Categories
ತೀರ್ಥಹಳ್ಳಿ ಮಲ್ನಾಡ್

ಮಲೆನಾಡಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್..!

ಮಲೆನಾಡಲ್ಲಿ ಹೆಚ್ಚುತ್ತಿದೆ ಕ್ಯಾನ್ಸರ್..!
– ಎಂಐಓ ಕ್ಯಾನ್ಸರ್ ಆಸ್ಪತ್ರೆಯಲ್ಲಿ 1 ಲಕ್ಷ ಮನೆಗಳ ಕ್ಯಾನ್ಸರ್ ಕುರಿತ ಸಮೀಕ್ಷೆ ಮತ್ತು ಜಾಗೃತಿ ಅಭಿಯಾನಕ್ಕೆ ಚಾಲನೆ
– ಡಾ. ಸುರೇಶ್ ರಾವ್ ಅವರ ಸೇವೆಗೆ ಎಲ್ಲರ ಮೆಚ್ಚುಗೆ

NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡು ಭಾಗದಲ್ಲಿ ಕ್ಯಾನ್ಸರ್ ಪೀಡಿತರ ಸಂಖ್ಯೆ ನಿತ್ಯ ಹೆಚ್ಚಳವಾಗುತ್ತಿದೆ. ಮಲೆನಾಡಿನ ತೀರ್ಥಹಳ್ಳಿ, ಹೊಸನಗರ, ಶೃಂಗೇರಿ ಕ್ಯಾನ್ಸರ್ ಬಾಧಿತ ಪ್ರದೇಶವಾಗಿ ಗುರುತಿಸಿಕೊಂಡಿದೆ. ಶಿವಮೊಗ್ಗ ಮತ್ತು ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳಲ್ಲಿ ಕ್ಯಾನ್ಸರ್ ದಿನೇ ದಿನೇ ಹೆಚ್ಚಾಗುತ್ತಿದೆ.
ಕ್ಯಾನ್ಸರ್ ಕುರಿತ ಜಾಗೃತಿ ಜನರಲ್ಲಿ ಅವಶ್ಯಕತೆ ಇದೆ. ಈ ನಿಟ್ಟಿನಲ್ಲಿ ಮಂಗಳೂರು ಮತ್ತು ತೀರ್ಥಹಳ್ಳಿಯಲ್ಲಿರುವ ಎಂಐಓ ಕ್ಯಾನ್ಸರ್ ಆಸ್ಪತ್ರೆ ಹೊಸ ಹೆಜ್ಜೆ ಇಟ್ಟಿದೆ. 1 ಲಕ್ಷ ಮನೆಗಳ ಕ್ಯಾನ್ಸರ್ ಕುರಿತ ಸಮೀಕ್ಷೆ ಮತ್ತು ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದೆ.
ಅರಗದ ಎಂಐಓ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಇತ್ತೀಚಿಗೆ ಒಂದು ಲಕ್ಷ ಮನೆಗಳ ಕ್ಯಾನ್ಸರ್ ಕುರಿತ ಸಮೀಕ್ಷೆ ಮತ್ತು ಜಾಗೃತಿ ಅಭಿಯಾನಕ್ಕೆ ಶಾಸಕ ಆರಗ ಜ್ಞಾನೇಂದ್ರ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕ್ಯಾನ್ಸರ್ ಕುರಿತಂತೆ ನಡೆಸಿದ ವರದಿ ಅಚ್ಚರಿ ಮೂಡಿಸಿದೆ. ಯಾವ ಕಾರಣಕ್ಕೆ ನಮ್ಮ ಭಾಗಗಳಲ್ಲಿ ಕ್ಯಾನ್ಸರ್ ಹೆಚ್ಚುತ್ತಿದೆ ಎಂದು ತಿಳಿಯುವ ಅಗತ್ಯ ಇದೆ.
ಮಹಾ ನಗರಗಳಲ್ಲಿ ಸ್ಥಾಪನೆಯಾಗಿರುವ ಆಸ್ಪತ್ರೆಗಳಲ್ಲಿ ಈಚೆಗೆ ನಮ್ಮೂರಿನ ಒಬ್ಬ ಯುವಕನಿಗೆ ₹25,000 ಮೌಲ್ಯದ ಔಷಧ ನೀಡಲಾಗಿದೆ. ಅದರ ಬೆಲೆ ಎಂಐಓ ಆಸ್ಪತ್ರೆಯಲ್ಲಿ ₹9,000 ಇದೆ. ಔಷಧ ಮಾರಾಟದಲ್ಲಿಯೂ ಕೆಲವು ಆಸ್ಪತ್ರೆಗಳು ಹೀಗೆ ಸುಲಿಗೆ ಮಾಡಿದರೆ ಸಾಮಾನ್ಯ ಜನರು ಚಿಕಿತ್ಸೆ ಪಡೆದುಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.
ಹೆಚ್ಚಿನ ಖಾಸಗಿ ಆಸ್ಪತ್ರೆಗಳು ತಮ್ಮ ಲಾಭದ ದೃಷ್ಟಿಯಿಂದಲೇ ರೋಗಿಗಳೊಂದಿಗೆ ವ್ಯವಹರಿಸಿದರೆ, ಡಾ. ಸುರೇಶ್ ರಾವ್ ಅವರು ಇದಕ್ಕೆ ವ್ಯತಿರಿಕ್ತವಾದ ವ್ಯಕ್ತಿತ್ವದವರಾಗಿರುವುದು ಇದು ತನ್ನನ್ನು ಅನೇಕ ಸಲ ಆಶ್ಚರ್ಯಗೊಳಿಸಿರುವುದು ಸುಳ್ಳಲ್ಲ. ಅವರು ಮಲೆನಾಡಿನ ಈ ಮೂಲೆಯಲ್ಲಿ ಕೋಟ್ಯಾಂತರ ರೂ.ಗಳನ್ನು ಖರ್ಚು ಮಾಡಿ ಆಸ್ಪತ್ರೆ ಕಟ್ಟುವ ಬದಲಿಗೆ ದೊಡ್ಡ ನಗರದಲ್ಲಿ ಕಟ್ಟಿ ಹೇರಳ ಹಣವನ್ನು ಸಂಪಾದಿಸಬಹುದಾಗಿತ್ತಾದರೂ, ಸೇವಾದೃಷ್ಟಿಯಿಂದಲೇ ಇಲ್ಲಿ ಸ್ಥಾಪಿಸಿರುವುದು ಮತ್ತು ಕ್ಯಾನ್ಸರ್ ರೋಗದ ಪತ್ತೆ ಆರಂಭದಲ್ಲೇ ನಡೆದು ಇಲ್ಲಿಗೆ ಹೆಚ್ಚಿನ ಚಿಕಿತ್ಸೆಗೆ ಬರುವ ರೋಗಿಗಳ ಸಂಖ್ಯೆ ಕಡಿಮೆಯಾಗಲಿ ಎನ್ನುವ ಉದ್ದೇಶ ನಿಜಕ್ಕೂ ಶ್ಲಾಘನೀಯ ಎಂದರು.
ಕ್ಯಾನ್ಸರ್ ರೋಗಿಗಳಲ್ಲಿ ಭಯ, ತಪ್ಪು ಕಲ್ಪನೆ ಹೋಗಲಾಡಿಸಿ ಅವರಲ್ಲಿ ಆತ್ಮವಿಶ್ವಾಸ ಮೂಡಿಸಬೇಕಾಗಿದೆ. ಇಲ್ಲಿ ಈಗ ಆರಂಭಗೊಂಡಿರುವ ಸಮೀಕ್ಷಾ ಕಾರ್ಯವು ಪುಸ್ತಕ ರೂಪದಲ್ಲಿಯೂ ಬರಲಿ ಎಂದು ಜ್ಞಾನೇಂದ್ರ ಆಶಿಸಿದರು.
ಕುವೆಂಪು ವಿವಿ ಎನ್ಎಸ್ಎಸ್ ಘಟಕದ ಮುಖ್ಯಸ್ಥೆ ಡಾ. ಶುಭ ಮರವಂತೆ ಅವರು ಮಾತನಾಡಿ, ಇದೊಂದು ಉತ್ತಮ ಕಾರ್ಯವಾಗಿದ್ದು, ತಮ್ಮ ವಿವಿ ವ್ಯಾಪ್ತಿಯಲ್ಲಿ14 ಸಾವಿರ ಜನ ಎನ್ಎಸ್ಎಸ್ ವಿದ್ಯಾರ್ಥಿಗಳಿದ್ದು, ಈ ಕ್ಯಾನ್ಸರ್ ಕುರಿತ ಸಮೀಕ್ಷಾ ಕಾರ್ಯದಲ್ಲಿ ಇವರ ಸೇವೆಯನ್ನು ಬಳಸಿಕೊಳ್ಳಲಾಗುವುದು ಎಂದರು.

ನಮ್ಮ ಕನಸಿನ ಶಿವಮೊಗ್ಗ ಸಂಸ್ಥೆಯ ಮುಖ್ಯಸ್ಥರಾದ ಎನ್ ಗೋಪಿನಾಥ್ ಅವರು, ತಮ್ಮ ಸಂಸ್ಥೆ 2003 ರಲ್ಲಿ ಆರಂಭವಾಗಿದ್ದು, ಸಮಾಜಮುಖಿ ಹಾಗೂ ಪರಿಸರ ಜಾಗೃತಿ ಕಾರ್ಯಗಳನ್ನು ಮಾಡುತ್ತಿದೆ. ಇದರ ಜೊತೆಗೆ ಆರೋಗ್ಯವಂತ ಸಮಾಜವನ್ನು ಸಹ ನಿರ್ಮಾಣ ಮಾಡಬೇಕಿದೆ. ಹಾಗಾಗಿ ಈ ಕ್ಯಾನ್ಸರ್ ಸಮೀಕ್ಷೆಯಲ್ಲಿ ತಮ್ಮ ಸಂಸ್ಥೆಯು ಪಾಲ್ಗೊಳ್ಳುತ್ತದೆ. ಕ್ಯಾನ್ಸರ್ ಎನ್ನುವ ಭಯದ ಜಾಗದಲ್ಲಿ ಆಶಾಭಾವನೆ ( Hope)ಯನ್ನು ಮೂಡಿಸುವ ಕೆಲಸವಾಗಬೇಕಿದೆ ಎಂದರು.
ಶಿವಮೊಗ್ಗ ಸಹ್ಯಾದ್ರಿ ಕಾಲೇಜಿನ ಎನ್ ಸಿ ಸಿ ಘಟಕದ ಕೋಆರ್ಡಿನೇಟರ್ ವಿದ್ಯಾಶಂಕರ್ ಅವರು, ತಮ್ಮ ಘಟಕಕ್ಕೆ ಕೊಟ್ಟಿರುವ ಗುರಿಯನ್ನು ಮೀರಿ 35 ಸಾವಿರ ಜನರ ಸಮೀಕ್ಷೆ ನಡೆಸುವುದಾಗಿ ತಿಳಿಸಿದರು.
ಸತೀಶ್, ವೆಂಕಟೇಶ ರಾವ್, ತೀರ್ಥಹಳ್ಳಿ ತಾಲೂಕು ಕಸಾಪ ಅಧ್ಯಕ್ಷ ಟಿ.ಕೆ.ರಮೇಶ್ ಶೆಟ್ಟಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಎಂಐಒ ಆಸ್ಪತ್ರೆಯ ನಿರ್ದೇಶಕ ಡಾ. ಡಿ. ಸುರೇಶ್ ರಾವ್ ಅವರು, ಕಳೆದ 35 ವರ್ಷಗಳಿಂದ ನೋಡುತ್ತಿದ್ದೇನೆ. ಕ್ಯಾನ್ಸರ್ ಪೀಡಿತರು ತಮ್ಮ ರೋಗ ಉಲ್ಬಣಗೊಂಡು 4 ನೇ ಹಂತ ತಲುಪಿದಾಗ ಬರುತ್ತಾರೆ. ಈ ಕುರಿತು ಜನರಲ್ಲಿ ತುಂಬಾ ಅಜ್ಞಾನ, ಭಯ ಮತ್ತು ಆತಂಕವಿದೆ. ಇದನ್ನು ಹೋಗಲಾಡಿಸುವ ಮತ್ತು ಕ್ಯಾನ್ಸರ್ ಕುರಿತಂತೆ ಜನರಲ್ಲಿ ಎಷ್ಟು ಜ್ಞಾನವಿದೆ ಎಂದು ತಿಳಿಯುವ ಉದ್ದೇಶದಿಂದಲೇ 12 ಸರಳ ಪ್ರಶ್ನೆಗಳಿರುವ ಕರಪತ್ರಗಳಿಗೆ ಜನರು ಟಿಕ್ ಹಾಕುವ ಮೂಲಕ ಉತ್ತರಿಸುವ ವ್ಯವಸ್ಥೆ ಮಾಡಲಾಗಿದೆ ಎಂದರು.
ನಮ್ಮ ಸಮಾಜದಲ್ಲಿ ಕ್ಯಾನ್ಸರ್ ಕುರಿತಂತೆ ಕೆಲವು ತಪ್ಪು ಕಲ್ಪನೆಗಳಿವೆ. ಇದು ಹರಡುವ ಕಾಯಿಲೆ ಅಲ್ಲದಿದ್ದರೂ, ಕ್ಯಾನ್ಸರ್ ಚಿಕಿತ್ಸೆಗೆ ಒಳಗಾದವರನ್ನು ಮತ್ತು ಗುಣಮುಖರಾದವರನ್ನು ಕೂಡ ಇದು ಹರಡುತ್ತದೆ ಎಂದು ಸಮಾಜದಿಂದ ಹಾಗೂ ಕುಟುಂಬದಿಂದ ಇವರನ್ನು ಅಸ್ಪಷ್ರ್ಯರಂತೆ ದೂರವಿಟ್ಟು ಇವರ ಮನೊಸ್ಥೈರ್ಯವನ್ನು ಕುಗ್ಗಿಸುವುದನ್ನು ಅಲ್ಲಲ್ಲಿ ಕಾಣುತ್ತೇವೆ.
ಶೇ. 70- 80 ರಷ್ಟು ಜನ ಕ್ಯಾನ್ಸರ್ ಪೀಡಿತರು ಕೊನೆಯ ಹಂತದಲ್ಲಿ ಚಿಕಿತ್ಸೆಗೆ ಆಗಮಿಸುತ್ತಾರೆ. ಇಂತವರು ಮೊದಲ 1 ಅಥವಾ 2 ನೇ ಹಂತದಲ್ಲಿ ಬಂದರೆ ಕ್ಯಾನ್ಸರ್ ಗೆ ಒಳಗಾದವರಿಗೆ ಮತ್ತು ಸರ್ಕಾರಕ್ಕೂ ದೊಡ್ಡ ಪ್ರಮಾಣದ ಖರ್ಚು ಕಡಿಮೆಯಾಗುತ್ತದೆ. ಮುಖ್ಯವಾಗಿ ನಮ್ಮ ವಿದ್ಯಾರ್ಥಿಗಳಿಗೆ ವಿಷಯಗಳನ್ನು ಅರಿಯುವ ಕುತೂಹಲ, ರೋಗ ಏಕೆ ಬರುತ್ತದೆ ಎನ್ನುವುದಕ್ಕೆ ಕಾರಣಗಳನ್ನು ತಿಳಿಯುವುದು, ಪ್ರಯೋಗಶೀಲ ಮನಸ್ಸು ಹಾಗೂ ಇತರರ ಬಗ್ಗೆ ಕರುಣೆ, ಸಹಾನುಭೂತಿ ತಾಳುವ ಮನೋಭಾವ ಬೆಳೆಸುವ ಶಿಕ್ಷಣವನ್ನು ಈಗೀಂದಲೇ ರೂಪಿಸಬೇಕಾಗಿದೆ. ಪ್ರಾಯಶಃ ಇದು ಈಗಲೆ ಆರಂಭವಾದರೆ ಮುಂದಿನ 15-20 ವರ್ಷಗಳಲ್ಲಿ ನಾವು ಸಮಾಜದಲ್ಲಿ ಬದಲಾವಣೆಗಳನ್ನು ಕಾಣಬಹುದೇನೋ ಎಂದರು.

ಈ ಕಾರ್ಯಕ್ರಮದ ಮುಖ್ಯ ಸಂಯೋಜಕರಾದ ಅ.ನಾ. ವಿಜಯೇಂದ್ರ ರಾವ್ ಅವರು, ಎಲ್ಲರನ್ನೂ ಸ್ವಾಗತಿಸಿ ಮಾತನಾಡುತ್ತಾ1 ( ಒಂದು) ಲಕ್ಷ ಜನರ ಸಮೀಕ್ಷೆ ಕಾರ್ಯಕ್ರಮದ ವಿವರಗಳನ್ನು ನೀಡಿದರು ಹಾಗೂ ಈ ಕಾರ್ಯಕ್ರಮದ ಅಭಿಯಾನಕ್ಕೆ ಕೈ ಜೋಡಿಸಿರುವ ಪ್ರಮುಖ ಸಂಸ್ಥೆಗಳನ್ನು ಪರಿಚಯಿಸಿದರು.ಈ ಎಂಐಒ ಕ್ಯಾನ್ಸರ್ ಆಸ್ಪತ್ರೆ ಆರಂಭವಾದಾಗಿನಿಂದಲೂ, ಈ ಆಸ್ಪತ್ರೆಯ ಸಮಾಜಮುಖಿ ಕೆಲಸಗಳನ್ನು ಜನರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಆಸ್ಪತ್ರೆಗಳು ಸದಾ ರೋಗಿಗಳ ನಿರೀಕ್ಷೆಯಲ್ಲಿರುತ್ತಾರೆ. ಲಾಭದ ದೃಷ್ಟಿಯಿಂದಲೇ ಕಾರ್ಯನಿರ್ವಹಿಸುತ್ತಾರೆ. ಆದರೆ ಈ ಕ್ಯಾನ್ಸರ್ ಆಸ್ಪತ್ರೆಗೆ ಕ್ಯಾನ್ಸರ್ ಬಾಧಿತರು ಆದಷ್ಟು ಕಡಿಮೆ ಸಂಖ್ಯೆಯಲ್ಲಿ ಬರಲಿ ಎಂದು ಕ್ಯಾನ್ಸರ್ ನ ಆರಂಭದಲ್ಲಿಯೇ ಇದನ್ನು ಪತ್ತೆ ಹಚ್ಚಿ ಈ ಕುರಿತು ಭಯ ಹೋಗಲಾಡಿಸುವ ಮತ್ತು ಕ್ಯಾನ್ಸರ್ ಕಾಯಿಲೆಯನ್ನು ಸಂಪೂರ್ಣ ನಿರ್ಮೂಲನೆ ಮಾಡುವ ಉದ್ದೇಶದಿಂದ ಎಂಐಒ ಆಸ್ಪತ್ರೆಯ ಡಾ. ಸುರೇಶ್ ರಾವ್ ಮತ್ತು ತಂಡದವರು ಹೊರಟಿರುವುದು ಶ್ಲಾಘನೀಯ ಎಂದರು. ಹಾಗೆಯೇ ಈ ಸಮೀಕ್ಷಾ ಕಾರ್ಯದಲ್ಲಿ ಜಿಲ್ಲೆಯ ಅನೇಕ ಸಂಘ ಸಂಸ್ಥೆಗಳನ್ನು ತೊಡಗಿಸಲಾಗಿದ್ದು, ಇದರ ಮುಖ್ಯಸ್ಥರು, ಎನ್ ಎಸ್ಎಸ್ ಹಾಗೂ ಎನ್ ಸಿಸಿ ವಿದ್ಯಾರ್ಥಿಗಳು, ಶಿಕ್ಷಕರು, ಸಮಾಜ ಸೇವಕರು ಭಾಗಿಯಾಗಿರುವುದು ಸಂತೋಷದ ವಿಷಯವೆಂದು ಹೇಳಿ ಇವರೆಲ್ಲರ ಸೇವಾ ಮನೋಭಾವನೆಯನ್ನು ಅಭಿನಂದಿಸಿದರು.
ಕೊನೆಯಲ್ಲಿ ಎಸ್. ಸೌಮ್ಯ ವಂದಿಸಿದರು. ಜ್ಯೋತಿ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.