ಟಾಪ್ ನ್ಯೂಸ್ ಕರಾವಳಿ
* ಪುತ್ತೂರು: ನೂತನ ನ್ಯಾಯಾಲಯ ಲೋಕಾರ್ಪಣೆ
* ಮಂಗಳೂರು: ಜಯಾನಂದ ದೇವಾಡಿಗ ಇನ್ನಿಲ್ಲ
* ಹೆಬ್ರಿ: ಚತುಷ್ಪಥ ಶೀಘ್ರ ಕಾಮಗಾರಿಗೆ ಜೆಡಿಎಸ್ ಪಟ್ಟು
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ತಾಲ್ಲೂಕಿನ ಬನ್ನೂರಿನ ಬಳಿ 55 ಕೋಟಿ ವೆಚ್ಚದ ನೂತನ ನ್ಯಾಯಾಲಯದ ಕಟ್ಟಡ ನಿರ್ಮಾಣವಾಗಿದ್ದು, ಇದರೊಂದಿಗೆ ವಕೀಲರ ಸಂಘದ ಕಟ್ಟಡವನ್ನೂ ಹೊಸದಾಗಿ ನಿರ್ಮಿಸಲಾಗಿದೆ. ಸಧ್ಯಕ್ಕೆ ಹಳೆಯ ಕಟ್ಟಡದಲ್ಲೇ ಕಾರ್ಯನಿರ್ವಹಿಸಲಾಗುತ್ತಿದ್ದು, ಉದ್ಘಾಟನೆ ಬಳಿಕ ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗುವುದು. ಇದರ ನಿರ್ಮಾಣಕ್ಕಾಗಿ 2022ರಲ್ಲಿ ಶಿಲಾನ್ಯಾಸ ನೆರವೇರಿತ್ತು. ಮೊದಲು 25ಕೋಟಿ ರೂಪಾಯಿ ಬಿಡುಗಡೆಗೊಳಿಸಿ, 20ಕೋಟಿ ವೆಚ್ಚದಲ್ಲಿ ನ್ಯಾಯಾಲಯ ಹಾಗೂ ಐದು ಕೋಟಿ ವೆಚ್ಚದಲ್ಲಿ ವಕೀಲರ ಸಂಘವನ್ನು ನಿರ್ಮಾಣದ ಯೋಜನೆಯನ್ನು ಕಲ್ಪಿಸಲಾಗಿತ್ತು. ಆದರೆ ಅಂದಿನ ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿಗಳಾದ
ಅಬ್ದೂಲ್ ನಜೀರ್ ಅವರು ಸಂಕೀರ್ಣ ಜಿಲ್ಲಾ ನ್ಯಾಯಾಲಯದ ಸ್ಥಾಪನೆಗೂ ಅವಕಾಶ ಇರಬೇಕೆಂದು ಹೇಳಿದುದರ ಪರಿಣಾಮವಾಗಿ 55 ಕೋಟಿ ರೂಪಾಯಿ ಬಿಡುಗಡೆಗೊಳಿಸಿ, 50 ಕೋಟಿ ವೆಚ್ಚದಲ್ಲಿ ನ್ಯಾಯಾಲಯವನ್ನೂ, ಐದು ಕೋಟಿ ವೆಚ್ಚದಲ್ಲಿ ವಕೀಲರ ಸಂಘವನ್ನೂ ನಿರ್ಮಿಸಲಾಯಿತು. ಇದೀಗ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದು, ದಿನಾಂಕವನ್ನು ನಿಗದಿಪಡಿಸಿ, ಶಾಸಕರು ಮತ್ತು ಮುಖ್ಯಮಂತ್ರಿಗಳನ್ನು ಆಹ್ವಾನಿಸಿ, ಉದ್ಘಾಟನೆ ನೆರವೇರಿಸುವುದಷ್ಟೇ ಬಾಕಿ ಇದೆ ಎನ್ನಲಾಗಿದೆ.
ಮಂಗಳೂರು: ಜಯಾನಂದ ದೇವಾಡಿಗ ಇನ್ನಿಲ್ಲ
ಮಂಗಳೂರು: ಕರಾವಳಿ ಭಾಗದಲ್ಲಿ ದೇವಾಡಿಗ ಸಂಘವನ್ನು ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ, ಹಿಂದುಳಿದ ವರ್ಗಗಳ ನಾಯಕ ಜಯಾನಂದ ದೇವಾಡಿಗ ಅವರು ನಿಧನರಾಗಿದ್ದಾರೆ. ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಅವರ ಆತ್ಮೀಯರಾಗಿದ್ದ ಜಯಾನಂದ ಅವರು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಹಿಂದುಳಿದ ವರ್ಗಗಳ ಒಕ್ಕೂಟದ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಸಲ್ಲಿಸಿದ್ದರು. ಹಾಗೂ ಚಿನ್ನಪ್ಪ ರೆಡ್ಡಿ ವರದಿ, ಮಂಡಲ ವರದಿಗಳನ್ನು ಜಾರಿಗೊಳಿಸಲು ಹೋರಾಟಗಳನ್ನು ಕೈಗೊಂಡಿದ್ದರು, ಗೋವಾ ವಿಮೋಚನಾ ಚಳುವಳಿಯಲ್ಲಿ ಕೂಡ ಭಾಗವಹಿಸಿದ್ದರು. ಜೊತೆಗೆ ಹಿಂದುಳಿದ ವರ್ಗಗಳ ಶಿಕ್ಷಣ, ಆರ್ಥಿಕ ಅಭಿವೃದ್ಧಿ ಮತ್ತು ಅವರನ್ನು ಮುಖ್ಯವಾಹಿನಿಗೆ ತರಲು ಅವಿರತವಾಗಿ ಶ್ರಮಿಸಿದ್ದರು. ಜಯಾನಂದ ದೇವಾಡಿಗ ಅವರು ತಮ್ಮ ಸಮಾಜಮುಖಿ ಕಾರ್ಯಗಳಿಂದ ಗುರುತಿಸಿಕೊಂಡು, ದೇವರಾಜ ಅರಸು ಪ್ರಶಸ್ತಿಗೆ ಭಾಜನರಾಗಿದ್ದರು.
* ಹೆಬ್ರಿ ಚತುಷ್ಪಥ ಶೀಘ್ರ ಕಾಮಗಾರಿಗೆ ಒತ್ತಾಯ
ಹೆಬ್ರಿ: ಅರಣ್ಯ ಇಲಾಖೆಯವರ ನಿರ್ಧಾರ ವಿಳಂಬವಾಗುತ್ತಿರುವ ಹಿನ್ನೆಲೆಯಲ್ಲಿ ಹೆಬ್ರಿ ರಾಷ್ಟ್ರೀಯ ಹೆದ್ದಾರಿ ರಸ್ತೆ 169ಎ ಕಾಮಗಾರಿ ಮಂದಗತಿಯಲ್ಲಿ ಸಾಗುತ್ತಿದೆ. ಇದರಿಂದ ಹೆಬ್ರಿಯ ವೃತ್ತದ ಮೂಲಕ ಪ್ರತಿದಿನ ಪ್ರಯಾಣಿಸಬೇಕಾದ ಅನಿವಾರ್ಯತೆ ಇರುವ ಪಾದಾಚಾರಿಗಳಿಗೆ, ಶಾಲಾ ಮಕ್ಕಳಿಗೆ ಹಾಗೂ ಇತರೆ ವಾಹನ ಚಾಲಕರಿಗೆ ಅಡಚಣೆಯಾಗುತ್ತಿದೆ, ಟ್ರಾಫಿಕ್ ಸಮಸ್ಯೆ, ಅದರಲ್ಲೂ ಮಳೆಯ ತೀವ್ರತೆಯಿಂದಾಗಿ ಮತ್ತಷ್ಟು ಕಿರಿಕಿರಿ ಉಂಟಾಗಿದೆ ಎಂದು ಜೆಡಿಎಸ್ ಮುಖಂಡ ಕುಚ್ಚೂರು ಶ್ರೀಕಾಂತ್ ಪೂಜಾರಿ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಈ ವಿಷಯದತ್ತ ಗಮನಹರಿಸಿದ ಜಿಲ್ಲಾಧಿಕಾರಿಗಳು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಇಂಜಿನಿಯರ್ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.