ಕರಾವಳಿ ಟಾಪ್ ನ್ಯೂಸ್!
ಹೆಬ್ರಿ: ಗಂಡನನ್ನೇ ಕತ್ತಿಯಲ್ಲಿ ಕಡಿದ ಹೆಂಡತಿ!
– ಗಂಡ ಹೆಂಡತಿ ಕುಡಿತದ ಜಗಳ ಕೊಲೆಯಲ್ಲಿ ಅಂತ್ಯ
– ಕಾಸರಗೋಡು: ರಿಕ್ಷಾ, ಕಾರು ಪರಸ್ಪರ ಢಿಕ್ಕಿ, ಚಾಲಕ ಸ್ಪಾಟ್ ಔಟ್
– ಶಿರ್ವ: ಸಿಗರೇಟಿಗೆ ಗಾಂಜಾ ಸೇರಿಸಿ ಸೇದುತ್ತಿದ್ದ ಯುವಕರು ಅರೆಸ್ಟ್!
– ಪುತ್ತೂರು: ಧಾರಾಕಾರ ಮಳೆ, ವಿದ್ಯುತ್ ಶಾಕ್ ಹೊಡೆದು ಮಹಿಳೆ ಮೃತ್ಯು
NAMMUR EXPRESS NEWS
ಹೆಬ್ರಿ: ಗಂಡ ಹೆಂಡತಿ ಕುಡಿತದ ಜಗಳ ಗಂಡನ ಕೊಲೆಯಲ್ಲಿ ಅಂತ್ಯಗೊಂಡ ಘಟನೆ ಏ. 30ರಂದು ಹೆಬ್ರಿಯ ನಾಲ್ಕೂರಿನ ಮುದ್ದೂರು ಪೇಟೆ ಸಮೀಪ ಮನೆಯಲ್ಲಿ ಸಂಭವಿಸಿದೆ.
ಕೊಲೆಯಾದ ವ್ಯಕ್ತಿಯನ್ನು ಗಣಪತಿ ನಾಯ್ಕ್ ಎಂದು ಗುರುತಿಸಲಾಗಿದೆ. ಇವರು ವಿಪರೀತ ಕುಡಿತದ ಚಟ ಹೊಂದಿದ್ದು ಪ್ರತಿನಿತ್ಯ ಕುಡಿದು ಬಂದು ಹೆಂಡತಿಯೊಂದಿಗೆ ಜಗಳವಾಡುತ್ತಿದ್ದರು.
ಅದೇ ರೀತಿ ಮೇ. 1ರಂದು ಮಧ್ಯಾಹ್ನ ಸುಮಾರು 2.30 ಗಂಟೆ ವೇಳೆಗೆ ಕುಡಿದು ಹೆಂಡತಿಯೊಂದಿಗೆ ಜಗಳವಾಡಿದ್ದು, ಜಗಳ ಅತಿರೇಕವಾಗಿ ಹೆಂಡತಿ ಕತ್ತಿಯಲ್ಲಿ ಕಡಿದಿದ್ದಾರೆ ಎಂದು ಹೇಳಲಾಗುತ್ತಿದೆ. ಪರಿಣಾಮವಾಗಿ ಗಂಡ ಗಣಪತಿ ನಾಯ್ಕ್ ಸಾವನಪ್ಪಿದ್ದಾರೆ ಎಂದು ತಿಳಿದು ಬಂದಿದೆ.
ಹೆಬ್ರಿ ಪೊಲೀಸರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗ ಬೇಕಿದೆ.
– ಕಾಸರಗೋಡು: ರಿಕ್ಷಾ, ಕಾರು ಪರಸ್ಪರ ಢಿಕ್ಕಿ, ಆಟೋ ಚಾಲಕ ಸ್ಪಾಟ್ ಔಟ್
ಕಾಸರಗೋಡು: ಆಟೋ ರಿಕ್ಷಾ ಮತ್ತು ಕಾರು ಪರಸ್ಪರ ಢಿಕ್ಕಿ ಹೊಡೆದು ಅಪಘಾತದ ರಭಸಕ್ಕೆ ರಿಕ್ಷಾ ಚಾಲಕನೋರ್ವ ಸಾವನ್ನಪ್ಪಿದ ಘಟನೆ ರಾಷ್ಟ್ರೀಯ ಹೆದ್ದಾರಿ 99ರ ಕಾಸರಗೋಡಿನ ಉಪ್ಪಳ ಗೇಟ್ ಸಮೀಪ ನಡೆದಿದೆ.
ಕಾಂಞಂಗಾಡ್ ನ ರಿಕ್ಷಾ ಚಾಲಕ ಮೋಹನ್ ಮೃತಪಟ್ಟ ದುರ್ದೈವಿಯಾಗಿದ್ದಾನೆ. ಢಿಕ್ಕಿ ಹೊಡೆದ ರಭಸಕ್ಕೆ ಕಾರು ಮತ್ತು ಆಟೋರಿಕ್ಷಾ ಸಂಪೂರ್ಣ ನಜ್ಜುಗುಜ್ಜಾಗಿದೆ.
ಕಾರಿನಲ್ಲಿದ್ದವರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಶಿರ್ವ: ಸಿಗರೇಟಿಗೆ ಗಾಂಜಾ ಸೇರಿಸಿ ಸೇದುತ್ತಿದ್ದ ಯುವಕರು ಅರೆಸ್ಟ್!
ಶಿರ್ವ: ಮಾದಕ ವಸ್ತುವಾದ ಗಾಂಜಾವನ್ನು ಸಿಗರೇಟ್ ನಲ್ಲಿ ಸೇರಿಸಿ ಸೇದುತ್ತಿದ್ದ ಯುವಕರನ್ನು ಶಿರ್ವದ ಬಂಟಕಲ್ಲು ಬಸ್ ನಿಲ್ದಾಣದ ಬಳಿ ಪತ್ತೆ ಹಚ್ಚಿದ ಘಟನೆ ನಡೆದಿದೆ.
ಶಿವಪ್ರಸಾದ್ ಮತ್ತು ಆಲ್ವಿನ್ ಶರೂನ್ ಡಿ ಅಲ್ಮೇಡ ಅವರನ್ನು ಶಿರ್ವ ಪೊಲೀಸ್ ಠಾಣಾಧಿಕಾರಿ ಮಂಜುನಾಥ ಮರಬದ ಅವರು ವಶಕ್ಕೆ ಪಡೆದಿದ್ದಾರೆ.
ಗಾಂಜಾ ಸೇದುತ್ತಿದ್ದ ಯುವಕರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದಾಗ ಮಾದಕ ವಸ್ತು ಗಾಂಜಾ ಸೇವನೆ ಮಾಡಿದ ಬಗ್ಗೆ ವೈದ್ಯಕೀಯ ವರದಿಯಲ್ಲಿ ಖಚಿತವಾಗಿದೆ. ಶಿರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
– ಪುತ್ತೂರು: ಧಾರಾಕಾರ ಮಳೆ, ವಿದ್ಯುತ್ ಶಾಕ್ ಹೊಡೆದು ಮಹಿಳೆ ಮೃತ್ಯು!
ಪುತ್ತೂರು: ದ.ಕ ಮತ್ತು ಉಡುಪಿ ಜಿಲ್ಲೆಯಲ್ಲಿ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದ್ದು ಅನೇಕ ಕಡೆ ಜನಜೀವನ ಅಸ್ತವ್ಯಸ್ತವಾಗಿದೆ. ಇದೀಗ ಮಹಿಳೆಯೋರ್ವರು ವಿದ್ಯುತ್ ಶಾಕ್ ನಿಂದ ಮೃತಪಟ್ಟ ಘಟನೆ ನಡೆದಿದೆ.
ದೇವಪ್ಪ ನಾಯ್ಕ ಅವರ ಪತ್ನಿ ಭಾಗೀರಥಿ ಮೃತ ದುರ್ದೈವಿ. ಏ. 30ರಂದು ಮಧ್ಯಾಹ್ನದ ವೇಳೆ ಮನೆಯ ಟೆರೇಸ್ ಮೇಲೆ ಹೋಗಿದ್ದ ಸಂದರ್ಭ ಇವರು ಪಂಪ್ ಗೆ ಅಳವಡಿಸಿದ್ದ ವಯರ್ ಮೇಲೆ ತಪ್ಪಿ ಕಾಲಿಟ್ಟಿದ್ದಾರೆ.
ಆ ಸಂದರ್ಭ ವಿದ್ಯುತ್ ಸ್ಪರ್ಶಿಸಿದ್ದು ಇವರ ಸಾವಿಗೆ ನಿಖರ ಕಾರಣ ತಿಳಿದುಬಂದಿಲ್ಲ. ಮೃತರು ಗಂಡ ಮತ್ತು ಮಕ್ಕಳನ್ನು ಅಗಲಿದ್ದಾರೆ.