Categories
ಬೆಂಗಳೂರು ಮಲ್ನಾಡ್

ಒಂದು ವಾರ ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ

ಅಂತು ಮಳೆ ಬಂತು…!
– ಎರಡು ದಿನಗಳಿಂದ ರಾಜ್ಯದ ಹಲವೆಡೆ ಮಳೆ ಶುರು
– ಒಂದು ವಾರ ಕರಾವಳಿ, ಮಲೆನಾಡಲ್ಲಿ ಭಾರೀ ಮಳೆ?
– ಸಿಡಿಲು ಬಡಿದು ಓರ್ವ, ಹಾವು ಕಚ್ಚಿ ಒಬ್ಬರ ಸಾವು

NAMMUR EXPRESS NEWS
ಬೆಂಗಳೂರು: ನೈಋತ್ಯ ಮುಂಗಾರು ಕೇರಳಕ್ಕೆ ಈಗಾಗಲೇ ಪ್ರವೇಶಿಸಿದ್ದು, ಕರ್ನಾಟಕದಲ್ಲಿ ಮಳೆ ಶುರುವಾಗಿದೆ.
ಈ ವರ್ಷ 4 ದಿನ ತಡವಾಗಿ ಮುಂಗಾರು ಆಗಮಿಸಿದ್ದು ಇದರಿಂದ ರಾಜ್ಯದಲ್ಲಿಯೂ ಮುಂಗಾರು ವಿಳಂಬವಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯದಲ್ಲಿ ಐದು ದಿನ ಭಾರೀ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆ ಆಗುವ ಸಾಧ್ಯತೆಗಳಿದ್ದು, ಮಳೆಯ ಪ್ರಮಾಣ ಇನ್ನಷ್ಟು ಹೆಚ್ಚಳವಾಗಲಿದೆ. ಕರಾವಳಿ ಜಿಲ್ಲೆಗಳಲ್ಲಿ ಪ್ರವಾಹ ಪರಿಸ್ಥಿತಿ ಸೃಷ್ಟಿ ಸಾಧ್ಯತೆಯಿದೆ. ಬಿಫರ್ ಜಾಯ್ ಸೈಕ್ಲೋನ್ ಎಫೆಕ್ಟ್‌ ನಿಂದಾಗಿ ಭಾರೀಮಳೆಯಾಗುತ್ತದೆ.
ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಶಿವಮೊಗ್ಗ ಮತ್ತು ಕೊಡಗು, ಹಾಸನ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬಿರುಗಾಳಿ ಮಳೆಯಾಗಲಿದೆ.ರಕ್ಷಣಾ ಕಾರ್ಯಕ್ಕೆ ಸಜ್ಜಾಗಿರುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ.

ಮಲೆನಾಡಲ್ಲಿ ಸಿಡಿಲಿಗೆ ಓರ್ವ ಬಲಿ!

ಚಿಕ್ಕಮಗಳೂರು ತಾಲೂಕಿನ ಯಗಟಿಪುರ
ಗ್ರಾಮದಲ್ಲಿ ಭಾನುವಾರ ವ್ಯಕ್ತಿಯೊಬ್ಬರು ಸಿಡಿಲು ಬಡಿದು ಮೃತಪಟ್ಟಿದ್ದು ನಾಲ್ವರಿಗೆ ಗಾಯಗಳಾಗಿವೆ. ತರೀಕೆರೆ ತಾಲೂಕಿನ ಗಂಜಿಗೆರೆ ಗ್ರಾಮದ ಮುಕೇಶ್ (45) ಮೃತಪಟ್ಟವರು. ಪುರ ಗ್ರಾಮದ ಮಲ್ಲಿಕಾರ್ಜುನ ಸ್ವಾಮಿ ದೇವಸ್ಥಾನದಲ್ಲಿ ಭಾನುವಾರ ಬೆಳಗ್ಗೆ ಸಂಬಂಧಿಕರ ಮಗುವಿನ ಮಂಡೆ ಹರಕೆ ತೀರಿಸಿ ಊರಿಗೆ ವಾಪಸಾಗಲು ರೂಮಿನ ಹೊರಗೆ ನಿಂತಿದ್ದಾರೆ. ಆ ಸಮಯದಲ್ಲಿ ಬಿರುಸಾಗಿ ಮಳೆ ಆರಂಭವಾಗಿದ್ದು, ಮುಕೇಶ್‌ಗೆ ಸಿಡಿಲು ಬಡಿದಿದೆ.

ತೀವ್ರ ಅಸ್ವಸ್ಥರಾಗಿದ್ದ ಮುಕೇಶ್ ಅವರನ್ನು ಕೂಡಲೇ ಯಗಟಿ ಆಸ್ಪತ್ರೆಗೆ, ನಂತರ ಕಡೂರು ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ. ಮುಕೇಶ್ ಜತೆಯಲ್ಲಿದ್ದ ಸಂಬಂಧಿಗಳಾದ ಸಂಕೇತ್, ನಾಗಾರ್ಜುನ್ ಸುದೀಪ್, ಮತ್ತು ಶೃತಿ ಎಂಬುವವರಿಗೆ ಸಣ್ಣ ಪುಟ್ಟ ಗಾಯಗಳಾಗಿದೆ. ಸುದೀಪ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಚಿಕ್ಕಮಗಳೂರು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಾವು ಕಚ್ಚಿ ಪತಿ ಸಾವು, ಪತ್ನಿ ಸ್ಥಿತಿ ಚಿಂತಾಜನಕ!

ಬೆಳಗಾವಿ: ದಂಪತಿಗೆ ನಾಗರ ಹಾವು ಕಚ್ಚಿ ಪತಿ ಮೃತಪಟ್ಟ ಘಟನೆ ಬೆಳಗಾವಿ ಅನ್ನಪೂರ್ಣೇಶ್ವರಿ ನಗರದಲ್ಲಿ ಭಾನುವಾರ ಬೆಳಗಿನ ಜಾವ ನಡೆದಿದೆ.
ಪತ್ನಿ ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಜಿಲ್ಲೆಯ ಬೈಲಹೊಂಗಲ ತಾಲೂಕಿನ ಸಾಣಿಕೊಪ್ಪ ಮೂಲದ ಸಿದ್ದಪ್ಪ ಚಿವಟಗುಂಡಿ (35) ಮೃತರು. ಇವರ ಪತ್ನಿ ನಾಗವ್ವ (28) ಸ್ಥಿತಿ ಚಿಂತಾಜನಕವಾಗಿದೆ.

ದಂಪತಿ ತಮ್ಮ ಮೂವರು ಮಕ್ಕಳ ಸಮೇತ ಹೊಟ್ಟೆಪಾಡಿಗಾಗಿ ಸಾಣೆಕೊಪ್ಪದಿಂದ ಬೆಳಗಾವಿಗೆ ಬಂದು ವಾಸವಾಗಿದ್ದಾರೆ. ಮೃತ ಸಿದ್ದಪ್ಪ ಅವರು ವಡಗಾವಿಯ ಕಟ್ಟಡ ಕಾಮಗಾರಿಯೊಂದ ರಲ್ಲಿ ವಾಚ್‌ಮನ್ ಆಗಿ ಕೆಲಸ ಮಾಡುತ್ತಿದ್ದರು. ಅದೆ ಕಟ್ಟಡದಲ್ಲಿ ಶನಿವಾರ ರಾತ್ರಿ ಈ ದಂಪತಿ ಮೂವರು ಮಕ್ಕಳೊಂದಿಗೆ ಊಟ ಮಾಡಿ ಮಲಗಿದ್ದರು.

ಬೆಳಗಿನ ಜಾವ ನಿದ್ದೆಯಲ್ಲಿದ್ದಾಗ ಹಾವು ಕಚ್ಚಿದೆ. ವಿಷವೇರಿದ ಪರಿಣಾಮ ತಂದೆ, ತಾಯಿ ಒದ್ದಾಡುತ್ತಿರುವುದನ್ನು ಕಂಡು ಮಕ್ಕಳು ಎಚ್ಚರಗೊಂಡಿದ್ದಾರೆ.ಬಳಿಕ ಅಕ್ಕಪಕ್ಕದ ಮನೆಯವರಿಗೆ ವಿಷಯ ತಿಳಿಸಲಾಗಿ ಹಾವು ಕಚ್ಚಿರುವುದು ಗೊತ್ತಾಗಿದೆ. ದಂಪತಿಯನ್ನು ಸ್ಥಳೀಯರ ನೆರವಿನಿಂದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು. ಮಳೆಗಾಲ ಆರಂಭದಲ್ಲಿ ಹಾವುಗಳ ಬಗ್ಗೆ ಎಚ್ಚರ ವಹಿಸಬೇಕಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.