ಕಾರ್ಕಳ ಲಯನ್ಸ್ ಕ್ಲಬ್ ನಲ್ಲಿ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ಭೇಟಿ!
– ಸಭೆಯಲ್ಲಿ ಸಾಧಕರಿಗೆ ಗೌರವ ಸನ್ಮಾನ!
– ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆಯಾಗಿ ಬೆಳೆದು ನಿಂತ ಸಂಸ್ಥೆ ಅಂತಾರಾಷ್ಟ್ರೀಯ ಲಯನ್ಸ್ ಕ್ಲಬ್: ಜಿಲ್ಲಾ ಗವರ್ನರ್
– ಸಭೆಯ ಬಳಿಕ ಸ್ಥಳೀಯ ಮಕ್ಕಳಿಂದ ನಡೆದ ನೃತ್ಯ ಕಾರ್ಯಕ್ರಮದ ಝಲಕ್
NAMMUR EXPRESS NEWS
ಕಾರ್ಕಳ: ಕಟೀಲ್ ಇಂಟರ್ ನ್ಯಾಶನಲ್ ಹೊಟೇಲಿನಲ್ಲಿ ಮಾ. 11ರಂದು ಲಯನ್ಸ್ ಕ್ಲಬ್ ಕಾರ್ಕಳ ಅದ್ದೂರಿ ಸಭೆ ಜರುಗಿತು. ಸಭೆಗೆ ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ಅವರು ಅಧಿಕೃತ ಭೇಟಿ ನೀಡಿದ್ದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು 1917ರಲ್ಲಿ ಆರಂಭವಾದ ಅಂತರಾಷ್ಟ್ರೀಯ ಸೇವಾ ಸಂಸ್ಥೆ ಲಯನ್ಸ್ ಇಂದು ಅತಿ ದೊಡ್ಡ ಸ್ವಯಂ ಸೇವಾ ಸಂಸ್ಥೆಯಾಗಿ ಬೆಳೆದು ನಿಂತಿದೆ.
ಲಯನ್ಸ್ನ ಸೇವಾ ಕಾರ್ಯಗಳನ್ನು ವಿಶ್ವಸಂಸ್ಥೆ ಗುರುತಿಸಿ ಮನ್ನಣೆ ನೀಡಿದ್ದು, ಇಂತಹ ಪ್ರತಿಷ್ಠಿತ ಸಂಸ್ಥೆಯಲ್ಲಿ ನಾವೆಲ್ಲರೂ ಸೇರಿದ್ದೇವೆ ಎಂದು ಹೇಳಲು ಹೆಮ್ಮೆಯಾಗುತ್ತದೆ ಎಂದು ಜಿಲ್ಲಾ ಗವರ್ನರ್ ಮೊಹಮ್ಮದ್ ಹನೀಫ್ ತಿಳಿಸಿದರು.
ಲಯನ್ಸ್ ಕ್ಲಬ್ ಕಾರ್ಕಳ ಸಿಟಿಯ ಮೂಲಕ ಎಲ್ಲಾ ಸದಸ್ಯರ ಸಹಕಾರದಿಂದ ಹಲವಾರು ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಾ ಮಾನವೀಯತೆಯನ್ನು ಸಮಾಜದಲ್ಲಿ ಪಸರಿಸಲು ಒಗ್ಗಟ್ಟಾಗಿ ಸೇರಿ ಹಲವಾರು ಕ್ರಿಯಾ ಯೋಜನೆಗಳನ್ನು ರೂಪಿಸಿ ಕಟ್ಟಕಡೆಯ ವ್ಯಕ್ತಿಗೆ ಇದರ ಸಹಾಯ ದೊರಕಲಿ ಎಂಬುವುದೇ ಸಿಟಿ ಕ್ಲಬ್ ತಂಡದ ಆಶಯವಾಗಿದೆ.
ಅದೇ ರೀತಿ ಕಳೆದ ನಾಲ್ಕು ವರುಷಗಳಿಂದ ಲಯನ್ಸ್ ಸಂಸ್ಥೆಯಲ್ಲಿ ಭಾಗಿಯಾಗಿ ಇತ್ತೀಚೆಗೆ ಲಿಯೋ ಕ್ಲಬ್ ಕಾರ್ಕಳ ಕ್ರಿಯೇಟಿವ್ ಎಂಬ ಲಿಯೋ ಕ್ಲಬ್ನ್ನು ಜಿಲ್ಲೆಗೆ ನೀಡಿರುವುದು ಈ ತಂಡದ ಸಾಧನೆ ಎಂದು ಹನೀಫ್ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಹಿಳೆಯರು ಬಹಳಷ್ಟು ಮುಂದುವರಿದಿದ್ದಾರೆ. ಅಡುಗೆಮನೆ ಜೊತೆಗೆ, ಕಚೇರಿಯಲ್ಲಿಯೂ ತಮ್ಮ ಕರ್ತವ್ಯವನ್ನು ನಿರ್ವಹಿಸುತ್ತಿದ್ದಾರೆ. ಪುರುಷ ಪ್ರಧಾನ ಸಮಾಜದಲ್ಲಿ ಓರ್ವ ಮಹಿಳೆ ಲಯನ್ಸ್ನ ಚುಕ್ಕಾಣಿ ಹಿಡಿದು ಮುನ್ನಡೆಯುತ್ತಿರುವುದು, ಅದರೊಂದಿಗೆ ನಾಲ್ವರು ಸಮರ್ಥ ಮಹಿಳಾ ಸದಸ್ಯರನ್ನು ಸಂಸ್ಥೆಗೆ ಸೇರಿಸಿರುವುದು ಅಧ್ಯಕ್ಷೆ ಜ್ಯೋತಿ ರಮೇಶ್ ಅವರ ಸಾಧನೆಯಾಗಿದೆ ಎಂದು ಜಿಲ್ಲೆಯ ಪ್ರಥಮ ಉಪಜಿಲ್ಲಾ ಗವರ್ನರ್ ಸಪ್ನಾ ಸುರೇಶ್ ಹೇಳಿದರು.
ಸಭೆಯಲ್ಲಿ ಸಾಧಕರಿಗೆ ಗೌರವ ಸನ್ಮಾನ!
ರಾಜ್ಯಮಟ್ಟದ ಕುಸ್ತಿ ಮತ್ತು ಕರಾಟೆಪಟು ಕಾರ್ಕಳದ ಕ್ರೈಸ್ಟ್ಕಿಂಗ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಸಾನ್ವಿ ನಾಯಕ್ ಮತ್ತು 33 ವರುಷಗಳಿಂದ ಅಂಗನವಾಡಿ ಸಹಾಯಕಿಯಾಗಿ ಕರ್ತವ್ಯ ನಿಭಾಯಿಸಿದ ಕುಕ್ಕುಂದೂರು ಪರಪು ಅಂಗನವಾಡಿ ಕೇಂದ್ರದ ಲೀಲಾವತಿ ಪೂಜಾರಿ ಮತ್ತು ಸಾಣೂರು ಮುದ್ದಣ್ಣ ನಗರ ಅಂಗನವಾಡಿ ಕೇಂದ್ರದ ಪ್ರೇಮಾ ಪೂಜಾರಿ ಇವರನ್ನು ಗುರುತಿಸಿ ಗೌರವಿಸಲಾಯಿತು.
ಹಾಗೂ ವಿವಿಧ ಕ್ಲಬ್ ಗಳಿಂದ ಆಗಮಿಸಿದ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಈ ಸಭೆಯಲ್ಲಿ ಗೌರವಿಸಲಾಯಿತು.
2025-26ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಜನೆಗಾಗಿ ಮೂವರು ಪಿಯುಸಿ ವಿದ್ಯಾರ್ಥಿಗಳಿಗೆ ಸುರಕ್ಷಾ ಸೇವಾಶ್ರಮಕ್ಕೆ ದಾನಿಗಳ ಸಹಕಾರದೊಂದಿಗೆ ಸಹಾಯಧನವನ್ನು ವಿತರಣೆಯನ್ನು ಕಾರ್ಯಕ್ರಮದಲ್ಲಿ ಮಾಡಲಾಯಿತು. ಲಿಯೋ ಕ್ಲಬ್ ಅನ್ನು ಜಿಲ್ಲೆಗೆ ನೀಡಿರುವ ಲಯನ್ಸ್ ಸಿಟಿಯ ಅಧ್ಯಕ್ಷರನ್ನು ಮತ್ತು ಪದಾಧಿಕಾರಿಗಳನ್ನು ಜಿಲ್ಲಾ ಗವರ್ನರ್ ಸನ್ಮಾನಿಸಿದರು. ಸಭೆಯ ಅಧ್ಯಕ್ಷತೆಯನ್ನು ಕ್ಲಬ್ ಅಧ್ಯಕ್ಷೆ ಜ್ಯೋತಿ ರಮೇಶ್ ವಹಿಸಿದ್ದು, ಕೋಶಾಧಿಕಾರಿ ಟಿ. ಕೆ. ರಘುವೀರ್, ಕ್ಯಾಬಿನೆಟ್ ಕಾರ್ಯದರ್ಶಿ ಗಿರೀಶ್ ರಾವ್, ಎಲ್ಸಿಎಫ್ ಕೋ ಆರ್ಡಿನೇಟರ್ ಎಂಜೆಎಫ್ ಲಯನ್ ಹರಿಪ್ರಸಾದ್ ರೈ, ಪ್ರಾಂತೀಯ ಅಧ್ಯಕ್ಷ ಹರೀಶ್ ಬೆಳಂಜೆ, ವಲಯಾಧ್ಯಕ್ಷ ಶಾಕೀರ್ ಹುಸೈನ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಕಾರ್ಯದರ್ಶಿ ರಘುನಾಥ್ ಕೆ.ಎಸ್. ಕ್ಲಬಿನ ವರದಿಯನ್ನು ಮಂಡಿಸಿದರು. ಸಭೆಯ ಬಳಿಕ ನೃತ್ಯ ಕಾರ್ಯಕ್ರಮ ಸ್ಥಳೀಯ ಮಕ್ಕಳಿಂದ ಜರುಗಿತು.
