Categories
ಕರಾವಳಿ

ಕರಾವಳಿಯಲ್ಲಿ ಮಳೆ ಆರ್ಭಟ: ಜನ ಜೀವನ ಅಸ್ತವ್ಯಸ್ತ

ಕರಾವಳಿಯಲ್ಲಿ ಮಳೆ ಆರ್ಭಟ: ಜನ ಜೀವನ ಅಸ್ತವ್ಯಸ್ತ 
– ಎಲ್ಲೆಲ್ಲೂ ನೀರು.. ಮನೆ, ವಾಹನ ಮುಳುಗಡೆ
– ಜನರ ಗೋಳು ಕೇಳೋರಿಲ್ಲ…!

NAMMUR EXPRESS NEWS
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ಕಳೆದೆರಡು ದಿನಗಳಿಂದ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತವಾಗಿದೆ. ಮಂಗಳೂರು ನಗರ ಸೇರಿದಂತೆ ಕರಾವಳಿ ಪ್ರದೇಶಗಳಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಭಾರತೀಯ ಹವಾಮಾನ ಇಲಾಖೆ (IMD) ರೆಡ್ ಅಲರ್ಟ್ ಘೋಷಿಸಿದೆ.
ಮಂಗಳೂರಿನ ಪಂಪ್​ವೆಲ್ ಸೇರಿ ಹಲವು ಕಡೆಗಳಲ್ಲಿ ರಸ್ತೆಗಳು ಜಲಾವೃತಗೊಂಡಿವೆ. ಕೆಲವೆಡೆ ಮರಗಳು ಧರಾಶಾಹಿಯಾಗಿದ್ದು, ವಾಹನ ಸಂಚಾರಕ್ಕೆ ಅಡ್ಡಿಯಾಗಿದೆ.

– ಮೀನುಗಾರರಿಗೆ ಎಚ್ಚರಿಕೆ!!

ಭಾರತೀಯ ಹವಾಮಾನ ಇಲಾಖೆಯ ಪ್ರಕಾರ, ಮೇ 26ರವರೆಗೆ ದಕ್ಷಿಣ ಕನ್ನಡ, ಉಡುಪಿಯಲ್ಲಿ ಗುಡುಗು-ಮಿಂಚು ಸಹಿತ ಭಾರಿ ಮಳೆ ಮುಂದುವರಿಯುವ ಸಾಧ್ಯತೆ ಇದೆ. ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ವಾಡಿಕೆಗಿಂತ ಒಂದು ವಾರ ಮೊದಲೇ ಮುಂಗಾರು ರಾಜ್ಯದ ಕರಾವಳಿ ಪ್ರವೇಶಿಸಿದೆ. ಸಾಮಾನ್ಯವಾಗಿ ಮೇ 31ರ ಸುಮಾರಿಗೆ ಮುಂಗಾರು ಕೇರಳ ಪ್ರವೇಶಿಸುತ್ತಿತ್ತು. ಆದರೆ ಈ ಬಾರಿ ಮೇ 24ಕ್ಕೇ ಕೇರಳ ಕರಾವಳಿ ತಲುಪಿದ್ದು, ಇದರ ಬೆನ್ನಲ್ಲೇ ರಾಜ್ಯದ ಕರಾವಳಿ ಪ್ರದೇಶಗಳಲ್ಲಿ ಮಳೆ ಶುರುವಾಗಿದೆ.

– ಮುಂದಿನ ಕೆಲವು ದಿನಗಳವರೆಗೆ ಭಾರಿ ಮಳೆ ಮುನ್ಸೂಚನೆ:

ದಕ್ಷಿಣ ಕನ್ನಡ, ಉಡುಪಿ, ಮತ್ತು ಉತ್ತರ ಕನ್ನಡ ಜಿಲ್ಲೆಗಳ ಹಲವು ಪ್ರದೇಶಗಳಲ್ಲಿ ನಿನ್ನೆಯಿಂದ ಬಿಡದೇ ಮಳೆ ಸುರಿಯುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಮೂರು ಜಿಲ್ಲೆಗಳನ್ನು ಮುಂದಿನ ಕೆಲವು ದಿನಗಳವರೆಗೆ ಭಾರಿ ಮಳೆ ಮುಂದುವರಿಯಲಿದೆ.

– ವಾಹನ ಸಂಚಾರಕ್ಕೂ ಅಡ್ಡಿ, ಹಲವು ಮನೆಗಳು ನೀರಿನಿಂದ ಮುಳುಗಡೆ!

ಮಂಗಳೂರು ಮುಖ್ಯ ರಸ್ತೆಗಳಲ್ಲೇ ನೀರು ಹೋಗಲು ಜಾಗವಿಲ್ಲದೆ ಜನರು ಪರದಾಡುವಂತಾಗಿದೆ. ಪಂಪ್ ವೆಲ್, ಜ್ಯೋತಿ, ಮಂಗಳೂರು ಪ್ರದೇಶಗಳ ರಸ್ತೆಯಲ್ಲಿ ನೀರು ಕೆರೆಯಂತೆ ಸೇರಿಕೊಂಡಿದ್ದು, ದಿನನಿತ್ಯ ಚಲಿಸುವ ವಾಹನ ಸವಾರರು, ಕೆಲಸಕ್ಕೆ ತೆರಳುವ ನೌಕರರು, ಆತಂಕಕ್ಕೆ ಒಳಗಾಗಿದ್ದಾರೆ.
ಇನ್ನು ಹಲವು ಗ್ರಾಮೀಣ ಭಾಗದಲ್ಲಿ ಮನೆಗಳು ಸಂಪೂರ್ಣ ನೀರಿನಿಂದ ಅವರಿಸಿದ್ದು, ಕೆಲವು ಕಡೆಗಳಲ್ಲಿ ಮನೆಯ ಒಳಗೆ ನೀರು ಪ್ರವೇಶಿಸಿ ಜನರು ಕಂಗಲಾಗಿದ್ದಾರೆ. ಈ ವರುಣನ ಆರ್ಭಟಕ್ಕೆ ಸಾಮಾನ್ಯ ಜನರ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.