Categories
ಕರಾವಳಿ

ಮಂಗಳೂರಿನಲ್ಲಿ ನೂರಾರು ಮೂಟೆ ರೇಷನ್ ಅಕ್ಕಿ ಅಕ್ರಮ ಸಂಗ್ರಹ!

ಕರಾವಳಿ ಟಾಪ್ ನ್ಯೂಸ್

ಮಂಗಳೂರಿನಲ್ಲಿ ನೂರಾರು ಮೂಟೆ ರೇಷನ್ ಅಕ್ಕಿ ಅಕ್ರಮ ಸಂಗ್ರಹ!
– ಪಾಲಿಶ್ ಮಾಡಿ ಬೇರೆ ಬ್ರ್ಯಾಂಡ್ ಹೆಸರಿನಲ್ಲಿ ಮಾರಾಟ

– ಮಂಗಳೂರು: ಕೊರಗಜ್ಜ ಗುಡಿಗೆ ಕೈಮುಗಿದು ಹುಂಡಿಯನ್ನೇ ಕದ್ದೊಯ್ದ ಖದೀಮ
– ಉಜಿರೆ: ನೂರಾರು ಹುಡುಗಿಯರ ವೀಡಿಯೋ ಪ್ರಕರಣ; ಆರೋಪಿಗೆ ಜಾಮೀನು
– ಸುಳ್ಯ: ಹೊಳೆಗೆ ಬಿದ್ದು ಮಹಿಳೆಯ ಸಾವು!

NAMMUR EXPRESS NEWS
ಮಂಗಳೂರು: ಬಡವರು ಮೂರು ಹೊತ್ತು ಉಪವಾಸ ಕೂರಬಾರದೆಂದು ಕರ್ನಾಟಕ ಕಾಂಗ್ರೆಸ್ ಸರ್ಕಾರ ಅನ್ನಭಾಗ್ಯ ಯೋಜನೆ ಜಾರಿಗೊಳಿಸಿದೆ. ಆದರೆ ಈ ಯೋಜನೆ ಮೂಲಕ ಸಿಗುವ ಅಕ್ಕಿ ಅನ್ಯರ ಪಾಲಾಗುತ್ತಿದೆ. ಇದಕ್ಕೆ ಸಾಕ್ಷಿಯೆನ್ನುವಂತೆ ದಕ್ಷಿಣಕನ್ನಡ ಜಿಲ್ಲೆಯ ಮಂಗಳೂರಿನ ಖಾಸಗಿ ಗೋಡೌನ್ ಒಂದರಲ್ಲಿ ನೂರಾರು ಮೂಟೆಗಳಲ್ಲಿ ರೇಷನ್ ಅಕ್ಕಿಯನ್ನು ಅಕ್ರಮವಾಗಿ ಸಂಗ್ರಹಿಸಿರುವುದು ಬೆಳಕಿಗೆ ಬಂದಿದೆ. ಮಂಗಳೂರು ನಗರದ ಬಂದರು ಸಮೀಪದ ಅಕ್ಕಿ ದಾಸ್ತಾನು ಗೋಡೌನ್​​ಗೆ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಸೂಚನೆಯಂತೆ ಸಹಾಯಕ ಆಯುಕ್ತ ಹರ್ಷವರ್ಧನ್ ಹಾಗೂ ಆಹಾರ ಇಲಾಖೆಯ ಉಪನಿರ್ದೇಶಕರು ದಾಳಿ ನಡೆಸಿದಾಗ ಈ ಅಕ್ರಮ ಬೆಳಕಿಗೆ ಬಂದಿದೆ.
ಉತ್ತರ ಕರ್ನಾಟಕ ಭಾಗದಿಂದ ಅನ್ನಭಾಗ್ಯದ ಅಕ್ಕಿ ತಂದು ಅಕ್ರಮವಾಗಿ ದಾಸ್ತಾನು ಇರಿಸಿರುವ ಆರೋಪ ಕೇಳಿಬಂದಿದ್ದು, ದಾಳಿ ಮಾಡಿದ ಅಧಿಕಾರಿಗಳು ಗೋಡೌನ್ ಸೀಜ್ ಮಾಡಿದ್ದಾರೆ. ಈ ಕುರಿತು ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕಿ ಅನಿತಾ ಮಾಹಿತಿ ನೀಡಿದ್ದಾರೆ.

– ಮಂಗಳೂರು: ಕೊರಗಜ್ಜ ಗುಡಿಯಲ್ಲಿ ಕೈಮುಗಿದು ಹುಂಡಿಯನ್ನೇ ಕದ್ದೊಯ್ದ ಖದೀಮ!

ಮಂಗಳೂರು: ನಗರದ ಮೇರಿಹಿಲ್‌ನಲ್ಲಿ ಕೊರಗಜ್ಜನ ಕಟ್ಟೆಗೆ ಬಂದ ಕಳ್ಳ ಕೊರಗಜ್ಜನಿಗೆ ಭಕ್ತಿಯಿಂದ ನಮಸ್ಕರಿಸಿ, ನಂತರ ಕಟ್ಟೆಗೆ ಒಂದು ಸುತ್ತು ಬಂದಿದ್ದಾನೆ. ಕಟ್ಟೆಯ ಗೇಟ್ ತೆರೆದು ಒಳಗೆ ಪ್ರವೇಶಿಸಿದ ಆತ ಏನನ್ನೋ ಬೇಡಿಕೊಂಡು, ಸುತ್ತಲೂ ಕಣ್ಣು ಹಾಯಿಸಿದ ಬಳಿಕ ಕಾಣಿಕೆ ಹುಂಡಿಯನ್ನು ಎತ್ತಿಕೊಂಡು ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ತಿಳಿದು ಬಂದಿದೆ.
ಕಳ್ಳನ ಕೈಚಳಕ ಸ್ಥಳೀಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಪೊಲೀಸರು ಇದೀಗ ಕಳ್ಳನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

– ಉಜಿರೆ: ನೂರಾರು ಹುಡುಗಿಯರ ವೀಡಿಯೋ ಪ್ರಕರಣ; ಆರೋಪಿಗೆ ಜಾಮೀನು!

ಮಂಗಳೂರು: ಬೆಳ್ತಂಗಡಿ ಕಾಲೇಜು ವಿದ್ಯಾರ್ಥಿ, ಕಬ್ಬಡಿ ಆಟಗಾರನ ಮೊಬೈಲ್‌ನಲ್ಲಿ ಅಶ್ಲೀಲ ವೀಡಿಯೋ ಪತ್ತೆಯಾಗಿರುವ ಪ್ರಕರಣಕ್ಕೆ ಸಂಬಂಧಪಟ್ಟಂತೆ ಕಾರ್ಕಳ ಮೂಲದ ಸಯ್ಯದ್‌ ವಿರುದ್ಧ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು, ಆರೋಪಿಗೆ ಜಾಮೀನು ಮಂಜೂರಾಗಿದೆ.
ಈತನನ್ನು ಪೋಲಿಸರಿಗೆ ಒಪ್ಪಿಸಿದ ಮಹೇಶ್‌ ಶೆಟ್ಟಿ ತಿಮರೋಡಿ ನೇತೃತ್ವದ ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಮನೋಜ್‌ ಮತ್ತು ಪ್ರಜ್ವಲ್‌ ಗೌಡ ಮೇಲೆ ಎಫ್‌ಐಆರ್‌ ದಾಖಲಾಗಿದೆ. ಸಯ್ಯದ್‌ ಹಲ್ಲೆ ವಿರುದ್ಧ ದೂರು ನೀಡಿರುವ ಕುರಿತು ವರದಿಯಾಗಿದೆ.
ದ.ಕ. ಎಸ್ಪಿ ಯತೀಶ್‌ ಅವರು, ಈ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಕೊಡಗು ಜಿಲ್ಲೆಯ ಸೋಮವಾರ ಪೇಟೆ ಮೂಲದ ಉಜಿರೆ ಕಾಲೇಜಿನ ಪಿಯುಸಿ ವಿದ್ಯಾರ್ಥಿನಿ ದೂರು ನೀಡಿದ್ದಾಳೆ ಎಂದು ಹೇಳಿದ್ದಾರೆ. ಆರೋಪಿ ಸಯ್ಯದ್‌ ಉಜಿರೆ ಖಾಸಗಿ ಕಾಲೇಜಿನಲ್ಲಿ ವಿದ್ಯಾರ್ಥಿನಿಗೆ ವಾಲಿಬಾಲ್‌ ಕೋಚ್‌ ಆಗಿದ್ದ. ಅಲ್ಲಿ ಪರಿಚಯವಾಗಿ ನಂಬರ್‌ ಪಡೆದುಕೊಂಡು, ಫೋಟೋಗಳನ್ನು ಕಳುಹಿಸುವಂತೆ ಒತ್ತಾಯ ಮಾಡುತ್ತಿದ್ದ. ಲೈಂಗಿಕ ದೌರ್ಜನ್ಯ ಮಾಡಲು ಹಿಂಬಾಲಿಸಿ ಬರುತ್ತಿದ್ದ ಎಂದು ದೂರು ನೀಡಿದ್ದಾರೆ. ಈ ಕುರಿತು ಬೆಳ್ತಂಗಡಿ ಪೊಲೀಸ್‌ ಠಾಣೆಯಲ್ಲಿ ಪೋಕ್ಸೋ ಕೇಸ್‌ ದಾಖಲು ಮಾಡಿದ್ದೇವೆ ಎಂದರು.
ಕಾರ್ಕಳ ಮೂಲದ ನಿವಾಸಿ ವಾಲಿಬಾಲ್‌ ಕೋಚ್‌ ಆಗಿದ್ದ ಸಯ್ಯದ್‌ ಕಾಲೇಜಿನ ಸ್ಪೋರ್ಟ್ಸ್‌ ವಿದ್ಯಾರ್ಥಿಗಳಿಗೆ ವಾಲಿಬಾಲ್‌ ಟ್ರೈನಿಂಗ್‌ ನೀಡುತ್ತಿದ್ದ.

– ಸುಳ್ಯ: ಹೊಳೆಗೆ ಬಿದ್ದು ಮಹಿಳೆಯ ಸಾವು!

ಸುಳ್ಯ: ಹೊಳೆಗೆ ಬಿದ್ದು ಮಹಿಳೆ ಮೃತಪಟ್ಟ ಘಟನೆ ಸಂಪಾಜೆ ಗ್ರಾಮದ ಕೊಯನಾಡಿನಲ್ಲಿ ನಡೆದಿದೆ.
ಮೃತಪಟ್ಟ ಮಹಿಳೆಯನ್ನು ದಿ. ಅಣ್ಣು ದಾಸ್ ಅವರ ಧರ್ಮ ಪತ್ನಿ ಯಶೋದ ದಾಸ್ (60 ವ.) ಎಂದು ಗುರುತಿಸಲಾಗಿದೆ. ಅವರಿಗೆ ಕೆಲವು ವರ್ಷಗಳ ಹಿಂದೆ ಸ್ಟೋಕ್ ಮತ್ತು ಹೃದಯ ಸಂಬಂಧಿತ ಕಾಯಿಲೆ ಇದ್ದು, ಮಂಗಳೂರಿನ ಯೂನಿಟಿ ಆಸ್ಪತ್ರೆಯಲ್ಲಿ ಆಪರೇಶನ್ ಮಾಡಿ ಚಿಕಿತ್ಸೆ ಪಡೆಯುತ್ತಿದ್ದರು. ಬಳಿಕ ಮನೆಗೆ ಕರೆದುಕೊಂಡು ಬರಲಾಗಿತ್ತು.
ತನ್ನ ಮಗನಾದ ಉಮೇಶ್ ಅವರು ಪೇಟೆಗೆ ಹೋಗಿ ವಾಪಸು ಬಂದಾಗ ಮಹಿಳೆ ಮನೆಯಲ್ಲಿ ಇರಲಿಲ್ಲ. ಕೂಡಲೇ ಅಕ್ಕ ಪಕ್ಕದವರ ಮನೆಯವರಿಗೆ ವಿಷಯವನ್ನು ತಿಳಿಸಿದ್ದು, ಹುಡುಕಾಟದಲ್ಲಿ ಮನೆಯ ಪಕ್ಕದ ಹೊಳೆಯಲ್ಲಿ ಪತ್ತೆಯಾಗಿದೆ ಎಂದು ತಿಳಿದು ಬಂದಿದೆ. ಘಟನಾ ಸ್ಥಳಕ್ಕೆ ಸಂಪಾಜೆ ಪೋಲಿಸರು ಆಗಮಿಸಿ ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.