ಕರಾವಳಿಯಲ್ಲಿ ಮತ್ತೆ ಆನೆ ಕಾಟ ಶುರು!
– ಬೆಳ್ತಂಗಡಿ: ಕಾಡಾನೆ ದಾಳಿ; ವ್ಯಕ್ತಿ ಸಾವು
* ಪುತ್ತೂರು: ಗುಡ್ಡ ಕುಸಿತ: ರಾಷ್ಟ್ರೀಯ ಹೆದ್ದಾರಿ ಬಂದ್
* ಕಾಪು: ಮಳೆಯ ಆರ್ಭಟ: ಮನೆ ದೇವಾಲಯಗಳು ಜಲಾವೃತ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಪುತ್ತೂರು: ಮಂಗಳೂರು ಮತ್ತು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ನಡುವೆ ಕೌಕ್ರಾಡಿ ಎಂಬ ಗ್ರಾಮದಲ್ಲಿ ಗುಡ್ಡ ಕುಸಿದು, ಮಣ್ಣು ರಸ್ತೆಗೆ ಬಿದ್ದಿರುವುದರಿಂದ ವಾಹನ ಸಂಚಾರಕ್ಕೆ ತೊಂದರೆ ಆಯಿತು.ಚತುಷ್ಪಥ ಮಾಡುವ ನೆಪದಲ್ಲಿ ಗುಡ್ಡ ಅಗೆದಿರುವುದರಿಂದ ಮಳೆಯ ರಭಸಕ್ಕೆ ಮಣ್ಣು ಮೆತ್ತಗಾಗಿ, ಕುಸಿದು ನೇರವಾಗಿ ರಸ್ತೆಗೆ ಬಿದ್ದಿದೆ. ಈಗಾಗಲೇ ಈ ಭಾಗದಲ್ಲಿ ತೀವ್ರ ಮಳೆಯ ಪ್ರಭಾವದಿಂದಾಗಿ ನಾಲ್ಕೈದು ಬಾರಿ ಗುಡ್ಡ ಕುಸಿತ ಉಂಟಾಗಿದೆ ಎಂಬ ಸಂಗತಿ ತಿಳಿದು ಬಂದಿದೆ. ಆಡಳಿತದ ಬೇಜವಾಬ್ದಾರಿ ಇದೀಗ ಜನರ ಆಕ್ರೋಶಕ್ಕೆ ಕಾರಣವಾಗಿದೆ.
ಬೆಳ್ತಂಗಡಿ: ಕಾಡಾನೆ ದಾಳಿ; ವ್ಯಕ್ತಿ ಸಾವು
ಬೆಳ್ತಂಗಡಿ: ಕರಾವಳಿ ಭಾಗದಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡಾನೆಯ ಹಾವಳಿ ಹೆಚ್ಚಾಗಿದ್ದು, ನಿನ್ನಯ ದಿನ ಸೌತಡ್ಕಗುಂಡಿ ನಿವಾಸಿ ಬಾಲಕೃಷ್ಣ ಶೆಟ್ಟಿ ಎನ್ನುವವರು ನಿನ್ನೆ ನಡೆದ ಆನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಗೇರು ಪ್ಲಾಂಟೇಶನ್ ನಲ್ಲಿ ಬೆಳಂಬೆಳಿಗ್ಗೆ ಎರಡು ಕಾಡಾನೆಗಳು ತಿರುಗಾಡಿಕೊಂಡಿದ್ದು, ಅವುಗಳನ್ನು ಓಡಿಸುವ ಸಂದರ್ಭದಲ್ಲಿ ಬಾಲಕೃಷ್ಣ ಅವರಿಗೆ ಆನೆಯ ಸೊಂಡಿಲು ತಾಗಿ, ಓಡಿಸಲು ಬಂದ ಅವರನ್ನು ತಿವಿದ ಪರಿಣಾಮ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ ಎನ್ನಲಾಗಿದೆ. ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅರಣ್ಯ ಅಧಿಕಾರಿಗಳು ಅವುಗಳನ್ನು ಹಿಡಿಯುವ ಮೊದಲೇ, ಬಾಲಕೃಷ್ಣ ಅವರು ಮೊದಲು ನೋಡಿ ಆನೆಗಳನ್ನು ಓಡಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.
ಕಾಪು ಭಾಗದಲ್ಲಿ ಮಳೆಗೆ ಭಾರೀ ಹಾನಿ!
ಕಾಪು: ತಾಲ್ಲೂಕಿನ ಮಲ್ಲಾರು, ಉಳಿಯಾರಗೋಳಿ, ಪಾಂಗಾಳ ಭಾಗದಲ್ಲಿ ಪುನರ್ವಸು ಮಳೆಯು ಅಧಿಕವಾಗಿದ್ದು, ಹಲವಾರು ಮನೆಗಳು ಮತ್ತು ಕೃಷಿ ಭೂಮಿಗಳು ಜಲಾವೃತಗೊಂಡಿವೆ. ಇಲ್ಲಿನ ಕುಂಜೂರು ಶ್ರೀ ದುರ್ಗಾಪರಮೇಶ್ವರಿ ದೇವಾಲಯವು ಸಂಪೂರ್ಣವಾಗಿ ಜಲಾವೃತಗೊಂಡಿದ್ದು, ದೇವಾಲಯದ ಒಳಗೆ ಮತ್ತು ಹೊರಗೆ ನೆರೆಯ ನೀರು ತುಂಬಿಕೊಂಡಿದೆ. ತಹಶೀಲ್ದಾರರಾದ ಪ್ರತಿಭಾ ಆರ್, ಪುರಸಭೆಯ ಮುಖ್ಯಾಧಿಕಾರಿಗಳಾದ ನಾಗರಾಜ ಚಿಕ್ಕಲಪರವಿ ಹಾಗೂ ಪುರಸಭೆಯ ಸದಸ್ಯರು, ಜನಪ್ರತಿನಿಧಿಗಳು, ಕಂದಾಯ ಅಧಿಕಾರಿಗಳು, ಗ್ರಾಮ ಸಹಾಯಕರು, ಗ್ರಾಮ ಪಂಚಾಯಿತಿ ಸದಸ್ಯರು ಸೇರಿಕೊಂಡು ಪರಿಹಾರ ಕಾರ್ಯಾಚರಣೆಯನ್ನು ನಡೆಸಿದ್ದಾರೆ.