ಮಂಗಳೂರು ಮೂಲದ ಅಣ್ಣ ತಂಗಿಯ ಸಾಧನೆ..!
* ಡೆಹ್ರಾಡೂನ್ ನಲ್ಲಿ ನಡೆದ ಸ್ಪರ್ಧೆಯಲ್ಲಿ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕ
– ಬೆಳ್ತಂಗಡಿ: ಅಣಿಯೂರು ಹೊಳೆಗೆ ಅಣೆಕಟ್ಟು: ಇಪ್ಪತ್ತೈದು ಕುಟುಂಬಗಳಿಗೆ ಸಂಕಷ್ಟ
– ಕಾರ್ಕಳ: ಪಡಿತರ ಅಕ್ಕಿಯ ಅಕ್ರಮ ದಾಸ್ತಾನು: ಅಂಗಡಿ ಮೇಲೆ ದಾಳಿ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಉತ್ತರಾಖಂಡದ ಡೆಹ್ರಾಡೂನ್ ನಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಇಪ್ಪತ್ತನೇ ಐಸ್ ಸ್ಕೇಟಿಂಗ್ ಚಾಂಪಿಯನ್ ಶಿಪ್ ನಲ್ಲಿ ಮಂಗಳೂರು ಮೂಲದ ಡೇನಿಯಲ್ ಕೊನ್ಸೆಸಾವ್ ಮತ್ತು ಆತನ ಸಹೋದರಿ ಡ್ಯಾಶಿಯಲ್ ಕೊನ್ಸೆಸಾವ್ ಪದಕ ಗಳಿಸಿದ್ದಾರೆ. ಡೇನಿಯಲ್ 1500ಮೀ ಸ್ಪರ್ಧೆಯಲ್ಲಿ ಕಂಚಿನ ಪದಕವನ್ನು ಗಳಿಸಿದ್ದಾರೆ, ಅವರ ಸಹೋದರಿ ಡ್ಯಾಶಿಯಲ್ ಐನೂರು ಮತ್ತು ಸಾವಿರ ಮೀ ನಲ್ಲಿ ಚಿನ್ನದ ಪದಕವನ್ನು, 1500ಮೀ ನಲ್ಲಿ ಬೆಳ್ಳಿ ಪದಕವನ್ನು ಪಡೆದಿದ್ದಾರೆ. ಮಂಗಳೂರಿನ ಫ್ರಾನ್ಸಿಸ್ ಕೊನ್ಸೆಸಾವ್ ಮತ್ತು ಡೋರಿಸ್ ಕೊನ್ಸೆಸಾವ್ ಅವರ ಮಗನಾದ ಡೇನಿಯಲ್ ಸಂತ ಜೋಸೆಫ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಬಿ.ಇ ಓದುತ್ತಿದ್ದು, ಮಗಳು ಡ್ಯಾಶಿಯಲ್ ಎಸ್ ಡಿ ಎಂ ಕಾಲೇಜಿನ ಬಿಬಿಎ ವಿದ್ಯಾರ್ಥಿನಿಯಾಗಿದ್ದಾಳೆ.
ಅಪಾಯದ ಅಂಚಿನಲ್ಲಿ ಅಣೆಕಟ್ಟು: ಇಪ್ಪತ್ತೈದು ಕುಟುಂಬಗಳಿಗೆ ಸಂಕಷ್ಟ
ಬೆಳ್ತಂಗಡಿ: ಬೆಳ್ತಂಗಡಿಯಿಂದ ಇಪ್ಪತ್ತೈದ ರಿಂದ ಮೂವತ್ತು ಕಿಮೀ ದೂರದಲ್ಲಿರುವ ನೆರಿಯ ಗ್ರಾಮವು ಹಿಂದೆ ಸವಲತ್ತುಗಳಿಂದ ವಂಚಿತವಾಗಿತ್ತು. ಇತ್ತೀಚಿನ ಕೆಲವು ವರ್ಷಗಳಿಂದ ಮೂಲಭೂತ ಸೌಕರ್ಯ ಸವಲತ್ತುಗಳನ್ನು ಪಡೆಯುವ ಮೂಲಕ ಕೊಂಚ ನಿರಾಳವಾಗಿತ್ತು. 2014ರಲ್ಲಿ ನೇತ್ರಾವತಿಯ ಉಪನದಿಯಾದ ಅಣಿಯೂರು ಹೊಳೆಗೆ ಅಣೆಕಟ್ಟು ನಿರ್ಮಿಸಲಾಯಿತು. ಇದೀಗ ಅಣೆಕಟ್ಟಿನ ತಡೆಗೋಡೆ ಈ ಬಾರಿಯ ವಿಪರೀತ ಮಳೆಯಿಂದಾಗಿ ಬಿರುಕು ಬಿಟ್ಟು ಅಪಾಯದ ಅಂಚಿನಲ್ಲಿದೆ. ಸಂಬಂಧಿತ ಇಲಾಖೆಯ ಗಮನಕ್ಕೆ ತಂದರೂ ದುರಸ್ತಿಗೊಳಿಸದ ಕಾರಣದಿಂದಾಗಿ ಅಣೆಕಟ್ಟಿನ ಕಲ್ಲುಗಳು ಮಳೆಯ ರಭಸಕ್ಕೆ ಕುಸಿದು, ತೀವ್ರ ಹಾನಿಗೊಳಗಾಗಿದೆ. ಪರ್ಪಳ ಅಣೆಕಟ್ಟು ಎಂದು ಕರೆಯಲ್ಪಡುವ ಇದು ಅರವತ್ತು ಮೀಟರ್ ಉದ್ದವಿದ್ದು, ದ್ವಿಚಕ್ರ, ತ್ರಿಚಕ್ರ, ಪಿಕಪ್ ವಾಹನಗಳು ಸಂಚರಿಸುವಷ್ಟು ಅಗಲವಾಗಿದ್ದು, ಗ್ರಾಮದ ಜನರು ಪೇಟೆಗೆ ಹೋಗಿ ಬರಲು ತೀರಾ ಹತ್ತಿರದ ಸಂಪರ್ಕ ಕಲ್ಪಿಸಿತ್ತು. ಮತ್ತು ಗ್ರಾಮದಲ್ಲಿನ 250 ರಿಂದ 300 ಮಂದಿ ಇದನ್ನೇ ಆಶ್ರಯಿಸಿದ್ದಾರೆ ಎನ್ನಲಾಗಿದೆ. ಆದರೆ ಈಗ ಮೂವತ್ತು ಮೀಟರ್ ಉದ್ದವಿರುವ ಈ ಅಣೆಕಟ್ಟಿನ ತಡೆಗೋಡೆ ಕುಸಿದರೆ, ಅಲ್ಲಿ ವಾಸವಿರುವ ಇಪ್ಪತ್ತೈದು ಕುಟುಂಬಗಳು ಸುತ್ತಮುತ್ತಲಿನ ಪ್ರದೇಶದ ಸಂಪರ್ಕವನ್ನೇ ಕಳೆದುಕೊಳ್ಳುವಂತ ಆತಂಕ ಏರ್ಪಟ್ಟಿದೆ.
ಪಡಿತರ ಅಕ್ಕಿಯ ಅಕ್ರಮ ದಾಸ್ತಾನು: ಕಾರ್ಕಳ ಅಂಗಡಿ ಮೇಲೆ ದಾಳಿ
ಕಾರ್ಕಳ: ಅಜೆಕಾರು ಮನೋಜ್ ಟ್ರೇಡರ್ಸ್ ಎಂಬ ಅಂಗಡಿಯ ಮೂಲಕ ಚೀಟಿದಾರರಿಂದ ಪಡಿತರ ಅಕ್ಕಿಯನ್ನು ಕಡಿಮೆ ಬೆಲೆಗೆ ಖರೀದಿಸಿ, ಹೆಚ್ಚಿನ ಬೆಲೆಗೆ ಮಾರಾಟ ಮಾಡುತ್ತಿದ್ದರು. ಆಹಾರ ನಿರೀಕ್ಷಕಿಯಾದ ಸುಮತಿ ಅವರ ನೇತೃತ್ವದಲ್ಲಿ ಅಧಿಕಾರಿಗಳು ಮನೋಜ್ ಟ್ರೇಡರ್ಸ್ ಮೇಲೆ ದಾಳಿ ನಡೆಸಿ, ನೂರು ಚೀಲಗಳಲ್ಲಿ ತುಂಬಿಸಿಟ್ಟಿದ್ದ ಸುಮಾರು ಐವತ್ತು ಕ್ವಿಂಟಾಲ್ ಗಿಂತ ಅಧಿಕ ಪ್ರಮಾಣದ ಅಕ್ಕಿಯನ್ನು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಸರ್ಕಾರದಿಂದ ಉಚಿತವಾಗಿ ಲಭಿಸುವ ಅಕ್ಕಿಯನ್ನು ಸಾರ್ವಜನಿಕರು ಮನೆಗೆ ಕೊಂಡೊಯ್ಯದೆ, ದಿನಸಿ ಅಂಗಡಿಗಳಲ್ಲಿ ಹತ್ತರಿಂದ ಹದಿನೈದು ರೂಪಾಯಿಗೆ ಮಾರಾಟ ಮಾಡುತ್ತಿದ್ದಾರೆ. ಮತ್ತು ಅದನ್ನು ಅಂಗಡಿಯವರು ಮೂವತ್ತರಿಂದ ನಲವತ್ತು ರೂಪಾಯಿಗೆ ಮಾರಾಟ ಮಾಡುತ್ತಿರುವುದು ಗ್ರಾಮೀಣ ಭಾಗದಲ್ಲಿ ಸಾಮಾನ್ಯ ಸಂಗತಿಯಂತಾಗಿದೆ. ಇಂತಹ ವಿಚಾರಗಳತ್ತ ಸಂಬಂಧಿತ ಇಲಾಖೆ ಮತ್ತು ಅಧಿಕಾರಿಗಳು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಜನರು ಆಗ್ರಹಿಸಿದ್ದಾರೆ. ಅಂಗಡಿ ಮಾಲೀಕ ತಲೆ ಮರೆಸಿಕೊಂಡಿದ್ದು, ಆತನ ವಿರುದ್ಧ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.