅಂಕೋಲಾ ತಾಲ್ಲೂಕಿನ ಕೇಣಿ ಗ್ರಾಮದ ಭಾಸ್ಕರ ಪಾಂಡುರಂಗ ಗಾಂವಕರ್ ಅವರು ಮೃತಪಟ್ಟಿದ್ದಾರೆ. ಬಸ್ ಚಾಲಕರಾದ ಕಮಲಾಕರ ಸಾತು ನಾಯ್ಕ, ನಿರ್ವಾಹಕ ನಾರಾಯಣ ನಾಯ್ಕ, ಪ್ರಯಾಣಿಕರಾದ ಶಿಕ್ಷಕಿಯಾದ ವೀಣಾ ನಾಯಕ,ಪ್ರಜ್ಞಾ ನಾಯ್ಕ, ಸಾವಿತ್ರಿ ಗೌಡ, ಶ್ರೀಧರ್, ರಾಧಾಕೃಷ್ಣ ನಾಯ್ಕ, ವಿದ್ಯಾರ್ಥಿಗಳಾದ ಸಾನ್ವಿ ನಾಯ್ಕ, ರಕ್ಷಾ ಬಾನಾವಳಿ, ಬೀರಪ್ಪ ನಾಯ್ಕ ಅವರು ಗಾಯಗೊಂಡಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ.