ಕಾರು ಖರೀದಿಸುವ ಗ್ರಾಹಕರಿಗೆ ಗುಡ್ ನ್ಯೂಸ್.!
– ಮಾರುತಿ ಸುಜುಕಿ ಕಾರುಗಳ ಬೆಲೆಯಲ್ಲಿ ಭಾರೀ ಇಳಿಕೆ..!!
– ಜಿಎಸ್‌ಟಿ ದರ ಪರಿಷ್ಕರಣೆ ಎಫೆಕ್ಟ್ ನಿಂದ ಬೆಲೆ ಕಡಿಮೆ ಮಾಡಲು ನಿರ್ಧರಿಸಿದ ಕಂಪನಿ
– ಆಲ್ಟೋ ಕೆ10 ಮತ್ತು ಸ್ವಿಫ್ಟ್ ಮಾದರಿಗಳ ಬೆಲೆಯಲ್ಲಿ ಭಾರೀ ಇಳಿಕೆ
NAMMUR EXPRESS NEWS
ಭಾರತದ ಅತಿದೊಡ್ಡ ಕಾರು ತಯಾರಕ ಕಂಪನಿಯಾದ ಮಾರುತಿ ಸುಜುಕಿ, ಇತ್ತೀಚಿನ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ದರ ಕಡಿತದ ಸಂಪೂರ್ಣ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ತನ್ನ ಕಾರುಗಳ ಬೆಲೆಯನ್ನು ಕಡಿಮೆ ಮಾಡಿದೆ. ಈ ಹೊಸ ದರಗಳು ಇದೇ ಸೆಪ್ಟೆಂಬರ್ 22, 2025 ರಿಂದ ಜಾರಿಗೆ ಬರಲಿವೆ. ಭಾರತೀಯ ಪ್ರಯಾಣಿಕ ವಾಹನ ಉದ್ಯಮಕ್ಕೆ ಉತ್ತೇಜನ ನೀಡುವ ಉದ್ದೇಶದಿಂದ ಇತ್ತೀಚೆಗೆ ನಡೆದ ಸರಕು ಮತ್ತು ಸೇವಾ ತೆರಿಗೆ ಕೌನ್ಸಿಲ್ ಸಭೆಯಲ್ಲಿ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಇಳಿಕೆ ಮಾಡಲಾಗಿತ್ತು. ಸಾಮಾನ್ಯ ವಾಹನಗಳ ಮೇಲಿನ ಜಿಎಸ್‌ಟಿಯನ್ನು ಶೇ. 28ರಿಂದ ಶೇ. 18ಕ್ಕೆ ಇಳಿಕೆ ಮಾಡಿದ್ದರೆ, ಎಸ್‌ಯುವಿ ಮೊದಲಾದ ಐಷಾರಾಮಿ ವಾಹನಗಳ ಮೇಲಿನ ತೆರಿಗೆಯನ್ನು ಶೇ. 40ಕ್ಕೆ ಇಳಿಕೆ ಮಾಡಲಾಗಿತ್ತು.
ಇದಾದ ಬಳಿಕ ಟಾಟಾ ಮೋಟಾರ್ಸ್, ಹುಂಡೈ ಮೋಟಾರ್ ಇಂಡಿಯಾ, ಕಿಯಾ, ಜಾಗ್ವಾರ್ ಲ್ಯಾಂಡರ್ ರೋವರ್, ಮರ್ಸೀಡೆಸ್ ಬೆನ್ಜ್ ಇಂಡಿಯಾ, ಬಿಎಂಡಬ್ಲ್ಯೂ ಸೇರಿದಂತೆ ಹಲವು ವಾಹನ ತಯಾರಿಕಾ ಕಂಪನಿಗಳು ತಮ್ಮ ವಾಹನಗಳ ದರ ಇಳಿಕೆ ಮಾಡಿದ್ದವು. ಇದೀಗ ಭಾರತದಲ್ಲಿ ಅತಿ ಹೆಚ್ಚು ವಾಹನಗಳನ್ನು ಮಾರಾಟ ಮಾಡುವ ಮಾರುತಿ ಸುಜುಕಿ ಇಂಡಿಯಾ ಲಿಮಿಟೆಡ್ ದರ ಇಳಿಕೆಯ ಘೋಷಣೆಯನ್ನು ಮಾಡಿದ್ದು, ಪ್ರವೇಶ ಮಟ್ಟದ ಕಾರುಗಳಿಂದ ಹಿಡಿದು ಉನ್ನತ ಮಾದರಿಗಳವರೆಗೆ ಬೆಲೆ ಇಳಿಕೆಯ ಲಾಭವನ್ನು ಗ್ರಾಹಕರು ಪಡೆಯಲಿದ್ದಾರೆ.
ಮಾರುತಿ ಸುಜುಕಿಯ ಅತ್ಯಂತ ಜನಪ್ರಿಯ ಮಾದರಿಯ ಕಾರುಗಳಾದ ಆಲ್ಟೋ ಕೆ10 ದರದಲ್ಲಿ 1,07,600 ರೂ.ವರೆಗೆ ಕಡಿತವಾಗಿದ್ದು, ಇದೀಗ ದರ 3,69,900 ರೂ.ನಿಂದ ಆರಂಭವಾಗುತ್ತಿದೆ. ಇನ್ನೊಂದು ಜನಪ್ರಿಯ ಮಾದರಿಯ ಕಾರು ಸ್ವಿಫ್ಟ್ ದರ 84,600 ರೂ.ವರೆಗೆ ಕಡಿತವಾಗಿದ್ದು, 5,78,900 ರೂ.ನಿಂದ ಹೊಸ ದರಗಳು ಪ್ರಾರಂಭವಾಗಲಿವೆ. ಈ ದರ ಇಳಿಕೆ ಹಬ್ಬದ ಸೀಸನ್‌ನಲ್ಲಿ ಕಾರು ಖರೀದಿಸಲು ಹೊರಟವರಿಗೆ ಅನುಕೂಲ ಉಂಟು ಮಾಡಲಿದೆ. ಅಲ್ಲದೆ ಉದ್ಯಮಕ್ಕೂ ಉತ್ತೇಜನವನ್ನು ನೀಡುವ ನಿರೀಕ್ಷೆ ಇದೆ.