ಹುಟ್ಟುಹಬ್ಬದ ದಿನವೇ ಬಿಜೆಪಿ ಕಾರ್ಯಕರ್ತನ ದಾರುಣ ಅಂತ್ಯ
NAMMUR EXPRESS NEWS
ಕಾರ್ಕಳ: ಕಾರ್ಕಳ ತಾಲ್ಲೂಕಿನ ಕುಕ್ಕುಂದೂರು ಗ್ರಾಮದ ಪರಪುವಿನಲ್ಲಿ ಜೂನ್ 7ರಂದು ರಾತ್ರಿ ಬಿ ಜೆ ಪಿ ಕಾರ್ಯಕರ್ತರೊಬ್ಬರು ದುರ್ಘಟನೆಯಲ್ಲಿ ದಾರುಣವಾಗಿ ಸಾವಿಗೀಡಾದ ಘಟನೆ ನಡೆದಿದೆ.
ಮೃತ ವ್ಯಕ್ತಿ ಕುಕ್ಕುಂದೂರು ಗ್ರಾಮದ ಪರಪ್ಪು ನಿವಾಸಿ ಹಾಗೂ ಆಟೋ ಚಾಲಕರಾಗಿದ್ದ ಸುಬ್ರಹ್ಮಣ್ಯ ಸಾಲ್ಯಾನ್ (36). ಅವರು ಕುಕ್ಕುಂದೂರು ಬಿಜೆಪಿ ಗ್ರಾಮ ಸಮಿತಿಯ ಅಧ್ಯಕ್ಷರಾಗಿದ್ದರು.
ಘಟನೆಯ ವಿವರ:
ಶನಿವಾರ ರಾತ್ರಿ ಮಗುವಿಗೆ ಐಸ್ ಕ್ರೀಂ ತರಲೆಂದು ಸುಬ್ರಹ್ಮಣ್ಯ ಅವರು ಸ್ಕೂಟಿಯಲ್ಲಿ ಪೇಟೆಗೆ ತೆರಳಿದ್ದರು. ಮರಳಿ ಮನೆಗೆ ಬರುತ್ತಿದ್ದ ವೇಳೆ ಸುಮಾರು ರಾತ್ರಿ 10:30ರ ವೇಳೆಗೆ ಪರಪ್ಪು ಸೇತುವೆ ಬಳಿ ಸ್ಕೂಟಿಯ ನಿಯಂತ್ರಣ ತಪ್ಪಿ ಹೊಳೆಗೆ ಬಿದ್ದಿದ್ದಾರೆ ಎಂದು ಶಂಕಿಸಲಾಗಿದೆ.
ರಾತ್ರಿ ತುಂಬಾ ಹುಡುಕಿದರೂ ಸುಬ್ರಹ್ಮಣ್ಯ ಅವರ ಪತ್ತೆಯಾಗಿಲ್ಲ. ಅಂತಿಮವಾಗಿ, ಜೂನ್ 8ರಂದು ಬೆಳಿಗ್ಗೆ ಗ್ರಾಮಸ್ಥರು ಹುಡುಕಾಟ ನಡೆಸಿದ ವೇಳೆ ಸೇತುವೆಯ ಕೆಳಗೆ ಸ್ಕೂಟಿಯೊಂದಿಗೆ ಮೃತದೇಹ ಪತ್ತೆಯಾಗಿದೆ.
ಸುಬ್ರಹ್ಮಣ್ಯ ಅವರು ತಂದೆ ಕೃಷ್ಣ ಸಾಲ್ಯಾನ್, ತಾಯಿ ಕೌಶಲ್ಯ, ತಂಗಿ ಆಶಾ, ಪತ್ನಿ ಮನಿಶಾ ಮತ್ತು ಪುತ್ರಿ ತಸ್ಮಯಿ ಅವರನ್ನು ಅಗಲಿದ್ದಾರೆ.
ಘಟನಾ ಸ್ಥಳದಲ್ಲಿ ನೀರಿನ ಆಳತೆ ಕಡಿಮೆಯಿರುವ ಹಿನ್ನೆಲೆಯಲ್ಲಿ, ಸ್ಕೂಟಿಯ ಅಪಘಾತಕ್ಕೊಳಗಾಗಿ ಹೃದಯಾಘಾತದಿಂದ ಅವರು ಮೃತಪಟ್ಟಿರುವ ಸಾಧ್ಯತೆಯಿದೆ ಎಂಬ ಅಭಿಪ್ರಾಯವನ್ನು ಸ್ಥಳೀಯರು ವ್ಯಕ್ತಪಡಿಸಿದ್ದಾರೆ.
