Categories
ಕರಾವಳಿ

ಡೇಂಜರ್ ಝೋನಿನಲ್ಲಿದೆ ಮಂಗಳೂರು!

ಕರಾವಳಿ ಟಾಪ್ ನ್ಯೂಸ್!

ಡೇಂಜರ್ ಝೋನಿನಲ್ಲಿದೆ ಮಂಗಳೂರು!

– ಮಂಗಳೂರು: ಈ ಬಾರಿಯೂ ಈಜುಕೊಳವಾದ ಪಂಪ್ವೆಲ್
– ಮಂಗಳೂರು: ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಏರಿಕೆ
– ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ: NDRF ತಂಡ ಪುತ್ತೂರಿಗೆ ಆಗಮನ!
– ಪುತ್ತೂರು: ನಗರಸಭೆಯ ಆವರಣ ಗೋಡೆ ಕುಸಿತ: ಮೂರು ಆಟೋಗೆ ಹಾನಿ
– ಬೆಳ್ತಂಗಡಿ: ಮುಗೇರಡ್ಕ ರಸ್ತೆಯಲ್ಲಿ ಅಪಾಯದ ಗುಂಡಿ!

NAMMUR EXPRESS NEWS
ಮಂಗಳೂರು: ಮಂಗಳೂರಿನಲ್ಲಿ ನಿರಂತರವಾಗಿ ಧಾರಾಕಾರ ಮಳೆ ಸುರಿಯುತ್ತಿದ್ದು ಪಂಪ್ವೆಲ್ ಸೇತುವೆಯ ಕೆಳಭಾಗ ಈ ವರ್ಷವೂ ಸಂಪೂರ್ಣವಾಗಿ ಜಲಾವೃತಗೊಂಡಿದೆ. ಸ್ವಿಮ್ಮಿಂಗ್ ಪೂಲ್ ನಂತಾದ ಪಂಪ್ ವೆಲಿನಲ್ಲಿ ವಾಹನ ಸವಾರರು ಸಂಚರಿಸಲು ಪರದಾಡುತ್ತಿದ್ದಾರೆ.
ಇಲ್ಲಿ ಪ್ರವಾಹ ಪರಿಸ್ಥಿತಿ ಎದುರಾದ ಹಿನ್ನೆಲೆ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ರಾಜಕಾಲುವೆಯಲ್ಲಿ ಅಧಿಕ ಪ್ರಮಾಣದಲ್ಲಿ ನೀರು ತುಂಬಿ ಹರಿಯುತ್ತಿದೆ.
ಇದೀಗ ನಿರಂತರವಾಗಿ ಮಳೆ ನೀರು ಹರಿಯುತ್ತಿದ್ದು ಮುಂದೆ ಸಾರ್ವಜನಿಕರು ಯಾವ ರೀತಿಯ ಪರಿಸ್ಥಿತಿಯನ್ನು ಎದುರಿಸಬೇಕಾಗಿ ಬರುತ್ತದೋ ಎಂಬ ಆತಂಕ ಕೂಡಾ ಸೃಷ್ಟಿಯಾಗಿದೆ. ಇಲ್ಲಿ ದಿನನಿತ್ಯ ಟ್ರಾಫಿಕ್ ಜಾಂ ಸಮಸ್ಯೆ ಕೂಡಾ ಕಂಡುಬರುತ್ತಿದೆ.

– ಮಂಗಳೂರು: ನೇತ್ರಾವತಿ ನದಿ ನೀರಿನ ಮಟ್ಟದಲ್ಲೂ ಏರಿಕೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ಜಿಲ್ಲೆಯ ಹಲವು ಕಡೆ ಮರಗಳು ಉರುಳಿ ಬಿದ್ದಿದೆ. ಇದೇ ಸಂದರ್ಭದಲ್ಲಿ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಹೆಚ್ಚಿದ್ದು, ಧರ್ಮಸ್ಥಳ ಭಾಗದಲ್ಲಿ ನೀರು ತುಂಬಿ ಹರಿಯುತ್ತಿದೆ. ಕಿಂಡಿ ಅಣೆಕಟ್ಟುಗಳಲ್ಲಿ ನೀರು ತುಂಬಿದ್ದು, ಹಲಗೆಗಳನ್ನು ಎತ್ತಲಾಗಿದೆ.
ಇನ್ನೊಂದು ಕಡೆ ಹವಾಮಾನ ಇಲಾಖೆ ಮೀನುಗಾರರು ಕಡಲಿಗೆ ಇಳಿಯದಂತೆ ಸೂಚನೆ ನೀಡಿದೆ. ರಾಜ್ಯಕ್ಕೆ ವಾಡಿಕೆಗಿಂತ ಮೊದಲೇ ಮುಂಗಾರು ಪ್ರವೇಶ ಆಗಿದೆ. ಜೂನ್‌ 1ರಂದು ಮುಂಗಾರು ಆರಂಭವಾಗುವುದು ಸಾಮಾನ್ಯ. ಆದರೆ ಈ ಬಾರಿ ಎಂಟು ದಿನ ಮೊದಲೇ ಕೇರಳದ ಮೂಲಕ ಪ್ರವೇಶ ಮಾಡಿದೆ. ಇದೊಂದು ಅಪರೂಪದ ಪ್ರಕ್ರಿಯೆ ಎನ್ನಬಹುದು. 2009 ರಲ್ಲಿ ಜುಲೈ 23 ರಂದು ರಾಜ್ಯಕ್ಕೆ ಮುಂಗಾರು ಪ್ರವೇಶ ಮಾಡಿತ್ತು. ಕಳೆದ ಬಾರಿ ಮೇ 30 ರಂದು, 2023 ರಲ್ಲಿ ಜೂ.8 ಕ್ಕೆ ಮುಂಗಾರು ಮಳೆ ಪ್ರವೇಶ ಮಾಡಿತ್ತು ಎಂದು ಹವಾಮಾನ ಇಲಾಖೆ ಹೇಳಿದೆ.

– ಕುಕ್ಕೆ ಸುಬ್ರಹ್ಮಣ್ಯ ಸ್ನಾನಘಟ್ಟ ಮುಳುಗಡೆ: NDRF ತಂಡ ಪುತ್ತೂರಿಗೆ ಆಗಮನ!

ಭಾರೀ ಮಳೆಯಾಗುತ್ತಿರುವ ಕಾರಣ ಪ್ರಸಿದ್ಧ ನಾಗಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟ ಮುಳುಗಡೆಯಾಗಿದೆ. ಕುಮಾರಧಾರಾ ನದಿ ತುಂಬಿ ಹರಿಯುತ್ತಿದ್ದು ಭಕ್ತಾಧಿಗಳಿಗೆ ಸ್ನಾನಘಟ್ಟದ ಬಳಿ ಇಳಿಯದಂತೆ ಸೂಚಿಸಲಾಗಿದೆ.
ಭಕ್ತರು ನದಿ ನೀರನ್ನು ತಲೆಗೆ ಚಿಮುಕಿಸಲು ಅನುಮತಿ ನೀಡಲಾಗಿದೆ. ಸ್ನಾನಘಟ್ಟದ ಸುತ್ತ ಹಗ್ಗವನ್ನು ಕಟ್ಟಿ ಹೆಚ್ಚುವರಿ ಸಿಬ್ಬಂದಿಯನ್ನು ನೇಮಕ ಮಾಡಿದೆ. ಮಳೆ ಅಬ್ಬರದ ಕಾರಣ ಪುತ್ತೂರಿಗೆ 25 ಸಿಬ್ಬಂದಿಯ ಎನ್‌ಡಿಆರ್‌ಎಫ್‌ ಸಿಬ್ಬಂದಿ ಆಗಮಿಸಲಿದ್ದಾರೆ. ಎಲ್ಲಾ ಅಧಿಕಾರಿಗಳಿಗೆ ಸರ್ವ ಸನ್ನದ್ಧರಾಗಿರಲು ಸೂಚನೆಯನ್ನು ನೀಡಲಾಗಿದೆ.

– ಪುತ್ತೂರು: ನಗರಸಭೆಯ ಆವರಣ ಗೋಡೆ ಕುಸಿತ: ಮೂರು ಆಟೋಗೆ ಹಾನಿ

ಪುತ್ತೂರು: ಪುತ್ತೂರು ನಗರಸಭೆಯ ಕಾರ್ಯಾಲಯದ ಮುಂಭಾಗದಲ್ಲಿನ ಗ್ರಾಮ ಚಾವಡಿಯ ಹಿಂಬದಿಯ ಆವರಣಗೋಡೆ ಕುಸಿದು ಬಿದ್ದ ಘಟನೆ ನಡೆದಿದೆ.
ಈ ಘಟನೆಯಲ್ಲಿ ಮೂರು ಆರೋ ರಿಕ್ಷಾಗಳಿಗೆ ಹಾನಿಯಾಗಿದೆ. ಘಟನೆ ಸಂದರ್ಭ ಚಾಲಕರು ಸ್ಥಳದಲ್ಲಿ ಇರಲಿಲ್ಲ.
ನಗರಸಭೆಯಿಂದ ಇಂಗು ಗುಂಡಿಯನ್ನು ಆವರಣ ಗೋಡೆಯ ಬಳಿ ನಿರ್ಮಿಸಲಾಗಿತ್ತು. ಎಡಬಿಡದೆ ಸುರಿದ ಮಳೆಯಿಂದಾಗಿ ನೀರು ಇಂಗುಗುಂಡಿಯಲ್ಲಿ ತುಂಬಿ ಆವರಣ ಗೋಡೆ ಕುಸಿದಿದೆ ಎನ್ನಲಾಗಿದೆ. ಆವರಣ ಗೋಡೆ ಕುಸಿದ ಸಂದರ್ಭದಲ್ಲಿ ನಗರಸಭೆಯ ಪಕ್ಕದಲ್ಲಿದ್ದ ವಿದ್ಯುತ್‌ ಟ್ರಾನ್ಸ್‌ಫಾರ್ಮರ್‌ ಕಂಬವಾಲಿದೆ.
ನಗರಸಭೆಯ ಉಪಾದ್ಯಕ್ಷ, ಸದಸ್ಯರು ಪರಿಶೀಲನೆ ನಡೆಸಿದ್ದು, ರಸ್ತೆಗೆ ಬಿದ್ದ ಮಣ್ಣು, ಕಲ್ಲುಗಳನ್ನು ನಗರಸಭೆಯ ಪೌರ ಕಾರ್ಮಿಕರು ತೆರವು ಮಾಡಿದರು.

– ಬೆಳ್ತಂಗಡಿ: ಮುಗೇರಡ್ಕ ರಸ್ತೆಯಲ್ಲಿ ಅಪಾಯದ ಗುಂಡಿ!

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ಮುಗೇರಡ್ಕ ರಸ್ತೆಯಲ್ಲಿ ಗುಂಡಿಯೊಂದು ಉಂಟಾಗಿದೆ. ಇದು ಅಪಾಯಕಾರಿಯಾಗಿದ್ದು, ಸಾರ್ವಜನಿಕರು ಹಲವು ಭಾರಿ ಅಧಿಕಾರಿಗಳಿಗೆ ಗುಂಡಿ ಮುಚ್ಚಲು ತಿಳಿಸಿದರೂ, ಯಾವುದೆ ದುರಸ್ತಿ ಕಾರ್ಯ ನಡೆದಿಲ್ಲ.
ಪರಿಣಾಮ ಇಂದು ಒಂದೇ ದಿನ ಮೂರು ದ್ವಿಚಕ್ರ ವಾಹನಗಳು ಈ ಅಪಾಯಕಾರಿ ಗುಂಡಿಯಿಂದ ಸವಾರರಿಗೆ ಅಪಘಾತ ಸಂಭವಿಸಿ ಗಾಯಗಳಾಗಿದೆ. ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಸಾರ್ವಜನಿಕರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.