Categories
ಮಲ್ನಾಡ್

ಮಲೆನಾಡಲ್ಲೂ ಹಾರ್ಟ್ ಅಟ್ಯಾಕ್ ಭಯ ಶುರು !

ಮಲೆನಾಡಲ್ಲೂ ಹಾರ್ಟ್ ಅಟ್ಯಾಕ್ ಭಯ ಶುರು !
* ರಾಜ್ಯದಲ್ಲಿ ಆತಂಕ ಸೃಷ್ಠಿಸಿದ್ದ ಹಾಸನದ ಸರಣಿ ಹಾರ್ಟ್ ಅಟ್ಯಾಕ್
* ಈಗ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಘಟನೆ

NAMMMUR EXPRESS NEWS
ಚಿಕ್ಕಮಗಳೂರು/ಶಿವಮೊಗ್ಗ: ಹಾಸನ ಜಿಲ್ಲೆಯಲ್ಲಾದ ವಯಸ್ಕರ ಸರಣಿ ಹೃದಯಾಘಾತ ಘಟನೆಯಿಂದ ಇಡೀ ರಾಜ್ಯವೇ ತಲ್ಲಣಗೊಂಡಿದ್ದು,ಜನರಲ್ಲಿ ಆತಂಕ ಸೃಷ್ಠಿಸಿದೆ. ಮಲೆನಾಡು ಭಾಗದಲ್ಲಿ ಎರಡು ಹೃದಯಾಘಾತ ಘಟನೆ ನಡೆದಿದ್ದು ಈಗ ಬೆಳಕಿಗೆ ಬಂದಿದೆ. ಇದು ಜನರಲ್ಲಿ ಮತ್ತಷ್ಟು ಆತಂಕ ಹೆಚ್ಚಿಸಿದೆ.
ಹೌದು ಚಿಕ್ಕಮಗಳೂರು ನಗರದ ದೀಪ ನರ್ಸಿಂಗ್ ಹೋಂ ಬಳಿಯ ಮೆಡಿಕಲ್ ಶಾಪ್‌ನಲ್ಲಿ ಮಾತ್ರೆ ಖರೀದಿಸುತ್ತಿದ್ದ ವ್ಯಕ್ತಿಯೊಬ್ಬರು ಹೃದಯಾಘಾತಕ್ಕೊಳಗಾಗಿ ಸ್ಥಳದಲ್ಲೇ ಮೃತಪಟ್ಟ ಹೃದಯ ವಿದ್ರಾವಕ ಘಟನೆ ನಡೆದಿದೆ. ಈ ಘಟನೆ ಜೂ.26 ರ ಶನಿವಾರ ನಡೆದಿದ್ದು ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ.
ಮೃತಪಟ್ಟವರನ್ನು ನಗರದ ಕೋಟೆ ನಿವಾಸಿ ವಿಶ್ವನಾಥ್ (60) ಎಂದು ಗುರುತಿಸಲಾಗಿದೆ. ಮಾತ್ರೆ ತಿನ್ನಲು ನೀರು ಕೇಳಿ ಪಡೆದು ಹಾಗೆಯೇ ಕುಸಿದು ಬಿದ್ದಿದ್ದಾರೆ. ನಂತರ ವೈದ್ಯರು ಪರೀಕ್ಷಿಸಿ ಹೃದಯಾಘಾತದಿಂದ ಮೃತಪಟ್ಟಿರುವುದನ್ನು ಖಚಿತ ಪಡಿಸಿದ್ದಾರೆ.

* ಶಿವಮೊಗ್ಗದಲ್ಲಿ ಪದವಿ ವಿದ್ಯಾರ್ಥಿ ಹೃದಯಾಘಾತಕ್ಕೆ ಬಲಿ
ಶಿವಮೊಗ್ಗ:ಹೃದಯಾಘಾತದಿಂದ ಪದವಿ ವಿದ್ಯಾರ್ಥಿ ಮೃತಪಟ್ಟಿರುವ ಘಟನೆ ಶಿವಮೊಗ್ಗ ನಗರದ ಹೊರವಲಯ ಬಸವನಗಂಗೂರು ಗ್ರಾಮದಲ್ಲಿ ನಡೆದಿದೆ.
ಶ್ರೀನಿಧಿ (20) ಮೃತಪಟ್ಟ ವಿದ್ಯಾರ್ಥಿ ಎಂದು ಗುರುತಿಸಲಾಗಿದೆ. ಈತ ನಗರದ ಡಿವಿಎಸ್ ಕಾಲೇಜ್‌ನಲ್ಲಿ ಅಂತಿಮ ಪದವಿ ಓದುತ್ತಿದ್ದ.
ಜೂನ್ 29 ರ ಭಾನುವಾರ ಮುಂಜಾನೆ ಶ್ರೀನಿಧಿ ಆರೋಗ್ಯದಲ್ಲಿ ದಿಢೀರ್ ಏರುಪೇರು ಕಾಣಿಸಿಕೊಂಡಿದ್ದು, ತಕ್ಷಣವೇ ಆತನನ್ನು ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವೇಳೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಹೃದಯಾಘಾತ ಹಾಗೂ ನ್ಯೂಮೋನಿಯಾದಿಂದ ಶ್ರೀನಿಧಿ ಮೃತಪಟ್ಟಿದ್ಧಾನೆ ಎಂದು ಆಸ್ಪತ್ರೆ ವೈದ್ಯರು ತಿಳಿಸಿದ್ದಾರೆ ಎಂಬ ಮಾಹಿತಿಯನ್ನು ಶ್ರೀನಿಧಿ ಆಪ್ತ ಮೂಲಗಳು ತಿಳಿಸಿದೆ.
ಲವಲವಿಕೆಯಿಂದಿದ್ದ ಯುವಕ ಶ್ರೀನಿಧಿಯ ಅಕಾಲಿಕ ನಿಧನ ಗ್ರಾಮದಲ್ಲಿ ಶೋಕದ ವಾತಾವರಣ ಉಂಟುಮಾಡಿದೆ.

* ಆತಂಕ ಸೃಷ್ಠಿಸಿದ ಹೃದಯಾಘಾತ ಪ್ರಕರಣಗಳು
ಇತ್ತೀಚಿನ ದಿನಗಳಲ್ಲಿ ಹೃದಯಾಘಾತದಿಂದ ಸಾವನ್ನಪ್ಪುತ್ತಿರುವವರ ಸಂಖ್ಯೆ ರಾಜ್ಯದಲ್ಲಿ ಆತಂಕ ಸೃಷ್ಠಿಸುತ್ತಿದೆ. ಚಿಕ್ಕಮಗಳೂರು ತಾಲೂಕಿನಲ್ಲಿ ಕಳೆದ ಎರಡು ತಿಂಗಳ ಅವಧಿಯಲ್ಲಿ ಬರೋಬ್ಬರಿ 13 ಜನರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದಲ್ಲದೆ, ಕಳೆದ ಒಂದೂವರೆ ತಿಂಗಳಿನಲ್ಲಿ ಹಾಸನದಲ್ಲಿ ಕೂಡ 20ಕ್ಕೂ ಹೆಚ್ಚು ಮಂದಿ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.
ಯಾವುದೇ ಪೂರ್ವ ಸೂಚನೆಯಿಲ್ಲದೆ ಏಕಾಏಕಿ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿರುವುದು ಸಾರ್ವಜನಿಕರಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ. ಜೀವನಶೈಲಿ, ಆಹಾರ ಪದ್ಧತಿ ಮತ್ತು ಒತ್ತಡದ ಬದುಕು ಈ ರೀತಿಯ ಘಟನೆಗಳಿಗೆ ಕಾರಣವಾಗುತ್ತಿದೆಯೇ ಎಂಬ ಚರ್ಚೆಗಳು ಶುರುವಾಗಿವೆ. ಪ್ರತಿಯೊಬ್ಬರೂ ತಮ್ಮ ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸುವುದು ಮತ್ತು ನಿಯಮಿತ ತಪಾಸಣೆ ಮಾಡಿಸಿಕೊಳ್ಳುವುದು ಈಗಿನ ಜೀವನ ಶೈಲಿಯಲ್ಲಿ ಅಗತ್ಯವಾಗಿದೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.