ಮಲೆನಾಡಲ್ಲಿ ದೀಪಾವಳಿಗೆ ಭಾರೀ ಮಳೆ!
– ವಾಯುಭಾರ ಕುಸಿತ ಎಫೆಕ್ಟ್, ಭಾರಿ ಗುಡುಗು-ಮಳೆ ಅಬ್ಬರ.!!
– ಅಕ್ಟೋಬರ್ 23 ರವರೆಗೆ ಕರಾವಳಿ ಹಾಗೂ ದಕ್ಷಿಣ ಒಳನಾಡಿಗೆ ಮಳೆ ಮುನ್ಸೂಚನೆ
NAMMUR EXPRESS NEWS
ಬೆಂಗಳೂರು: ಕರಾವಳಿ ಕರ್ನಾಟಕದಲ್ಲಿ ಭಾರೀ ಮಳೆ ಅಬ್ಬರಿಸುತ್ತಿದೆ. ದಕ್ಷಿಣ ಒಳನಾಡಿನಲ್ಲಿ ಹಲವೆಡೆ ಮಳೆಯಾಗಿದ್ದರೆ, ಉತ್ತರ ಒಳನಾಡಿನಲ್ಲಿ ಕೆಲವು ಕಡೆ ಮಾತ್ರ ಮಳೆಯಾಗಿದೆ. ದಕ್ಷಿಣ ಕನ್ನಡ ಹಾಗೂ ಉಡುಪಿಯಲ್ಲಿ ಬೆಳ್ಳಂಬೆಳಗ್ಗೆ ಭಾರಿ ಮಳೆಯ ಅಲರ್ಟ್ ಕೊಡಲಾಗಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಅಕ್ಟೋಬರ್ 18 ಹಾಗೂ 19 ರಂದು ಭಾರಿ ಮಳೆಯ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಅಲ್ಲದೆ ಚಿಕ್ಕಮಗಳೂರು ಹಾಗೂ ಶಿವಮೊಗ್ಗ ಜಿಲ್ಲೆಗಳಿಗೆ ಅಕ್ಟೋಬರ್ 24 ರವರೆಗೂ ಭಾರಿ ಮಳೆಯ ಯೆಲ್ಲೋ ಅಲರ್ಟ್ ಕೊಡಲಾಗಿದೆ. ಹಾಸನ -ಕೊಡಗು ಜಿಲ್ಲೆಗಳಿಗೂ ಇಂದು ಭಾರಿ ಮಳೆಯ ಮುನ್ಸೂಚನೆ ಇದ್ದು ಯೆಲ್ಲೋ ಅಲರ್ಟ್ ಕೊಡಲಾಗಿದೆ. ಮುಂದಿನ ವಾರಾಂತ್ಯಕ್ಕೆ ಮತ್ತೆ ಮಳೆ ಬಿರುಸು ಪಡೆಯುವ ಸಾಧ್ಯತೆ ಇದೆ. ಕಳೆದ 24 ಗಂಟೆಯಲ್ಲಿ ಹೆಚ್ಚು ಮಳೆಯಾದ ಪ್ರದೇಶ
*ದಕ್ಷಿಣ ಕನ್ನಡ ಜಿಲ್ಲೆಯ ಕೊಳ್ತಿಗೆಯಲ್ಲಿ 47.0 ಮಿಮೀ ಮಳೆ ದಾಖಲಾಗಿದೆ.
* ದಕ್ಷಿಣ ಕನ್ನಡ ಜಿಲ್ಲೆಯ ಬೆಳಂದೂರಿನಲ್ಲಿ 45.5 ಮಿಮೀ ಮಳೆ ದಾಖಲಾಗಿದೆ.
* ಮಂಡ್ಯ ಜಿಲ್ಲೆಯ ಮುದಗಂದೂರಿನಲ್ಲಿ 45.0 ಮಿಮೀ ಮಳೆ ದಾಖಲಾಗಿದೆ.
* ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ಳಾರೆಯಲ್ಲಿ 44.0 ಮಿಮೀ ಮಳೆ ದಾಖಲಾಗಿದೆ.
* ಚಾಮರಾಜನಗರ ಜಿಲ್ಲೆಯ ಆಗತಗೌಡನಹಳ್ಳಿಯಲ್ಲಿ 37.5 ಮಿಮೀ ಮಳೆ ದಾಖಲಾಗಿದೆ. ಇದಲ್ಲದೆ ಧರ್ಮಸ್ಥಳ, ಕೋಟಾ, ಪುತ್ತೂರಿನಲ್ಲಿ ಭಾರಿ ಮಳೆಯಾಗಿದೆ.
ಅರಬ್ಬೀ ಸಮುದ್ರದ ಆಗ್ನೇಯ ಭಾಗದಲ್ಲಿ, ಲಕ್ಷದೀಪ, ಕೇರಳ ಹಾಗೂ ಕರ್ನಾಟಕದ ಕರಾವಳಿಯ ತೀರದಲ್ಲಿ ಸರ್ಕ್ಯುಲೇಷನ್ ಇರುವುದರಿಂದ ಅಕ್ಟೋಬರ್ 18 ರಂದು ಈ ಭಾಗದಲ್ಲಿ ವಾಯುಭಾರ ಕುಸಿತ ಆಗಲಿದೆ. ಹೀಗಾಗಿ ಕರಾವಳಿ ಹಾಗೂ ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಅ.18 ರಿಂದ ಅ.23 ರವರೆಗೆ ಹಲವು ಕಡೆ ಮಳೆಯಾಗುವ ಸಾಧ್ಯತೆ ಇದೆ. ಉತ್ತರ ಕರ್ನಾಟಕಕ್ಕೆ ಅಕ್ಟೋಬರ್ 23 ರವರೆಗೆ ಕೆಲವು ಕಡೆ ಮಾತ್ರ ಹಗುರ ಮಳೆಯಾಗಲಿದೆ ಎಂದು ಹವಾಮಾಣ ಇಲಾಖೆ ವಿಜ್ಞಾನಿ ಸಿಎಸ್ ಪಾಟೀಲ್ ಹೇಳಿದ್ದಾರೆ. ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಂಗಳೂರು, ಹಾಸನ, ಕೊಡಗು, ಮಂಡ್ಯದಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದ್ದು, ಅ.18 ಹಾಗೂ 19 ರಂದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಬೆಂಗಳೂರಲ್ಲಿ ಅಕ್ಟೋಬರ್ 23 ರವರೆಗೆ ಹಗುರದಿಂದ ಸಾಧಾರಣ ಮಳೆಯಾಗುವ ಮುನ್ಸೂಚನೆ ಕೊಡಲಾಗಿದೆ.