ಟಾಪ್ ನ್ಯೂಸ್ ಕರಾವಳಿ
ಮಂಗಳೂರು ಅಂಡರ್ ಪಾಸ್ ಯಾವಾಗ ಸ್ವಾಮಿ?
– ಮಳೆ ನಡುವೆ ಜನರ ಓಡಾಟದ ಪರದಾಟ
– ನಂತೂರು ಮತ್ತು ಕೆಪಿಟಿ ವೃತ್ತದ ನಡುವೆ ಅಂಡರ್ ಪಾಸ್
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಮಂಗಳೂರು: ಕಳೆದ ವರ್ಷವೇ ರಾಷ್ಟ್ರೀಯ ಹೆದ್ದಾರಿ 66ರ ನಂತೂರು ಮತ್ತು ಕೆಪಿಟಿ ವೃತ್ತದ ನಡುವೆ ಅಂಡರ್ ಪಾಸ್ ನಿರ್ಮಿಸಲು ನಿರ್ಧರಿಸಿದ್ದು, ಒಂದು ವರ್ಷ ಕಳೆದರೂ ಇನ್ನೂ ಕಾಮಗಾರಿ ಪ್ರಾರಂಭಗೊಂಡಿಲ್ಲ. ಅಂಡರ್ ಪಾಸ್ ಗೂ ಮೊದಲೇ ಸರ್ವಿಸ್ ರಸ್ತೆ ಆಗಬೇಕಿದ್ದು, ಅದರ ಕಡೆಯೂ ಗಮನಹರಿಸಿಲ್ಲ. ಈ ಬಗ್ಗೆ ಇದೀಗ ಜನರ ಆಕ್ರೋಶದ ಕಟ್ಟೆ ಒಡೆದಿದೆ.
ಮಳೆಯ ಕಾರಣ ನೀಡಿ ಕಾಮಗಾರಿಯನ್ನು ಮಂದಗತಿಯಲ್ಲಿ ನಡೆಸುತ್ತಿದ್ದಾರೆ, ಮಳೆ ನಿಂತ ಬಳಿಕ ಸರ್ವಿಸ್ ರಸ್ತೆಗೆ ಸಂಬಂಧಿಸಿದಂತೆ ಕೆಲಸವನ್ನು ಪ್ರಾರಂಭಿಸಿದರೂ ಕೆಲವೇ ತಿಂಗಳುಗಳಲ್ಲಿ ಪೂರ್ಣಗೊಳಿಸುವುದು ಸಂದೇಹ ಎನ್ನಲಾಗಿದೆ. ನಂತೂರು ಬಳಿ ಈಗಾಗಲೇ ಪ್ರಾರಂಭಿಸಿರುವ ಚರಂಡಿ ಕಾಮಗಾರಿ ಕೂಡ ಪೂರ್ಣಗೊಂಡಿಲ್ಲ, ಇದರ ನಿರ್ಮಾಣಕ್ಕಾಗಿ ಹೆದ್ದಾರಿ ಬದಿಯಲ್ಲಿರುವ ಗುಡ್ಡ ಮತ್ತು ಕೆಲವು ಕಟ್ಟಡಗಳನ್ನು ತೆರವುಗೊಳಿಸಬೇಕಿತ್ತು, ಆ ಕೆಲಸವು ಹಾಗೆಯೇ ಬಾಕಿ ಉಳಿದಿದೆ. ಉಡುಪಿ ಕಡೆಯಿಂದ ಪಂಪ್ ವೆಲ್ ಕಡೆಗೆ ತೆರಳುವವರಿಗೆ ಮಾತ್ರ ಹೆದ್ದಾರಿ ಬಳಕೆಯಾಗುತ್ತಿದೆ. ಇನ್ನುಳಿದಂತೆ ಬಿ ಸಿ ರಸ್ತೆ, ಬೆಂಗಳೂರು, ಮೈಸೂರು, ಮಂಗಳೂರು ನಗರಕ್ಕೆ ತೆರಳುವವರು, ಮಂಗಳೂರು ನಗರದ ಕಡೆಯಿಂದ ಬರುವವರು ಮತ್ತು ವಿಮಾನ ನಿಲ್ದಾಣಗಳಿಗೆ ತೆರಳುವವರು ಅಧಿಕ ಪ್ರಮಾಣದಲ್ಲಿ ಸರ್ವಿಸ್ ರಸ್ತೆಯನ್ನು ಅವಲಂಬಿಸಿದ್ದಾರೆ. ಹೀಗಿರುವಾಗ ಸಂಬಂಧಿತ ವ್ಯಕ್ತಿಗಳು ಈ ರೀತಿ ಆಮೆಗತಿಯಲ್ಲಿ ಕಾಮಗಾರಿಯನ್ನು ನಡೆಸುತ್ತಿದ್ದರೆ ಪ್ರಯಾಣಿಕರಿಗೆ ಬಹಳ ಅಡಚಣೆಯುಂಟಾಗುತ್ತದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅಲ್ಲದೆ ಈ ಕಾಮಗಾರಿಗಳ ಗುತ್ತಿಗೆಯನ್ನು ವಹಿಸಿಕೊಂಡಿರುವ ಕೃಷಿ ಇನ್ಪ್ರಾ ಕಂಪನಿಯವರು ಸಮಯಕ್ಕೆ ಸರಿಯಾಗಿ ಕಾರ್ಯವನ್ನು ನಿರ್ವಹಿಸುತ್ತಿಲ್ಲವಾದ್ದರಿಂದ ಜವಾಬ್ದಾರಿಯನ್ನು ಬೇರೆ ಕಂಪನಿಗೆ ವಹಿಸಿ ಎಂದು ಸಾರ್ವಜನಿಕರು ಮನವಿ ಸಲ್ಲಿಸುತ್ತಿದ್ದಾರೆ ಹಾಗೂ ಇಲಾಖೆಯವರು ಈ ವಿಚಾರದ ಕುರಿತು ಚರ್ಚೆಯನ್ನು ನಡೆಸುತ್ತಿದ್ದಾರೆ ಎಂದು ಹೇಳಲಾಗಿದೆ. ಇದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಂಸದರಾದ ಬ್ರಿಜೇಶ್ ಚೌಟ ಅವರು ಈ ಹಿಂದೆ ಭೂಸ್ವಾಧೀನಕ್ಕೆ ಸಂಬಂಧಿಸಿದಂತೆ ವಿರೋಧಗಳು ಇದ್ದ ಕಾರಣ ಕಾಮಗಾರಿ ವಿಳಂಬವಾಯಿತು. ಅಲ್ಲದೆ ಅಷ್ಟು ಹೊತ್ತಿಗೆ ಮಳೆ ಪ್ರಾರಂಭಗೊಂಡಿತ್ತು. ಮಳೆಯು ತೀವ್ರವಾಗಿದ್ದಾಗ ಭೂಮಿಯನ್ನು ಅಗೆದು, ಕಾಮಗಾರಿ ನಡೆಸಿದರೆ ಸಮಸ್ಯೆ ಮತ್ತಷ್ಟು ಅಧಿಕಗೊಳ್ಳುವ ಸಾಧ್ಯತೆ ಇತ್ತು. ಆದಕಾರಣ ಮಳೆಗಾಲವು ಮುಗಿದ ಬಳಿಕ ಇನ್ನೆರಡು ತಿಂಗಳಲ್ಲಿ ಅಂಡರ್ ಪಾಸ್ ಕಾಮಗಾರಿಯನ್ನು ಪ್ರಾರಂಭಿಸುವಂತೆ ಸೂಚಿಸಲಾಗಿದೆ. ಅಲ್ಲಿಯವರೆಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದ ರೀತಿಯಲ್ಲಿ ಸರ್ವಿಸ್ ರಸ್ತೆಯನ್ನು ಮಾಡಲಾಗುವುದು ಎಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ