ಸ್ನಾನಕ್ಕೆ ತೆರಳಿದ್ದ ಬಾಲಕ ನೀರಿನಲ್ಲಿ ಮುಳುಗಿ ಸಾವು!
– ಕೊಪ್ಪ ತಾಲೂಕಿನ ಜಯಪುರದಲ್ಲಿ ನಡೆದ ದುರಂತ
– ಪುತ್ತೂರು ಮೂಲದ ಬಾಲಕನ ದುರಂತ ಅಂತ್ಯ!
ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ವಿದ್ಯಾರ್ಥಿಯೊಬ್ಬ ನದಿಯಲ್ಲಿ ಸ್ನಾನಕ್ಕೆ ತೆರಳಿದ್ದ ಸಂದರ್ಭದಲ್ಲಿ, ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ಭಾನುವಾರದಂದು ಜಯಪುರದಲ್ಲಿ ನಡೆದಿದೆ. ಮೂವರು ಶಿಕ್ಷಕರು ಹಾಗೂ 20ಜನ ವಿದ್ಯಾರ್ಥಿಗಳೊಂದಿಗೆ ಸ್ನಾನಕ್ಕೆಂದು ತೆರಳಿದ್ದ ಸಮಯದಲ್ಲಿ ಘಟನೆ ನಡೆದಿದೆ . ಮೃತ ಬಾಲಕನನ್ನು ಜಯಪುರದ ಸತ್ಯಸಾಯಿ ಶಿಕ್ಷಣ ಸಂಸ್ಥೆಯಲ್ಲಿ, 7ನೇ ತರಗತಿಯಲ್ಲಿ ಓದುತ್ತಿದ್ದ ಅನಿಕೇತ್ ಎಂದು ಗುರುತಿಸಲಾಗಿದೆ. ಅನಿಕೇತ್ ಪುತ್ತೂರು ಮೂಲದ ಬಾಲಕನಾಗಿದ್ದು, ಕಳೆದೆರಡು ವರ್ಷಗಳಿಂದ ಜಯಪುರದ ಸತ್ಯಸಾಯಿ ಶಿಕ್ಷಣ ಸಂಸ್ಥೆಯಲ್ಲಿ ವ್ಯಾಸಂಗ ಮಾಡುತ್ತಿದ್ದ ಎನ್ನುವ ಮಾಹಿತಿ ಲಭಿಸಿದೆ. ತಕ್ಷಣ ಅನಿಕೇತ್ ನನ್ನು ಜಯಪುರದ ಸರ್ಕಾರಿ ಆಸ್ಪತ್ರೆಗೆ ಕರೆತರಲಾಯಿತು ಎನ್ನಲಾಗಿದೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅನಿಕೇತ್ ಸಾವನ್ನಪ್ಪಿದ್ದಾನೆ. ಜಯಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
