Categories
ಕೊಪ್ಪ ಮಲ್ನಾಡ್ ಶಿವಮೊಗ್ಗ ಸಾಗರ

ಕಾಫಿ ನಾಡಲ್ಲಿ ಕಾಡಾನೆ ತಡೆಗೆ ಸರ್ಕಾರದ ಆದೇಶ!

ಕಾಫಿ ನಾಡಲ್ಲಿ ಕಾಡಾನೆ ತಡೆಗೆ ಸರ್ಕಾರದ ಆದೇಶ!
– ಶೃಂಗೇರಿ-ಕೊಪ್ಪ ಆನೆ ಕಾರ್ಯಪಡೆ ರಚನೆಗೆ ಅಸ್ತು
– ರಾಜೇಗೌಡ ಅವರ ಪ್ರಯತ್ನಕ್ಕೆ ಸಂದ ಫಲ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಕೊಪ್ಪ: ಕಾಫಿ ನಾಡಿನಲ್ಲಿ ಕಾಡಾನೆ ಸೇರಿದಂತೆ ಇತರ ಕಾಡು ಪ್ರಾಣಿಗಳ ಹಾವಳಿ ಅಧಿಕವಾಗಿದ್ದು, ಕಾಡಾನೆ ದಾಳಿಯಿಂದಾಗಿ ಮಲೆನಾಡು ಭಾಗದಲ್ಲಿ ಹಲವಾರು ಜನ ಕಾರ್ಮಿಕರು,ರೈತರು ಸಾವನ್ನಪ್ಪಿದ್ದು, ಫಸಲು ಕೈಗೆ ಬರುವಂತಹ ಸಮಯದಲ್ಲಿ ಬೆಳೆ ಹಾನಿಯಾಗಿ ರೈತರಿಗೆ ಅಪಾರ ಪ್ರಮಾಣದ ನಷ್ಟ ಸಹ ಉಂಟಾಗಿದೆ.

ಶಾಸಕರಾದ ಟಿ.ಡಿ.ರಾಜೇಗೌಡ ಅವರು ಈ ವಿಚಾರವನ್ನು ಸರ್ಕಾರದ ಗಮನಕ್ಕೆ ತರುವಲ್ಲಿ ಸಫಲರಾಗಿದ್ದು, ಮಾನವ ಮತ್ತು ಕಾಡಾನೆ ನಡುವಿನ ಸಂಘರ್ಷವನ್ನು ತಡೆಗಟ್ಟುವ ಸಲುವಾಗಿ ಸರ್ಕಾರ ಆದೇಶವೊಂದನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಶೃಂಗೇರಿ-ಕೊಪ್ಪ ಆನೆ ಕಾರ್ಯಪಡೆ ಕಾರ್ಯಗತಗೊಳಿಸಲು ಸಿದ್ಧತೆಯನ್ನು ನಡೆಸಲಾಗಿದೆ.

ಏನಿದು ಆನೆ ಕಾರ್ಯಪಡೆ?

ಆನೆ ಕಾರ್ಯಪಡೆಯು ಅನುಷ್ಠಾನಗೊಳ್ಳುವುದರಿಂದ ಹೆಚ್ಚು ಜನ ಅರಣ್ಯ ಸಿಬ್ಬಂದಿಗಳು, ಹೆಚ್ಚಿನ ಸಲಕರಣೆಗಳು ಮತ್ತು ಹೆಚ್ಚಿನ ಸಂಪನ್ಮೂಲ ಲಭ್ಯವಾಗುತ್ತದೆ ಎನ್ನಲಾಗಿದೆ. ಇದರ ಪರಿಣಾಮವಾಗಿ ಕಾಡಾನೆಯ ಹಾವಳಿ ನಿಯಂತ್ರಣಗೊಳ್ಳಲಿದೆ ಎನ್ನಲಾಗಿದೆ.

ಎಲ್ಲಿಂದ ಎಲ್ಲಿಗೆ?

ಇನ್ನು ಕೊಪ್ಪ ವಿಭಾಗದ ಚಿಕ್ಕ ಅಗ್ರಹಾರ ವಲಯದ ವ್ಯಾಪ್ತಿಯಲ್ಲಿ ಸಾರ್ಯಾದಿಂದ ಕರ್ಕೂಟ ಪ್ರದೇಶದವರೆಗೆ 2.8 ಕಿಲೋಮೀಟರ್ ದೂರದವರೆಗೆ ವಿನ್ಯಾಸ ರೈಲ್ವೆ ಬ್ಯಾರಿಕೆಡ್ ನಿರ್ಮಾಣಕ್ಕಾಗಿ 4.69.40.000, ಬೆಳ್ಳಂಗಿಯಿಂದ ಕೊಳೆಹಳ್ಳದವರೆಗೆ 2.23 ಕಿಲೋಮೀಟರ್ ದೂರದವರೆಗೆ ರೈಲ್ವೆ ಬ್ಯಾರಿಕೇಡ್ ನಿರ್ಮಾಣಕ್ಕೆ 4.31.70.000 ರೂಪಾಯಿ ಅನುದಾನ ಬಿಡುಗಡೆ ಮಾಡಲು ತೀರ್ಮಾನಿಸಿದ್ದು ಒಟ್ಟು 7.61 ಕಿಲೋಮೀಟರ್ ವ್ಯಾಪ್ತಿಯಲ್ಲಿ ರೈಲ್ವೆ ಬ್ಯಾರಿಕೆಡ್ ನಿರ್ಮಿಸಲು 12 ಕೋಟಿ 78 ಲಕ್ಷ ರೂಪಾಯಿ ಮಂಜೂರು ಮಾಡಲು ಸರ್ಕಾರ ನಿರ್ಧರಿಸಿದೆ ಎನ್ನುವ ಸಂಗತಿ ತಿಳಿದುಬಂದಿದೆ.

• ಭದ್ರಾವತಿ: ನದಿಯಲ್ಲಿ ಕಾಣಿಸಿಕೊಂಡ ಮೊಸಳೆ

ಭದ್ರಾವತಿ: ನದಿಯೊಳಗೆ ಮೊಸಳೆಯೊಂದು ಪ್ರತ್ಯಕ್ಷಗೊಂಡ ಘಟನೆ ನಡೆದಿದೆ. ಹೊಳೆಹೊನ್ನೂರಿನ ಭದ್ರಾ ನದಿಯಲ್ಲಿ ಇದು ಕಾಣಿಸಿಕೊಂಡಿದ್ದು, ವಾಹನಗಳಲ್ಲಿ ಸಂಚರಿಸುತ್ತಿದ್ದ ಜನರು ಸೇತುವೆಯ ಮೇಲ್ಭಾಗದಿಂದ ಕಂಡು ಆತಂಕಕ್ಕೆ ಒಳಗಾಗಿದ್ದಾರೆ. ಅಲ್ಲದೆ ಪ್ರತ್ಯಕ್ಷ ದರ್ಶಿಗಳು ಅದರ ವೀಡಿಯೊ ತೆಗೆದಿರುವುದರಿಂದ ಈ ದೃಶ್ಯಾವಳಿಯು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.‌ ಸ್ಥಳೀಯರು ಹೆಚ್ಚಿನ ಪ್ರಮಾಣದಲ್ಲಿ ಈ ನದಿಗೆ ಬಟ್ಟೆ ಒಗೆಯಲು ಹೋಗುವುದರಿಂದ ಅಲ್ಲಿಗೆ ತೆರಳುವ ಜನರು ಎಚ್ಚರಿಕೆಯಿಂದ ಇರಬೇಕೆಂದು ಹೇಳಲಾಗಿದೆ.

•ಸಾಗರ: ಹಲ್ಲಿನಲ್ಲಿ ಅಡಗಿದೆ ಸಾವಿನ ಅಸಲಿ ಕಥೆ

ನಮ್ಮೂರ್ ಎಕ್ಸ್ ಪ್ರೆಸ್ ನ್ಯೂಸ್
ಸಾಗರ: 2025 ರ ನವೆಂಬರ್ ತಿಂಗಳಿನಲ್ಲಿ ನಡೆದ ಘಟನೆಯೊಂದಕ್ಕೆ ಸಂಬಂಧಿಸಿದಂತೆ ಹೊಸ ತಿರುವೊಂದು ಇದೀಗ ದೊರೆತಿದೆ. ತ್ಯಾಗರ್ತಿ ಗ್ರಾಮದ ರವಿ ಎನ್ನುವ ಹೆಸರಿನ ವ್ಯಕ್ತಿಯೊಬ್ಬರು ಕಟ್ಟಿಗೆಗೆಂದು ಅರಣ್ಯ ಪ್ರದೇಶಕ್ಕೆ ತೆರಳಿದ್ದ ಸಂದರ್ಭದಲ್ಲಿ ತಲೆಬುರುಡೆಯನ್ನು ಕಂಡು ಬೆಚ್ಚಿ ಬಿದ್ದಿದ್ದರು. ತಕ್ಷಣ ರವಿಯವರು ಸ್ಥಳೀಯ ಪೊಲೀಸರು ಹಾಗೂ ಆನಂದಪುರ ಠಾಣೆಯ ಪೊಲೀಸರಿಗೆ ಮಾಹಿತಿಯನ್ನು ನೀಡಿದ್ದರು. ಮಾಹಿತಿ ಲಭಿಸುತ್ತಿದ್ದಂತೆ ಪಿಎಸ್ಐ ಪ್ರವೀಣ್ ಹಾಗೂ ಎಸ್ ಪಿ ಅವರ ನೇತೃತ್ವದಲ್ಲಿ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸ್ ತಂಡವು ಪರಿಶೀಲನೆಯನ್ನು ನಡೆಸಿತ್ತು.

ತಲೆಬುರುಡೆಯನ್ನು ಹೊರತುಪಡಿಸಿ ಮೂಳೆ ರೀತಿಯ ಯಾವುದೇ ಅವಶೇಷಗಳು ಕಂಡುಬಾರದೆ, ಕೇವಲ ವ್ಯಕ್ತಿ ಧರಿಸಿದ್ದ ಎಂದು ಊಹಿಸಬಹುದಾದ ಬಟ್ಟೆಗಳು ಮಾತ್ರ ಸಿಕ್ಕಿದ್ದವು. ಇದನ್ನೇ ಆಧಾರವಾಗಿಟ್ಟುಕೊಂಡು ಪೊಲೀಸರು ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದರು. ಪೊಲೀಸರಿಗೆ 2024ರ ಜುಲೈ ತಿಂಗಳಿನಲ್ಲಿ ತ್ಯಾಗರ್ತಿ ಗ್ರಾಮದ ಬಸವರಾಜ್ ಎನ್ನುವ ವ್ಯಕ್ತಿಯೊಬ್ಬರು ಕಾಣೆಯಾಗಿರುವ ಕುರಿತು ಆನಂದಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆ ವ್ಯಕ್ತಿ ಇವರೇ ಇರಬಹುದೇ ಎನ್ನುವ ಅನುಮಾನ ಇದರಿಂದಾಗಿ ಬಲವಾಗತೊಡಗಿತು.

ಈ ಹಿನ್ನೆಲೆಯಲ್ಲಿ ಪರಿಶೀಲನೆಯ ಸಮಯದಲ್ಲಿ ಪೊಲೀಸರಿಗೆ ದೊರೆತಿದ್ದ ಬಟ್ಟೆಗಳನ್ನು ಬಸವರಾಜ್ ಅವರ ಕುಟುಂಬಸ್ಥರಿಗೆ ತೋರಿಸಿದಾಗ, ಅವರ ಪತ್ನಿ ಮತ್ತು ಮಗಳು ಆ ಬಟ್ಟೆಗಳು ತಮ್ಮ ಕುಟುಂಬದ ಸದಸ್ಯರದ್ದೇ ಎಂದು ದೃಢಪಡಿಸಿದ್ದರು ಎನ್ನಲಾಗಿದೆ. ಕೇವಲ ತಲೆಬುರುಡೆ ದೊರೆತಿದ್ದ ಕಾರಣ ವ್ಯಕ್ತಿಯ ಗುರುತಿಗಾಗಿ ವೈಜ್ಞಾನಿಕ ಪರೀಕ್ಷೆಯನ್ನು ನಡೆಸಲು ನಿರ್ಧಾರವನ್ನು ಕೈಗೊಳ್ಳಲಾಯಿತು.‌ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಮೂಲಕ ಎಸ್ಎಸ್ಎಲ್ ದಾವಣಗೆರೆ ಮತ್ತು ಹುಬ್ಬಳ್ಳಿಗೆ ಕಳುಹಿಸಲಾಗಿತ್ತು.‌

ವೈಜ್ಞಾನಿಕ ಪರೀಕ್ಷೆಯ ಸಂದರ್ಭದಲ್ಲಿ ತಲೆಬುರುಡೆಯೊಳಗಿದ್ದ ಒಂದೇ ಒಂದು ಹಲ್ಲು ಪ್ರಮುಖ ಸಾಕ್ಷಿಯಾಗಿ ದೊರೆತು, ಅದರ ಆಧಾರದ ಮೇಲೆ ಬಸವರಾಜ್ ಅವರ ಮಗಳ ರಕ್ತದ ಮಾದರಿಯನ್ನು ಸಂಗ್ರಹಿಸಿ ಡಿಎನ್ಎ ಪರೀಕ್ಷೆ ನಡೆಸಲಾಯಿತು. ಇದೀಗ ಪರೀಕ್ಷೆಯ ವರದಿ ಹೊರಬಿದ್ದಿದ್ದು, ಅದು ಬಸವರಾಜ್ ಅವರ ತಲೆಬುರುಡೆಯೇ ಎನ್ನುವುದು ಧೃಡಪಟ್ಟಿದೆ. ತನಿಖೆಯ ಸಂದರ್ಭದಲ್ಲಿ ಬಂದ ಮಾಹಿತಿಯ ಪ್ರಕಾರ ಬಸವರಾಜ್ ತೀವ್ರ ಮದ್ಯವ್ಯಸನಿಯಾಗಿದ್ದು, ಕುಟುಂಬದಲ್ಲಿ ಕಲಹಗಳು ನಡೆಯುತ್ತಿದ್ದುದರಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿ ಕಾಡಿನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.