Categories
ಕರಾವಳಿ

ಟಾಪ್ 10 ನ್ಯೂಸ್ ಕರಾವಳಿ

ಟಾಪ್ 10 ನ್ಯೂಸ್ ಕರಾವಳಿ

* ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ‌ ಪ್ರಕರಣಕ್ಕೆ ಟ್ವಿಸ್ಟ್!
* ಬೆಳ್ತಂಗಡಿ: ಶಿಶಿಲ ದೇವಾಲಯದಲ್ಲಿ ಮೀನು ಹಿಡಿದವರಿಗೆ ಶಾಕ್
* ಕಾಪು: ಟೆಂಪೋ ಸ್ಕೂಟರ್ ಡಿಕ್ಕಿ; ಬೈಕ್ ಸವಾರನ ಸಾವು
* ಪುತ್ತೂರು: ರಸ್ತೆಯಲ್ಲಿ ಬಿದ್ದಿದ್ದ ಹಾಸಿಗೆ: ಕುತೂಹಲ!
* ಬ್ರಹ್ಮಾವರ: ಸರಗಳ್ಳನ ಬಂಧನ
* ಉಳ್ಳಾಲ: ಸರ್ಕಾರಿ ಬಸ್ ಕಂಡಕ್ಟರ್ ಜೀವ ಉಳಿಸಿದ ಚಾಲಕ
* ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತದ ಭೀತಿ
* ಕುಂದಾಪುರ: ಮಹಿಳಾ ಲೇಖಕಿ ವೈದೇಹಿ ಅವರಿಗೆ ಪತಿ ವಿಯೋಗ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಬ್ರಹ್ಮಾವರ: ಮಂಜುನಾಥ ಮಯ್ಯ ಎನ್ನುವ ಎರಡು ಸರಗಳ್ಳತನ ಪ್ರಕರಣದ ಆರೋಪ ಹೊತ್ತಿದ್ದ ಕಳ್ಳನನ್ನು ಪೊಲೀಸರು ಸೆರೆಹಿಡಿದಿದ್ದಾರೆ. ಕಳೆದ ಕೆಲವು ತಿಂಗಳ ಹಿಂದೆ, ವಯಡ್ತಾಡಿ ಗ್ರಾಮದ ಐವತ್ತೇಳು ವರ್ಷದ ಮಹಿಳೆಯೊಬ್ಬರು ಪಕ್ಕದ ಮನೆಯ ಕಾರ್ಯಕ್ರಮವೊಂದಕ್ಕೆ ತೆರಳುತ್ತಿದ್ದಾಗ, ಆರೋಪಿಯು ದ್ವಿಚಕ್ರವಾಹನದಲ್ಲಿ ಆಗಮಿಸಿ, ಇಪ್ಪತ್ತೆಂಟು ಗ್ರಾಂ ತೂಕದ ಚಿನ್ನದ ಕರಿಮಣಿ ಸರವನ್ನು ದೋಚಿದ್ದ.‌ ಉಡುಪಿಯ ಎಸ್ ಪಿ ಅರುಣ್.ಕೆ ಮತ್ತು ಹೆಚ್ಚುವರಿ ಎಸ್ ಪಿ ಆದ ಎಸ್.ಟಿ ಸಿದ್ಧಲಿಂಗಪ್ಪ, ಪರಮೇಶ್ವರ ಹೆಗಡೆ ಅವರ ಮಾರ್ಗದರ್ಶನದಂತೆ ಹಾಗೂ ಡಿವೈಎಸ್ ಪಿ ಪ್ರಭು ಅವರ ನಿರ್ದೇಶನದಂತೆ ಬ್ರಹ್ಮಾವರದ ವೃತ್ತ ನಿರೀಕ್ಷಕರಾದ ದಿವಾಕರ್ ಪಿ.ಎಂ, ಕಾನೂನು ಮತ್ತು ಸುವ್ಯವಸ್ಥೆ ಪಿಎಸ್ಐ ಆಗಿರುವ ಸುದರ್ಶನ್ ದೊಡ್ಡಮನಿ, ತನಿಖಾ ಪಿಎಸ್ಐ ಮಹಾಂತೇಶ್ ಮತ್ತು ಇತರೆ ಸಿಬ್ಬಂದಿಗಳನ್ನೊಳಗೊಂಡ ತಂಡವು ಆರೋಪಿಯನ್ನು ಪತ್ತೆಹಚ್ಚಿ ಬಂಧಿಸಿದ್ದಾರೆ. ಆರೋಪಿಯಿಂದ ಸುಮಾರು ಒಂದು ಲಕ್ಷದ ಅರವತ್ತು ಸಾವಿರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಹಾಗೂ ದ್ವಿಚಕ್ರ ವಾಹನವನ್ನು ವಶಪಡಿಸಿಕೊಂಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಮಂಗಳೂರು: ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣ; ಎನ್ಐಎ ಅಧಿಕಾರಿಗಳ ದಾಳಿ

ಮಂಗಳೂರು: ಸುಹಾಸ ಶೆಟ್ಟಿ ಹತ್ಯೆಗೆ ಸಂಬಂಧಿಸಿದಂತೆ ಶನಿವಾರದಂದು ಬಜ್ಪೆ ಹಾಗೂ ಸೂರತ್ಕಲ್ ವ್ಯಾಪ್ತಿಯ ಸುಮಾರು ಹದಿಮೂರು ಮನೆಗಳ ಮೇಲೆ ಎನ್ಐಎ ಅಧಿಕಾರಿಗಳ ತಂಡ ದಾಳಿ ನಡೆಸಿದೆ.‌ ಕೊಲೆ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಗಳ ಮನೆಯ ಮೇಲೆ ದಾಳಿ ನಡೆಸಿ, ಮಾಹಿತಿಯನ್ನು ಕಲೆಹಾಕಿದರು ಎನ್ನಲಾಗಿದೆ.

* ಬೆಳ್ತಂಗಡಿ: ಶಿಶಿಲ ದೇವಾಲಯದಲ್ಲಿ ಮೀನು ಹಿಡಿಯಲು ಬಂದವರಿಗೆ ಪೊಲೀಸರಿಂದ ಎಚ್ಚರಿಕೆ

ಬೆಳ್ತಂಗಡಿ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಶಿಶಿಲ ದೇವಾಲಯದ ಎದುರಿನ ನದಿಯಲ್ಲಿ ಸಾವಿರಾರು ಮೀನುಗಳಿದ್ದು, ಅವು ದೇವರ ಮೀನುಗಳಾಗಿರುವುದರಿಂದ ಹಿಡಿಯಲು ಅವಕಾಶವಿಲ್ಲ. ಅಷ್ಟೇ ಅಲ್ಲದೆ ದೇವಾಲಯದ ಸುತ್ತಮುತ್ತ ಎರಡು ಕಿಲೋಮೀಟರ್ ವ್ಯಾಪ್ತಿಯವರೆಗೂ ಮೀನುಗಾರಿಕೆಯನ್ನು ನಿಷೇಧಿಸಲಾಗಿದೆ. ಆದರೆ ಕಳೆದ ರಾತ್ರಿ ಇಬ್ಬರು ವ್ಯಕ್ತಿಗಳು ದೇವಾಲಯದ ಮೀನುಗಳನ್ನು ಬಲೆ ಹಾಕಿ ಹಿಡಿಯಲು ಬಂದಿದ್ದಾರೆ. ದೇವಾಲಯದ ಬಳಿ ಬೆಳಕನ್ನು ಕಂಡ ಸ್ಥಳೀಯರು ಅಲ್ಲಿಗೆ ಆಗಮಿಸಿದ್ದಾರೆ, ಸಂಗತಿ ತಿಳಿದು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮೀನುಗಳನ್ನು ಹಿಡಿಯದಂತೆ ಎಚ್ಚರಿಕೆ ನೀಡಿ ವಾಪಸ್ ಕಳಿಸಿದ್ದಾರೆ ಎಂಬ ಮಾಹಿತಿ ತಿಳಿದುಬಂದಿದೆ.

* ಕಾಪು: ಟೆಂಪೋ ಸ್ಕೂಟರ್ ಡಿಕ್ಕಿ; ಬೈಕ್ ಸವಾರನ ಸಾವು

ಕಾಪು: ಮಂಗಳೂರು ಕಡೆಯಿಂದ ಉಡುಪಿಗೆ ತೆರಳುತ್ತಿದ್ದ ಸ್ಕೂಟರ್ ಗೆ, ಟೆಂಪೋವೊಂದು ಬಂದು ಡಿಕ್ಕಿ ಹೊಡೆದ ಘಟನೆ ಕಾಪು ಶ್ರೀ ಕಾಳಿಕಾಂಬ ಆಟೋ ವರ್ಕ್ಸ್ ಮುಂದೆ ಶನಿವಾರ ಸಂಜೆ ನಡೆದಿದೆ.‌ ಡಿಕ್ಕಿ ಹೊಡೆದ ಪರಿಣಾಮವಾಗಿ ಸ್ಕೂಟರ್ ಸವಾರ ಸೋಮನಾಥ್ ಎನ್ನುವವರು ಗಂಭೀರವಾಗಿ ಗಾಯಗೊಂಡಿದ್ದರಿಂದ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ. ಕಾಪು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

* ಪುತ್ತೂರು: ರಸ್ತೆಯಲ್ಲಿ ಬಿದ್ದಿದ್ದ ಹಾಸಿಗೆ; ಅನುಮಾನಕ್ಕೆ ತೆರೆಯೆಳೆದ ಪೊಲೀಸರು.

ಪುತ್ತೂರು: ಸೇಡಿಯಾಪು ಬಳಿಯ ಕಡಂಬು ಎಂಬಲ್ಲಿ, ರಸ್ತೆಯ ಬದಿಯಲ್ಲಿ ಹಾಸಿಗೆಯೊಂದು ಸುರುಳಿಯಾಗಿ, ಸುತ್ತಿದ್ದು ಕೆಲವು ಗಂಟೆಗಳ ಕಾಲ ಸ್ಥಳೀಯರ ಕುತೂಹಲಕ್ಕೆ ಕಾರಣವಾಗಿತ್ತು. ಅಲ್ಲದೆ ಯಾರಾದರೂ ಕೊಲೆ ಮಾಡಿ ಮೃತದೇಹವನ್ನು ಇದರಲ್ಲಿ ಹಾಕಿ ಇಟ್ಟಿರಬಹುದು ಎಂಬ ಭಯವೂ ಆವರಿಸಿಕೊಂಡಿತ್ತು. ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಹಾಸಿಗೆಯನ್ನು ಬಿಚ್ಚಿ ನೋಡಿದಾಗ ಏನೂ ಇಲ್ಲದ್ದು ತುಸು ಸಮಾಧಾನವನ್ನುಂಟು ಮಾಡಿತು. ಜನರ ಊಹಾಪೋಹಗಳಿಗೆ ಈ ಮೂಲಕ ತೆರೆಯೆಳೆಯಲಾಯಿತು.

* ಉಳ್ಳಾಲ: ಸರ್ಕಾರಿ ಬಸ್ ಕಂಡಕ್ಟರ್ ಜೀವ ಉಳಿಸಿದ ಚಾಲಕ.

ಉಳ್ಳಾಲ: ಮುಡಿಪುವಿನಿಂದ ಮಂಗಳೂರು ಕಡೆಗೆ ತೆರಳುತ್ತಿದ್ದ, ಸರ್ಕಾರಿ ಬಸ್ ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಂಜೀವ್ ಅವರು ಪ್ರಯಾಣಿಕರಿಗೆ ಟಿಕೆಟ್ ನೀಡುತ್ತಿದ್ದ ಸಂದರ್ಭದಲ್ಲಿ ತಲೆಸುತ್ತಲಾರಂಭಿಸಿದ್ದು, ಕಂಬಳಪದವು ತಲುಪುತ್ತಿದ್ದಂತೆ ಪ್ರಜ್ಞೆ ತಪ್ಪಿದ್ದಾರೆ. ಆಗ ಅದೇ ಬಸ್ ಅನ್ನು ಚಲಾಯಿಸುತ್ತಿದ್ದ ಅವೀಶ್ ಮದರನ್ ಎನ್ನುವ ಚಾಲಕ ಕಂಡಕ್ಟರ್ ನ ಚಿಂತಾಜನಕ ಸ್ಥಿತಿಯನ್ನು ಕಂಡು, ಕೂಡಲೇ ದೇರಳಕಟ್ಟೆ ಕಣಚೂರು ಆಸ್ಪತ್ರೆಗೆ ಬಸ್ ಅನ್ನು ತಂದು ಅವರನ್ನು ದಾಖಲಿಸಿದ್ದಾರೆ.‌ ಚಾಲಕ ಅವೀಶ್ ಅವರ ಸಮಯ ಪ್ರಜ್ಞೆಯಿಂದ ಕಂಡಕ್ಟರ್ ಸಂಜೀವ್ ಬದುಕುಳಿದಿದ್ದು, ಸಾರ್ವಜನಿಕರಿಂದ ಅಪಾರ ಪ್ರಶಂಸೆ ವ್ಯಕ್ತವಾಗಿದೆ. ಅವೀಶ್ ಅವರನ್ನು ಆಸ್ಪತ್ರೆಯ ವತಿಯಿಂದ ಸನ್ಮಾನಿಸಿ ಗೌರವವನ್ನು ಸೂಚಿಸಿದ್ದಾರೆ.‌

* ಸುಳ್ಯ: ಆಪ್ತ ಕಾರ್ಯದರ್ಶಿಗಳ ನೇಮಕ

ಸುಳ್ಯ: ವಿಧಾನ ಪರಿಷತ್ ಸದಸ್ಯರಾದ ಕಿಶೋರ್ ಕುಮಾರ್ ಅವರು ಸುಳ್ಯ ಮೂಲದ ಹಾಗೂ ಕೇಂದ್ರ ಸಚಿವರಾದ ಡಿ.ವಿ.‌ಸದಾನಂದ ಗೌಡ ಅವರ ಆಪ್ತ ಕಾರ್ಯದರ್ಶಿಯಾಗಿ ಹದಿನೈದು ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಜಯಪ್ರಕಾಶ್ ಎಣ್ಣೆ ಮಜಲು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಪಂಚಾಯತ್ ಅಭಿವೃದ್ಧಿಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಅನುಭವವುಳ್ಳ ಅವಿನಾಶ್ ಬಿ. ಆರ್ ಅವರನ್ನು ಆಪ್ತ ಕಾರ್ಯದರ್ಶಿಗಳನ್ನಾಗಿ ನೇಮಕ ಮಾಡಿದ್ದಾರೆ.

•ಉಡುಪಿ: ನ್ಯಾಯಾಲಯವನ್ನು ನಿಂದಿಸಿದ ವಕೀಲರು

ಉಡುಪಿ: ಮಾರಕಾಸ್ತ್ರಗಳಿಂದ ಹೊಡೆದಾಡಿಕೊಂಡ, ಮಲ್ಪೆ ಪೊಲೀಸ್ ಠಾಣೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದ್ದ ವೇಳೆ ಆರೋಪಿ ಪರ ವಕೀಲರಾದ ಮೊಹಮ್ಮದ್ ಇಕ್ಬಾಲ್ ಅವರು ಉದ್ದೇಶಪೂರ್ವಕವಾಗಿ ಕಾನೂನುಬಾಹಿರವಾದ ಅಸಂಬದ್ಧ, ಅವಾಚ್ಯ ಶಬ್ದಗಳನ್ನು ಬಳಸಿ, ವಿಚಾರಣೆಗೆ ಅಡಚಣೆಯನ್ನುಂಟು ಮಾಡಿದ್ದಲ್ಲದೆ, ನ್ಯಾಯಾಧೀಶರನ್ನು ನಿಂದಿಸಿ ಅಪಮಾನಗೊಳಿಸಿದ್ದಾರೆ. ಆಗ ನ್ಯಾಯಾಧೀಶರು ಘಟನೆಗೆ ಸಂಬಂಧಿಸಿದಂತೆ ಐಪಿಸಿ ಕಾಲಂ 228 ಅಥವಾ ಬಿಎನ್ಎಸ್ ಕಾಲಂ 267ರ ಅನ್ವಯ ಪ್ರಕರಣವನ್ನು ದಾಖಲಿಸಿ, ವಕೀಲರನ್ನು ಬಂಧಿಸಲು ಪೊಲೀಸರಿಗೆ ಆದೇಶ ಹೊರಡಿಸುತ್ತಾರೆ. ಬಳಿಕ ತಪ್ಪಿನ ಅರಿವಾದ ವಕೀಲರು ಕ್ಷಮಾಪಣಾ ಪತ್ರವನ್ನು ಬರೆದು, ನ್ಯಾಯಾಲಯಕ್ಕೆ ಒಪ್ಪಿಸುವ ಮೂಲಕ ಶಿಕ್ಷೆಯಿಂದ ಪಾರಾಗಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

* ಬಂಟ್ವಾಳ: ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತದ ಭೀತಿ

ಬಂಟ್ವಾಳ: ರಾಜ್ಯಾದ್ಯಂತ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದ್ದರೂ, ಹಿಂದಿನ ಮಳೆಯಿಂದ ಉಂಟಾದ ಸಮಸ್ಯೆಗಳಿಂದ ಇನ್ನೂ ಸಂಪೂರ್ಣವಾಗಿ ಚೇತರಿಸಿಕೊಳ್ಳಲಾಗಿಲ್ಲ. ಇದಕ್ಕೆ ನಿದರ್ಶನ ಎಂದರೆ ಮೈಸೂರು ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಗುಡ್ಡ ಕುಸಿತದ ಭೀತಿ ಉಂಟಾಗಿದೆ.‌ ಈಗಾಗಲೇ ರಸ್ತೆಯ ಅರ್ಧಭಾಗದವರೆಗೂ ಸುಮಾರು ಇಪ್ಪತ್ತು ಅಡಿಗಳಷ್ಟು ಮಣ್ಣು ಜಾರಿಕೊಂಡು ಬಂದಿದ್ದು, ಒಂದು ಕಡೆಯಿಂದ ಮಾತ್ರ ವಾಹನಗಳು ಸಂಚರಿಸುವಂತಹ ಸನ್ನಿವೇಶ ಎದುರಾಗಿದೆ.‌ ಮತ್ತೆ ಮಳೆ ಪ್ರಾರಂಭಗೊಂಡು, ಅಧಿಕ ಪ್ರಮಾಣದಲ್ಲಿ ಸುರಿದರೆ ರಸ್ತೆ ಸಂಪೂರ್ಣವಾಗಿ ಬಂದ್ ಆಗುವ ಸಾಧ್ಯತೆ ಇದೆ ಎನ್ನಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಹೆದ್ದಾರಿ ಉಪ ವಿಭಾಗದ ಅಧಿಕಾರಿಗಳು ಆಗಮಿಸಿ, ಪರಿಶೀಲನೆ ನಡೆಸಿದರು.

* ಕುಂದಾಪುರ: ಖ್ಯಾತ ಮಹಿಳಾ ಲೇಖಕಿ ವೈದೇಹಿ ಅವರಿಗೆ ಪತಿ ವಿಯೋಗ

ಕುಂದಾಪುರ: ವೈದೇಹಿ ಕಾವ್ಯನಾಮದ ಮೂಲಕ ಕನ್ನಡ ಸಾಹಿತ್ಯದಲ್ಲಿ ಚಿರಪರಿಚಿತರಾದ ಜಾನಕಿ ಶ್ರೀನಿವಾಸಮೂರ್ತಿ ಅವರ ಪತಿ ಕೆ.ಎಲ್. ಶ್ರೀನಿವಾಸಮೂರ್ತಿ ಅವರು ಇಂದು ಬೆಳಿಗ್ಗೆ ಹೃದಯಘಾತದಿಂದ ನಿಧನರಾಗಿದ್ದಾರೆ. ಮೂಲತಃ ಶಿವಮೊಗ್ಗ ಜಿಲ್ಲೆಯವರಾದ ಶ್ರೀನಿವಾಸ ಮೂರ್ತಿ ಅವರು ಕುಂದಾಪುರದ ಅಳಿಯ. ನಿವೃತ್ತಿಯ ಬಳಿಕ ಪತ್ನಿ ವೈದೇಹಿ ಅವರೊಂದಿಗೆ ಮಣಿಪಾಲದ ಇರುವಂತಿಗೆ ಮನೆಯಲ್ಲಿ ವಾಸವಾಗಿದ್ದರು. ಶ್ರೀನಿವಾಸಮೂರ್ತಿಯವರು ಪತ್ನಿ ವೈದೇಹಿ ಮತ್ತು ಲೇಖಕಿ ಪುತ್ರಿಯರಾದ ನಯನ ಕಶ್ಯಪ್ ಮತ್ತು ಪಲ್ಲವಿ ರಾವ್ ಅವರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.