ಜಿಎಸ್ಟಿ ಕಡಿತ: ಕಾರು, ಬೈಕು ಖರೀದಿಗೆ ಮುಗಿಬಿದ್ದ ಜನ!
– ಬೈಕ್, ಕಾರು ಖರೀದಿಸಲು ಮುಗಿಬಿದ್ದ ಜನರ ದಂಡು
– ಬೈಕ್ 11000, ಕಾರು 1.20 ಲಕ್ಷ ರು.ವರೆಗೂ ಅಗ್ಗ.
NAMMUR EXPRESS NEWS
ಬೆಂಗಳೂರು : ನವರಾತ್ರಿ ಆರಂಭದ ಮೊದಲ ದಿನವೇ ಕೇಂದ್ರ ಸರ್ಕಾರದ ಜಿಎಸ್ಟಿ 2.0 ಅಧಿಕೃತವಾಗಿ ಜಾರಿಗೆ ಬಂದಿರುವ ಹಿನ್ನೆಲೆಯಲ್ಲಿ ಆಟೋಮೊಬೈಲ್ ಉಪಕರಣಗಳು, ಹಾಲಿನ ಉತ್ಪನ್ನ, ಎಲೆಕ್ಟ್ರಾನಿಕ್ ವಸ್ತುಗಳು, ಕೃಷಿ ಉಪಕರಣಗಳು ಹಾಗೂ ದಿನನಿತ್ಯದ ವಸ್ತುಗಳ ದರದಲ್ಲಿ ಇಳಿಕೆಯಾಗಿದ್ದು, ಸೋಮವಾರ ಖರೀದಿ ಸ್ವಲ್ಪ ಏರಿಕೆಯಾಗಿದೆ. ಜಿಎಸ್‌ಟಿ ಇಳಿಕೆಯಿಂದ ಬೈಕು, ಕಾರುಗಳ ಶೋ ರೂಂ ಗಳಲ್ಲಿ ಗ್ರಾಹಕರ ಸಂಖ್ಯೆ ಎಂದಿಗಿಂತ ಸ್ವಲ್ಪ ಹೆಚ್ಚಳವಾಗಿತ್ತು. ವಾಹನಗಳ ಕುರಿತು ವಿಚಾರಣೆ, ಬುಕಿಂಗ್ ಮತ್ತು ಖರೀದಿ ಪ್ರಕ್ರಿಯೆಯಲ್ಲಿ ಚೇತರಿಕೆ ಕಂಡಿತ್ತು. ವಿವಿಧ ಬೈಕುಗಳ ಬೆಲೆಯಲ್ಲಿ 6 ಸಾವಿರರು.ಗಳಿಂದ 11 ಸಾವಿರರು.ಗಳವರೆಗೆ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಶೋ ರೂಂಗಳಿಗೆ ಭೇಟಿ ನೀಡುವವರ ಸಂಖ್ಯೆಯಲ್ಲಿ ಏರಿಕೆಯಾಗಿತ್ತು.
ಹಲವು ಕಾರುಗಳ ದರದಲ್ಲಿ ಸುಮಾರು 60 ಸಾವಿರದಿಂದ 1.20 ಲಕ್ಷ ರು.ಗಳವರೆಗೆ ಬೆಲೆ ಇಳಿಕೆಯಾಗಿದೆ. ಇದರಿಂದಾಗಿ ಕಾರುಗಳ ಕುರಿತು ಮಾಹಿತಿಗಾಗಿ ಜನ ಶೋ ರೂಂಗಳತ್ತ ಬರುತ್ತಿದ್ದ ದೃಶ್ಯ ಕಂಡುಬಂತು. ಜಿಎಸ್‌ಟಿ 2.0 ನಿಂದ ಅಡುಗೆ ಮನೆಯ ಸಾಮಗ್ರಿಗಳ ಬೆಲೆಯಲ್ಲೂ ಸ್ವಲ್ಪ ಇಳಿಕೆಯಾಗಿದೆ. ಮುಖ್ಯವಾಗಿ ಹಾಲಿನ ಉತ್ಪನ್ನಗಳ ಬೆಲೆಯಲ್ಲಿ ಶೇ.18 ಮತ್ತು ಶೇ.12ರಿಂದ ಶೇ.5ಕ್ಕೆ ಇಳಿಕೆಯಾಗಿದೆ. ಹಬ್ಬದ ಹಿನ್ನೆಲೆಯಲ್ಲಿ ಹಾಲಿನ ಉತ್ಪನ್ನಗಳ ಖರೀದಿ ಇನ್ನಷ್ಟು ಹೆಚ್ಚಾಗುವ ನಿರೀಕ್ಷೆ.
ಹೋಟೆಲ್ ಉದ್ಯಮಿಗಳ ಸ್ವಾಗತ
ಜಿಎಸ್‌ಟಿ ಇಳಿಕೆಯನ್ನು ಸ್ವಾಗತಿಸಿರುವ ಹೋಟೆಲ್ ಉದ್ಯಮಿಗಳು, ಅಡುಗೆ ಮಾಡಲು 60ರಿಂದ 70 ಅಡುಗೆ ಪದಾರ್ಥಗಳನ್ನು ಬಳಸುತ್ತೇವೆ. ಅದರಲ್ಲಿ 10ರಿಂದ 12 ಪದಾರ್ಥಗಳ ಬೆಲೆಯಲ್ಲಿ ಕೊಂಚ ಇಳಿಕೆಯಾಗಿದೆ. ಈಗಾಗಲೇಹೋಟೆಲ್ ಉದ್ಯಮ ನಷ್ಟದಲ್ಲಿದ್ದು, ಜಿಎಸ್‌ಟಿ ಇಳಿಕೆಯಿಂದ ಸ್ವಲ್ಪ ಚೇತರಿಕೆ ಕಾಣಬಹುದೆಂದು ನಿರೀಕ್ಷಿಸಲಾಗಿದೆ.