ಕರಾವಳಿ 5 ಟಾಪ್ ನ್ಯೂಸ್!
ಕರಾವಳಿಯ ರಾಷ್ಟ್ರಮಟ್ಟದ ಪ್ರೋ ಕಬಡ್ಡಿ ಪ್ಲೇಯರ್ ನಿಧನ!
– ಕುಂದಾಪುರ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳ್ಳತನ, ದೃಶ್ಯ ಸಿಸಿಟಿವಿಯಲ್ಲಿ ಸೆರೆ!
– ಉಡುಪಿ: ಕ್ರಿಕೆಟ್ ಬೆಟ್ಟಿಂಗ್: ಲಕ್ಷಾಂತರ ಮೌಲ್ಯದ ಸೊತ್ತು ಸಹಿತ ಮೂವರು ಆರೋಪಿಗಳು ವಶ!
– ಕುಂದಾಪುರ: ಸಂಗಮ ಬ್ರಿಡ್ಜ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
– ಉಡುಪಿ: ಮಹಿಳೆಗೆ ಅವಾಚ್ಯವಾಗಿ ನಿಂದಿಸಿ ಕಿರುಕುಳ, ಹಲ್ಲೆ!
NAMMUR EXPRESS NEWS
ಕಡಬ: ಕರಾವಳಿಯ ಹೆಸರಾಂತ ಆಟಗಾರ, ರಾಜ್ಯ ಮತ್ತು ರಾಷ್ಟ್ರಮಟ್ಟದ ಪ್ರೋ ಕಬಡ್ಡಿಯಲ್ಲಿ ಲಕ್ಷಾಂತರ ಅಭಿಮಾನಿಗಳ ಗಮನ ಸೆಳೆದ ಕಡಬದ ಯುವ ಆಟಗಾರ ಕೋಕಿಲಾನಂದ ನಿಧನ ಹೊಂದಿದ್ದಾರೆ.
ಬಡತನವಿದ್ದರೂ ಹೃದಯ ಶ್ರೀಮಂತಿಕೆ ಇದ್ದ ಇವರು ಕೆಲವು ಸಮಸ್ಯೆಗಳ ವಿರುದ್ಧ ಹೋರಾಟ ನಡೆಸಿ ಜೈಲಿಗೂ ಹೋಗಿ ಬಂದಿದ್ದರು. ಕಡಬ ನಿವಾಸಿಯಾಗಿದ್ದ ಇವರು ಅನಾರೋಗ್ಯದ ಕಾರಣದಿಂದ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ತಂದೆಗೆ ಹೃದಯದ ಖಾಯಿಲೆಯಿದ್ದು ತಾಯಿ ಕೂಡಾ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದಾರೆ. ಪತ್ನಿ ಪಂಚಾಯತಿನಲ್ಲಿ ಮೂರು ದಿನ ಕೆಲಸ ಮಾಡುತ್ತಿದ್ದು ದಂಪತಿಗೆ ಪುಟ್ಟ ಮಗು ಕೂಡಾ ಇದೆ. ಈ ಸಂದರ್ಭ ಕುಟುಂಬಕ್ಕೆ ಬೆನ್ನೆಲುಬಾಗ ಬೇಕಿದ್ದ ಕೋಕಿಲಾನಂದ ಅವರು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಇವರ ನಿಧನಕ್ಕೆ ಅನೇಕ ಕಬಡ್ಡಿ ಆಟಗಾರರು, ಬಂಧು-ಬಳಗ, ಸ್ನೇಹಿತರು ಸಂತಾಪವನ್ನು ಸೂಚಿಸಿದ್ದಾರೆ.
– ಕುಂದಾಪುರ: ರಸ್ತೆ ಬದಿ ನಿಲ್ಲಿಸಿದ್ದ ಬೈಕ್ ಕಳ್ಳತನ, ದೃಶ್ಯ ಸಿಸಿಟಿವಿಯಲ್ಲಿ ಸೆರೆ!
ಉಡುಪಿ: ಬೈಕ್ ಕದಿಯುವ ದೃಶ್ಯವೊಂದು ಸಿಸಿ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಉಡುಪಿ ಜಿಲ್ಲೆ, ಕುಂದಾಪುರ ತಾಲೂಕಿನ ರೈಲ್ವೆ ನಿಲ್ದಾಣದ ಪರಿಸರದಲ್ಲಿ ಈ ಘಟನೆ ನಡೆದಿದೆ.
ಏ. 24ರಂದು ಬೆಳಗ್ಗೆ ಯೋಗೀಶ್ ಪೂಜಾರಿ ಎಂಬವರು ತಮ್ಮ ಬೈಕನ್ನು ನಿಲ್ಲಿಸಿ ಕೆಲಸಕ್ಕೆ ಹೋಗಿದ್ದರು. ಸಂಜೆ ಕೆಲಸ ಮುಗಿಸಿ ವಾಪಸ್ ರೈಲ್ವೆ ನಿಲ್ದಾಣಕ್ಕೆ ಬಂದ ಸಂದರ್ಭ ಬೈಕ್ ಕಾಣೆಯಾಗಿದೆ. ಕೂಡಲೆ ರೈಲ್ವೆ ನಿಲ್ದಾಣದಲ್ಲಿ ಅಳವಡಿಸಲಾದ ಸಿಸಿ ಕ್ಯಾಮೆರಾಗಳ ದೃಶ್ಯಾವಳಿಗಳನ್ನು ಚೆಕ್ ಮಾಡಿದಾಗ, 11 ಗಂಟೆ ಸುಮಾರಿಗೆ ಇಬ್ಬರು ಅಪರಿಚಿತ ವ್ಯಕ್ತಿಗಳು ಬೈಕನ್ನು ಕದಿಯುವ ದೃಶ್ಯ ದಾಖಲಾಗಿದೆ.
ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬೈಕ್ ಕಳ್ಳರಿಗಾಗಿ ಪೊಲೀಸರು ಶೋಧ ಶುರು ಮಾಡಿದ್ದಾರೆ.
– ಉಡುಪಿ: ಕ್ರಿಕೆಟ್ ಬೆಟ್ಟಿಂಗ್: ಲಕ್ಷಾಂತರ ಮೌಲ್ಯದ ಸೊತ್ತು ಸಹಿತ ಮೂವರು ಆರೋಪಿಗಳು ವಶ!
ಉಡುಪಿ: ಕ್ರಿಕೆಟ್ ಬೆಟ್ಟಿಂಗ್ ಅಕ್ರಮ ದಂಧೆಯಲ್ಲಿ ತೊಡಗಿದ್ದ ಮೂವರು ಆರೋಪಿಗಳನ್ನು ಸೆನ್ ಪೊಲೀಸರು ಬಂಧಿಸಿದ್ದು, ಅವರಿಂದ ನಗದು, ಕಾರು ಮತ್ತು ಮೊಬೈಲ್ ಸೇರಿ ಒಟ್ಟು 12,16,700 ರೂ. ಮೊತ್ತದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಕುಂದಾಪುರ ಕೊರ್ಗಿಯ ಸಂದೀಪ್ (34), ಕುಂದಾಪುರ ಬೇಳೂರಿನ ಶ್ರೀರಾಜ್ (33) ಹಾಗೂ ಮೊಳಹಳ್ಳಿಯ ಮಧುಕರ್ (44) ಬಂಧಿತ ಆರೋಪಿಗಳು.
ಇವರು ಐಪಿಎಲ್ ಪಂದ್ಯಗಳ ಅಕ್ರಮವಾಗಿ ಬೆಟ್ಟಿಂಗ್ ದಂಧೆ ನಡೆಸುತ್ತಾ, ಇತರೇ ಬೇರೆ ಬೇರೆ ವ್ಯಕ್ತಿಗಳಿಗೆ ಕರೆ ಮಾಡಿ ಅವರವರ ತಂಡ ತಿಳಿಸಿ ಅವರಿಂದ ಹಣವನ್ನು ಸಂಗ್ರಹ ಮಾಡುತ್ತಾ ಅವರಿಗೆ ಅಕ್ರಮ ಬೆಟ್ಟಿಂಗ್ ಅಪ್ಲಿಕೇಶನ್‌ನ್ನು ಡೌನ್‌ಲೋಡ್ ಮಾಡಿಕೊಟ್ಟು ಅವರಿಂದ ಹಣವನ್ನು ಸಂಗ್ರಹಿಸುತಿದ್ದರೆನ್ನಲಾಗಿದೆ
ಇವರ ಬಳಿ ಸಾರ್ವಜನಿಕರಿಂದ ಅಕ್ರಮವಾಗಿ ಕ್ರಿಕೆಟ್ ಬೆಟ್ಟಿಂಗ್‌ನಿಂದ ಸಂಗ್ರಹಿಸಿದ್ದ 81,700ರೂ. ನಗದು, 1.35 ಲಕ್ಷ ರೂ. ಮೌಲ್ಯದ 4 ಮೊಬೈಲ್ ಹಾಗೂ ಕೃತ್ಯಕ್ಕೆ ಉಪಯೋಗಿಸಿದ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳ ವಿರುದ್ಧ ಸೆನ್ ಅಪರಾಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ನ್ಯಾಯಾಲಯವು ಆರೋಪಿಗಳಿಗೆ ಮೇ 6ರವರೆಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
– ಕುಂದಾಪುರ: ಸಂಗಮ ಬ್ರಿಡ್ಜ್ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ
ಕುಂದಾಪುರ: ಆನಗಳ್ಳಿ ಗ್ರಾಮದ ಸಂಗಮ ಬ್ರಿಡ್ಜ್ ಬಳಿ ಹೊಳೆಯಲ್ಲಿ ಸುಮಾರು 65-70 ವರ್ಷದ ಅಪರಿಚಿತ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಮೃತರ ವಾರಸುದಾರರು ಪತ್ತೆಯಾಗದ ಹಿನ್ನೆಲೆ ಮೃತ ಶರೀರವನ್ನು ಕುಂದಾಪುರ ಸರಕಾರಿ ಆಸ್ಪತ್ರೆಯ ಶವಗಾರದ ಶೀತಲೀಕರಣ ಘಟಕದಲ್ಲಿ ಇರಿಸಲಾಗಿದೆ.
ಈ ವ್ಯಕ್ತಿಯು ಯಾರಿಗಾದರೂ ಪರಿಚಯವಿದ್ದಲ್ಲಿ ಕುಂದಾಪುರ ಪೊಲೀಸ್ ಠಾಣೆ ದೂರವಾಣಿ ಸಂಖ್ಯೆ 08254230338/ 9480805455/ 8277988959 ಗೆ ಮಾಹಿತಿ ನೀಡಬೇಕಾಗಿ ಕೋರಿದೆ.
– ಉಡುಪಿ: ಮಹಿಳೆಗೆ ಅವಾಚ್ಯವಾಗಿ ನಿಂದಿಸಿ ಕಿರುಕುಳ, ಹಲ್ಲೆ!
ಉಡುಪಿ: ಮಹಿಳೆಗೆ ಅವಾಚ್ಯವಾಗಿ ನಿಂದಿಸಿ ಕಿರುಕುಳ ನೀಡಿ ಹಲ್ಲೆ ನಡೆಸಿದ ಘಟನೆ ಉಡುಪಿಯ ಕಡೆಕಾರಿನಲ್ಲಿ ನಡೆದಿದೆ. ಇವರ ಪತಿ ಪ್ರಜ್ವಲ್, ಭವಾನಿ, ಸೌಮ್ಯ, ಲಜಿತ್ ಬಂಧಿತ ಆರೋಪಿಗಳು.
ರಕ್ಷಾ ಮತ್ತು ಪ್ರಜ್ವಲ್ ದಂಪತಿಯ ವಿವಾಹದ ಸಂಪೂರ್ಣ ಖರ್ಚನ್ನು ರಕ್ಷಾ ಅವರ ಮನೆಯವರೇ ಭರಿಸಿದ್ದರು. ಆದರೂ ಪ್ರಜ್ವಲ್ ಅವರ ಮನೆಯವರು ವಿನಾ ಕಾರಣ ಇವರಿಗೆ ನಿತ್ಯ ಹಿಂಸೆ ನೀಡುತ್ತಿದ್ದರು.
ಮನೆಯಲ್ಲಿರಬೇಕಾದರೆ ಮತ್ತೆ ಕೆಲವು ರೂ. ಹಣ ತರುವಂತೆ ಪೀಡಿಸುತ್ತಿದ್ದರು. ಊಟ, ಉಪಾಹಾರ ಮೊಬೈಲ್ ಕೂಡ ಬಳಕೆ ಮಾಡಲು ಕೊಡುತ್ತಿರಲಿಲ್ಲ. ಇವರ ದೌರ್ಜನ್ಯ ಸಹಿಸಲಾಗದೆ ರಕ್ಷಾ ಅವರು ಮಹಿಳಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.