Categories
ಬೆಂಗಳೂರು ಮಲ್ನಾಡ್ ರಾಜ್ಯ ಶಿವಮೊಗ್ಗ

ಅಡಿಕೆ ನಿಷೇಧ: ತನಿಖೆಗೆ ಅಡಿಕೆ ನಾಯಕ ಆರಗ ಪಟ್ಟು!

ಅಡಿಕೆ ನಿಷೇಧ: ತನಿಖೆಗೆ ಅಡಿಕೆ ನಾಯಕ ಆರಗ ಪಟ್ಟು!
– ವೈಜ್ಞಾನಿಕ ಸಂಶೋಧನೆಗಳಲ್ಲೂ ಶುದ್ಧವಾಗಿ ಸಂಸ್ಕರಿಸಲ್ಪಟ್ಟ ಅಡಿಕೆ ತಿನ್ನಲು ಯೋಗ್ಯ ಎಂದು ಸಾಬೀತು: ಆದರೆ ಈ ವರದಿ ಏಕೆ?
– ಅಡಿಕೆ ನಿಷೇಧ ಆಗುತ್ತಾ?.. ರೈತರ ಬದುಕು ಉಳಿಸಿ ಪ್ಲೀಸ್..!

NAMMUR EXPRESS NEWS
ಅಕ್ಟೋಬರ್ 16ರಂದು ಶ್ರೀಲಂಕಾದಲ್ಲಿ ಸಮಾಪನಗೊಂಡ ವಿಶ್ವ ಆರೋಗ್ಯ ಸಂಸ್ಥೆಯ ಸಮಾವೇಶದಲ್ಲಿ ಅಡಿಕೆ ಬೆಳೆಯ ಬಗ್ಗೆ ಕೆಲವೊಂದಿಷ್ಟು ಕಠಿಣ ತೀರ್ಮಾನಗಳನ್ನು ಕೈಗೊಳ್ಳಲಾಗಿದೆ. ಹಿಂದಿನ ಯುಪಿಎ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಡಿಕೆ ಆರೋಗ್ಯಕ್ಕೆ ಅಪಾಯಕಾರಿ ಎಂದು ಅಫಿಡ ವಿಟ್ ಸಲ್ಲಿಸಿತ್ತು. ಈ ಎರಡೂ ಬೆಳವಣಿಗೆಗಳು ಅಡಿಕೆ ಬೆಳೆ ನಿಷೇಧಕ್ಕೆ ಕಾರಣಗಳಾಗಬಹುದೆಂಬ ಆತಂಕ ಅಡಿಕೆ ಬೆಳೆಗಾರರಲ್ಲಿ ಮೂಡಿದೆ. ಅಡಿಕೆ ಬೆಳೆ ಹಾಗೂ ಬೆಳೆಗಾರರ ಹಿತರಕ್ಷಣೆಗಾಗಿ ಅಡಿಕೆ ಸಹಕಾರಿ ಒಕ್ಕೂಟ ದೀರ್ಘಕಾಲದಿಂದ ಹೋರಾಟ ನಡೆಸುತ್ತಿದ್ದು, ಸಂಸ್ಥೆಯ ಅಧ್ಯಕ್ಷರು, ಮಾಜಿ ಗೃಹ ಸಚಿವರು, ಶಾಸಕರೂ ಆದ ಆರಗ ಜ್ಞಾನೇಂದ್ರ ಅವರು ಈ ಬೆಳವಣಿಗೆಗಳ ಕುರಿತು ಮಾತನಾಡಿದ್ದಾರೆ.
ಮಲೆನಾಡಿನ ಸಾಂಪ್ರದಾಯಿಕ ಅಡಿಕೆ ಬೆಳೆಗಾರರು ಆತಂಕಕ್ಕೆ ಒಳಗಾಗುವ ಅಗತ್ಯ ಇಲ್ಲ ಎಂದು ಅಭಯ ನೀಡಿದ್ದಾರೆ. ಆದ್ರೆ ಇದು ಇಲ್ಲಿಗೆ ನಿಲ್ಲುತ್ತ ಅಂದರೆ ಯಾರಿಗೂ ಈ ಬಗ್ಗೆ ಮಾಹಿತಿ ಇಲ್ಲ..!.

ಅಡಿಕೆ ವಿಷಕಾರಿ ಅಲ್ಲ ಹೊಗೆ ಸೊಪ್ಪುಯುಕ್ತ ಗುಟ್ಕಾ ಅಪಾಯಕಾರಿ

ಅಡಿಕೆ ವಿಷಕಾರಿ, ಆರೋಗ್ಯಕ್ಕೆ ಅಪಾಯಕಾರಿ ಎಂಬುದನ್ನು ಒಪ್ಪಲು ಸಾಧ್ಯವೇ ಇಲ್ಲ. ಅಡಿಕೆ ಭಾರತೀಯರ ಅದರಲ್ಲೂ ಕನ್ನಡಿಗರ ಬದುಕಿನ ಒಂದು ಭಾಗವಾಗಿದೆ. ನಮ್ಮಲ್ಲಿ ಶುಭ ಕಾರ್ಯಗಳಿಗೆ ಅಡಿಕೆ ಬಳಸುತ್ತೇವೆ. ಎಲೆಯೊಂದಿಗೆ ಅಡಿಕೆ ತಿನ್ನುವುದು ನಮ್ಮಲ್ಲಿ ಪುರಾತನ ಕಾಲದ ಅಭ್ಯಾಸ. ಎಲೆ ಅಡಿಕೆ ತಿಂದು ಕ್ಯಾನ್ಸರ್‌ಗೆ ಈಡಾದ ಯಾವುದೇ ಪ್ರಕರಣಗಳು ಇದುವರೆಗೂ ವರದಿಯಾಗಿಲ್ಲ. ವೈಜ್ಞಾನಿಕ ಸಂಶೋಧನೆಗಳಲ್ಲೂ ಶುದ್ಧವಾಗಿ ಸಂಸ್ಕರಿಸಲ್ಪಟ್ಟ – ಅಡಿಕೆ ತಿನ್ನಲು ಯೋಗ್ಯ ಎಂಬುದು ಸಾಬೀತುಗೊಂಡಿದೆ. ಆದರೆ ಅಡಿಕೆ ಜೊತೆ ತಂಬಾಕು ಇನ್ನಿತರೆ ಅಪಾಯಕಾರಿ ರಾಸಾಯನಿಕಗಳನ್ನು ಬಳಸಿ ತಯಾರಿಸಲ್ಪಡುವ ಗುಟ್ಕಾ ಜರ್ದಾ ಇನ್ನಿತರೆ ಉತ್ಪನ್ನಗಳು ಅಪಾಯಕಾರಿ ಯಾಗಿದೆ. ಅದನ್ನು ನಾವೂ ಒಪ್ಪುತ್ತೇವೆ. ಹೀಗಿರುವಾಗ ಸಾಂಪ್ರದಾಯಿಕವಾಗಿ ಬೆಳೆದು ಪರಿಶುದ್ದ ರೀತಿಯಲ್ಲಿ ಸಂಸ್ಕರಿಸಲ್ಪಡುವ ಅಡಿಕೆಯನ್ನು ಅಪಾಯಕಾರಿ ಎನ್ನುವುದು, ಅದನ್ನು ನಿಷೇಧಿಸಲು ನಿರಂತರ ಪ್ರಯತ್ನಿಸುವುದು. ನಿಷೇಧಿಸಲೇಬೇಕೆಂದು ಹಠ ಸಾಧಿಸುವುದು ನಾನಾ ರೀತಿಯ ಅನುಮಾನಗಳಿಗೆ ಆಸ್ಪದ ನೀಡುತ್ತಿದೆ

ಇದ್ಯಾವ ಲಾಭಿ?: ಅಡಿಕೆ ಆರೋಗ್ಯಕ್ಕೆ ಪೂರಕ ಎಂಬುದನ್ನು ನಾವು ಒಂದಲ್ಲಾ ಹತ್ತು ಬಾರಿ ವೈಜ್ಞಾನಿಕ ಪ್ರಯೋಗಗಳ ಮೂಲಕವೇ ಸರ್ಕಾರಕ್ಕೆ ವಿಶ್ವ ಆರೋಗ್ಯ ಸಂಸ್ಥೆಗೆ ಮನದಟ್ಟು ಮಾಡಿಸಿದ್ದರೂ ಮತ್ತೆ ಮತ್ತೆ WHO ಅಡಿಕೆ ಬೆಳೆ ನಿಷೇಧಕ್ಕೆ ಪೂರಕವಾಗಿ ತೀರ್ಮಾನಗಳನ್ನು ಕೈಗೊಳ್ಳುತ್ತಿದೆ. WHO ಯಾವ ಲಾಭಿಯ ಪ್ರಭಾವಕ್ಕೆ ಒಳಗಾಗಿ ಈ ರೀತಿ ಮಾಡುತ್ತಿದೆ ಎಂಬ ಬಗ್ಗೆ ತನಿಖೆಯಾಗಬೇಕೆಂದು ಅರಗ ಜ್ಞಾನೇಂದ್ರ ಆಗ್ರಹಿಸಿದ್ದಾರೆ. ಅಡಿಕೆ ದಲ್ಲಾಳಿಲಾಭಿ, ಸಿಗರೇಟು ಹಾಗೂ ಲಿಕ್ಕರ್ ಲಾಭಿಗಳು ಇದರ ಹಿಂದೆ ಇರುವ ಶಂಕೆ ಇದೆ.

ಅಡಿಕೆ ರೇಟು ಹೆಚ್ಚಿದಾಗಲೆಲ್ಲಾ ಈ ರೀತಿಯ ನಿಷೇಧ ಗುಮ್ಮ

ಮಳೆ ಹಾಗೂ ಕೊಳೆ ರೋಗಗಳಿಂದ ತತ್ತರಿಸಿದ್ದ ಅಡಿಕೆ ಬೆಳೆಗಾರರು ಈಗ ಸ್ವಲ್ಪ ನಿಟ್ಟುಸಿರು ಬಿಡುವಂತಾಗಿತ್ತು. ಅಡಿಕೆಗೆ ಉತ್ತಮ ಬೆಲೆ ಬರುತ್ತಿದ್ದು, ಕ್ವಿಂಟಾಲ್ ಅಡಿಕೆಗೆ 70ಸಾವಿರ ಬೆಲೆ ದಾಟಿತ್ತು. ಇನ್ನೂ ಬೆಲೆ ಏರುವ ನಿರೀಕ್ಷೆ ಯಲ್ಲಿದ್ದ ರೈತರಿಗೆ ಅಡಿಕೆ ನಿಷೇಧದ ಭೂತ ಎದುರಾಗಿದೆ. ಯಾವಾಗೆಲ್ಲಾ ಅಡಿಕೆ ಬೆಳೆ ಏರುಗತಿಯಲ್ಲಿ ಇರುತ್ತದೋ ಆಗೆಲ್ಲಾ WHO ಹಾಗೂ ಅಂತರಾಷ್ಟ್ರೀಯ ಸಂಶೋಧನಾ ವರದಿಗಳು ಅಡಿಕೆ ವಿಷಕಾರಕ, ಶೀಘ್ರದಲ್ಲೇ ಅದರ ನಿಷೇಧ ವಾಗಲಿದೆ ಎಂಬ ಪುಕಾರು ಹರಿಬಿಡುತ್ತವೆ. ಇದರ ಹಿಂದೆ ಅಡಿಕೆ ಲಾಭಿ, ದಲ್ಲಾಳಿ ಲಾಭಿ ಕೆಲಸ ಮಾಡುತ್ತಿರುವ ಬಗ್ಗೆ ಅನುಮಾನ ಮೂಡುತ್ತವೆ. ಸರ್ಕಾರ ಈ ಬಗ್ಗೆ ಬಿಗಿಯಾದ ತನಿಖೆ ನಡೆಸಬೇಕು ಎಂದು ಆರಗ ಆಗ್ರಹಿಸಿದ್ದಾರೆ.

ಆತಂಕ ಬೇಡ ಅಡಿಕೆ ಬೆಳೆಗಾರರಿಗೆ ಆರಗ ಅಭಯ

ಕೇಂದ್ರ ಸರ್ಕಾರ ಅಡಿಕೆಯನ್ನು ಆರೋಗ್ಯಕಾರಿ ಎಂದು ನಿರೂಪಿಸಲು ಈಗಾಗಲೇ ಅನೇಕ ಸಂಶೋಧನೆಗಳನ್ನು ಕೈಗೊಂಡು ಈ ವಿಚಾರವನ್ನು ವೈಜ್ಞಾನಿಕವಾಗಿ ನಿರೂಪಿಸುವಲ್ಲಿ ಯಶಸ್ವಿಯಾಗಿದೆ. ಹಿಂದಿನ ಯುಪಿಎ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅಡಿಕೆ ಅಪಾಯಕಾರಿ ಎಂದು ನೀಡಿದ್ದ ಪ್ರಮಾಣ ಪತ್ರವನ್ನು ತಪ್ಪೆಂದು ನಿರೂಪಿಸುವ ಕೆಲಸದಲ್ಲಿ ಕೇಂದ್ರ ಸರ್ಕಾರ ಪ್ರಾಮಾಣಿಕ ಪ್ರಯತ್ನವನ್ನು ನಡೆಸುತ್ತಿದೆ. ಸದ್ಯದಲ್ಲೇ ನಮ್ಮ ಪ್ರಯತ್ನ ಫಲವನ್ನೂ ಕೊಡಲಿದೆ. ಸುಪ್ರೀಂ ಕೋರ್ಟ್‌ ಅಂತಿಮ ನಿರ್ಧಾರ ಅಡಿಕೆ ಬೆಳೆಗಾರರ ಹಿತದಲ್ಲೇ ಬರಲಿದೆ ಎಂಬ ವಿಶ್ವಾಸ ನಮಗಿದೆ. ಆದ್ದರಿಂದ ಸುಪ್ರೀಂ ಕೋರ್ಟ್‌ನ ಅದೇಶ ಬರುವವರೆಗೂ ಅಡಿಕೆ ನಿಷೇಧದ ವಿಚಾರದಲ್ಲಿ ಯಥಾಸ್ಥಿತಿ ಕಾಯುವಂತೆ ನಾವು ಆಗ್ರಹಿಸುತ್ತೇವೆ. ಕೇಂದ್ರ ಸರ್ಕಾರ ಹಾಗೂ ಅಡಿಕೆ ಸಹಕಾರಿ ಒಕ್ಕೂಟ ಪ್ರತಿ ಹಂತದಲ್ಲೂ ಅಡಿಕೆ ಬೆಳೆಗಾರರ ಹಿತರಕ್ಷಣೆಗೆ ಬದ್ಧವಾಗಿ ಕಾರ್ಯ ನಿರ್ವಹಿಸಲಿದೆ. ಬೆಳೆಗಾರರು ಆತಂಕ ಪಡುವ ಅಗತ್ಯ ಇಲ್ಲ ಎಂಬುದಾಗಿ ಆರಗ ಜ್ಞಾನೇಂದ್ರ ಹೇಳಿದ್ದಾರೆ.

ರಾಜಕೀಯ ಬಿಡಿ… ರೈತರ ಬದುಕು ಕಾಪಾಡಿ..!

ಕೇಂದ್ರದಲ್ಲಿ ಜ್ಞಾನೇಂದ್ರರ ಬಿಜೆಪಿ ಪಕ್ಷ ಇದೆ. ಅಡಿಕೆ ಬೆಳೆ ಬೆಳೆಯುವ ಅತೀ ದೊಡ್ಡ ರಾಜ್ಯ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದೆ.ಇಲ್ಲಿ ಪಕ್ಷ, ಸರ್ಕಾರ ಮುಖ್ಯ ಅಲ್ಲ. ಕೋಟಿ ಕೋಟಿ ರೈತರ ಬದುಕು ಕಟ್ಟಿಕೊಟ್ಟ ಅಡಿಕೆಗೆ ತೊಂದರೆ ಆಗಬಾರದು ಅಷ್ಟೇ ಜನರಿಗೆ ಬೇಕಾಗಿರುವುದು. ಎರಡು ಪಕ್ಷದ ಸಂಸದರು, ಶಾಸಕರು, ಜನ ನಾಯಕರು, ಅಧಿಕಾರಿಗಳು ಕುಳಿತುಕೊಂಡು ತಕ್ಷಣ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು. ಈ ನಿಟ್ಟಿನಲ್ಲಿ ಜ್ಞಾನೇಂದ್ರ ಅವರ ನಡೆ ಸ್ವಾಗತರ್ಹ. ತಕ್ಷಣ ಈ ಬಗ್ಗೆ ಕೆಲಸ ಆಗಬೇಕಿದೆ. ಇಲ್ಲವಾದಲ್ಲಿ ಮೊದಲೇ ಎಲ್ಲಾ ಕಳೆದುಕೊಳ್ಳುತ್ತಿರುವ ರೈತರ ಬದುಕು ನರಕ ಆಗಲಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.