ಸಹ್ಯಾದ್ರಿ ಪಾಲಿಟೆಕ್ನಿಕ್ನಲ್ಲಿ ಸಾಂಸ್ಕೃತಿಕ ಹಬ್ಬ “ಕಣಜ 2025 “
– ವಿದ್ಯಾರ್ಥಿಗಳಿಂದ ಅದ್ದೂರಿ ಆಹಾರ ಮೇಳ ಯಶಸ್ವಿ
– ಸಹ್ಯಾದ್ರಿ ಪಾಲಿಟೆಕ್ನಿಕ್ ಅಲ್ಲಿ ಹಬ್ಬದ ವಾತಾವರಣ
NAMMUR EXPRESS NEWS
ತೀರ್ಥಹಳ್ಳಿ: ಮಲೆನಾಡಿನ ಹೃದಯ ಭಾಗವಾದ ತೀರ್ಥಹಳ್ಳಿಯಲ್ಲಿ ನಿವೃತ್ತ ಮುಖ್ಯ ಅಭಿಯಂತರರು ಮತ್ತು ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿದ್ದ ಮೇಗರವಳ್ಳಿಯ ದಿವಂಗತ ಶ್ರೀಯುತ ಎಂ ಆರ್ ಧರ್ಮಯ್ಯಗೌಡರು 1985ರಲ್ಲಿ ಸ್ಥಾಪಿಸಿದ ಪ್ರತಿಷ್ಟಿತ ಸಹ್ಯಾದ್ರಿ ಪಾಲಿಟೆಕ್ನಿಕ್ ನಿರಂತರ ಸಾಧನೆಯ ಹಲವು ಮಜಲುಗಳನ್ನು ಕಂಡಿದೆ. ಅ. 14 ಮಂಗಳವಾರದಂದು ಸಾಂಸ್ಕೃತಿಕ ಹಬ್ಬ “ಕಣಜ 2025″ವನ್ನು ಸಡಗರ ಸಂಭ್ರಮದಿಂದ ಅದ್ದೂರಿಯಾಗಿ ಆಚರಿಸಲಾಯಿತು. ವಿದ್ಯಾರ್ಥಿಗಳು ಮತ್ತು ವಿದ್ಯಾರ್ಥಿನಿಯರು ನಮ್ಮ ದೇಶೀಯ, ಸಾಂಪ್ರದಾಯಿಕ ಉಡುಗೆಗಳನ್ನು ಧರಿಸಿ ಕಾರ್ಯಕ್ರಮಕ್ಕೆ ಮೆರುಗು ತಂದರು.
ಸಭಾ ವೇದಿಕೆಯನ್ನು ಪಕ್ಕಾ ಹಳ್ಳಿ ಸೊಗಡಿನ ಮನೆಯ ರೀತಿ ವಿದ್ಯಾರ್ಥಿಗಳೇ ನಿರ್ಮಾಣ ಮಾಡಿದ್ದು ವಿಶೇಷವಾಗಿತ್ತು. ಬೆಳಿಗ್ಗೆ 10ಕ್ಕೆ ಕಾಲೇಜಿನ ಆಡಳಿತ ಮಂಡಳಿ ಕಾರ್ಯದರ್ಶಿಯವರಾದ ಶ್ರೀಮತಿ ಅನಿತಾ ನಾಗರಾಜ್ ಮತ್ತು ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ತೀರ್ಥಹಳ್ಳಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣೇಶ್ ಮತ್ತು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಸ್.ಶಂಕರಪ್ಪನವರನ್ನು ಅದ್ದೂರಿ ಮೆರವಣಿಗೆ ಮೂಲಕ ಕಾಲೇಜಿನ ಮುಖ್ಯದ್ವಾರದಿಂದ ಸಹ್ಯಾದ್ರಿ ಕಾಲೇಜಿನ ಕಚೇರಿಯವರೆಗೂ ಕರೆತಂದರು. ನಂತರ “ಕಣಜ ಲಾಂಛನ 2025 ನ್ನು ಅತಿಥಿ ಗಣ್ಯರಿಂದ ಅನಾವರಣಗೊಳಿಸುವುದರೊಂದಿಗೆ ಜ್ಯೋತಿ ಬೆಳಗಿಸಲಾಯಿತು. ನಂತರ ಸಂಸ್ಥಾಪಕರಾದ ಶ್ರೀಯುತ ಧರ್ಮಯ್ಯಗೌಡರ ಪುಣ್ಯತಿಥಿಯ ಅಂಗವಾಗಿ ಅತಿಥಿಗಣ್ಯರಿಂದ ಮತ್ತು ಕಾರ್ಯದರ್ಶಿಯವರು ಮತ್ತು ಪ್ರಾಂಶುಪಾಲರು ಭಾವಚಿತ್ರಕ್ಕೆ ನಮಿಸಿ ಪುಷ್ಪಾರ್ಚನೆ ಮಾಡಿದರು. ಈ ಸಂಧರ್ಭದಲ್ಲಿ ಕಾಲೇಜಿನ ಅಧ್ಯಾಪಕ ವೃಂದ ಮತ್ತು ಸಿಬ್ಬಂದಿ ವರ್ಗದವರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಶ್ರೀ ಎಸ್.ಶಂಕರಪ್ಪನವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ತೀರ್ಥಹಳ್ಳಿ ಸಹ್ಯಾದ್ರಿ ಪಾಲಿಟೆಕ್ನಿಕ್ ಪ್ರಾರಂಭದ ಹಿಂದೆ ಶ್ರದ್ದೆ, ತ್ಯಾಗ ಮತ್ತು ಅಭಿಮಾನದ ಮಹಾಪೂರವೇ ಇದೆ. ಪ್ರಾಕೃತಿಕ ಸಂಪತ್ತು, ಪ್ರತಿಭೆ, ಬುದ್ದಿವಂತಿಕೆಯಿದ್ದ ತೀರ್ಥಹಳ್ಳಿ ಭಾಗದ ಮಲೆನಾಡಿಗೆ ಇದ್ದ ಒಂದು ದೊಡ್ಡ ಕೊರತೆಯೆಂದರೆ ತಂತ್ರಜ್ಞಾನವನ್ನು ನೀಡುವ ವಿದ್ಯಾಸಂಸ್ಥೆ ಇಲ್ಲದಿದ್ದನ್ನು ಮನಗಂಡು ತೀರ್ಥಹಳ್ಳಿ ಭಾಗಕ್ಕೆ ಮಹದುಪಕಾರ ಮಾಡಿದವರು ಶ್ರೀ ಎಂ.ಆರ್ ಧರ್ಮಯ್ಯಗೌಡರು. ಮೇಗರವಳ್ಳಿ ಭಾಗದ ಸಾಧಾರಣ ಕೃಷಿ ಕುಟುಂಬದಲ್ಲಿ ಜನಿಸಿದ ಶ್ರೀ.ಎಂ.ಆರ್.ಧರ್ಮಯ್ಯಗೌಡರು ವಿದ್ಯೆಯ ಮಹತ್ವವನ್ನು ಅರಿತು ಬೆಂಗಳೂರಿನ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಪದವೀಧರರಾಗಿ ನಂತರ ಲೋಕೋಪಯೋಗಿ ಇಲಾಖೆಯಲ್ಲಿ ಮುಖ್ಯ ಅಭಿಯಂತರರಾಗಿ ಹುದ್ದೆಗೆ ಸೇರಿ ನೀರಾವರಿ ವಿಭಾಗದಲ್ಲಿ ಸುಧೀರ್ಘಕಾಲ ಸೇವೆ ಸಲ್ಲಿಸಿದರು. ಸೇವಾವಧಿಯಲ್ಲಿ ಅಮೇರಿಕಾಕ್ಕೆ ಹೋಗಿ ಎಂ.ಎಸ್ ಉನ್ನತ ಪದವಿಯನ್ನು ಪಡೆದರು. ತರುವಾಯ 1979ರಲ್ಲಿ ತಾಂತ್ರಿಕ ಶಿಕ್ಷಣ ಇಲಾಖೆಯ ನಿರ್ದೇಶಕರಾಗಿ ನಿವೃತ್ತರಾದ ತರುವಾಯ ಸಹ್ಯಾದ್ರಿ ಪಾಲಿಟೆಕ್ನಿಕ್ ಅನ್ನು ಮಲೆನಾಡಿನ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉತ್ತಮ ಗುಣಮಟ್ಟದ ತಾಂತ್ರಿಕ ಶಿಕ್ಷಣ ಲಭಿಸಲಿ ಎನ್ನುವ ಸದುದ್ದೇಶದಿಂದ ಸಹ್ಯಾದ್ರಿ ಪಾಲಿಟೆಕ್ನಿಕ್ ಅನ್ನು 1985ರಲ್ಲಿ ಸ್ಥಾಪಿಸಿದರು. ಪ್ರಾರಂಭದಲ್ಲಿ 4 ವಿಭಾಗಗಳಿದ್ದು ಒಟ್ಟು 56 ವಿದ್ಯಾರ್ಥಿಗಳಿದ್ದರೆ ಇಂದು 5 ವಿಭಾಗಗಳಿದ್ದು 550ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸದರಿ ಕಾಲೇಜಿನಲ್ಲಿ ಕಲಿಯುತ್ತಿದ್ದಾರೆ. ಸ್ವಂತ ಕಟ್ಟಡವನ್ನು ಹೊಂದಿರುವ ಕಾಲೇಜು, ಸಾಗರ ರಸ್ತೆಯ ಸುಂದರವಾದ ಗುಡ್ಡದಲ್ಲಿ ಪ್ರಾಕೃತಿಕ ಸೌಂದರ್ಯದೊಂದಿಗೆ ರಾರಾಜಿಸುತ್ತಿದೆ. ವಿದ್ಯಾರ್ಥಿಗಳಿಗೆ ಸುಸಜ್ಜಿತ ಹಾಸ್ಟೆಲ್ ಸೌಲಭ್ಯವಿದ್ದು 100ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಂಡಿದ್ದಾರೆ. ನಮ್ಮ ಸಾಧನೆಯ ದಾರಿಯ ಸಿಂಹಾವಲೋಕನ ಮಾಡಿದಾಗ ಭದ್ರ ಬುನಾದಿಯನ್ನು ಹಾಕಿ ಸದಾಶಯಗಳೊಂದಿಗೆ ಈ ಶಿಕ್ಷಣ ಸಂಸ್ಥೆಯನ್ನು ಪಾರಂಭಿಸಿದ ಶ್ರೀ ಎಂ.ಆರ್. ಧರ್ಮಯ್ಯಗೌಡರನ್ನು ಕೃತಜ್ಞತೆಯಿಂದ ನೆನೆಯುವುದು ನಮ್ಮ ಆದ್ಯ ಕರ್ತವ್ಯ ಎಂದು ಅಭಿಪ್ರಾಯಪಟ್ಟರು.
ನಂತರ ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ತೀರ್ಥಹಳ್ಳಿ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಶ್ರೀ ಗಣೇಶ್ ರವರು ತಮ್ಮ ಭಾಷಣದಲ್ಲಿ ಸಹ್ಯಾದ್ರಿ ಪಾಲಿಟೆಕ್ನಿಕ್ ಸುಸಜ್ಜಿತ ಕಟ್ಟಡ ಮತ್ತು ಕ್ಯಾಂಪಸ್ಸಿನ ಬಗ್ಗೆ ಸಂತಸ ವ್ಯಕ್ತಪಡಿಸಿದರು. ತಾವುಗಳು 1991ರಿಂದ 2005 ರವರೆಗೆ ಮಳಲೀಮಕ್ಕಿಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಅವಧಿಯಿಂದಲೇ ಸಹ್ಯಾದ್ರಿ ಪಾಲಿಟೆಕ್ನಿಕ್ ಗುಣಮಟ್ಟದ ತಾಂತ್ರಿಕ ಶಿಕ್ಷಣಕ್ಕೆ ರಾಜ್ಯದಲ್ಲಿಯೇ ಹೆಸರುವಾಸಿಯಾಗಿತ್ತು. ಮನುಷ್ಯ ಸತ್ತಮೇಲೆ ಜೀವಂತವಾಗಿರಲು ಸಮಾಜಕ್ಕೆ ಏನಾದರೂ ಮಹತ್ತರ ಕೊಡುಗೆ ನೀಡಿರಬೇಕು ಈ ನಿಟ್ಟಿನಲ್ಲಿ ಶ್ರೀ ಧರ್ಮಯ್ಯಗೌಡರು ಅನೇಕ ಮಕ್ಕಳಿಗೆ ಮತ್ತು ಶಿಕ್ಷಕರಿಗೆ ಕೊಡುಗೆಯನ್ನು ನೀಡಿ ಪ್ರಾತಸ್ಮರಣೀಯರಾಗಿ ಇಂದಿಗೂ ಜೀವಂತವಾಗಿದ್ದಾರೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿನ ಕಣಜ -2025 ‘ಕಾರ್ಯಕ್ರಮ ನೋಡಿ ತಂಬಾ ಸಂತಸವಾಯಿತು.
ವಿದ್ಯಾರ್ಥಿಗಳಿಂದ ಆಹಾರ ಮೇಳ
ಕಾಲೇಜಿನ ವಿದ್ಯಾರ್ಥಿಗಳು ಕರ್ನಾಟಕ ರಾಜ್ಯದ ಎಲ್ಲಾ ಪ್ರಾಂತ್ಯಗಳ ಸ್ಥಳೀಯ ದೇಶೀಯ ಆಹಾರ ಖಾದ್ಯಗಳನ್ನು ತಾವೇ ತಯಾರಿಸಿ ಪ್ರದರ್ಶನ ಏರ್ಪಡಿಸಿದ್ದರು. ಇದರಲ್ಲಿ ಉತ್ತರ ಕರ್ನಾಟಕದ ಜೋಳದ ರೊಟ್ಟಿ, ಕೊಡಗು ಪ್ರಾಂತ್ಯದ ಹಂದಿ ಕರಿ, ಕರಾವಳಿ ಪ್ರಾಂತ್ಯದ ಮೀನಿನ ಖಾದ್ಯಗಳು, ಮಲೆನಾಡು ಪ್ರಾಂತ್ಯದ ಕಡುಬು ಮತ್ತು ಮಂಡ್ಯ ಮೈಸೂರು ಪ್ರಾಂತ್ಯದ ಸಸ್ಯಹಾರಿ ಮತ್ತು ಮಾಂಸಹಾರಿ ಸ್ವಾದಿಷ್ಟ ಖಾದ್ಯಗಳು ಗಮನ ಸೆಳೆದವು. ಈ ಆಹಾರಮೇಳದ ಸಸ್ಯಾಹಾರಿ ವಿಭಾಗದಲ್ಲಿ ಎಲೆಕ್ಟಿಕಲ್ ವಿಭಾಗ, ಮಾಂಸಹಾರಿ ವಿಭಾಗದಲ್ಲಿ ಎಲೆಕ್ಟ್ರಾನಿಕ್ಸ್ ವಿಭಾಗದ ವಿದ್ಯಾರ್ಥಿಗಳು ಪ್ರಥಮ ಬಹುಮಾನ ಗಳಿಸಿದರು. ಇದೇ ಸಂಧರ್ಭದಲ್ಲಿ ಕಾಲೇಜಿನ ಸಂಸ್ಥಾಪಕರಾದ ದಿವಂಗತ ಧರ್ಮಯ್ಯಗೌಡರ ಸ್ಮರಣಾರ್ಥ ಪ್ರತಿವರ್ಷ ವಿದ್ಯಾರ್ಥಿಗಳಿಗೆ ನಡೆಸಲಾಗುವ ವಾಲಿಬಾಲ್, ಫೋಬಾಲ್, ಶಟಲ್ ಬ್ಯಾಂಡ್ಮಿಟನ್ ಮತ್ತು ಎಂ ಆರ್ ಡಿ ಕಪ್ ಕ್ರೀಡಾಕೂಟದಲ್ಲಿ ಜಯಗಳಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ನಂತರ ವೇದಿಕೆಯಲ್ಲಿ ವಿದ್ಯಾರ್ಥಿಗಳಿಂದ ಡೊಳ್ಳುಕುಣಿತ, ಯಕ್ಷಗಾನ, ವೀರಗಾಸೆ, ಚಂಡೆ ಮದ್ದಲೆ ಮತ್ತು ಸಾಂಪ್ರದಾಯಿಕ ಜಾನಪದ ನೃತ್ಯಗಳು ಕಿರುನಾಟಕ, ನಗೆ ಹೊಮ್ಮಿಸುವಂತಹ ಹಾಸ್ಯ ಚಟಾಕಿಗಳು ಜರುಗಿದವು.
