ಕೊಪ್ಪ: ಎಣ್ಣೆ ವಿರುದ್ಧ ತಿರುಗಿಬಿದ್ದ ನಾರಿಯರು!
– ಕೊಪ್ಪ ತಾಲೂಕಲ್ಲಿ ಅಕ್ರಮ ಹೆಂಡದ ಹಾವಳಿ
– ಬಡವರು, ಕೂಲಿ ಕಾರ್ಮಿಕರ ಬದುಕು ಮದ್ಯಕ್ಕೆ ಬಲಿ
– ಅಕ್ರಮಕ್ಕೆ ಕಡಿವಾಣ ಹಾಕಲು ಮಹಿಳೆಯರ ಪಟ್ಟು
NAMMUR EXPRESS NEWS
ಕೊಪ್ಪ: ಕೊಪ್ಪ ತಾಲೂಕಿನ ಹಲವು ಭಾಗದಲ್ಲಿ ಬಹುತೇಕ ಕೂಲಿ ಕಾರ್ಮಿಕರು, ಬಡ ವರ್ಗದವರು ಅಕ್ರಮ ಮದ್ಯಕ್ಕೆ ಜೀವ, ಜೀವನ ಕಳೆದುಕೊಳ್ಳುತ್ತಿದ್ದಾರೆ. ಯುವಜನತೆ ಕುಡಿತದ ಚಟಕ್ಕೆ ಬಲಿಯಾಗಿ ಕುಟುಂಬ ಬೀದಿಪಾಲಾಗುತ್ತಿದೆ. ತಕ್ಷಣ ಅಕ್ರಮ ಮದ್ಯ ನಿಲ್ಲಿಸಬೇಕು ಎಂದು ಮಹಿಳೆಯರು ಪ್ರತಿಭಟನೆಗೆ ಇಳಿದಿದ್ದಾರೆ. ಮೇಗೂರು ಬಳಿಯ ಕಿತ್ತೆಗುಳಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಕುಡಿತದ ಚಟದಿಂದ ಸಾವನ್ನಪ್ಪಿದ್ದರು. ಆಗ ಗ್ರಾಮದ ನೂರಾರು ಮಹಿಳೆಯರು ಅಕ್ರಮ ಸಾರಾಯಿ ಮಾರಾಟ ವಿರೋಧಿಸಿ ಪ್ರತಿಭಟನೆ ಮಾಡಿದ್ದರು. ಆದರೆ ಅಕ್ರಮ ಸರಾಯಿ ಮಾರಾಟಗಾರರ ಮೇಲೆ ಯಾವುದೇ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಲು ಆಗಿಲ್ಲ. ಹೀಗೆ ಮುಂದುವರಿದರೆ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದ್ದಾರೆ.
ಮೇಗುಂದ ಹೋಬಳಿಯಲ್ಲಿ ನಿಲ್ಲದ ಅಕ್ರಮ ಮದ್ಯ
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಮೇಗುಂದಾ ಹೋಬಳಿ ವ್ಯಾಪ್ತಿಯ ಹಳ್ಳಿಗಳಲ್ಲಿ ಅಕ್ರಮ ಮದ್ಯ ಮಿತಿ ಮೀರಿದೆ. ಅದರಲ್ಲೂ ಅಗಳಗಂಡಿ, ಹೆಗ್ಗಾರು, ಎತ್ತಿನಟ್ಟಿ ಗ್ರಾಮದ ದಿನಸಿ ಅಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಉಗ್ರ ಹೋರಾಟದ ಎಚ್ಚರಿಕೆ
ಅಗಳಗಂಡಿ ಸಮೀಪ ಕಚಿಗೆ ಗ್ರಾಮದಲ್ಲಿ ಎಮ್.ಎಸ್.ಐ.ಎಲ್ ಮದ್ಯ ಮಾರಾಟ ಮಳಿಗೆ ತೆರೆಯುವ ಹುನ್ನಾರ ನಡೆದಿದೆ. ಸಮೀಪದಲ್ಲಿ ಬಸ್ ನಿಲ್ದಾಣ, ಸರ್ಕಾರಿ ಶಾಲೆ, ಅಂಗನವಾಡಿ ಇದೆ. ಗ್ರಾಮದ ಮಹಿಳೆಯರು, ಸಂಘ- ಸಂಸ್ಥೆಗಳು ಅನುಮತಿ ನೀಡದಂತೆ ವಿರೋಧ ವ್ಯಕ್ತಪಡಿಸಿವೆ. ಆದರೂ, ಕೆಲವು ಅಂಗಡಿಗಳಲ್ಲಿ ಕಡಿಮೆ ಬೆಲೆಯ ಕಳಪೆ ಮದ್ಯ ಮಾರಾಟ ಮಾಡಲಾಗುತ್ತಿದೆ. ಶಾಸಕರ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ ಎಂದು ಆಪಾದಿಸಿದ್ದಾರೆ. ಅಕ್ರಮ ಮದ್ಯ ಮಾರಾಟ ತಡೆಯಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಉಗ್ರಹೋರಾಟ ಮಾಡುವುದಾಗಿ ಎಚ್ಚರಿಸಿದರು.
