ಟಾಪ್ ನ್ಯೂಸ್ ಕರಾವಳಿ
ಧರ್ಮಸ್ಥಳ ಪ್ರಕರಣ: ಇನ್ನು ತನಿಖೆ ಪ್ರಗತಿಯಲ್ಲಿ…!
* ಬ್ರಹ್ಮಾವರ: ಪಿಗ್ಮಿ ಹಣ ದೋಚಿದ ಖದೀಮ
* ಉಡುಪಿ: ಸೆಟ್ ಆಫ್ ಬಾಕ್ಸ್ ಹೆಸರಿನಲ್ಲಿ ವಂಚನೆ
* ಬೆಳ್ತಂಗಡಿ: ಮುಂದುವರಿದ ಧರ್ಮಸ್ಥಳ ಪ್ರಕರಣದ ಪರಿಶೀಲನೆ
* ಪುತ್ತೂರು: ಕೋಮುಗಲಭೆ ಪ್ರಚೋದಿಸಿದ ವ್ಯಕ್ತಿಯ ಬಂಧನ
* ಬಂಟ್ವಾಳ: ಕೋಳಿ ಅಂಕದ ಮೇಲೆ ಪೊಲೀಸರ ದಾಳಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬ್ರಹ್ಮಾವರ: ಮೂರ್ತೆದಾರರ ಸಹಕಾರಿ ಸಂಘದಲ್ಲಿ, ಪಿಗ್ಮಿ ಸಂಗ್ರಹಕಾರರಾಗಿರುವ ಸುಭಾಷ್ ಎನ್ನುವವರು ಪಿಗ್ಮಿ ಸಂಗ್ರಹ ಮಾಡಿಕೊಂಡು ಬಂದು, ಕರ್ನಾಟಕ ಬ್ಯಾಂಕ್ ಸಮೀಪ ಬೈಕ್ ನಿಲ್ಲಿಸಿ ಕಾರ್ಯನಿಮಿತ್ತ ಹೋಗಿದ್ದಾಗ, ಕಳ್ಳರು ಬೈಕಿನ ಬಾಕ್ಸ್ ನಲ್ಲಿ ಬೀಗ ಹಾಕಿ ಇರಿಸಿದ್ದ, ಪಿಗ್ಮಿ ಸಂಗ್ರಹದ ಹಣವನ್ನು ಬೀಗ ಮುರಿದು ದೋಚಿದ್ದಾರೆ. ಬಾಕ್ಸ್ ನಲ್ಲಿ ಇದ್ದ ಪಿಗ್ಮಿ ಹಣ ಸುಮಾರು ಅರವತ್ತೈದು ಸಾವಿರ ಮತ್ತು ಕೆಲವು ದಾಖಲೆಗಳನ್ನು ಲಪಟಾಯಿಸಿದ್ದಾರೆ ಎಂದು ತಿಳಿದುಬಂದಿದೆ. ಈ ಘಟನೆಯು ಶಿವಳ್ಳಿ ಹೊಟೇಲ್ ಸಮೀಪ ನಡೆದಿದೆ ಎನ್ನಲಾಗಿದೆ. ಅದು ಕೂಡ ಹಗಲಲ್ಲೇ, ಜನರು ಓಡಾಡುವ ಸಂದರ್ಭದಲ್ಲಿ ನಡೆದಿರುವುದು ಜನರಲ್ಲಿ ಮತ್ತಷ್ಟು ಆತಂಕವನ್ನು ಸೃಷ್ಟಿಸಿದೆ. ಘಟನೆಗೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.
* ಉಡುಪಿ: ಸೆಟ್ ಆಫ್ ಬಾಕ್ಸ್ ಹೆಸರಿನಲ್ಲಿ ವಂಚನೆ
ಉಡುಪಿ:ಗುಜರಾತ್ ಮೂಲದ ಸಂಸ್ಥೆಯೊಂದು ಗ್ರಾಹಕರಿಗೆ ಉಚಿತ ಸೆಟ್ ಆಫ್ ಬಾಕ್ಸ್ ಜೊತೆಗೆ, ಮೂರು ತಿಂಗಳ ದರವನ್ನು ಉಚಿತವಾಗಿ ನೀಡುತ್ತಿರುವ ಯೋಜನೆಯನ್ನು ಜಾರಿಗೆ ತಂದಿದೆ. ಆದರೆ ಈ ಯಾವ ಸೌಲಭ್ಯವನ್ನು ಸ್ಥಳೀಯ ಕೇಬಲ್ ಆಪರೇಟರ್ ಗಳು ಗ್ರಾಹಕರಿಗೆ ನೀಡದೆ ವಂಚಿಸುತ್ತಿದ್ದಾರೆ ಎನ್ನಲಾಗಿದೆ. ಇವುಗಳ ಕುರಿತು ವಿಚಾರಿಸಿದಾಗ ಕೇಬಲ್ ಆಪರೇಟರ್ ಗಳು ಗ್ರಾಹಕರೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದಾರೆ ಎನ್ನುವ ಸಂಗತಿ ತಿಳಿದುಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಹಕರು ಒತ್ತಾಯ ಪಡಿಸಿದ್ದಾರೆ.
* ಬೆಳ್ತಂಗಡಿ: ಮುಂದುವರಿದ ಧರ್ಮಸ್ಥಳ ಪ್ರಕರಣ ಪರಿಶೀಲನೆ
ಬೆಳ್ತಂಗಡಿ: ಇದುವರೆಗೂ ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹನ್ನೆರಡರಲ್ಲಿ ಉತ್ಖನನ ನಡೆದಿದ್ದು, ಸುಮಾರು ಗಂಟೆಗಳ ಕಾಲ ಕಾರ್ಯವನ್ನು ಮುಂದುವರಿಸಿದರೂ ಯಾವುದೇ ಕಳೇಬರ ಕಂಡುಬಂದಿಲ್ಲ. ಹೀಗಾಗಿ ಹನ್ನೆರಡರಲ್ಲಿ ಕಳೇಬರ ಸಿಕ್ಕೆ ಸಿಗುತ್ತದೆ ಎನ್ನುವ ನಿರೀಕ್ಷೆಯು ಈ ಮೂಲಕ ಸುಳ್ಳಾಗಿದೆ. ಮಧ್ಯಾಹ್ನ ಊಟದ ವಿರಾಮದ ಮುಂಚೆಯೇ ಉತ್ಖನನ ಕಾರ್ಯವನ್ನು ನಡೆಸಲಾಗಿತ್ತು. ಮಧ್ಯಾಹ್ನದ ಬಳಿಕ ಮತ್ತೆ ಮಳೆ ಧಾರಾಕಾರವಾಗಿ ಪ್ರಾರಂಭಗೊಂಡ ಹಿನ್ನೆಲೆಯಲ್ಲಿ ಮತ್ತು ಯಾವುದೇ ಸುಳಿವು ದೊರಕದ ಕಾರಣ ನಿನ್ನೆಯ ದಿನ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಯಿತು.
* ಪುತ್ತೂರು: ಕೋಮುಗಲಭೆ ಪ್ರಚೋದಿಸಿದ ವ್ಯಕ್ತಿಯ ಬಂಧನ
ಪುತ್ತೂರು: ಫೇಸ್ ಬುಕ್ ಸಾಮಾಜಿಕ ಜಾಲತಾಣದಲ್ಲಿ ಸೌಹಾರ್ದತೆಗೆ ಧಕ್ಕೆಯನ್ನುಂಟು ಮಾಡುವ ಸಂದೇಶಗಳನ್ನು ರವಾನಿಸುತಿದ್ದ ಹಿನ್ನೆಲೆಯಲ್ಲಿ, ಅಬ್ದುಲ್ ಕೆ ಎನ್ನುವ ಹೆಸರಿನ ಖಾತೆಯನ್ನು ಹೊಂದಿರುವ ವ್ಯಕ್ತಿಯ ವಿರುದ್ಧ ಪೊಲೀಸರು ಸ್ವಯಂಪ್ರೇರಿತ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. 67/2025, ಕಾಲಂ 196 (1), 353(2), ಬಿಎನ್ಎಸ್ 2023ರ ಅನ್ವಯ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಸುತ್ತಿದ್ದಾರೆ
* ಬಂಟ್ವಾಳ: ಕೋಳಿ ಅಂಕದ ಮೇಲೆ ಪೊಲೀಸರ ದಾಳಿ
ಬಂಟ್ವಾಳ: ಸುಮಾರು ಹತ್ತು ಜನರು ಹಣವನ್ನು ಪಣವಾಗಿಟ್ಟು, ಕೋಳಿ ಅಂಕವನ್ನು ನಡೆಸುತ್ತಿರುವ ಮಾಹಿತಿ ಬಂದ ಹಿನ್ನೆಲೆಯಲ್ಲಿ, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಕೋಳಿ ಅಂಕದ ಮೇಲೆ ದಾಳಿ ನಡೆಸಿದ್ದಾರೆ. ಶಂಭೂರಿನ ಕಾಪಿಕಾಡಿನಲ್ಲಿ, ಅಕ್ರಮವಾಗಿ ಈ ಚಟುವಟಿಕೆ ನಡೆಯುತ್ತಿತ್ತು ಎನ್ನಲಾಗಿದೆ. ಅದರಲ್ಲಿ ಕೆಲವರು ಪೊಲೀಸರನ್ನು ಕಂಡು ಪರಾರಿಯಾಗಿದ್ದು, ಉಳಿದ ಆರೋಪಿಗಳಾದ ಲೋಕೇಶ್, ಸಂತೋಷ್, ಪುರುಷೋತ್ತಮ ಹಾಗೂ ಮೋಹನದಾಸ್ ಎನ್ನುವವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.