ಕರಾವಳಿ ಟಾಪ್ ನ್ಯೂಸ್
ಮಾಸ್ಕ್ ಮ್ಯಾನ್ ಈಗ ಪ್ರಮುಖ ಆರೋಪಿ!
– ಚಿನ್ನಯ್ಯ ಹತ್ತು ದಿನಗಳ ಕಾಲ ಕಸ್ಟಡಿಗೆ
– ಬುರುಡೆಗೂ ಅಲ್ಲಿನ ಮಣ್ಣಿಗೂ ಸಾಮ್ಯತೆ ಇಲ್ಲ!
• ಪುತ್ತೂರು: ಚರಂಡಿಗೆ ಬಿದ್ದ ಸ್ಕಾರ್ಪಿಯೋ
• ಹೆಬ್ರಿ: ಕೋಳಿ ಅಂಕದ ಮೇಲೆ ದಾಳಿ
• ಮಂಗಳೂರು: ಮೊಬೈಲ್ ಸಿಕ್ಕಿ ಹಣದ ವಂಚನೆ
• ಕಾಪು: ರಸ್ತೆ ದಾಟಲು ನಿಂತ ವ್ಯಕ್ತಿಗೆ ಯಮನಾದ ಕಾರು!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
• ಬೆಳ್ತಂಗಡಿ: ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ, ಶವಗಳನ್ನು ಹೂತಿರುವುದಾಗಿ ಭಾರೀ ಸಂಚಲನ ಸೃಷ್ಟಿಸಿದ ಮುಸುಕುಧಾರಿ ಅನಾಮಿಕ ವ್ಯಕ್ತಿಯು ಚಿನ್ನಯ್ಯ ಎಂಬ ಹೆಸರಿನ ವ್ಯಕ್ತಿ ಎಂದು ಗುರುತಿಸಲಾಗಿದ್ದು, ದಿನ ಬೆಳಗಾಗುವುದರೊಳಗಾಗಿ ಆರೋಪಿ ಸ್ಥಾನದಲ್ಲಿ ನಿಂತಿದ್ದಾನೆ.
ಚಿನ್ನಯ್ಯನ ಪರ ಬಂದಿದ್ದ ವಕೀಲರನ್ನು ಎಸ್ಐಟಿ ತಂಡದವರು ಹಿಂದಕ್ಕೆ ಕಳುಹಿಸಿದ್ದು, ಶುಕ್ರವಾರ ರಾತ್ರಿ ತನಿಖಾಧಿಕಾರಿಗಳೆ ಆತನ ವಿಚಾರಣೆ ನಡೆಸಿದ್ದು, ಆ ಸಂದರ್ಭದಲ್ಲಿ ಉತ್ತರಗಳನ್ನು ಗೊಂದಲ ಸೃಷ್ಟಿಸುವಂತೆ ನೀಡಿದ್ದನು. ಮರಳಿ ಅದೇ ಪ್ರಶ್ನೆಗಳನ್ನು ಕೇಳಿದಾಗ ಹೊಸ ಕಥೆಯೊಂದನ್ನು ಸೃಷ್ಟಿಸಿದ ಎನ್ನಲಾಗಿದೆ. ತನ್ನನ್ನು ಇಲ್ಲಿಗೆ ಕರೆದುಕೊಂಡು ಬಂದವರು ಯಾರು, ಹಣವನ್ನು ನೀಡುವುದಾಗಿ ಆಸೆ ತೋರಿಸಿದವರು ಯಾರು, ಸುಳ್ಳು ಹೇಳುವಂತೆ ಮಾರ್ಗದರ್ಶನ ನೀಡಿದವರು ಯಾರು, ಬುರುಡೆಗಳನ್ನು ತಂದುಕೊಟ್ಟವರು ಯಾರು ಎಂಬಿತ್ಯಾದಿ ವಿಚಾರಗಳ ಕುರಿತು ಮಾಹಿತಿ ನೀಡಿದ್ದಾನೆ ಎನ್ನಲಾಗಿದೆ. ಇವುಗಳನ್ನು ಎಸ್ಐಟಿ ತನಿಖಾಧಿಕಾರಿಗಳು ದಾಖಲಿಸಿಕೊಂಡು, ನ್ಯಾಯಾಲಯಕ್ಕೆ ನೀಡಿದ್ದಾರೆ. ಮತ್ತು ಎಸ್ಐಟಿ ತಂಡದವರ ಕೋರಿಕೆಯ ಮೇರೆಗೆ ನ್ಯಾಯಾಧೀಶರು ಚಿನ್ನಯ್ಯನನ್ನು ಹತ್ತು ದಿನಗಳ ಕಾಲ ಕಸ್ಟಡಿಗೆ ನೀಡಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ. ಅನನ್ಯ ಭಟ್ ಪ್ರಕರಣದಂತೆ ಇದು ಇನ್ನೊಂದು ರೂಪ ಇರಬಹುದು ಎನ್ನುವುದು ಹಲವರಲ್ಲಿ ಅನುಮಾನ ವ್ಯಕ್ತವಾಗಿದೆ.
• ಪುತ್ತೂರು: ಕಾಂಚನ ಕ್ರಾಸ್ ಬಳಿ ಚಾಲಕನ ನಿಯಂತ್ರಣ ತಪ್ಪಿ ಸ್ಕಾರ್ಪಿಯೋ ಗಾಡಿ, ಹೆದ್ದಾರಿ ಬದಿಯಲ್ಲಿದ್ದ ಚರಂಡಿಗೆ ಬಿದ್ದಿರುವ ಘಟನೆ ಬಜತ್ತೂರು ಗ್ರಾಮದ ಬಳಿ ನಡೆದಿದೆ. ಸ್ಕಾರ್ಪಿಯೋ ಗಾಡಿಯಲ್ಲಿ ಪ್ರಯಾಣಿಸುತ್ತಿದ್ದ ಜನರಿಗೆ ಸಣ್ಣಪುಟ್ಟ ಗಾಯಗಳಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂಬ ಸಂಗತಿ ತಿಳಿದುಬಂದಿದೆ.
• ಹೆಬ್ರಿ: ಕೋಳಿ ಅಂಕದ ಮೇಲೆ ದಾಳಿ
ಹೆಬ್ರಿ: ಬೆಳಂಜೆ ಗ್ರಾಮದ ಹಾಡಿಯೊಂದರಲ್ಲಿ ಅಕ್ರಮ ಕೂಟವೊಂದನ್ನು ಏರ್ಪಡಿಸಿ, ಹಣವನ್ನು ಬಾಜಿಕಟ್ಟಿ ಕೋಳಿ ಅಂಕವನ್ನು ನಡೆಸುತ್ತಿರುವ ಸಂದರ್ಭದಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂದರ್ಭದಲ್ಲಿ ಕೆಲವು ಆರೋಪಿಗಳು ಪರಾರಿಯಾಗಿದ್ದು, ರೋಹಿತ್ ಶೆಟ್ಟಿ, ಚರಣ್ ರಾಜ್, ದಿನೇಶ್ ರಾವ್, ಅರ್ಜುನ್, ಮಂಜುನಾಥ, ಪ್ರಶಾಂತ, ದಯಾನಂದ ಪೂಜಾರಿ, ಸಂತೋಷ್ ಶೆಟ್ಟಿ ಎನ್ನುವವರನ್ನು ಬಂಧಿಸಿದ್ದಾರೆ. ಅಲ್ಲದೆ ಮೂವತ್ತು ಸಾವಿರ ರೂಪಾಯಿ ಬೆಲೆಬಾಳುವ ಮೂವತ್ತು ಕೋಳಿಗಳನ್ನು, 10.630 ರೂಪಾಯಿ ನಗದು ಹಣವನ್ನು, ಆರು ಮೊಬೈಲ್ ಗಳನ್ನು, ಆರೋಪಿಗಳ ಕಾರು ಮತ್ತು ಬೈಕ್ ಗಳನ್ನು ಸೇರಿ ಸುಮಾರು 34 ವಾಹನಗಳನ್ನು ಜೊತೆಗೆ ಕೋಳಿ ಅಂಕವನ್ನು ನೋಡಲು ಬಂದ ಜನರ ಕಾರು ಬೈಕ್ ಸೇರಿ 44 ವಾಹನಗಳನ್ನು ವಶಪಡಿಸಿಕೊಂಡಿದ್ದಾರೆ. ಎಲ್ಲವೂ ಸೇರಿ ಒಟ್ಟು 43,45, 630ರಷ್ಟು ಆಗಿರಬಹುದು ಎಂದು ಅಂದಾಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಶಂಕರನಾರಾಯಣದಲ್ಲಿ ಪ್ರಕರಣ ದಾಖಲಾಗಿದೆ.
• ಮಂಗಳೂರು: ಮೊಬೈಲ್ ನಂಬರ್ ಬಳಸಿ ವಂಚನೆ!
ಮಂಗಳೂರು: ಮಹಿಳೆಯೊಬ್ಬರು ಕಣ್ಣೂರಿನಿಂದ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣಕ್ಕೆ ಬಂದಿದ್ದು, ಮೊಬೈಲ್ ಅನ್ನು ಈ ಸಂದರ್ಭದಲ್ಲಿ ಕಳೆದುಕೊಂಡಿದ್ದಾರೆ. ತನ್ನ ಸಂಖ್ಯೆಗೆ ಕರೆ ಮಾಡಿ ನೋಡಿದಾಗ ಸ್ವಿಚ್ ಆಫ್ ಎಂದು ಬಂದಿದೆ. ಕೂಡಲೇ ತಮ್ಮ ಬ್ಯಾಂಕ್ ಮತ್ತು ಸಿಮ್ ಕಂಪನಿಯ ಗ್ರಾಹಕರ ಸೇವೆಗೆ ಕರೆ ಮಾಡಿ ಮಾಹಿತಿಯನ್ನು ನೀಡಿದ್ದಾರೆ. ಕೆಲವು ದಿನಗಳ ಬಳಿಕ ಮತ್ತೆ ತಮ್ಮ ಸಂಖ್ಯೆಗೆ ಕರೆ ಮಾಡಿ ನೋಡಿದಾಗ ರಿಂಗ್ ಆಗಿದ್ದು, ಅಪರಿಚಿತ ವ್ಯಕ್ತಿ ರಾಜೇಶ್ ಎಂದು ಪರಿಚಯಿಸಿಕೊಂಡಿದ್ದು, ಮೊಬೈಲ್ ಕೊಯಮತ್ತೂರು ಮತ್ತು ಸೇಲಂ ನಡುವಿನ ಮಾರ್ಗದಲ್ಲಿ ಲಭಿಸಿದ್ದು, ಮೊಬೈಲ್ ಅನ್ನು ಕೊಯಮತ್ತೂರು ರೈಲ್ವೆ ಪೊಲೀಸ್ ಠಾಣೆಗೆ ನೀಡುವುದಾಗಿ ತಿಳಿಸಿದ್ದಾನೆ. ಇದನ್ನು ನಿಜವೆಂದು ನಂಬಿದ ಮಹಿಳೆಯು ಸಂಜೆಯವರೆಗೂ ಅಲ್ಲಿ ಹೋಗಿ ಕಾದಿದ್ದು, ಅಪರಿಚಿತ ವ್ಯಕ್ತಿಯಿಂದ ಯಾವುದೇ ಪ್ರತಿಕ್ರಿಯೆ ಲಭಿಸಲಿಲ್ಲ. ಈ ಹಿನ್ನೆಲೆಯಲ್ಲಿ ಮಹಿಳೆಯು ಕಣ್ಣೂರಿನ ಇರಿಟ್ಟಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಬಳಿಕ ಹೊಸ ಮೊಬೈಲ್ ಮತ್ತು ಸಿಮ್ ಅನ್ನು ಖರೀದಿಸಿ ತಮ್ಮ ಬ್ಯಾಂಕ್ ಖಾತೆಯ ಮಾಹಿತಿಯನ್ನು ಪರಿಶೀಲಿಸಿ ನೋಡಿದಾಗ, ಎರಡು ದಿನಗಳಿಗೆ ಒಮ್ಮೆಯಂತೆ ಒಟ್ಟು 4.09.000 ರೂಪಾಯಿಯಷ್ಟು ಹಣ ವರ್ಗಾವಣೆಯಾಗಿರುವುದು ಗಮನಕ್ಕೆ ಬಂದಿದೆ. ಮತ್ತು ಬ್ಯಾಂಕ್ ಸ್ಟೇಟ್ ಮೆಂಟ್ ನೋಡಿದಾಗ ಮೊದಲು ತನ್ನ ಖಾತೆಗೆ ಒಂದು ಲಕ್ಷ ಹಣ ಹಾಕಿ, ಬಳಿಕ ಅದನ್ನು ಬೇರೆ ಬೇರೆ ಸಂದರ್ಭಗಳಲ್ಲಿ ಹಿಂತೆಗೆದುಕೊಂಡಿರುವುದು ಕೂಡ ಬೆಳಕಿಗೆ ಬಂದಿದೆ.
•ಕಾಪು: ರಸ್ತೆ ದಾಟಲು ನಿಂತ ವ್ಯಕ್ತಿಗೆ ಯಮನಾದ ಕಾರು!
ಕಾಪು: ಕೊಪ್ಪಲಂಗಡಿಯ ಪೀರು ಸಾಹೇಬ್ ಎಂಬ ವ್ಯಕ್ತಿಯು ರಸ್ತೆ ದಾಟಲು ನಿಂತಿದ್ದ ಸಂದರ್ಭದಲ್ಲಿ, ಮಂಗಳೂರಿನಿಂದ ಉಡುಪಿಯತ್ತ ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಢಿಕ್ಕಿ ಹೊಡೆದು ವ್ಯಕ್ತಿಯು ಮೃತಪಟ್ಟಿರುವ ಘಟನೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ನಡೆದಿದೆ. ಗಂಭೀರವಾಗಿ ಗಾಯಗೊಂಡಿದ್ದ ಪೀರು ಸಾಹೇಬ್ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಯೊಂದಕ್ಕೆ ಎಸ್ ಡಿಪಿ ಐ ಆ್ಯಂಬುಲೆನ್ಸ್ ಮೂಲಕ ಸಾಗಿಸುತ್ತಿದ್ದಾಗಲೇ ದಾರಿ ಮಧ್ಯದಲ್ಲಿ ಮೃತಪಟ್ಟಿದ್ದಾರೆ. ಮಾಹಿತಿ ಬಂದ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಶೀಲನೆಯನ್ನು ನಡೆಸಿದರು.