Categories
ಕರಾವಳಿ

ಕರಾವಳಿಯಲ್ಲಿ ಎರಡು ಬಿಗ್ ಗೋಲ್ಮಾಲ್!

ಕರಾವಳಿಯಲ್ಲಿ ಎರಡು ಬಿಗ್ ಗೋಲ್ಮಾಲ್!

ಸ್ಟೋರಿ 1

ಸಿನಿಮಾ ಮಾದರಿಯಲ್ಲಿ ನೂರಾರು ಕೋಟಿ ವಂಚಿಸಿದ ಯುವಕ ಅರೆಸ್ಟ್!
– ಶ್ರೀಮಂತ ಉದ್ಯಮಿಗಳೇ ಇವನ ಟಾರ್ಗೆಟ್… ಕೋಟಿ ಕೋಟಿ ವಂಚನೆ
– ಮನೆ ನೋಡಿ ಶಾಕ್ ಆದ ಪೊಲೀಸರು: ಕೋಟಿ ಕೋಟಿ ಮೌಲ್ಯದ ಮದ್ಯದ ಬಾಟಲಿಗಳು… ಹುಡುಗಿ…!

ಸ್ಟೋರಿ 2

ಸೈಬರ್ ಕಳ್ಳರ ನಂಬಿ ಮನೆ ಚಿನ್ನ ದೋಚಿದ ಮಹಿಳೆ!?
– ಸುಳ್ಯದ ಮಹಿಳೆ ವಿರುದ್ಧ ಈಗ ಕೇಸ್: ಏನಿದು ಪ್ರಕರಣ
– ಹಣ ದುಪ್ಪಟ್ಟು ಆಸೆಗೆ ಬಿದ್ದು ಜೀವನ ಕಳೆದುಕೊಂಡ ಮಹಿಳೆ!

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಕರಾವಳಿ ಈ ಪ್ರಕರಣ ನೋಡಿ ಬೆಚ್ಚಿ ಬಿದ್ದಿದೆ. ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲಿ ತಾನೊಬ್ಬ ಉದ್ಯಮಿ ಎಂದು ಶ್ರೀಮಂತ ವ್ಯಕ್ತಿಗಳನ್ನು ಬಲೆಗೆ ಹಾಕಿಕೊಂಡು, ಜಾಗದ ವ್ಯವಹಾರ ಮತ್ತು ಸಾಲವನ್ನು ನೀಡುವುದಾಗಿ ನಂಬಿಸಿ ಸುಮಾರು ಇನ್ನೂರು ಕೋಟಿಯಷ್ಟು ಹಣವನ್ನು ಕಬಳಿಸಿದ ಮಂಗಳೂರಿನ ಜಪ್ಪಿನಮೊಗರು ತಂದೊಳಿಗೆ ನಿವಾಸಿ ರೋಹನ್ ಸಲ್ಡಾನ ಕೊನೆಗೂ ಪೊಲೀಸರ ವಶಕ್ಕೆ ಸಿಕ್ಕಿದ್ದಾನೆ.‌ ಈತನ ಲೈಫ್ ಸ್ಟೈಲ್ ಇದೀಗ ಭಾರೀ ಚರ್ಚೆಗೆ ಕಾರಣವಾಗಿದೆ.
ಈತ ಮಾತಲ್ಲಿ ಎಲ್ಲರ ಮೋಡಿ ಮಾಡಿದ್ದು, ಮೊದಲಿಗೆ ಒಂದು ಸುತ್ತಿನ ಮಾತುಕತೆ ನಡೆಸಿ, ಐವತ್ತರಿಂದ ನೂರು ಕೋಟಿ ಹಣವನ್ನು ಕೇಳುತ್ತಿದ್ದ. ಅದಕ್ಕಿಂತ ಹೆಚ್ಚಿನ ಮೊತ್ತದ ಸಾಲದ ಅಗತ್ಯವಿದ್ದಲ್ಲಿ ತನ್ನ ಬೇಡಿಕೆ ಇನ್ನು ಹೆಚ್ಚಿಸುತ್ತಿದ್ದ. ತಾನು ಅಂದುಕೊಂಡಷ್ಟು ಹಣ ದೊರೆತ ಬಳಿಕ ವ್ಯವಹಾರ ನಡೆಸಿದ ವ್ಯಕ್ತಿಗಳಿಂದ ಕಣ್ಮರೆಯಾಗಿ ಬಿಡುತ್ತಿದ್ದ. ಕೇವಲ ಮೂರು ತಿಂಗಳಲ್ಲೇ ನಲವತ್ತೈದು ಕೋಟಿ ಹಣ ಈ ರೀತಿ ಅಕ್ರಮವಾಗಿ ಸಂಪಾದಿಸಿದ್ದಾನೆ ಎನ್ನಲಾಗಿದೆ.‌
ಬಂಧಿಸುವಾಗ ಪೊಲೀಸರು ಈತನ ಮನೆಯನ್ನು ಕಂಡು ಅಚ್ಚರಿಗೊಳಗಾಗಿದ್ದಾರೆ. ದೊಡ್ಡ ಬಂಗಲೆ, ಅದರೊಳಗೆ ಐಷಾರಾಮಿ ಕೊಠಡಿಗಳು, ಕಬೋರ್ಡ್ ಒಳಗೆ ಬಾಗಿಲಿದ್ದು, ಅದನ್ನು ತಳ್ಳಿದರೆ ಒಳಗೊಂದು ಬೃಹತ್ ಕೋಣೆ ದೊರೆಯುತ್ತದೆ. ಪೊಲೀಸರು ಮತ್ತು ವಂಚನೆಗೆ ಒಳಗಾದ ವ್ಯಕ್ತಿಗಳು ಆತನನ್ನು ಹುಡುಕಿಕೊಂಡು ಬಂದಾಗ, ಇಲ್ಲಿಯೇ ಅಡಗುತ್ತಿದ್ದ ಎಂಬ ಸಂಗತಿ ತಿಳಿದು ಬಂದಿದೆ. ಪೊಲೀಸರು ಮನೆಯನ್ನು ಪರಿಶೀಲಿಸಿದಾಗ ಇಡಿ ಮನೆಯ ತುಂಬಾ ಕೋಟಿ ರೂಪಾಯಿ ಮೌಲ್ಯದ ವಿದೇಶಿ ಮದ್ಯಗಳ ಬಾಟಲಿಗಳೇ ತುಂಬಿಕೊಂಡಿದ್ದವು. ಮನೆಯೊಳಗೆ ವಿದೇಶಿ ಮಾದರಿಯ ದೊಡ್ಡದಾದ ಐಷಾರಾಮಿ ಪಬ್ ಒಂದನ್ನು ಕಟ್ಟಿಸಿದ್ದ ಎನ್ನಲಾಗಿದೆ. ಅಲ್ಲದೆ ದಾಳಿ ವೇಳೆ ಮಲೇಷಿಯಾದ ಓರ್ವ ಹುಡುಗಿ ಕೂಡ ಇದ್ದಳು ಎನ್ನಲಾಗಿದೆ. ಇದೀಗ ಆತನ ಮನೆಯ ವಿಡಿಯೋ ವೈರಲ್ ಆಗುತ್ತಿವೆ.

ಟೆಲಿಗ್ರಾಮ್ ಮೆಸೇಜ್ ನಂಬಿ ಲಕ್ಷ ಲಕ್ಷ ಕಳೆದುಕೊಂಡಳು!

ಸುಳ್ಯ: ಇಲ್ಲೊಬ್ಬಳು ಮಹಿಳೆ ಸೈಬರ್ ಕಳ್ಳರ ಮಾತನ್ನು ನಂಬಿ ತನ್ನ ಮನೆಯಲ್ಲಿದ್ದ ಎಲ್ಲಾ ಚಿನ್ನದ ಆಭರಣ ಮಾರಿ ಇದೀಗ ತಗಲಾಕಿಕೊಂಡಿದ್ದಾಳೆ.
ಸುಳ್ಯ ತಾಲೂಕಿನ ಗುತ್ತಿಗಾರು ನಿವಾಸಿಯಾದ ಮೂವತ್ತು ವರ್ಷದ ಮಹಿಳೆಗೆ ಹಣವನ್ನು ದುಪ್ಪಟ್ಟುಗೊಳಿಸಿ ಕೊಡುವುದಾಗಿ ನಂಬಿಸಿದ್ದಾರೆ. ಇದರಿಂದ ಮಹಿಳೆಯು ಹಣವನ್ನು ಹೊಂದಿಸುವ ಸಲುವಾಗಿ, ಅಡ್ಡದಾರಿ ಹಿಡಿದಿರುವ ಘಟನೆ ನಡೆದಿದೆ.
ಮಹಿಳೆಗೆ ಮಾರ್ಚ್ ತಿಂಗಳಲ್ಲಿ ಟೆಲಿಗ್ರಾಂ ನಿಂದ, ಏರ್ ಫಜ್ ಎಂಬ ಹೆಸರಿನ ಕಂಪನಿಯ ಲಿಂಕ್ ಬಂದಿತ್ತು. ಆ ಲಿಂಕ್ ಅನ್ನು ತೆರೆದು, ಟೆಲಿಗ್ರಾಂ ಖಾತೆಯನ್ನು ತೆರೆಯುವಂತೆ ಸೂಚಿಸಲಾಯಿತು.‌ ಅದರಂತೆ ಮಹಿಳೆಯು ತನ್ನ ಹೆಸರಿನಲ್ಲಿ ಟೆಲಿಗ್ರಾಂ ಖಾತೆಯನ್ನು ತೆರೆದಳು. ಬಳಿಕ ಟೆಲಿಗ್ರಾಂ ಖಾತೆಯಲ್ಲಿ ಠೇವಣಿಯನ್ನು ಹೊಂದಿದರೆ ಕಮಿಷನ್ ಕೊಡುವುದಾಗಿ ಆಮಿಷ ಒಡ್ಡಿದ್ದಾರೆ.‌ ಮಹಿಳೆಯು ಹಣವನ್ನು ಹೊಂದಿಸಲು ತನ್ನ ಚಿನ್ನಾಭರಣಗಳೊಂದಿಗೆ ಗಂಡನ ಚಿನ್ನದ ಸರ ಮತ್ತು ಉಂಗುರ, ಬಾವನ ಬಳಿ ಇದ್ದ ಚಿನ್ನದ ಸರ ಮತ್ತು ಉಂಗುರ, ನಾದಿನಿಯ ಆಭರಣಗಳು ಮತ್ತು ತವರುಮನೆಯವರ ಒಡವೆಗಳನ್ನು ಅಪಹರಿಸಿ, ಅತ್ತೆಯ ಖಾತೆಯಿಂದಲೂ ಸುಮಾರು 69 ಸಾವಿರದಷ್ಟು ಹಣವನ್ನು ತೆಗೆದುಕೊಂಡು, ಠೇವಣಿಗೆ ಹಣವನ್ನು ಹೊಂದಿಸಿದ್ದಾಳೆ. ಇಷ್ಟಾದರೂ ಆಕೆಗೆ ತಾನು ವಂಚನೆಗೆ ಒಳಗಾಗುತ್ತಿದ್ದೇನೆ ಎನ್ನುವುದು ತಿಳಿದುಬಂದಿಲ್ಲ. ಗಂಡನು ಮನೆಯಲ್ಲಿ ಒಡವೆಗಳು ನಾಪತ್ತೆಯಾಗಿರುವುದರಿಂದ, ಸುಬ್ರಹ್ಮಣ್ಯ ಪೊಲೀಸ್ ಠಾಣೆಗೆ ದೂರು ನೀಡಿದಾಗ, ಪೊಲೀಸರಿಗೆ ಮನೆಯವರ ಮೇಲೆಯೇ ಅನುಮಾನ ವ್ಯಕ್ತವಾಗಿದೆ. ಅದೇ ಸಮಯಕ್ಕೆ ಮಹಿಳೆಯ ತಂಗಿಯ ಒಡವೆಗಳೂ ಕಾಣೆಯಾಗಿದ್ದುದರಿಂದ ಪೊಲೀಸರಿಗೆ ತಮ್ಮ ಅನುಮಾನ ದೃಢವಾಯಿತು. ಮಹಿಳೆಯನ್ನು ಕರೆಸಿ, ತನಿಖೆ ನಡೆಸಿದಾಗ ಹಣವನ್ನು ಹೊಂದಿಸಲು ಈ ರೀತಿ ಮಾಡಿರುವುದಾಗಿ ವಿಷಯವನ್ನು ಬಹಿರಂಗಪಡಿಸಿದಳು. ಮಹಿಳೆಯು ಠೇವಣಿಗೆಂದು ಮೊದಲಿಗೆ 11,500 ರೂಪಾಯಿ ಕಟ್ಟಿದ್ದು, ಕಮಿಷನ್ ಎಂದು 21.109 ರೂಪಾಯಿ ಹಣ ಮಹಿಳೆಯ ಖಾತೆಗೆ ಬಂದಿತ್ತು.‌ ಎರಡನೇ ಹಂತದಲ್ಲಿ ಎರಡು ಲಕ್ಷದಷ್ಟು ಹಣವು ಕಮಿಷನ್ ರೂಪದಲ್ಲಿ ಆಕೆಗೆ ಲಭಿಸಿತ್ತು. ಆದರೆ ಆ ಎರಡು ಲಕ್ಷ ರೂಪಾಯಿ ಹಣವನ್ನು ಪುನಃ ಠೇವಣಿಗೆ ಹಾಕಿದ್ದಾಳೆ ಎನ್ನಲಾಗಿದೆ.‌ ಹೀಗೆ ಸುಮಾರು 11,21,863 ರೂಪಾಯಿಗಳಷ್ಟು ಕಟ್ಟಿದ್ದು, ಮರಳಿ ಹಣ ಹಿಂತಿರುಗಿ ಬಂದಿಲ್ಲ.‌ ಒಡವೆಗಳನ್ನು ಅಪಹರಿಸಿದ್ದರಿಂದ ಕುಟುಂಬದಲ್ಲಿ ಅವಳನ್ನು ಕಡೆಗಣಿಸಲಾಗಿದೆ. ಹೀಗೆ ಮಹಿಳೆಯು ಹಣದ ದುರಾಸೆಗೆ ಬಲಿಯಾಗಿ, ಹಣವನ್ನು ಕಳೆದುಕೊಳ್ಳುವುದರ ಜೊತೆಗೆ ಸಂಸಾರದಲ್ಲೂ ನಿರ್ಲಕ್ಷಕ್ಕೊಳಗಾಗಿದ್ದಾಳೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.