45 ಯಕ್ಷಗಾನ ಪ್ರಸಂಗ ಪ್ರದರ್ಶನ.. 700 ಕಲಾವಿದರು!
– ಪಟ್ಲ ಫೌಂಡೇಶನ್ ಆಶ್ರಯದಲ್ಲಿ ಹೊಸ ನಗರದಲ್ಲಿ ವಿಶೇಷ ಕಾರ್ಯಕ್ರಮ
– ಪಟ್ಲ ಸತೀಶ್ ಶೆಟ್ಟಿ ಅವರಿಗೆ ಸನ್ಮಾನ: ನಗರ ರಾಘವೇಂದ್ರ ಅವರಿಂದ ಆಯೋಜನೆ
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಹೊಸನಗರ: ಪಟ್ಲ ಫೌಂಡೇಶನ್ ಆಶ್ರಯದಲ್ಲಿ ಶನಿವಾರದಂದು ಗಾಯಿತ್ರಿ ಮಂದಿರದಲ್ಲಿ, ರಾಮಶೇಟ್ ಮತ್ತು ಮಾರ್ಕೊಡು ಸುಬ್ರಾಯ ಆಚಾರ್ಯ ವೇದಿಕೆಗಳಲ್ಲಿ 45 ಪ್ರಸಂಗಗಳ ಯಕ್ಷಗಾನವು ಸುಮಾರು 700ಕ್ಕೂ ಹೆಚ್ಚು ಕಲಾವಿದರಿಂದ ಪ್ರದರ್ಶನ ಕಂಡಿತು. ಈ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿದ ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರು ಭಾಗವತರಾದ ಪಟ್ಲ ಸತೀಶ್ ಶೆಟ್ಟಿಯವರು ಕಳೆದ ಎರಡು ವರ್ಷಗಳಿಂದ 50 ಶಾಲೆಗಳ ವಿದ್ಯಾರ್ಥಿಗಳಿಗೆ ತಮ್ಮ ಪಟ್ಲ ಫೌಂಡೇಶನ್ ಮುಖಾಂತರ ಯಕ್ಷ ಶಿಕ್ಷಣ ನೀಡಿ, ಅವರ ಪ್ರತಿಭೆಯನ್ನು ಹೊರ ಹಾಕುವ ಮೂಲಕ ಆರ್ಥಿಕವಾಗಿ ದುರ್ಬಲರಾಗಿರುವ ಕಲಾವಿದರ ಭವಿಷ್ಯಕ್ಕೆ ಆಶಾಕಿರಣವಾಗಿದ್ದಾರೆ ಎಂದರು.
ಆರ್.ಎಂ.ಮಂಜುನಾಥಗೌಡ, ಶ್ರೀರಾಮಕೃಷ್ಣ ವಿದ್ಯಾಸಂಸ್ಥೆ, ಇತರ ಶಾಲೆಗಳು ಮತ್ತು ಸಂಘ-ಸಂಸ್ಥೆಗಳ ವತಿಯಿಂದ ಪಟ್ಲ ಸತೀಶ್ ಶೆಟ್ಟಿಯವರಿಗೆ ವಿಶೇಷವಾಗಿ ಸನ್ಮಾನಿಸಲಾಯಿತು.
5500 ಮಕ್ಕಳಿಗೆ ಉಚಿತ ಶಿಕ್ಷಣ
ಪಟ್ಲ ಫೌಂಡೇಶನ್ ವಿಶೇಷ ಕಲಾ ಸೇವೆ ಬಗ್ಗೆ ಮಾತನಾಡಿದ ಪತ್ರಕರ್ತರಾದ ನಗರ ರಾಘವೇಂದ್ರ ಅವರು “ಪಟ್ಲ ಫೌಂಡೇಶನ್ ನ ಆಶ್ರಯದಲ್ಲಿ ಹೊಸನಗರ, ಸಾಗರ, ತೀರ್ಥಹಳ್ಳಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ 5500 ಮಕ್ಕಳಿಗೆ ಯಕ್ಷ ಶಿಕ್ಷಣವನ್ನು ಉಚಿತವಾಗಿ ನೀಡಲಾಗುತ್ತಿದ್ದು, ಹೊಸನಗರದ ಯಕ್ಷಗಾನ ಕಲಾವಿದರಿಗೆ ನಾಲ್ಕು ಆಶ್ರಯ ಮನೆಯನ್ನು ವಿತರಣೆ ಮಾಡಲಾಗಿದೆ. ಆರ್ಥಿಕವಾಗಿ ಹಿಂದುಳಿದ 15 ಜನ ಕಲಾವಿದರಿಗೆ 30,000 ರೂಪಾಯಿ ಪ್ರೋತ್ಸಾಹ ಧನ, 500 ಮಕ್ಕಳಿಗೆ ಒಂದು ದಿನದ ಪ್ರವಾಸವನ್ನು ಮಾಡಿಸಿದ್ದೇವೆ” ಎಂದರು.
ಹೊಸ ನಗರ ಗಣ್ಯರು ಹಾಜರ್
ರಾಮಕೃಷ್ಣ ವಿದ್ಯಾಸಂಸ್ಥೆಯ ಡಿ.ದೇವರಾಜ್, ಬೆಂಗಳೂರಿನ ಉದ್ಯಮಿಗಳಾದ ಮಾವಿನಕೊಪ್ಪ ಸುರೇಶ್ ಎನ್, ಹೊಸನಗರ ತಾಲ್ಲೂಕಿನ ಆರೋಗ್ಯ ಭಾರತೀಯ ಅಧ್ಯಕ್ಷರು ಹಾಗೂ ಸುವರ್ಣಶ್ರೀ ಕ್ಲಿನಿಕ್ ವೈದ್ಯರಾದ ಡಾ.ಚೈತನ್ಯ ಕಳೂರು, ಸೊಸೈಟಿ ಅಧ್ಯಕ್ಷರಾದ ದುಮ್ಮ ವಿನಯ್, ಎನ್ .ಆರ್.ದೇವಾನಂದ್, ಸಾಹಿತಿಗಳಾದ ಸುಧೀಂದ್ರ ಭಂಡಾರ್ಕರ್, ಪತ್ರಕರ್ತರ ಸಂಘದ ಅಧ್ಯಕ್ಷರಾದ ಎಂ.ಕೆ.ವೆಂಕಟೇಶ್ ಮೂರ್ತಿ, ಗೌತಮ್ ಆಚಾರ್ಯ ಮೊದಲಾದವರು ಉಪಸ್ಥಿತರಿದ್ದರು. ಸ್ವಾಗತ ಕಾರ್ಯಕ್ರಮವನ್ನು ಸುಜಾತ ಸುರೇಶ್ ಅವರು, ಕಾರ್ಯಕ್ರಮದ ನಿರೂಪಣೆಯನ್ನು ಸುದೀಂದ್ರ ಪಂಡಿತ್ ಅವರು ನಡೆಸಿಕೊಟ್ಟರು.
