ಕ್ರಿಯೇಟಿವ್ ಸ್ಪೂರ್ತಿ ಮಾತು ಸರಣಿಯ 9ನೇ ಆವೃತ್ತಿಯ ಕಾರ್ಯಕ್ರಮ
– ಜ್ಞಾನಕ್ಕಾಗಿ ಓದಿದ ಓದು ಶಾಶ್ವತ – ಶ್ರೀ ಕೆ. ರಾಜೇಂದ್ರ ಭಟ್ ಅವರ ಪ್ರೇರಣಾದಾಯಕ ಮಾತುಗಳು
– ವಿದ್ಯಾರ್ಥಿಗಳಿಗೆ ದೈನಂದಿನ ಜೀವನದಲ್ಲಿ ಅನುಸರಿಸಬಹುದಾದ 10 ಸ್ಪೂರ್ತಿದಾಯಕ ಅಂಶ
NAMMUR EXPRESS NEWS
ಕಾರ್ಕಳ: “ಪರೀಕ್ಷೆಗೋಸ್ಕರ ಮಾತ್ರ ಓದಿದ ಓದು ಅಲ್ಪಕಾಲಿಕ, ಆದರೆ ಜ್ಞಾನಕ್ಕಾಗಿ ಓದಿದ ಓದು ಶಾಶ್ವತವಾಗಿರುತ್ತದೆ,” ಎಂದು ಖ್ಯಾತ ವಕ್ತಾರರು ಹಾಗೂ ರಾಷ್ಟ್ರೀಯ ಮಟ್ಟದ ಜೆಸಿಐ ತರಬೇತುದಾರರಾದ ಶ್ರೀ ಕೆ. ರಾಜೇಂದ್ರ ಭಟ್ ಹೇಳಿದರು.
ಕ್ರಿಯೇಟಿವ್ ಕಾಲೇಜು, ಕಾರ್ಕಳದ ನವೀನ ತತ್ವದ ಆಧಾರದ ಮೇಲೆ ರೂಪುಗೊಂಡಿರುವ ಕ್ರಿಯೇಟಿವ್ ಸ್ಪೂರ್ತಿ ಮಾತು ಸರಣಿಯ 9ನೇ ಆವೃತ್ತಿಯ ಕಾರ್ಯಕ್ರಮವು “ಕಲಿಯುವುದು ಒಂದು ಹಬ್ಬ – ಸಂಭ್ರಮಿಸೋಣ” ಎಂಬ ಶೀರ್ಷಿಕೆಯಲ್ಲಿ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಉತ್ಸಾಹದಿಂದ ನಡೆಯಿತು.
ಶ್ರೀ ಭಟ್ ಅವರು ತಮ್ಮ ಉಜ್ವಲ ಭಾಷಣದಲ್ಲಿ, ಇಂದಿನ ವಿದ್ಯಾರ್ಥಿಗಳ ಓದು ಪರೀಕ್ಷಾ ಮಿತಿಯಲ್ಲೇ ಸೀಮಿತವಾಗಿರುವುದರಿಂದ, ಅವರು ಓದಿದ ವಿಷಯಗಳನ್ನು ಶೀಘ್ರವೇ ಮರೆತು ಹೇಳುತ್ತಾರೆ ಎಂದು ಆತಂಕ ವ್ಯಕ್ತಪಡಿಸಿದರು. “ಜ್ಞಾನಕೋಸ್ಕರ ಓದಿದಾಗ ಮಾತ್ರ ಅದರ ಸಾರ್ಥಕತೆ ಬಿಂಬಿಸುತ್ತದೆ,” ಎಂದು ಅವರು ಸಲಹೆ ನೀಡಿದರು.
ಸ್ಫೂರ್ತಿ ಹೇಗೆ ಸೃಷ್ಟಿಸಬೇಕು ಎಂಬ ಕುರಿತು, ಅವರು ವಿದ್ಯಾರ್ಥಿಗಳಿಗೆ ದೈನಂದಿನ ಜೀವನದಲ್ಲಿ ಅನುಸರಿಸಬಹುದಾದ 10 ಸ್ಪೂರ್ತಿದಾಯಕ ವಿಧಾನಗಳನ್ನು ಉದಾಹರಣೆಗಳೊಂದಿಗೆ ವಿವರಿಸಿದರು. “ಶರೀರದ ಒಳಗಿನಿಂದ ಎನರ್ಜಿ ಸೃಷ್ಟಿಸಿದಾಗ ಮಾತ್ರ ನಿಜವಾದ ಸ್ಪೂರ್ತಿ ಮೂಡುತ್ತದೆ. ಮೌನ ಓದಿನಿಂದ ಹಲವಾರು ಪ್ರಯೋಜನಗಳು ಇವೆ,” ಎಂದು ಅವರು ಹೇಳಿದರು. ವಿದ್ಯಾರ್ಥಿಗಳು ಸ್ಮಾರ್ಟ್ ವರ್ಕ್ ಮಾಡಬೇಕು, ಎಂದರೆ ಕಡಿಮೆ ಶ್ರಮದಿಂದ ಹೆಚ್ಚು ಫಲ ದೊರೆಯುವ ರೀತಿಯಲ್ಲಿ ಆಸಕ್ತಿಯಿಂದ ಕೆಲಸ ಮಾಡುವುದರ ಮಹತ್ವವನ್ನೂ ಅವರು ಸ್ಪಷ್ಟಪಡಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ, ಸಹ ಸಂಸ್ಥಾಪಕರಾದ ಶ್ರೀ ಅಶ್ವತ್ ಎಲ್. ಅವರನ್ನು ಸ್ಮರಣಿಕೆಯನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು, ಉಪನ್ಯಾಸಕರು, ನಿಲಯ ಪಾಲಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಸಕ್ರಿಯವಾಗಿ ಭಾಗವಹಿಸಿದ್ದರು. ಕನ್ನಡ ಉಪನ್ಯಾಸಕಿ ಶ್ರೀಮತಿ ಪ್ರಿಯಾಂಕ ಕಾರ್ಯಕ್ರಮ ನಿರೂಪಣೆ ಹಾಗೂ ಪ್ರಾರ್ಥನೆ, ವಂದನೆ ನಡೆಸಿದರು.
